






ಬೆಳ್ತಂಗಡಿ: ಹಿಂದೂ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ದ.ಕ. ಜಿಲ್ಲಾ ಬಿಜೆಪಿ ಯುವಮೋರ್ಚಾದ ಮುಖಂಡ ಪ್ರವೀಣ್ ನೆಟ್ಟಾರು(೩೪) ಅವರನ್ನು ಸುಳ್ಯ ತಾಲೂಕಿನ ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ೨೦೨೨ರ ಜುಲೈ ೨೬ರಂದು ರಾತ್ರಿ ೮ ಗಂಟೆ ವೇಳೆಗೆ ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಗಳಾಗಿರುವ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯಗುಡ್ಡೆಯ ನೌಷಾದ್(೩೫) ಮತ್ತು ಕೊಡಗು ಜಿಲ್ಲೆಯ ಸೋಮವಾರಪೇಟೆಯ ಅಬ್ದುಲ್ ನಾಸೀರ್(೪೨) ಎಂಬವರನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ನೌಷದ್ನನ್ನು ಕೊಚ್ಚಿಯಲ್ಲಿ ಮತ್ತು ನಾಸೀರ್ನನ್ನು ಹೊಸೂರಿನಲ್ಲಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಪ್ರವೀಣ್ ನೆಟ್ಟಾರು ಅವರನ್ನು ಅವರದೇ ಮಾಲಕತ್ವದ ಅಕ್ಷಯ್ ಚಿಕನ್ ಸೆಂಟರ್ ಎದುರು ಕೊಲೆ ಮಾಡಿದ ಬಳಿಕ ಹಂತಕರು ಕಾರಿನಲ್ಲಿ ಪರಾರಿಯಾಗಲು ಕಾರು ಚಾಲಕರಾಗಿ ಸಹಕರಿಸಿದ ಆರೋಪ ನೌಷಾದ್ ಮತ್ತು ನಾಸಿರ್ ಅವರ ಮೇಲಿದೆ. ಬಂಧಿತರನ್ನು ಎನ್ಐಎ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಬೆಳಕಿಗೆ ಬರಬೇಕಿದೆ.
ಘಟನೆಯ ವಿವರ: ೨೦೨೨ರ ಜು. ೨೬ರಂದು ರಾತ್ರಿ ೮ ಗಂಟೆ ವೇಳೆಗೆ ಪ್ರವೀಣ್ ಅವರು ಸುಳ್ಯ ತಾಲೂಕಿನ ಬೆಳ್ಳಾರೆಯ ನೆಟ್ಟಾರ್ನಲ್ಲಿರುವ ತಮ್ಮ ಮನೆಗೆ ತೆರಳಲು ಸಿದ್ಧರಾಗುತ್ತಿದ್ದಾಗ ಬೆಳ್ಳಾರೆಯಲ್ಲಿರುವ ಅವರದೇ ಮಾಲಕತ್ವದ ಅಕ್ಷಯ್ ಚಿಕನ್ ಸೆಂಟರ್ ಎದುರು ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಆರಂಭದಲ್ಲಿ ಕರ್ನಾಟಕ ಪೊಲೀಸರು ನಡೆಸುತ್ತಿದ್ದ ಈ ಪ್ರಕರಣದ ತನಿಖೆಯನ್ನು ಬಳಿಕ ಅಂದಿನ ಬಿಜೆಪಿ ಸರಕಾರ ರಾಷ್ಟ್ರೀಯ ತನಿಖಾ ತಂಡಕ್ಕೆ ವಹಿಸಿತ್ತು. ಹತ್ಯೆ ಸಂಬಂಧ ಈವರೆಗೆ ಎನ್.ಐ.ಎ. ಒಟ್ಟು ೨೮ ಆರೋಪಿಗಳ ಪೈಕಿ ೨೧ ಮಂದಿಯನ್ನು ಬಂಧಿಸಿತ್ತು. ಉಳಿದ ಆರೋಪಿಗಳ ಬಂಧನಕ್ಕೆ ಬಹುಮಾನ ಘೋಷಣೆ ಮಾಡಿ ಹುಡುಕಾಟ ನಡೆಸುತ್ತಿತ್ತು. ಇದೀಗ ೪ ವರ್ಷಗಳ ಬಳಿಕ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬೆಂಗಳೂರು ಎನ್.ಐ.ಎ. ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಪ್ರಕರಣದಲ್ಲಿ ಇನ್ನೂ ಐದು ಮಂದಿಯ ಬಂಧನ ಬಾಕಿ ಇದ್ದು ಎನ್.ಐ.ಎ. ಹುಡುಕಾಟ ಮುಂದುವರಿಸಿದೆ. ನೌಷಾದ್ ಮತ್ತು ನಾಸೀರ್ ತಲೆಮರೆಸಿಕೊಂಡಿದ್ದ ಬಗ್ಗೆ ಎನ್.ಐ.ಎ. ಪತ್ರಿಕಾ ಪ್ರಕಟಣೆ ಹೊರಡಿಸಿ ಪತ್ತೆಗೆ ಸಹಕರಿಸಿದಲ್ಲಿ ತಲಾ ೪ ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿತ್ತು. ಆರಂಭದಲ್ಲಿ ಇವರ ಕುರಿತು ಸುಳಿವು ನೀಡಿದವರಿಗೆ ತಲಾ ೨ ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಅನಂತರ ಅದನ್ನು ಇಮ್ಮಡಿಗೊಳಿಸಲಾಗಿತ್ತು.


ಆಂಧ್ರಪ್ರದೇಶದಲ್ಲಿ ಅಡ ಗಿದ್ದರೇ?: ನೌಷಾದ್ ಮತ್ತು ನಾಸೀರ್ಗಾಗಿ ಎನ್ಐಎ ದೀರ್ಘ ಸಮಯದಿಂದ ಹುಡುಕಾಟ ನಡೆಸುತ್ತಿತ್ತು. ಈ ನಡುವೆ ಆಂಧ್ರಪ್ರದೇಶದ ಪೊಲೀಸರಿಗೆ ಸಿಕ್ಕಿದ ಒಂದು ಮಾಹಿತಿ ಇವರಿಬ್ಬರ ಪತ್ತೆಗೆ ನೆರವಾಗಿದೆ ಎಂದು ಹೇಳಲಾಗುತ್ತಿದೆ. ಕೃತ್ಯ ನಡೆಸಿದ ಬಳಿಕ ಪರಾರಿಯಾಗಿದ್ದ ಇವರಿಬ್ಬರು ಬೇರೆ ಬೇರೆ ಕಡೆ ಅಡಗಿ ಕುಳಿತು ತಮ್ಮ ಮಾಹಿತಿ ಬಹಿರಂಗವಾಗದಂತೆ ನೋಡಿಕೊಂಡಿದ್ದರು. ಕೆಲವು ಸಮಯದ ಹಿಂದೆ ಆಂಧ್ರಪ್ರದೇಶದಲ್ಲಿ ಇವರು ಅಡಗಿರುವ ಮಾಹಿತಿ ಅಲ್ಲಿನ ಪೊಲೀಸರಿಗೆ ಸಿಕ್ಕಿತ್ತು. ಆದರೆ ಅಲ್ಲಿನ ಪೊಲೀಸರು ಇವರಿಬ್ಬರನ್ನು ಹುಡುಕುವ ಕಾರ್ಯದಲ್ಲಿದ್ದಾಗಲೇ ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದರು. ಆದರೂ ಬೆಂಬಿಡದ ಪೊಲೀಸರು ಅವರ ಓಡಾಟದ ಮೇಲೆ ನಿಗಾ ಇರಿಸಿ ಇಬ್ಬರು ಬೇರೆ ಬೇರೆ ರಾಜ್ಯಗಳಿಗೆ ತೆರಳಿರುವುದನ್ನು ಕಂಡುಕೊಂಡಿದ್ದರು. ಕೊನೆಗೆ ಅವರು ಕೇರಳ ಮತ್ತು ತಮಿಳುನಾಡಿಗೆ ತೆರಳಿರುವ ಮಾಹಿತಿ ಸಿಕ್ಕಿತ್ತು. ಇದನ್ನು ಎನ್ಐಎ ಜತೆ ಹಂಚಿಕೊಳ್ಳಲಾಗಿತ್ತು. ಇವರಿಬ್ಬರು ಬೇರೆ ಬೇರೆ ಕಡೆ ಅಡಗಿರುವ ಮಾಹಿತಿ ಸಿಗುತ್ತಿದ್ದಂತೆ ಎನ್ಐಎ ಚುರುಕಾಗಿತ್ತು. ತೀವ್ರವಾದ ಶೋಧದ ಬಳಿಕ ಎರಡೂ ಕಡೆ ಏಕಕಾಲದಲ್ಲಿ ನಿಖರವಾದ ದಾಳಿ ನಡೆಸಿದ ಎನ್ಐಎ ಇಬ್ಬರು ಆರೋಪಿಗಳನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ.
