






ಕಥೊಲಿಕ್ ಸಭಾ ಬೆಳ್ತಂಗಡಿ ವಲಯ ಹಾಗೂ ಬೆಳ್ತಂಗಡಿ ವಲಯ ಚರ್ಚ್ ಪಾಲನಾ ಸಮಿತಿಯ ಜಂಟಿ ಆಶ್ರಯದಲ್ಲಿ ಸಾರ್ವಜನಿಕರಿಗೆ ಅತ್ಯಂತ ಉಪಯುಕ್ತವಾದ ‘SIR’ ಕುರಿತ ಮಾಹಿತಿ ಕಾರ್ಯಾಗಾರವು ಜೂನ್ 28ರಂದು ಭಾನುವಾರ ಬೆಳ್ತಂಗಡಿ ಚರ್ಚ್ ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜಿಲ್ಲಾ ತರಬೇತುದಾರರಾದ ಅಮಿತಾ ಅಶ್ವಿನಿ ಅವರು ‘SIR’ ವ್ಯವಸ್ಥೆಯ ಮಹತ್ವ, ಅದರ ಕಾರ್ಯವೈಖರಿ ಹಾಗೂ ಸಾರ್ವಜನಿಕರು ಇದರ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಬಹುದು ಎಂಬ ಬಗ್ಗೆ ಸಮಗ್ರ ಮತ್ತು ಸವಿಸ್ತಾರವಾದ ಮಾಹಿತಿಯನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು.


ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇಂತಹ ಮಾಹಿತಿ ಕಾರ್ಯಾಗಾರಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಅಥವಾ ವ್ಯವಸ್ಥೆಯ ಸೌಲಭ್ಯಗಳನ್ನು ತಲುಪಿಸಲು ಸಹಕಾರಿಯಾಗುತ್ತವೆ ಎಂದು ಅವರು ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.ಬೆಳ್ತಂಗಡಿ ವಲಯದ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ವಾಲ್ಟರ್ ಒಸ್ವಾಲ್ಡ್ ಡಿಮೆಲ್ಲೊ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಇಂತಹ ಜ್ಞಾನದಾಯಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಹಾರೈಸಿದರು.
ಕಾರ್ಯಕ್ರಮದ ಆರಂಭದಲ್ಲಿ ಕಥೊಲಿಕ್ ಸಭಾ ಬೆಳ್ತಂಗಡಿ ವಲಯ ಅಧ್ಯಕ್ಷ ಆಲ್ಬರ್ಟ್ ಸುನಿಲ್ ಮೋನಿಸ್ ಅವರು ಬಂದಿದ್ದ ಎಲ್ಲಾ ಗಣ್ಯರನ್ನು ಹಾಗೂ ಸಾರ್ವಜನಿಕರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಲಯ ಕಾರ್ಯದರ್ಶಿಯಾದ ಆಶಾ ಸಾಲ್ದಾನ ಅವರು ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಸ್ಟ್ಯಾನಿ ಪಿಂಟೊ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಮಹತ್ವದ ಕಾರ್ಯಾಗಾರದಲ್ಲಿ ಬೆಳ್ತಂಗಡಿ ವಲಯದ ಪಾಲನಾ ಸಮಿತಿ ಕಾರ್ಯದರ್ಶಿ ವಾಲ್ಟರ್ ಮೋನಿಸ್, ಕಥೊಲಿಕ್ ಸಭಾ ಮಂಗಳೂರು ವಲಯದ ರಾಜಕೀಯ ಸಂಚಾಲಕ ಸ್ಟ್ಯಾನಿ ಲೋಬೊ, ಕಥೊಲಿಕ್ ಸಭಾ ಬೆಳ್ತಂಗಡಿ ಘಟಕದ ಅಧ್ಯಕ್ಷ ಗಿಲ್ಬರ್ಟ್ ಲೋಬೊ ಉಪಸ್ಥಿತರಿದ್ದರು.ಇವರೊಂದಿಗೆ ಬೆಳ್ತಂಗಡಿ ವಲಯ ವ್ಯಾಪ್ತಿಯ ಎಲ್ಲಾ ಚರ್ಚ್ಗಳ ಧರ್ಮಗುರುಗಳು, ಧರ್ಮಭಗಿನಿಯರು, ವಲಯದ ಎಲ್ಲಾ ಚರ್ಚ್ಗಳ ಪಾಲನಾ ಪರಿಷತ್ ಸದಸ್ಯರು ಹಾಗೂ ಕಥೊಲಿಕ್ ಸಭೆಯ ಪದಾಧಿಕಾರಿಗಳು ಮತ್ತು ನೂರಾರು ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.









