ಶಕ್ತಿನಗರದಲ್ಲಿ ಅನುಮಾನಾಸ್ಪದವಾಗಿ ಮೃತದೇಹ ಪತ್ತೆ ಪ್ರಕರಣ: ಮೃತ ಮುಸ್ತಾಕ್ ವಿರುದ್ಧ ಅಲ್ಯುಮಿನಿಯಂ ವಯರ್ ಕದ್ದ ಆರೋದಪಡಿ ಕೇಸ್ ದಾಖಲು

0

ಬೆಳ್ತಂಗಡಿ: ಕುವೆಟ್ಟು ಗ್ರಾಮದ ಗುರುವಾಯನಕೆರೆಯ ಶಕ್ತಿನಗರದ ಎಸ್.ಎಲ್.ವಿ.ಇ. ಪವರ್ ಪ್ರೈವೇಟ್ ಲಿಮಿಟೆಡ್ ರಿಸೀವಿಂಗ್ ಸ್ಟೇಷನ್ ಕಂಪೌಂಡ್ ಒಳಗೆ ಜು.೧ರಂದು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಕಲ್ಲೇರಿ ಜನತಾ ಕಾಲೋನಿಯ ಮುಸ್ತಾಕ್(೨೭) ಅವರ ವಿರುದ್ಧವೇ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಅಲ್ಯುಮೀನಿಯಂ ವಯರ್‌ಗಳನ್ನು ಕಳವು ಮಾಡಿದ ಆರೋಪದಡಿ ಮುಸ್ತಾಕ್ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದ್ದು ಅವರ ಸಾವಿನ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

ಘಟನೆಯ ವಿವರ: ಕುವೆಟ್ಟು ಗ್ರಾಮದ ಗುರುವಾಯನಕೆರೆಯ ಶಕ್ತಿನಗರದ ಎಸ್.ಎಲ್.ವಿ.ಇ. ಪವರ್ ಪ್ರೈವೇಟ್ ಲಿಮಿಟೆಡ್ ರಿಸೀವಿಂಗ್ ಸ್ಟೇಷನ್ ಕಂಪೌಂಡ್ ಒಳಗೆ ಜು.೧ರಂದು ಕಲ್ಲೇರಿಯ ಜನತಾ ಕಾಲೋನಿಯ ಷರೀಫ್ ಎಂಬವರ ಪುತ್ರ ಮುಸ್ತಾಕ್ ಅವರ ಮೃತದೇಹ ಅನುಮಾನಾಸ್ಪದವಾಗಿ ಪತ್ತೆಯಾಗಿತ್ತು. ವೃತ್ತಿಯಲ್ಲಿ ಲಾರಿ ಚಾಲಕರಾಗಿದ್ದ ಮುಸ್ತಾಕ್ ಅವರು ಜೂ.೩೦ರಂದು ರಾತ್ರಿ ಮನೆಯಿಂದ ತಮ್ಮ ಸಹೋದರ ಮುನಾಸಿರ್ ಅವರೊಂದಿಗೆ ಬೈಕ್‌ನಲ್ಲಿ ಬಂದಿದ್ದರು. ಬಳಿಕ ಮುನಾಸಿರ್ ಅಲ್ಲಿಂದ ತೆರಳಿದ್ದು ಮುಸ್ತಾಕ್ ಕೆಲಸಕ್ಕೆ ತೆರಳಿದ್ದರು. ಮರುದಿನ ಮುಸ್ತಾಕ್ ಅವರ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಮುಸ್ತಾಕ್ ಅವರ ತಂದೆ ಷರೀಫ್ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿತ್ತು. ಎಸ್.ಎಲ್.ವಿ.ಇ. ಪವರ್ ಪ್ರೈವೇಟ್ ಲಿಮಿಟೆಡ್ ರಿಸೀವಿಂಗ್ ಸ್ಟೇಷನ್‌ನ ಕಂಪೌಂಡ್ ಒಳಗೆ ತೊಂಡೆಕಾಯಿ ಬೆಳೆಯಲು ಚಪ್ಪರಕ್ಕೆ ಹಾಕಿದ್ದ ಜಿಐ ಸ್ಟೀಲ್ ವಯರ್ ಕುತ್ತಿಗೆಗೆ ಸಿಕ್ಕಿಕೊಂಡು ಅಥವಾ ಇನ್ಯಾವುದೋ ಕಾರಣದಿಂದ ಮೃತಪಟ್ಟ ಬಗ್ಗೆ ಯುಡಿಆರ್ ೩೫/೨೦೨೬ರಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಮುಂದುವರಿಸಿದ್ದರು.