ಭಯ ಹುಟ್ಟಿಸುವ ಮತ್ತು ಕೋಮುಗಲಭೆ ಸೃಷ್ಟಿಸುವ ಉzಶದಿಂದ ಕೊಲೆ ಮಾಡಲಾಗಿತ್ತು: ಪ್ರವೀಣ್ ನೆಟ್ಟಾರು ಅವರನ್ನು ಜನರಲ್ಲಿ ಭಯ ಹುಟ್ಟಿಸುವ ಉzಶದಿಂದ ಸಾರ್ವಜನಿಕ ಸ್ಥಳದಲ್ಲಿ ಹರಿತವಾದ ಆಯುಧಗಳಿಂದ ಭೀಕರವಾಗಿ ಕೊಲೆಗೈಯ್ಯಲಾಗಿತ್ತು ಎಂದು ಎನ್ಐಟ ತನಿಖೆಯಲ್ಲಿ ಸಾಬೀತಾಗಿತ್ತು. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ತನಿಖಾದಳದ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದೋಷಾರೋಪಣಾ ಪಟ್ಟಿಯಲ್ಲಿ ಈ ವಿಚಾರವನ್ನು ಎನ್ಐಎ ದಾಖಲಿಸಿತ್ತು. ಜನರಲ್ಲಿ ಭಯ ಉಂಟು ಮಾಡಲು ಮತ್ತು ಕೋಮು ಗಲಭೆಯನ್ನು ಪ್ರಚೋದಿಸಲು ಪಿಎಫ್ಐನ ಅಜೆಂಡಾದ ಭಾಗವಾಗಿ ಪ್ರವೀಣ್ ನೆಟ್ಟಾರು ಕೊಲೆ ಮಾಡಲಾಗಿದೆ. ಹಿಂದೂ ಸಂಘಟಕರನ್ನು ಟಾರ್ಗೆಟ್ ಮಾಡಿದ್ದ ಪಿಎಫ್ಐ ಸದಸ್ಯರು ಅಂತವರನ್ನು ಗುರಿಯಿಟ್ಟು ಹತ್ಯೆ ಮಾಡಲೆಂದೇ ಸೀಕ್ರೆಟ್ ತಂಡಗಳ ರಚನೆ ಮಾಡಿದ್ದರು.
ಪಿಎಫ್ಐನಿಂದ ರಚನೆಯಾಗಿದ್ದ ಈ ಸೀಕ್ರೆಟ್ ತಂಡಗಳನ್ನು ಪಿಎಫ್ಐ ಸರ್ವಿಸ್ ಟೀಮ್ಸ್ ಎಂದು ಕರೆಯಲಾಗುತ್ತಿತ್ತು. ಈ ತಂಡಗಳಿಗೆ ವಿಶೇಷ ತರಬೇತಿ ಸಹ ನೀಡಲಾಗಿತ್ತು. ಈ ತಂಡಗಳಿಗೆ ಶಸ್ತ್ರಾಸ್ತ್ರ ಹಾಗೂ ಕಣ್ಗಾವಲು ತರಬೇತಿಯೂ ನೀಡಲಾಗಿತ್ತು ಎಂದು ಚಾಜ್ಶೀಟ್ನಲ್ಲಿ ಉಲ್ಲೇಖಿಸಲಾಗಿತ್ತು ಎಂದು ತಿಳಿದು ಬಂದಿದೆ. ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಕರ್ನಾಟಕ ಪೊಲೀಸರು ನಡೆಸುತ್ತಿದ್ದರು. ಬಳಿಕ ವ್ಯಾಪಕ ಆಗ್ರಹ ಮತ್ತು ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಆಗಿನ ರಾಜ್ಯ ಬಿಜೆಪಿ ಸರಕಾರದ ಅವಧಿಯಲ್ಲಿ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಲಾಗಿತ್ತು. ನಂತರ ಕಾನೂನು ಬಾಹಿರ ಕೃತ್ಯ ಎಸಗುತ್ತಿರುವ ಆರೋಪದಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಕೇಂದ್ರ ಸರಕಾರ ನಿಷೇಧಿಸಿ ಆದೇಶ ಹೊರಡಿಸಿತ್ತು. ಪ್ರವೀಣ್ ನೆಟ್ಟಾರ್ ಹತ್ಯೆ ಕೇಸ್ನಲ್ಲಿ ನೌಷಾದ್ ಪಡಂಗಡಿ ೨೩ನೇ ಆರೋಪಿಯಾಗಿದ್ದಾನೆ. ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಬಂಧಿತರ ಪೈಕಿ ಹಲವರು ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಈಗಾಗಲೇ ತಿರಸ್ಕೃತಗೊಂಡಿದೆ.
