







ಲಾಯಿಲ: ಲಾಯಿಲ ಪ್ರಸನ್ನಾ ಕಾಲೇಜ್ ಆಫ್ ಫಾರ್ಮಸಿ, “Inspiring the Next Generation of Pharmacists: Transforming Mindset to Shape Their Future” ಎಂಬ ವಿಷಯದಡಿ ವೃತ್ತಿ ಮಾರ್ಗದರ್ಶನ ಸೆಮಿನಾರ್ ಯಶಸ್ವಿಯಾಗಿ ನಡೆಯಿತು.
ವಿದ್ಯಾರ್ಥಿಗಳಲ್ಲಿ ವೃತ್ತಿಜೀವನದ ಬಗ್ಗೆ ಸ್ಪಷ್ಟತೆ ಮೂಡಿಸುವುದು, ನಾಯಕತ್ವ ಗುಣಗಳನ್ನು ಬೆಳೆಸುವುದು ಹಾಗೂ ಫಾರ್ಮಸಿ ಕ್ಷೇತ್ರದಲ್ಲಿನ ಹೊಸ ಅವಕಾಶಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವು ಜನನಿ ಮತ್ತು ತಂಡದವರಿಂದ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಯಿತು.
ಬಳಿಕ ಸಂಪನ್ಮೂಲ ವ್ಯಕ್ತಿಯಾದ ಅಚಾರ್ಯ, ಬಿ.ಎಂ. ರೆಡ್ಡಿ ಕಾಲೇಜ್ ಆಫ್ ಫಾರ್ಮಸಿ, ಬೆಂಗಳೂರಿನ ಪ್ರೊಫೆಸರ್ ಡಾ. ಉದಯ್ ರಾಜ್ ಶರ್ಮಾ ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಮಲ್ಲಿಕಾರ್ಜುನ ಗೌಡ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಂ. ಮಲ್ಲಿಕಾರ್ಜುನ ಗೌಡ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಜ್ಞಾನಕ್ಕೆ ಸೀಮಿತವಾಗದೆ, ಸಂವಹನ ಕೌಶಲ್ಯ, ನಾಯಕತ್ವ, ನೈತಿಕ ಮೌಲ್ಯಗಳು ಹಾಗೂ ನಿರಂತರ ಕಲಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಇಂತಹ ಮಾರ್ಗದರ್ಶನ ಕಾರ್ಯಕ್ರಮಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಹಾಗೂ ವೃತ್ತಿಜೀವನ ನಿರ್ಮಾಣಕ್ಕೆ ಪೂರಕವಾಗುತ್ತವೆ ಎಂದು ಹೇಳಿದರು.
ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿ ಡಾ. ಉದಯ್ ರಾಜ್ ಶರ್ಮಾ ಅವರು ತಮ್ಮ ಉಪನ್ಯಾಸದಲ್ಲಿ ಫಾರ್ಮಸಿ ಕ್ಷೇತ್ರದಲ್ಲಿನ ದೇಶಿ-ವಿದೇಶಿ ಉದ್ಯೋಗಾವಕಾಶಗಳು, ಉನ್ನತ ಶಿಕ್ಷಣ, ಸಂಶೋಧನೆ, ಔಷಧೋದ್ಯಮ, ಕ್ಲಿನಿಕಲ್ ರಿಸರ್ಚ್, ರೆಗ್ಯುಲೇಟರಿ ಅಫೇರ್ಸ್, ಫಾರ್ಮಕೋವಿಜಿಲೆನ್ಸ್ ಹಾಗೂ ಉದ್ಯಮಶೀಲತೆಯಂತಹ ವಿವಿಧ ವೃತ್ತಿ ಅವಕಾಶಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು.
ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು ಸ್ಪಷ್ಟ ಗುರಿ, ಸಕಾರಾತ್ಮಕ ಮನೋಭಾವ ಹಾಗೂ ನಿರಂತರ ಪರಿಶ್ರಮದ ಮೂಲಕ ಯಶಸ್ಸನ್ನು ಸಾಧಿಸಬಹುದು ಎಂದು ಅವರು ಪ್ರೇರಣಾದಾಯಕವಾಗಿ ತಿಳಿಸಿದರು. ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿದರು.ಕಾಲೇಜಿನ ಅಧ್ಯಾಪಕಿ ವಿದ್ಯಾಶ್ರೀ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು.
ಆಶ್ರೀನಾ ಹಾಗೂ ಕೀರ್ತನಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಪ್ರಿಯಾಂಕಾ ವಂದನಾರ್ಪಣೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.









