






ಬೆಳ್ತಂಗಡಿ: ತನ್ನನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆಯ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಸಂಜೀವ್ ಸಚ್ದೇವ ಅವರನ್ನೊಳಗೊಂಡ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ನಡೆಸಿದ ವೇಳೆ ಪ್ರಜಾಪ್ರಭುತ್ವ ವೇದಿಕೆಯ ಮುಖಂಡರೂ ಆಗಿರುವ ಉಜಿರೆಯ ಮಹೇಶ್ ಶೆಟ್ಟಿ(೫೮) ಅವರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಉಚ್ಛ ನ್ಯಾಯಾಲಯ ಈಗಾಗಲೇ ವಜಾಗೊಳಿಸಿರುವುದನ್ನು ಪ್ರಸ್ತಾಪಿಸಿದ್ದು ಲಭ್ಯವಿರುವ ಶಾಸನಬದ್ಧ ಪರಿಹಾರಗಳನ್ನು ಬಳಸಿಕೊಳ್ಳುವ ಬದಲು ನೇರವಾಗಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿರುವುದರ ಕುರಿತು ಪ್ರಶ್ನಿಸಿದೆ.
ಅಲ್ಲದೆ ಒಂದು ವೇಳೆ ಮಹೇಶ್ ಶೆಟ್ಟಿ ಅವರಿಗೆ ಗಡಿಪಾರು ಆದೇಶದ ಕುರಿತು ಆಕ್ಷೇಪಣೆಗಳಿದ್ದರೆ ಸಂಬಂಧಪಟ್ಟ ಮೇಲ್ಮನವಿ ಪ್ರಾಧಿಕಾರದ ಮುಂದೆ ಮೇಲ್ಮನವಿ ಸಲ್ಲಿಸುವ ಮೂಲಕ ಸೂಕ್ತ ಕಾನೂನು ಪರಿಹಾರ ಪಡೆದುಕೊಳ್ಳಲು ಸ್ವತಂತ್ರರಾಗಿದ್ದಾರೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಅರ್ಜಿದಾರ ಮಹೇಶ್ ಶೆಟ್ಟಿ ಅವರಿಗೆ ಯಾವುದೇ ರೀತಿಯ ಪರಿಹಾರ ನೀಡಲು ನಿರಾಕರಿಸಿದ ಸುಪ್ರೀಂಕೋರ್ಟ್ ಅರ್ಜಿಯನ್ನು ಸಂಪೂರ್ಣವಾಗಿ ವಜಾಗೊಳಿಸಿದೆ. ವಿದ್ಯಾರ್ಥಿನಿ ಸೌಜನ್ಯ ಪರ ಹೋರಾಟಗಾರರಾಗಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರು ಕಾನೂನು ಸುವ್ಯವಸ್ಥೆಗೆ ಪದೇ ಪದೇ ಧಕ್ಕೆ ತರುತ್ತಿದ್ದಾರೆ ಮತ್ತು ರೌಡಿಶೀಟರ್ ಆಗಿರುವ ಇವರು ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಅವರನ್ನು ದ.ಕ.ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಬಂಟ್ವಾಳ ಉಪವಿಭಾಗದ ಪೊಲೀಸ್ ಡಿವೈಎಸ್ಪಿ ಅವರು ಸಹಾಯಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪುತ್ತೂರು ಉಪವಿಭಾಗಾಧಿಕಾರಿಯೂ ಉಪವಿಭಾಗದ ದಂಡಾಧಿಕಾರಿಯೂ ಆಗಿರುವ ಸ್ಟೆಲ್ಲಾ ವರ್ಗಿಸ್ ಅವರು ಈ ಪ್ರಸ್ತಾವನೆ ಕುರಿತು ವಿಚಾರಣೆ ನಡೆಸಿದ್ದರು.