ನೌಷಾದ್ಗಾಗಿ ವಿವಿಧೆಡೆ ಶೋಧ ನಡೆದಿತ್ತು
ಪ್ರವೀಣ್ ನೆಟ್ಟಾರು ಅವರ ಕೊಲೆ ಪ್ರಕರಣದ ಹಂತಕರ ನಿಕಟವರ್ತಿಗಳ ಪತ್ತೆಗಾಗಿ ಕರ್ನಾಟಕ ಸೇರಿ ತಮಿಳುನಾಡಿನ ೧೬ ಕಡೆ ದಾಳಿ ಮಾಡಿದ್ದ ಎನ್ಐಎ ಅಧಿಕಾರಿಗಳು ಪುತ್ತೂರು ತಾಲೂಕಿನ ಕೆಯ್ಯೂರು, ಉಪ್ಪಿನಂಗಡಿ ಸಹಿತ ಹಲವೆಡೆ ಜಾಲಾಡಿದ್ದರು. ಬೆಳ್ತಂಗಡಿ ತಾಲೂಕಿನ ಪಡಂಗಡಿಯ ಪೊಯ್ಯೆಗುಡ್ಡೆಗೂ ಬಂಧಿದ್ದ ಎನ್ಐಎ ಅಧಿಕಾರಿಗಳು ನೌಷಾದ್ಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಕೊಲೆ ಪ್ರಕರಣದ ನೇರ ಆರೋಪಿಗಳಾದ ಶಿಯಾಬ್ ನಾವೂರು, ಬಶೀರ್ ಎಲಿಮಲೆ, ರಿಯಾಜ್ ಅಂಕತಡ್ಕ, ಕೊಲೆಗೆ ಸಂಚು ರೂಪಿಸಿದ ಆರೋಪಿಗಳಾದ ಮಹಮ್ಮದ್ ಮುಸ್ತಫ ಪೈಚಾರು, ತುಫೈಲ್ ಮಡಿಕೇರಿ ಮತ್ತು ಕೊಲೆಗೆ ನೆರವು ನೀಡಿದ ಆರೋಪಿಗಳಾದ ಶಫೀಕ್ ಬೆಳ್ಳಾರೆ, ಝಕೀರ್ ಸವಣೂರು, ಹಾರಿಸ್ ಪಳ್ಳಿಮಜಲು, ನೌಫಲ್ ಗೌರಿಹೊಳೆ, ಆಬಿದ್ ನಾವೂರು, ಜಟ್ಟಿಪಳ್ಳದ ಅಬ್ದುಲ್ ಕಬೀರ್, ಶಾಫಿ ಬೆಳ್ಳಾರೆ, ಇಕ್ಬಾಲ್ ಬೆಳ್ಳಾರೆ, ಇಬ್ರಾಹಿಂ ಷಾ, ಸದ್ದಾಂ ಪಳ್ಳಿಮಜಲು, ಶಾಹಿದ್ ಬೆಳ್ಳಾರೆ, ಜಾಬಿರ್ ಅರಿಯಡ್ಕ, ಮನ್ಸೂರ್ ಪಾಷಾ ಮತ್ತು ಮೊಹಮ್ಮದ್ ಷರೀಫ್ ಕೊಡಾಜೆ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಿದ್ದಿಕ್ ಬೆಳ್ಳಾರೆ, ಉಮ್ಮರ್ ಫಾರೂಕ್ ಕಲ್ಲುಮುಟ್ಟು, ಮಸೂದ್ ಅಗ್ನಾಡಿ ಉಪ್ಪಿನಂಗಡಿ, ಅಬ್ದುಲ್ ನಾಸಿರ್ ಸೋಮವಾರಪೇಟೆ, ಅಬ್ದುಲ್ ರಹಿಮಾನ್ ಸೋಮವಾರಪೇಟೆ ಹಾಗೂ ಪಡಂಗಡಿಯ ನೌಶಾದ್ಗಾಗಿ ಶೋಧ ನಡೆಸಲಾಗುತ್ತಿತ್ತು. ಈ ಪೈಕಿ ಇದೀಗ ಅಬ್ದುಲ್ ನಾಸೀರ್ ಸೋಮವಾರಪೇಟೆ ಮತ್ತು ನೌಷಾದ್ ಪಡಂಗಡಿಯನ್ನು ಬಂಧಿಸಲಾಗಿದೆ. ಉಳಿದವರಿಗಾಗಿ ಶೋಧ ಮುಂದುವರಿಸಲಾಗಿದೆ.
