







ಬೆಳ್ತಂಗಡಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಎಂ.ಎನ್. ಅನುಚೇತ್ ಅವರು ಜೂ. ೨೫ರಂದು ಬೆಂಗಳೂರು ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಇಲಾಖೆಯ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ಎಂ. ನಿಂಬಾಳ್ಳರ್ ಅವರು ಅಧಿಕಾರ ಹಸ್ತಾಂತರಿಸಿದರು. ೨೦೦೯ನೇ ಸಾಲಿನ ಐಪಿಎಸ್ ಅಧಿಕಾರಿಯಾಗಿರುವ ಎಂ.ಎನ್. ಅನುಚೇತ್ ಅವರು ವೃತ್ತಿ ಜೀವನದಲ್ಲಿ ಸೂಕ್ಷ್ಮ ಮತ್ತು ಗಂಭೀರ ಪ್ರಕರಣಗಳ ತನಿಖೆಯಿಂದ ಹೆಸರುವಾಸಿಯಾಗಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರ ಸಂಬಂಧ ಕನ್ನಡಪರ ಸಂಘಟನೆಗಳು ಬೆಂಗಳೂರಿನಲ್ಲಿ ಗಲಾಟೆ ನಡೆಸಿ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿದ್ದ ಮಾರನೇ ದಿನವೇ ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿಯಾಗಿ ಎಂ.ಎನ್.ಅನುಚೇತ್ರವರನ್ನು ಸರ್ಕಾರ ನಿಯೋಜನೆ ಮಾಡಿತ್ತು. ಅಧಿಕಾರ ವಹಿಸಿಕೊಂಡ ದಿನದಿಂದಲೇ ಕನ್ನಡಪರ ಸಂಘಟನೆ ನೆಪದಲ್ಲಿ ವೈಯಕ್ತಿಕ ದ್ವೇಷಕ್ಕೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿದ್ದನ್ನು ಪತ್ತೆ ಹಚ್ಚಿ ಗಮನ ಸೆಳೆದಿದ್ದರು. ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ಅನುಚೇತ್ ಅವರು ಸತತ ಪ್ರಯತ್ನ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು.


ಬಳಿಕ ವಿಚಾರವಾದಿ ಎಂ.ಎಂ. ಕಲ್ಬುರ್ಗಿ ಹತ್ಯೆ ಪ್ರಕರಣ ಮತ್ತು ಮಹಾರಾಷ್ಟ್ರದಲ್ಲಿ ನಡೆದಿದ್ದ ಕೊಲೆ ಪ್ರಕರಣಗಳಲ್ಲಿ ಗೌರಿ ಲಂಕೇಶ್ ಹಂತಕರ ಕೈವಾಡ ಇರುವುದನ್ನೂ ಬೆಳಕಿಗೆ ತಂದಿದ್ದರು. ಇದಲ್ಲದೆ ಬೆಂಗಳೂರು ನಗರ ಸಂಚಾರ ವಿಭಾಗದ ಆಯುಕ್ತರಾಗಿದ್ದ ವೇಳೆ ವಾಹನ ಸಂಚಾರ ದಟ್ಟಣೆ ತಗ್ಗಿಸಲು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಗೆ ಆದ್ಯತೆ ನೀಡಿದ್ದರು. ದೇಶವ್ಯಾಪಿ ಚರ್ಚೆಗೆ ಗ್ರಾಸವಾಗಿರುವ ಧರ್ಮಸ್ಥಳ ಗ್ರಾಮದ ಬುರುಡೆ ಗ್ಯಾಂಗ್ ಪ್ರಕರಣದ ಸತ್ಯಾಂಶ ಪತ್ತೆ ಹಚ್ಚಲು ಸರ್ಕಾರ ರಚನೆ ಮಾಡಿದ್ದ ವಿಶೇಷ ತನಿಖಾ ತಂಡದ ಸದಸ್ಯರಾಗಿರುವ ಅನುಚೇತ್ ಅವರಿಗೆ ರಾಜ್ಯ ಸರ್ಕಾರ ಯುವಜನ ಮತ್ತು ಕ್ರೀಡಾ ಇಲಾಖೆ ಆಯುಕ್ತರ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಿ ಆದೇಶ ಹೊರಡಿಸಿದೆ. ಕೋಲಾರ ಜಿಲ್ಲೆಯವರಾದ ಎಂ.ಎನ್. ಅನುಚೇತ್ ಅವರು ೨೦೦೬ರಲ್ಲಿ ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪಡೆದ ಬಳಿಕ ೨೦೦೮ರ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ ೨೦೦೯ರ ಬ್ಯಾಚ್ನ ಕರ್ನಾಟಕ ವೃಂದದ ಐಪಿಎಸ್ ಅಧಿಕಾರಿಯಾಗಿ ಆಯ್ಕೆ ಆಗಿದ್ದರು.
ಇವರ ಅತ್ಯುತ್ತಮ ತನಿಖಾ ಕಾರ್ಯಗಳನ್ನು ಗುರುತಿಸಿ ಕೇಂದ್ರ ಗೃಹ ಇಲಾಖೆ ಅತ್ಯುತ್ತಮ ತನಿಖೆಗಾಗಿ ನೀಡುವ ಪ್ರತಿಷ್ಠಿತ ಪ್ರಶಸ್ತಿಗೂ ಭಾಜನರಾಗಿದ್ದಾರೆ. ೨೦೧೧ರಲ್ಲಿ ಪುತ್ತೂರಿನ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಇವರು ಬಳಿಕ ಸಿಐಡಿ ವಿಭಾಗದ ಎಸ್ಪಿ ಆಗಿ, ಬೆಂಗಳೂರು ನಗರದ ಪಶ್ಚಿಮ ಮತ್ತು ಕೇಂದ್ರ ವಿಭಾಗದ ಡಿಸಿಪಿ ಆಗಿ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.