ಸಹಾಯಕ ಆಯುಕ್ತರ ಎದುರು ವಾದ ಪ್ರತಿವಾದ ನಡೆದ ಬಳಿಕ ಮಹೇಶ್ ಶೆಟ್ಟಿ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ಮಹೇಶ್ ಶೆಟ್ಟಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ತಾಂತ್ರಿಕ ಕಾರಣದ ಹಿನ್ನೆಲೆಯಲ್ಲಿ ಗಡಿಪಾರು ಆದೇಶಕ್ಕೆ ತಡೆ ನೀಡಿದ್ದ ಹೈಕೋರ್ಟ್ ನ್ಯಾಯಮೂರ್ತಿಗಳು ಗಡಿಪಾರು ಆದೇಶಕ್ಕೆ ಸಂಬಂಧಿಸಿ ಮರು ಆದೇಶ ಹೊರಡಿಸಲು ಸಹಾಯಕ ಆಯುಕ್ತರಿಗೆ ನಿರ್ದೇಶನ ನೀಡಿದ್ದರು. ನಂತರ ಪರಿಷ್ಕೃತ ಆದೇಶ ಹೊರಡಿಸಿದ್ದ ಎ.ಸಿ. ಅವರು ೯ ತಿಂಗಳ ಅವಧಿಗೆ ಮಾನ್ವಿ ತಾಲೂಕಿಗೆ ಮಹೇಶ್ ಶೆಟ್ಟಿ ಅವರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು. ಮತ್ತೆ ಹೈಕೋರ್ಟ್ನಲ್ಲಿ ವಾದ ಪ್ರತಿವಾದ ನಡೆದು ಸಹಾಯಕ ಆಯುಕ್ತರ ಬಳಿಗೆ ಪ್ರಕರಣ ವಾಪಸ್ ಆಗಿತ್ತು. ಮೂರನೇ ಬಾರಿಗೆ ಆದೇಶ ಹೊರಡಿಸಿದ್ದ ಸಹಾಯಕ ಆಯುಕ್ತರು ಮಹೇಶ್ ಶೆಟ್ಟಿ ಅವರನ್ನು ಮಾನ್ವಿ ತಾಲೂಕಿಗೆ ಆರು ತಿಂಗಳ ಅವಧಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು. ಪುನಃ ತಿಮರೋಡಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ನ ಏಕಸದಸ್ಯ ಮತ್ತು ದ್ವಿಸದಸ್ಯ ಪೀಠದಲ್ಲಿ ಅರ್ಜಿಯ ವಿಚಾರಣೆ ನಡೆದು ಮಹೇಶ್ ಶೆಟ್ಟಿ ಅವರ ಅರ್ಜಿ ವಜಾಗೊಂಡಿತ್ತು.
ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಲಾಗಿತ್ತು. ಇದೀಗ ಸುಪ್ರೀಂಕೋರ್ಟ್ನಲ್ಲಿಯೂ ತಿಮರೋಡಿ ಅವರ ಅರ್ಜಿ ವಜಾಗೊಂಡಿದೆ. ಅರ್ಜಿ ವಿಚಾರಣೆ ವೇಳೆ ಮಹೇಶ್ ಶೆಟ್ಟಿ ಪರ ವಾದ ಮಂಡಿಸಿದ ವಕೀಲರು ಈ ಗಡಿಪಾರು ಆದೇಶದಲ್ಲಿ ಸೌಜನ್ಯ ಪ್ರಕರಣ ಸೇರಿ ಸ್ಥಳೀಯ ದೇವಾಲಯಗಳಿಗೆ ಸಂಬಂಧಿಸಿದ ವ್ಯಕ್ತಿಗಳು ತಮ್ಮನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದರು. ಈ ವಾದವನ್ನು ತಿರಸ್ಕರಿಸಿದ ನ್ಯಾಯಪೀಠ ಅಸಂಬಂಧಿತ ವಿಷಯಗಳನ್ನು ಬಳಸಿ ಸಾರ್ವಜನಿಕ ಭಾವನೆಗಳನ್ನು ಕೆರಳಿಸುವುದು ಅಥವಾ ದುರ್ಬಳಕೆ ಮಾಡುವುದು ಸರಿಯಲ್ಲ ಎಂದು ಹೇಳಿತು. ಈ ನ್ಯಾಯಾಲಯದಲ್ಲಿ ಜೂಜಾಟವಾಡಬೇಡಿ. ಒಮ್ಮೆ ಬಾಜಿ ಕಟ್ಟಿದರೆ ಮುಗಿಯಿತು. ಆದರೆ ನ್ಯಾಯಾಲಯದಲ್ಲಿ ಅಂತಹ ಅವಕಾಶಗಳಿಗೆ ಆಸ್ಪದವಿಲ್ಲ ಎಂದು ಮೌಖಿಕವಾಗಿ ನ್ಯಾಯಪೀಠ ತೀವ್ರ ಆಕ್ಷೇಪ ವ್ಯಕ್ತಪಡಿಸಿತು ಎಂದು ಮಾಹಿತಿ ಲಭ್ಯವಾಗಿದೆ.