ನೌಷಾದ್ ತಾಯಿ ಮತ್ತು ತಂಗಿಯ ವಿಚಾರಣೆ ನಡೆದಿತ್ತು: ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿ ನೌಷಾದ್ ಮನೆಗೆ ಈ ಹಿಂದೆ ಬೆಂಗಳೂರಿನಿಂದ ಬಂದಿದ್ದ ಐದು ಜನರ ಎನ್.ಐ.ಎ. ತಂಡ ನೌಷಾದ್ನ ತಾಯಿ ಮತ್ತು ತಂಗಿಯನ್ನು ವಿಚಾರಣೆಗೆ ಒಳಪಡಿಸಿತ್ತು. ಪೊಲೀಸ್ ಅಧಿಕಾರಿಗಳು ಬರುವ ಮಾಹಿತಿ ತಿಳಿದ ತಾಯಿ ದುಲೇಖ ಮತ್ತು ತಂಗಿ ತಶ್ರೀಫ್ ಅವರು ರಾತ್ರಿ ವೇಳೆಗೆ ಮನೆಗೆ ಬೀಗ ಹಾಕಿ ತಪ್ಪಿಸಿಕೊಂಡಿದ್ದರು. ಅವರ ಬೆನ್ನು ಹತ್ತಿದ್ದ ಎನ್.ಐ.ಎ.ಯ ಡಿವೈಎಸ್ಪಿ ವಿಘ್ನೇಶ್ ನೇತೃತ್ವದ ಅಧಿಕಾರಿಗಳು ಕುವೆಟ್ಟು ಗ್ರಾಮದ ಮದ್ದಡ್ಕ ಆಸುಪಾಸಿನಲ್ಲಿ ತಲೆಮರೆಸಿಕೊಂಡಿದ್ದ ದುಲೇಖ ಹಾಗೂ ತಶ್ರೀಫ್ ಅವರನ್ನು ಪೊಯ್ಯೆಗುಡ್ಡೆ ಮನೆಗೆ ವಾಪಸ್ ಕರೆತಂದು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದರು. ಅಲ್ಲದೆ ನೌಷಾದ್ ಪತ್ತೆಗೆ ನೊಟೀಸ್ ಜಾರಿಗೊಳಿಸಿದ್ದರು.
ಬೆಳ್ಳಾರೆಯ ಶಾಫಿಯನ್ನು ಕೋರ್ಟ್ಗೆ ಹಾಜರು ಪಡಿಸಿದ್ದಾಗ ಯುವಕ ಕಿಸ್ ಕೊಟ್ಟ ಪ್ರಕರಣ ಭಾರೀ ಸುದ್ದಿಯಾಗಿತ್ತು: ಪ್ರವೀಣ್ ನೆಟ್ಟಾರ್ ಅವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಂದ ಬಂಧಿತರಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಸ್ಡಿಪಿಐ ಮುಖಂಡ ಶಾಫಿ ಬೆಳ್ಳಾರೆಯನ್ನು ಬೆಳ್ತಂಗಡಿ ತಾಲೂಕಿನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಈ ವೇಳೆ ಶಾಫಿ ಬೆಳ್ಳಾರೆಗೆ ಯುವಕನೊಬ್ಬ ಮುತ್ತು ಕೊಟ್ಟ ಪ್ರಕರಣ ಭಾರೀ ಸುದ್ದಿಯಾಗಿತ್ತು.
