ಸಿಮೆಂಟ್ ಕಾಂಕ್ರೀಟ್ ಎದ್ದು ಗೋಚರಿಸುತ್ತಿರುವ ಕಬ್ಬಿಣದ ಕಂಬಿಗಳು: ಅಪಾಯದಲ್ಲಿದೆಯೇ ನೇತ್ರಾವತಿ ನದಿಯ ಸೇತುವೆ?

0

ಬೆಳ್ತಂಗಡಿ: ಗುರುವಾಯನಕೆರೆ- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಮಧ್ಯೆ ಸಂಪರ್ಕ ಸೇತುವಾಗಿರುವ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಸೇತುವೆಯಲ್ಲಿ ಅಲ್ಲಲ್ಲಿ ಸಿಮೆಂಟ್ ಕಾಂಕ್ರೀಟ್ ಎದ್ದು ಹೋಗಿ ಕಬ್ಬಿಣದ ಕಂಬಿಗಳು ಕಾಣಲಾರಂಭಿಸಿವೆ. ಇದು ಸೇತುವೆಯ ಈಗಿನ ಧಾರಣಾ ಸಾಮರ್ಥ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ೬೦ ವರ್ಷಗಳ ಹಿಂದೆ ಆಗಿನ ಮೈಸೂರು ಸರಕಾರ ಲೋಕೋಪಯೋಗಿ ಇಲಾಖೆಯ ಅನುದಾನದಡಿ ಈ ಸೇತುವೆಯನ್ನು ನಿರ್ಮಿಸಿತ್ತು. ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕಿನ ಗಡಿಯಲ್ಲಿರುವ ಈ ಸೇತುವೆ ಬೆಳ್ತಂಗಡಿ ತಾಲೂಕಿನ ಇಳಂತಿಲ, ಕರಾಯ, ತಣ್ಣೀರುಪಂತ, ಕುಪ್ಪೆಟ್ಟಿ, ಹಲೇಜಿ, ಜಾರಿಗೆಬೈಲು, ಗೇರುಕಟ್ಟೆ, ಗುರುವಾಯನಕೆರೆ, ಬಂದಾರು ಸೇರಿದಂತೆ ಪದ್ಮುಂಜ ಭಾಗದವರಿಗೆ ಉಪ್ಪಿನಂಗಡಿಯನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ.

ಅಲ್ಲದೆ ಧರ್ಮಸ್ಥಳ, ಕಾರ್ಕಳ, ಉಜಿರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ತೆರಳಲು ಪ್ರಮುಖ ಸಂಪರ್ಕ ಸೇತುವಾಗಿದೆ. ದಿನಕ್ಕೆ ಸಾವಿರಾರು ವಾಹನಗಳು ಈ ಸೇತುವೆಯಲ್ಲಿ ಸಂಚರಿಸುತ್ತಿದ್ದು ಕಳೆದೊಂದು ವರ್ಷದಿಂದ ಮೂಡಬಿದ್ರೆ ಕಡೆಯಿಂದ ಗಣಿಗಾರಿಕೆಯಲ್ಲಿನ ಮಣ್ಣು ಸಾಗಾಟ ಮಾಡುವ ಘನಗಾತ್ರದ ಲಾರಿಗಳು ರಾತ್ರಿ ಹೊತ್ತಿನಲ್ಲಿ ಈ ಸೇತುವೆಯಲ್ಲಿ ನಿರಂತರ ಸಾಗತೊಡಗಿವೆ. ಈಗ ಸೇತುವೆಯ ಪಿಲ್ಲರ್‌ಗಳು ಸೇರಿದಂತೆ ಸೇತುವೆಯ ಕೆಳಭಾಗದಲ್ಲಿ ಕಾಂಕ್ರೀಟ್ ಮಿಶ್ರಣ ಅಲ್ಲಲ್ಲಿ ಎದ್ದು ಹೋಗಿ ಕಬ್ಬಿಣದ ಕಂಬಿಗಳು ಕಾಣತೊಡಗಿವೆ. ಸೇತುವೆಯನ್ನು ಆಶ್ರಯಿಸಿಕೊಂಡು ಕೆಲವು ಜಾತಿಯ ಮರಗಳು ಬೆಳೆಯುತ್ತಿವೆ. ಈ ನಿಟ್ಟಿನಲ್ಲಿ ಸೇತುವೆಯ ಬಾಳಿಕೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಕಾರಣವಾಗಿದೆ. ಆದ್ದರಿಂದ ಅಪಾಯ ಬಂದೊದಗುವ ಮುನ್ನ ಸಂಬಂಧಿತ ಇಲಾಖಾಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅಧಿಕಾರಿಗಳೇ ನೇರ ಹೊಣೆ: ಈ ಸೇತುವೆಯ ಮೇಲೆ ಘನ ಗಾತ್ರದ ಲಾರಿಗಳು ಮಣ್ಣು ಸಾಗಾಟ ನಡೆಸುತ್ತಿವೆ. ಇದರಿಂದ ಈಗಾಗಲೇ ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿ ಸಂಪೂರ್ಣ ಕೆಟ್ಟು ಹೋಗಿದ್ದು ಸೇತುವೆಯೂ ಅಪಾಯಕ್ಕೆ ಸಿಲುಕುವ ಭೀತಿಯಿದೆ. ಈಗಾಗಲೇ ಸೇತುವೆಯ ಫಿಲ್ಲರ್‌ನಲ್ಲಿ ಸಿಮೆಂಟ್‌ನ ಕಾಂಕ್ರೀಟ್ ಮಿಶ್ರಣ ಎದ್ದು ಹೋಗಿದ್ದರಿಂದ ಅಲ್ಲಲ್ಲಿ ಕಬ್ಬಿಣದ ಕಂಬಿಗಳು ಕಾಣಿಸುತ್ತಿವೆ. ಆದ್ದರಿಂದ ಅಧಿಕಾರಿಗಳು ಎಚ್ಚೆತ್ತುಕೊಂಡು ಇದರ ಧಾರಣಾ ಸಾಮರ್ಥ್ಯ ಪರೀಕ್ಷಿಸಬೇಕು. ಮುಂದೆ ಏನಾದರೂ ಅಪಾಯ ಸಂಭವಿಸಿದರೆ ಅದಕ್ಕೆ ಅಧಿಕಾರಿಗಳೇ ನೇರ ಹೊಣೆ ಎಂದು ಇಳಂತಿಲ ಗ್ರಾ.ಪಂ. ಮಾಜಿ ಅಧ್ಯಕ್ಷ ಇಸುಬು ಪೆದಮಲೆ ತಿಳಿಸಿದ್ದಾರೆ. ಈ ಸೇತುವೆಗೆ ೬೦ ವರ್ಷ ಸಂದಿದೆ. ಆದರೂ ಇಲಾಖೆ ಯಾವುದೇ ನಿರ್ವಹಣೆ ನಡೆಸುತ್ತಿಲ್ಲ. ಇದರ ಗುಣಮಟ್ಟದ ವಾಸ್ತವಾಂಶ ತಿಳಿಯುವ ಗೋಜಿಗೆ ಹೋಗುತ್ತಿಲ್ಲ. ಈಗಾಗಲೇ ಸೇತುವೆ ಮೇಲೆ ವಾಹನಗಳು ಸಾಗುವಾಗ ಪಕ್ಕದಲ್ಲಿರುವ ಕಟ್ಟಡಗಳು ಅದುರಿದಂತಾಗುತ್ತವೆ ಎಂದು ಸಾಮಾಜಿಕ ಕಾರ್ಯಕರ್ತ ಯು.ಟಿ. ಫಯಾರh ಪ್ರತಿಕ್ರಿಯಿಸಿದ್ದಾರೆ.

