







ಶಿಶಿಲ, ಜು. 28: ಶಿಶಿಲ ಸಮೀಪದ ಬದಿಗುಡ್ಡೆ ಪ್ರದೇಶದಲ್ಲಿ ಕಪಿಲಾ ನದಿಯ ಮಧ್ಯೆ ಸಿಲುಕಿದ್ದ ಸುಮಾರು 70 ವರ್ಷದ ವೃದ್ಧರನ್ನುಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸಾಹಸಮಯ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಸುಮಾರು 1 ಗಂಟೆ ವೇಳೆ ಬದಿಗುಡ್ಡೆ ಸಮೀಪ ಕಪಿಲಾ ನದಿ ತೀರಕ್ಕೆ ತೆರಳಿದ್ದ ಕೆಲ ಯುವಕರು, ನದಿಯ ಮಧ್ಯೆ ವ್ಯಕ್ತಿಯೊಬ್ಬರು ನಿಂತಿರುವುದನ್ನು ಗಮನಿಸಿದರು. ಧಾರಾಕಾರ ಮಳೆಯ ಪರಿಣಾಮ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಅಪಾಯದ ಸಾಧ್ಯತೆಯನ್ನು ಅರಿತು ಸ್ಥಳೀಯ ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡಕ್ಕೆ ಮಾಹಿತಿ ನೀಡಿದರು.


ಮಾಹಿತಿ ಪಡೆದ ತಕ್ಷಣ ಸ್ವಯಂಸೇವಕರಾದ ರಾಧಾಕೃಷ್ಣ ಗುತ್ತು ಹಾಗೂ ರಮೇಶ್ ಬೈರಕಟ್ಟ, ಸ್ಥಳೀಯ ಪರಿಣತ ಈಜುಗಾರ ಮೋಹನ ಗೌಡ ಬದ್ರಿಜಾಲು ಅವರೊಂದಿಗೆ ಸ್ಥಳಕ್ಕೆ ಧಾವಿಸಿದರು. ಶಿಶಿಲೇಶ್ವರ ದೇವಸ್ಥಾನದ ಕಿಂಡಿ ಅಣೆಕಟ್ಟಿನಿಂದ ಸುಮಾರು 900 ಮೀಟರ್ ಕೆಳಭಾಗದಲ್ಲಿ, ಕಪಿಲಾ ನದಿಯ ಎರಡು ಕವಲುಗಳ ಮಧ್ಯೆ ವೃದ್ಧರು ಸಿಲುಕಿರುವುದನ್ನು ಕಂಡು ಅವರಿಗೆ ಧೈರ್ಯ ತುಂಬಿದರು.ಬಳಿಕ ವೃದ್ಧರಿಗೆ ಜೀವರಕ್ಷಕ ಜಾಕೆಟ್ ತೊಡಿಸಿ, ಜೀವರಕ್ಷಕ ಹಗ್ಗದ ನೆರವಿನಿಂದ ಸುರಕ್ಷಿತವಾಗಿ ನದಿದಡಕ್ಕೆ ಕರೆತಂದು ರಕ್ಷಿಸಿದರು.ರಕ್ಷಣಾ ಕಾರ್ಯಾಚರಣೆಯಲ್ಲಿ ಉಮೇಶ್ ಕುಕ್ಕೆ, ರೂಪೇಶ್ ಬೈಪಾಡಿ, ದಿನೇಶ್ ಬದಿಗುಡ್ಡೆ ಸೇರಿದಂತೆ ಇನ್ನಿತರರು ಸಹಕರಿಸಿದರು.
ಈ ಸಂದರ್ಭದಲ್ಲಿ, ಧರ್ಮಸ್ಥಳ ಕ್ಷೇತ್ರದ ವತಿಯಿಂದ ಅಡ್ಯನಡ್ಕದ ವಾರಾಣಾಶಿ ಫಾರ್ಮ್ ಕೊಳದಲ್ಲಿ ನೆದರ್ಲೆಂಡ್ಸ್ನ ಅಂತರರಾಷ್ಟ್ರೀಯ ಮುಳುಗು ತಜ್ಞ ಜೆರೋಮ್ ಅವರಿಂದ ವಿಪತ್ತು ನಿರ್ವಹಣಾ ತಂಡದ ಸದಸ್ಯರಿಗೆ ಈಜು ಹಾಗೂ ಆಳ ಮುಳುಗುವಿಕೆ ಕುರಿತು ವಿಶೇಷ ತರಬೇತಿ ನೀಡಲಾಗಿದ್ದು, ಅದರ ಫಲವಾಗಿ ಈ ಯಶಸ್ವಿ ರಕ್ಷಣಾ ಕಾರ್ಯಾಚರಣೆ ಸಾಧ್ಯವಾಗಿದೆ ಎಂದು ತಂಡದ ಸದಸ್ಯರು ತಿಳಿಸಿದ್ದಾರೆ.