ಪ್ರಚೋದನಾಕಾರಿ ಭಾಷಣ ಕೇಸ್: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಮೊಕದ್ದಮೆ ಸಂಖ್ಯೆ ೧೦೪/೨೦೧೪ರ ಪ್ರಕರಣಕ್ಕೆ ಸಂಬಂಧಿಸಿ ಎಸ್ಡಿಪಿಐ ಮುಖಂಡನಾಗಿರುವ ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿ ಶಾಫಿ ಮತ್ತಿತರರ ವಿರುದ್ಧ ವಿರುದ್ಧ ಬೆಳ್ತಂಗಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಮುಸ್ಲಿಂ ಸಮುದಾಯಕ್ಕೆ ಸೇರಿರುವ ಶಾಫಿ ಬೆಳ್ಳಾರೆ ಮತ್ತಿತರರು ದಿನಾಂಕ ೩೦-೦೧-೨೦೧೪ರಂದು ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ ಕಸಬಾ ಗ್ರಾಮದ ಬೆಳ್ತಂಗಡಿಯ ಸಾರ್ವಜನಿಕ ಸ್ಥಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ಸಾಮರಸ್ಯ ಉಳಿಸೋಣ ಕೋಮುವಾದ ಅಳಿಸೋಣ ಎಂಬ ಜನಾಂದೋಲನಾ ಕಾರ್ಯಕ್ರಮದ ಸಭೆಯಲ್ಲಿ ಸಂಜೆ ೪ ಗಂಟೆಯಿಂದ ೬ ಗಂಟೆಯ ಮಧ್ಯೆ ಕೋಮು ಸೌಹಾರ್ಧವನ್ನು ಕೆಣಕಿ ಹಿಂದೂ ಮತ್ತು ಮುಸ್ಲಿಂ ಧರ್ಮಗಳ ಮಧ್ಯೆ ವೈರತ್ವವನ್ನು ಹುಟ್ಟಿಸುವಂತೆ ಪ್ರಚೋದನಾಕಾರಿ ಬಾಷಣ ಮಾಡಿದ್ದಾರೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸುಮಾರು ವರ್ಷಗಳಿಂದ ಈ ರಾಷ್ಟ್ರದಲ್ಲಿ ಕಾರ್ಯಾಚರಿಸುತ್ತಿದೆ. ಈ ದೇಶದಲ್ಲಿ ಪ್ರಜಾಪ್ರಭುತ್ವ ಇರುವುದಾದರೆ ಒಂದಲ್ಲ ಒಂದು ದಿನ ಅದೇ ಸ್ಥಳದಲ್ಲಿ ಡಿಸೆಂಬರ್ ೬ರ ಅದೇ ದಿನ ಬಾಬರಿ ಮಸೀದಿಯನ್ನು ನಿರ್ಮಿಸುತ್ತೇವೆ. ನಿಮಗೆ ತಾಕತ್ತಿದ್ದರೆ ಒಂದು ದಿನ ಫಿಕ್ಸ್ ಮಾಡಿ ಆ ದಿನ ಮಕ್ಕಳನ್ನು ಕರೆಯಬೇಡಿ, ಹೆಂಗಸರನ್ನು ಕರೆಯಬೇಡಿ, ಪ್ರಾಯಸ್ಥರನ್ನು ಕರೆಯಬೇಡಿ. ನೀವು ಎಲ್ಲಾ ಬನ್ನಿ. ಬ್ಯಾರಿ ತಂಟೆಗೆ ಬರಲಿ. ಅದು ನಿಮ್ಮ ಕೆಪಾಸಿಟಿ. ನಿಮ್ಮ ತಾಕತ್ತನ್ನು ನಾವು ನೋಡುತ್ತೇವೆ. ಪೊಲೀಸರ ಕೆಲಸವನ್ನು ನಾವೇ ಮಾಡುತ್ತೇವೆ. ಬದುಕುವ ಹಕ್ಕು ಎಲ್ಲರಿಗೂ ಒಂದೇ. ನೀವು ಹಿಂದೂ ರಾಷ್ಟ್ರವನ್ನು ಮಾಡಲು ಹೊರಟರೆ ಒಂದಲ್ಲಾ ಒಂದು ದಿನ ಮುಸ್ಲಿಂ ರಾಷ್ಟ್ರವಾಗಿ ಮಾಡಬೇಕಾಗುತ್ತದೆ. ಮುಂದಕ್ಕೆ ಪ್ರಚೋದನೆ ಭಾಷಣ ಮಾಡಿದರೆ ತುಂಡರಿಸಿ ತೆಗೆಯಬೇಕಾಗುತ್ತದೆ. ಅವರನ್ನು ಶಾಶ್ವತವಾಗಿ ಅಂಗವಿಕಲರನ್ನಾಗಿ ಮಾಡಬೇಕಾಗುತ್ತದೆ. ನಾವು ಪಿ.