






ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ ಪ್ರಕರಣ ಕುರಿತ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಲು ವಿಶೇಷ ತನಿಖಾ ತಂಡಕ್ಕೆನಿರ್ದೇಶಿಸುವಂತೆ ಕೋರಿ ಪ್ರಮುಖ ಆರೋಪಿ ಸಿ.ಎನ್. ಚಿನ್ನಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ. ಪ್ರಕರಣದ ಅಂತಿಮ ವರದಿಯನ್ನು ೨೦೨೫ರ ನವೆಂಬರ್ನಲ್ಲೇ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು ಇದೇ ಜುಲೈ ೧೫ರಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಸಲ್ಲಿಸಲಾಗಿದೆ ಎಂದು ಎಸ್ಐಟಿ ಪರ ವಕೀಲರ ಹೇಳಿಕೆ ಪರಿಗಣಿಸಿ ನ್ಯಾಯಾಲಯ ಅರ್ಜಿ ವಿಲೇವಾರಿ ಮಾಡಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರ ಕ್ರಮ ಕೈಗೊಳ್ಳಲು ಎಸ್ಐಟಿಗೆ ನಿರ್ದೇಶಿಸುವಂತೆ ಕೋರಿ ಮಂಡ್ಯ ಮೂಲದವರಾಗಿದ್ದು ಪ್ರಸ್ತುತ ಧರ್ಮಸ್ಥಳ ಗ್ರಾಮದಲ್ಲಿ ವಾಸ್ತವ್ಯ ಹೊಂದಿರುವ ಸಿ.ಎನ್. ಚಿನ್ನಯ್ಯ (೫೦) ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಜು.೨೧ರಂದು ವಿಚಾರಣೆ ನಡೆಸಿತು. ಎಸ್ಐಟಿ ಪರ ಹಾಜರಾದ ಎಸ್ಪಿಪಿ ಬಿ.ಎನ್. ಜಗದೀಶ್ ಅವರು ಶೀಘ್ರ ತನಿಖೆ ಪೂರ್ಣಗೊಳಿಸಲು ಎಸ್ಐಟಿಗೆ ನಿರ್ದೇಶಿಸಬೇಕು ಎನ್ನುವುದು ಅರ್ಜಿದಾರರ ಮನವಿಯಾಗಿದೆ.
ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೨೫ರ ನವೆಂಬರ್ನಲ್ಲೇ ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ತನಿಖಾ ವರದಿ ಸಲ್ಲಿಸಲಾಗಿದೆ. ಹೆಚ್ಚುವರಿಯಾಗಿ ಎಫ್ಎಸ್ಎಲ್ ವರದಿಯನ್ನು ೨೦೨೬ರ ಜುಲೈ ೧೫ರಂದು ಸಲ್ಲಿಸಲಾಗಿದೆ. ಆದ್ದರಿಂದ ಅರ್ಜಿಯಲ್ಲಿ ಪರಿಗಣಿಸಬಹುದಾದ ಯಾವುದೇ ವಿಚಾರಗಳು ಉಳಿದಿಲ್ಲ. ಇಲ್ಲಿ ಅರ್ಜಿಯನ್ನು ಬಾಕಿ ಉಳಿಸಿಕೊಳ್ಳುವ ಅಗತ್ಯವಿಲ್ಲ. ಒಂದು ವೇಳೆ ಅಂತಿಮ ವರದಿಯ ಬಗ್ಗೆ ಆಕ್ಷೇಪಣೆಗಳಿದ್ದರೆ ಯಾರು ಬೇಕಿದ್ದರೂ ಆ ವರದಿಯನ್ನು ಪ್ರಶ್ನಿಸಬಹುದು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಇದನ್ನು ಆಲಿಸಿದ ನ್ಯಾಯಪೀಠ ರಾಜ್ಯ ಸರ್ಕಾರದ ಪ್ರಕಾರ ೨೦೨೫ರ ನವೆಂಬರ್ ತಿಂಗಳಲ್ಲೇ ವಿಚಾರಣಾ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲಾಗಿತ್ತು ಹಾಗೂ ಎಫ್ಎಸ್ಎಲ್ ವರದಿ ಸಲ್ಲಿಕೆ ಮಾತ್ರ ಬಾಕಿ ಇತ್ತು. ಆ ಎಫ್ಎಸ್ಎಲ್ ವರದಿಯನ್ನು ಜುಲೈ ೧೫ರಂದು ಸಲ್ಲಿಸಲಾಗಿದೆ. ಇದರೊಂದಿಗೆ ಅಂತಿಮ ವರದಿ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆಯು ಪೂರ್ಣಗೊಂಡಿದ್ದು ಹಾಲಿ ಅರ್ಜಿ ಹಾಗೂ ಅದರಲ್ಲಿನ ಮನವಿಗಳು ನಿರರ್ಥಕವಾಗಿವೆ ಎಂದು ಎಸ್ಪಿಪಿ ತಿಳಿಸಿದ್ದಾರೆ. ಅವರ ಈ ಹೇಳಿಕೆ ದಾಖಲಿಸಿಕೊಂಡು ಅರ್ಜಿ ವಿಲೇವಾರಿ ಮಾಡಲಾಗಿದೆ ಎಂದು ಆದೇಶಿಸಿತು.