ಪೊಲೀಸರಿಗೆ ಸಿಗದ ತಿಮರೋಡಿ!: ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು ಮೂರನೇ ಬಾರಿ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ. ಈ ಮೂರು ಬಾರಿಯೂ ಮಹೇಶ್ ಶೆಟ್ಟಿ ತಲೆ ಮರೆಸಿಕೊಂಡಿದ್ದಾರೆ. ಭೂಗತರಾಗಿದ್ದುಕೊಂಡೇ ಅವರು ತಮ್ಮ ವಕೀಲರ ಮೂಲಕ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ನಲ್ಲಿ ಕಾನೂನು ಹೋರಾಟ ನಡೆಸಿದ್ದಾರೆ. ಈ ಕಾನೂನು ಸಮರದಲ್ಲಿ ತಿಮರೋಡಿ ಅವರು ಹಿನ್ನಡೆ ಅನುಭವಿಸಿದ್ದಾರೆ. ಪ್ರತೀ ಬಾರಿ ಗಡಿಪಾರು ಆದೇಶ ಆದಾಗಲೂ ಮಹೇಶ್ ಶೆಟ್ಟಿ ಅವರನ್ನು ತಮ್ಮ ಬಲೆಗೆ ಕೆಡವಲು ಪೊಲೀಸ್ ಅಧಿಕಾರಿಗಳು ತಂತ್ರ ರೂಪಿಸಿದ್ದಾರೆ. ತಿಮರೋಡಿ ಮನೆಗೆ ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಮನೆಯ ಗೋಡೆಗೆ ಪೊಲೀಸರು ನೋಟಿಸ್ ಅಂಟಿಸಿದ್ದಾರೆ. ಉಜಿರೆಯಲ್ಲಿ ಧ್ವನಿರ್ವಧಕದ ಮೂಲಕವೂ ಉದ್ಘೋಷಣೆ ಮಾಡಿದ್ದಾರೆ. ಮಹೇಶ್ ಶೆಟ್ಟಿ ಅವರ ಆಪ್ತರ ಮೂಲಕ ಮಾಹಿತಿ ಸಂಗ್ರಹಿಸಿರುವ ಪೊಲೀಸರು ಅವರಿಗಾಗಿ ವಿವಿಧೆಡೆ ಜಾಲಾಡಿದ್ದಾರೆ. ಮಧ್ಯ ರಾತ್ರಿ ಪೊಲೀಸ್ ಪಡೆಯೇ ತಿಮರೋಡಿ ಮನೆಗೆ ನುಗ್ಗಿ ಜಾಲಾಡಿದೆ. ಆದರೆ ಮಹೇಶ್ ಶೆಟ್ಟಿ ಪೊಲೀಸರಿಗೆ ಸಿಗದೆ ಚಳ್ಳೆಹಣ್ಣು ತಿನ್ನಿಸಿದ್ದಾರೆ. ಇದೀಗ ಸುಪ್ರೀಂಕೋರ್ಟ್ನಲ್ಲಿಯೂ ಮಹೇಶ್ ಶೆಟ್ಟಿ ಅವರ ಅರ್ಜಿ ತಿರಸ್ಕೃತಗೊಂಡಿರುವುದರಿಂದ ಈ ಬಾರಿಯಾದರೂ ಅವರನ್ನು ತಮ್ಮ ವಶಕ್ಕೆ ಪಡೆದು ಗಡಿಪಾರು ಮಾಡಲೇಬೇಕು ಎಂದು ಪೊಲೀಸ್ ಇಲಾಖೆ ಹಠಕ್ಕೆ ಬಿದ್ದಿದೆ. ಮುಂದಿನ ಬೆಳವಣಿಗೆ ಕಾದು ನೋಡಬೇಕಿದೆ.