ಎಫ್.ಐ. ಸಂಘಟನೆಗೆ ಸೇರುವಾಗ ಒಂದು ಪ್ರತಿಜ್ಞೆಯನ್ನು ತೆಗೆದುಕೊಂಡಿರುತ್ತೇವೆ. ಅದೇನೆಂದರೆ ಇಸ್ಲಾಂಗೆ ಬೇಕಾಗಿ ತಮ್ಮ ಜೀವನವನ್ನು ಅಲ್ಲಾಹುನಿಗೆ ಅರ್ಪಿಸಲು ತಯಾರು. ಇದನ್ನು ಆರ್.ಎಸ್.ಎಸ್.ನವರು ಅರ್ಥ ಮಾಡಿಕೊಳ್ಳಲಿ ಎಂದು ಎರಡು ಸಮುದಾಯಗಳ ನಡುವೆ ವೈರತ್ವವನ್ನು ಹುಟ್ಟುಹಾಕಲು ಕೋಮು ಪ್ರಚೋದನಾತ್ಮಕ ಭಾಷಣ ಮಾಡಿದ್ದಾರೆ ಎಂದು ಶಾಫಿ ಬೆಳ್ಳಾರೆ ಮತ್ತಿತರರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಬಳಿಕ ಬೆಳ್ತಂಗಡಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಶಾಫಿ ಬೆಳ್ಳಾರೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.
ಪೊಲೀಸ್ ಭದ್ರತೆ ಮಧ್ಯೆಯೇ ಆರೋಪಿಗೆ ಮುತ್ತಿಕ್ಕಿದ್ದ ಯುವಕ: ಆರೋಪಿ ಶಾಫಿ ಬೆಳ್ಳಾರೆಗೆ ಪೊಲೀಸ್ ಭದ್ರತೆ ನಡುವೆಯೇ ಯುವಕನೋರ್ವ ಮುತ್ತಿಕ್ಕಿದ ಘಟನೆ ನಡೆದಿತ್ತು. ಆರೋಪಿಯನ್ನು ಇಬ್ಬರು ಪೊಲೀಸರು ಕರೆದೊಯ್ಯುತ್ತಿದ್ದ ವೇಳೆ ದಿಢೀರ್ ಎದುರು ಬಂದಿದ್ದ ಯುವಕನೋರ್ವ ಶಾಫಿ ಬೆಳ್ಳಾರೆ ಹಣೆಗೆ ಮುತ್ತಿಕ್ಕಿದ್ದ. ಈ ವೇಳೆ ಪೊಲೀಸರು ಆತನನ್ನು ದೂಡಿ ಮುಂದೆ ಸಾಗಿದ್ದರು. ಆ ವೀಡಿಯೋ ಭಾರೀ ವೈರಲ್ ಆಗಿತ್ತು. ಪ್ರಚೋದನಾಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಶಾಫಿ ಬೆಳ್ಳಾರೆಯನ್ನು ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆದಿದ್ದ ಬೆಳ್ತಂಗಡಿ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ವೇಳೆ ನ್ಯಾಯಾಧೀಶರು ಪ್ರಚೋದನಾಕಾರಿ ಭಾಷಣ ಪ್ರಕರಣದ ಮುಂದಿನ ವಿಚಾರಣೆಗಳಿಗೆ ಶಾಫಿ ಬೆಳ್ಳಾರೆಯನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸುವಂತೆ ತನಿಖಾಧಿಕಾರಿಗೆ ಸೂಚಿಸಿ ವಿಚಾರಣೆ ಮುಂದೂಡಿದ್ದರು.









