







ಚಾರ್ಮಾಡಿ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ‘ಶೌರ್ಯ’ ವಿಪತ್ತು ನಿರ್ವಹಣಾ ಘಟಕದ ನೆರಿಯ ‘ಎ’ ಘಟಕದ ಸದಸ್ಯರು, ಸಾಮಾಜಿಕ ಕಳಕಳಿಯ ಭಾಗವಾಗಿ ಚಾರ್ಮಾಡಿ ಗ್ರಾಮದ ಕತ್ತೆರಿಗುಡ್ಡೆಯ ನಿವಾಸಿಯೊಬ್ಬರ ಮನೆಯಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾಸಾಸನ ಫಲಾನುಭವಿಯಾದ ಶ್ರೀಮತಿ ಲಲಿತಾ ಅವರ ಮನೆಯ ಮೇಲ್ಚಾವಣಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಗಿಡಗಂಟಿಗಳು ಬೆಳೆದು ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿದ ಶೌರ್ಯ ಘಟಕದ ಸದಸ್ಯರು, ಸ್ವಯಂಪ್ರೇರಿತರಾಗಿ ಶ್ರಮದಾನದ ಮೂಲಕ ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿ, ಮೇಲ್ಚಾವಣಿಯನ್ನು ಸುಸ್ಥಿತಿಗೆ ತರುವ ಮೂಲಕ ಮಾನವೀಯತೆ ಮೆರೆದಿದ್ದಾರೆ.



ಈ ಶ್ರಮದಾನ ಕಾರ್ಯದಲ್ಲಿ ಶ್ರೀ ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕ ಗಣೇಶ್, ಸೇವಾ ಪ್ರತಿನಿಧಿಯಾದ ರೇವತಿ, ಸ್ಥಳೀಯರಾದ ಬೊಮ್ಮಣ್ಣ ಗೌಡ ಹಾಗೂ ಶೌರ್ಯ ಘಟಕದ ಪ್ರತಿನಿಧಿ ನಾಗೇಶ್ ಬಿ. ನೆರಿಯ ಉಪಸ್ಥಿತರಿದ್ದರು.
ಅಲ್ಲದೆ, ಘಟಕದ ಸದಸ್ಯರಾದ ಸುಮಿತ್ರಾ, ಸತೀಶ್, ಜತ್ತಪ್ಪ, ಧರ್ಮಪ್ಪ ಮತ್ತು ಚಿದಂಬರ ಅವರು ಸಕ್ರಿಯವಾಗಿ ಪಾಲ್ಗೊಂಡು ಸ್ವಚ್ಛತಾ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿಕೊಟ್ಟರು.