ರಮಾ ನಾಗರಾಜ್, ಜಯಂತ್ ಅವರ ಮಧ್ಯಂತರ ಅರ್ಜಿಗಳೂ ಇತ್ಯರ್ಥ: ಇದೇ ವೇಳೆ ಅರ್ಜಿಯಲ್ಲಿ ತಮ್ಮ ವಿರುದ್ಧ ಅಸತ್ಯ ಹಾಗೂ ಆಧಾರರಹಿತ ಆರೋಪಗಳನ್ನು ಮಾಡಲಾಗಿದೆ ಎಂದು ಆಕ್ಷೇಪಿಸಿ ಚಿತ್ರದುರ್ಗದ ರಮಾ ನಾಗರಾಜ್ ಹಾಗೂ ಕಡಬದ ಜಯಂತ್ ಎಂಬುವರು ಸಲ್ಲಿಸಿದ್ದ ಮಧ್ಯಂತರ ಅರ್ಜಿಗಳನ್ನೂ ನ್ಯಾಯಾಲಯ ಇತ್ಯರ್ಥಪಡಿಸಿದೆ. ರಿಟ್ ಅರ್ಜಿಯಲ್ಲಿ ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಧ್ಯಂತರ ಅರ್ಜಿದಾರರ ಮನವಿಯಾಗಿದೆ. ಅರ್ಜಿಯಲ್ಲಿ ಅಥವಾ ಇನ್ನಾವುದೇ ರೀತಿಯಲ್ಲಿ ಮಾಡಲಾದ ಸುಳ್ಳು ಹೇಳಿಕೆಯಿಂದ ಮಧ್ಯಂತರ ಅರ್ಜಿದಾರರಿಗೆ ಅನ್ಯಾಯವಾಗಿದ್ದರೆ ಕಾನೂನಿನಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಅವರಿಗೆ ಸದಾ ಮುಕ್ತ ಅವಕಾಶವಿರುತ್ತದೆ. ಅರ್ಜಿಯಲ್ಲಿ ಅವರ ವಿರುದ್ಧ ಮಾಡಲಾದ ಆರೋಪಗಳ ಕುರಿತು ಈ ನ್ಯಾಯಾಲಯ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಗಂಭೀರ ಆರೋಪ ಮಾಡಿದ್ದ ಚಿನ್ನಯ್ಯ: ಪ್ರಕರಣದಲ್ಲಿ ನನ್ನನ್ನು ಬಳಸಿಕೊಂಡು ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ, ಸುಮಾರು ೨೦೦ ಕೋಟಿ ರೂ. ಗಳ ಷಡ್ಯಂತ್ರ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಗಂಭೀರ ಆರೋಪ ಮಾಡಿದ್ದ ಚಿನ್ನಯ್ಯ ಷಡ್ಯಂತ್ರದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಜಯಂತ್, ಯೂಟ್ಯೂಬರ್ಗಳಾದ ಎಂ.ಡಿ. ಸಮೀರ್, ಅಜಯ್, ದಿನೇಶ್ ಸೇರಿದಂತೆ ಹಲವರ ಪಾತ್ರದ ಬಗ್ಗೆ ಉಲ್ಲೇಖಿಸಿದ್ದರು. ಇದಲ್ಲದೆ, ಬಹುಭಾಷಾ ಖ್ಯಾತ ನಟ ಪ್ರಕಾಶ್ ರಾಜ್ ಹೆಸರನ್ನೂ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದರು. ಈ ವಿಚಾರ ಭಾರೀ ಸಂಚಲನ ಸೃಷ್ಟಿಸಿತ್ತು. ಇದೀಗ ಈ ಅರ್ಜಿ ಹೈಕೋರ್ಟ್ನಲ್ಲಿ ಇತ್ಯರ್ಥಗೊಂಡಿದೆ.
ಕುಸುಮಾವತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ: ಅಸಹಜ ಸಾವಿನ ಕೇಸ್ ವರದಿಗೆ ಕಾಲಾವಕಾಶ ಕೇಳಿದ ಸರಕಾರ : ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ೭೪ ಅಸಹಜ ಸಾವಿನ ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕಾಲಾವಕಾಶ ನೀಡಿರುವ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಆ.೨೪ಕ್ಕೆ ಮುಂದೂಡಿದೆ. ಎಲ್ಲ ೭೪ ಪ್ರಕರಣಗಳ ತನಿಖೆಗೆ ಪ್ರತ್ಯೇಕ ಎಫ್ಐಆರ್ ದಾಖಲಿಸುವಂತೆ ಎಸ್ಐಟಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸೌಜನ್ಯಾ ಅವರ ತಾಯಿ ಕುಸುಮಾವತಿ ಚಂದಪ್ಪ ಗೌಡ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿದ ವೇಳೆ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ ನ್ಯಾಯಪೀಠ ಪ್ರಕರಣಗಳ ಬಗ್ಗೆ ವರದಿ ನೀಡುವುದಾಗಿ ಸರ್ಕಾರ ಮಾರ್ಚ್ನಲ್ಲಿ ತಿಳಿಸಿತ್ತು. ಆ ವಿಚಾರ ಏನಾಗಿದೆ ಎಂದು ಕೇಳಿದರು. ಸರ್ಕಾರದ ಪರ ವಕೀಲರು ಪ್ರತಿಕ್ರಿಯಿಸಿ ಬೇರೆ ಪೀಠದೆದುರು ಅಡ್ವಕೇಟ್ ಜನರಲ್ ಹಾಜರಿದ್ದ ಕಾರಣ ಎರಡು ವಾರಗಳ ಕಾಲಾವಕಾಶ ಕೋರಿದರು. ಇದನ್ನು ನ್ಯಾಯಪೀಠ ಪರಿಗಣಿಸಿ ವಿಚಾರಣೆ ಮುಂದೂಡಿತು.