ಪಿಡಬ್ಲ್ಯೂಡಿ ಎಂಜಿನಿಯರ್ ಪರಿಶೀಲನೆ: ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ರಾಘವೇಂದ್ರ ನಾಯಕ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಸೇತುವೆ ಪರಿಶೀಲನೆ ನಡೆಸಿದೆ. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮೇಲ್ನೋಟಕ್ಕೆ ಗಮನಿಸಿದ ಹಾಗೆ ಈ ಸೇತುವೆ ಇನ್ನೂ ೧೫ ವರ್ಷ ಬಾಳಿಕೆ ಬರುವ ಸಾಧ್ಯತೆ ಇದೆ. ಆದ್ದರಿಂದ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದರು. ಪಿಲ್ಲರ್ ಸೇರಿದಂತೆ ಸೇತುವೆಯ ಅಡಿಭಾಗದಲ್ಲಿ ಕಾಂಕ್ರೀಟ್ ಎದ್ದು ಹೋಗಿ ಕಬ್ಬಿಣದ ಕಂಬಿಗಳು ಕಾಣುತ್ತಿರುವ ಬಗ್ಗೆ ಉತ್ತರಿಸಿದ ಅವರು ಈಗ ನದಿಯಲ್ಲಿ ನೀರು ತುಂಬಿರುವುದರಿಂದ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಮಳೆಗಾಲ ಮುಗಿದ ಕೂಡಲೇ ಇದನ್ನು ಸರಿಪಡಿಸಲಾಗುವುದು ಎಂದರು. ಈ ಸೇತುವೆಯ ಮೇಲೆ ಘನ ಗಾತ್ರದ ಲಾರಿಗಳು ಮಣ್ಣು ಸಾಗಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು ಈ ಸೇತುವೆಯ ಧಾರಣಾ ಸಾಮರ್ಥ್ಯಕ್ಕಿಂತ ಹೆಚ್ಚಿನ ಭಾರದ ವಾಹನಗಳು ಸಂಚರಿಸುವುದರಿಂದ ಸೇತುವೆಗೆ ಅಪಾಯವಾಗುವ ಸಾಧ್ಯತೆ ಇದೆ. ಈ ಲಾರಿಗಳ ಸಂಚಾರಕ್ಕೆ ಕಡಿವಾಣ ಹಾಕಲು ಪ್ರಾದೇಶಿಕ ಸಾರಿಗೆ ಆಯುಕ್ತರಿಗೆ ಪತ್ರ ಬರೆಯಲಾಗುವುದು ಎಂದು ಅವರು ತಿಳಿಸಿದರು.ಸೇತುವೆಯನ್ನು ನಿರ್ವಹಣೆ ಮಾಡಿದ್ದರಿಂದ ಸೇತುವೆಯ ಮೇಲೆ ಮಣ್ಣು ನಿಂತಿದ್ದು ಸೇತುವೆಯನ್ನು ಆಶ್ರಯಿಸಿಕೊಂಡು ಕೆಲವು ಜಾತಿಯ ಮರಗಳು ಬೆಳೆದಿರುವ ಬಗ್ಗೆ ಉತ್ತರಿಸಿದ ಅವರು ಕೂಡಲೇ ಇದರ ನಿರ್ವಹಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರಲ್ಲದೆ ಉಪ್ಪಿನಂಗಡಿ-ಕುಪ್ಪೆಟ್ಟಿ ನಡುವಿನ ರಸ್ತೆ ಸಂಪೂರ್ಣ ಕೆಟ್ಟು ಹೋಗಿರುವುದು ಮನವರಿಕೆಯಾಗಿದ್ದು ಇದರ ಮರುಡಾಮರೀಕರಣಕ್ಕೆ ಅಂದಾಜುಪಟ್ಟಿ ಸಿದ್ಧಪಡಿಸಿ ಕಳುಹಿಸಿಕೊಡಲಾಗಿದೆ ಎಂದರು. ಸಹಾಯಕ ಎಂಜಿನಿಯರ್ ಗೋಪಾಲ್, ಕಿರಿಯ ಎಂಜಿನಿಯರ್ ಸೂರಜ್, ಗುತ್ತಿಗೆದಾರ ಯೋಗೀಶ ಅಳಕೆ, ಇಳಂತಿಲ ಗ್ರಾ.ಪಂ. ಮಾಜಿ ಅಧ್ಯಕ್ಷ ಇಸುಬು ಪದಮಲೆ, ಮಾಜಿ ಸದಸ್ಯ ಯು.ಟಿ. ಫಯಾಜ್, ಅಹಮ್ಮದ್, ತಣ್ಣೀರುಪಂತ ಗ್ರಾ.ಪಂ. ಮಾಜಿ ಸದಸ್ಯ ಯು.ಕೆ. ಅಯೂಬ್, ಸ್ಥಳೀಯರಾದ ರಶೀದ್ ಯು.ಟಿ., ಅಮನ್, ನಬೀಲ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here