ಈ ಮಧ್ಯೆ ಮೃತಪಟ್ಟ ಮುಸ್ತಾಕ್‌ನ ಮೃತದೇಹ ಪತ್ತೆಯಾದ ಸ್ಥಳದ ಹತ್ತಿರ ರಿಸಿವಿಂಗ್ ಸ್ಟೇಷನ್ ಕಂಪೌಂಡ್ ಒಳಗೆ ಉಪಯೋಗಿಸಿ ಉಳಿದ ಹಳೆಯ ಅಲ್ಯೂಮಿನಿಯಂ ವಯರ್ ತುಂಡುಗಳು ಬಿದ್ದಿರುವುದನ್ನು ಕಂಡು ಈ ಬಗ್ಗೆ ಅನುಮಾನಗೊಂಡ ಮ್ಯಾನೇಜರ್ ರಾಜೇಂದ್ರನ್(೫೦) ಅವರು ತಮ್ಮ ರಿಸೀವಿಂಗ್ ಸ್ಟೇಷನ್‌ನ ಕಂಪೌಂಡ್ ಒಳಗೆ ಇರಿಸಿದ ಅಲ್ಯೂಮಿನಿಯಂ ವಯರ್ ಬಂಡಲ್‌ಗಳು ಮತ್ತು ಇನ್ನಿತರ ಸಲಕರಣೆಗಳನ್ನು ಪರಿಶೀಲನೆ ನಡೆಸಿದಾಗ ಹಳೆಯ ಅಲ್ಯೂಮಿನಿಯಂ ವಯರ್‌ಗಳು ಕಳ್ಳತನವಾಗಿರುವುದು ಗೊತ್ತಾಗಿದೆ. ಈ ವಿಚಾರವನ್ನು ರಾಜೇಂದ್ರನ್ ಅವರು ಮೇಲಾಧಿಕಾರಿಗಳಿಗೆ ತಿಳಿಸಿದ ಬಳಿಕ ಮೇಲಾಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದು ಅಂದಾಜು ಮೌಲ್ಯ ೫೦ ಸಾವಿರ ರೂಪಾಯಿ ಮೌಲ್ಯದ ಸುಮಾರು ೧೧೦೦ ಕೆ.ಜಿ.ಯಷ್ಟು ಹಳೆಯ ಅಲ್ಯೂಮಿನಿಯಂ ವಯರ್‌ಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜೇಂದ್ರನ್(೫೦) ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ಸ್ವೀಕರಿಸಿರುವ ಪೊಲೀಸರು ಅನುಮಾನಾಸ್ಪದವಾಗಿ ಮೃತಪಟ್ಟ ಮುಸ್ತಾಕ್ ಮತ್ತು ಇತರರ ವಿರುದ್ಧ ಬಿಎನ್‌ಎಸ್ ೩೩೧(೪), ೩೦೫ ಜೊತೆಗೆ ೩(೫)ರಡಿ ಪ್ರಕರಣ ದಾಖಲಿಸಿದ್ದಾರೆ.
ಮುಸ್ತಾಕ್ ಅವರ ಸಾವಿನ ಕಾರಣದ ಕುರಿತು ಇನ್ನಷ್ಟೇ ಮಾಹಿತಿ ದೊರಕಬೇಕಿದೆ. ಮುಸ್ತಾಕ್ ಅವರನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ ಎಂದು ಅವರ ತಂದೆ ಷರೀಫ್ ಮತ್ತು ಸಹೋದರ ಮುನಾಸಿರ್ ಆರೋಪಿಸಿದ್ದರು.

LEAVE A REPLY

Please enter your comment!
Please enter your name here