ಕಲಾವಿದರನ್ನು ನಿಂದಿಸಿ ಬೆದರಿಕೆ: ತಿಮರೋಡಿ ವಿರುದ್ಧದ ಪ್ರಕರಣಕ್ಕೆ ತಡೆ ನೀಡಲು ನಿರಾಕರಣೆ-ವೈಯುಕ್ತಿಕ ಸಂಭಾಷಣೆ ಹಂಚಿದವರನ್ನು ಆರೋಪಿ ಮಾಡೋಣ-ತಿಮರೋಡಿ ವಿರುದ್ಧ ಬಲವಂತದ ಕ್ರಮ ಬೇಡ: ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ

0

ಬೆಳ್ತಂಗಡಿ: ಮಂಗಳೂರಿನ ಖಾಸಗಿ ಟಿ.ವಿ.ಯ ಕಾರ್ಯಕ್ರಮವೊಂದರಲ್ಲಿ ಬುರುಡೆ ಗ್ಯಾಂಗ್ ಹೆಸರಿನ ಪ್ರಸಂಗದಲ್ಲಿ ಅಭಿನಯಿಸಿದ್ದ ಯಕ್ಷಗಾನ ಕಲಾವಿದರಿಗೆ ದೂರವಾಣಿ ಕರೆ ಮಾಡಿ ನಿಂದಿಸಿ ಬೆದರಿಕೆಯೊಡ್ಡಿದ್ದ ಆರೋಪದಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಪುತ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಜತೆಗೆ ವೈಯುಕ್ತಿಕ ಸಂಭಾಷಣೆಯನ್ನು ಹಂಚಿಕೆ ಮಾಡಿದವರನ್ನು ಆರೋಪಿ ಮಾಡೋಣ ಎಂದು ಸರಕಾರಕ್ಕೆ ಸೂಚಿಸಿರುವ ನ್ಯಾಯಮೂರ್ತಿಗಳು ಮಹೇಶ್ ಶೆಟ್ಟಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸ್ ಇಲಾಖೆಗೆ ನಿರ್ದೇಶಿಸಿದ್ದಾರೆ.

ಪ್ರಕರಣದ ವಿವರ: ಮಂಗಳೂರಿನ ನಮ್ಮ ಕುಡ್ಲ ಟಿ.ವಿ. ವಾಹಿನಿಯ ಯಕ್ಷ ತೆಲಿಕೆ ಕಾರ್ಯಕ್ರಮದ ಎಪಿಸೋಡ್‌ಗೆ ಬುರುಡೆ ಗ್ಯಾಂಗ್ ಎಂದು ಹೆಸರು ಇಟ್ಟಿರುವುದಕ್ಕೆ ಆಕ್ರೋಶಗೊಂಡಿದ್ದ ಪ್ರಜಾಪ್ರಭುತ್ವ ವೇದಿಕೆಯ ಮುಖ್ಯಸ್ಥರೂ ಆಗಿರುವ ಉಜಿರೆ ನಿವಾಸಿ ಮಹೇಶ್ ಶೆಟ್ಟಿ ತಿಮರೋಡಿ ಅವರು ಕಲಾವಿದ ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಅವರಿಗೆ ಕರೆ ಮಾಡಿ ವಿಚಾರಿಸಿದ್ದರು. ಬಳಿಕ ಪ್ರಜ್ವಲ್ ಕುಮಾರ್ ಅವರು ಈ ದೂರವಾಣಿ ಸಂಭಾಷಣೆಯ ಕುರಿತು ತಮ್ಮೊಂದಿಗೆ ಎಪಿಸೋಡ್‌ನಲ್ಲಿ ಅಭಿನಯಿಸಿದ್ದ ಕಲಾವಿದರಾದ ಸುಂದರ್ ರೈ ಮಂದಾರ ಮತ್ತು ದಿನೇಶ್ ಕೋಡಪದವು ಅವರಿಗೆ ತಿಳಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಅವರಿಗೆ ದೂರವಾಣಿ ಕರೆ ಮಾತನಾಡಿರುವ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಅವರು ನನ್ನನ್ನು ಮತ್ತು ನನ್ನ ಪತ್ನಿಯನ್ನು ನಿಂದಿಸಿ ಮಾತನಾಡಿದ್ದಾರೆ ಮತ್ತು ಬೆದರಿಕೆ ಒಡ್ಡಿದ್ದಾರೆ ಎಂದು ಸುಂದರ್ ರೈ ಮಂದಾರ ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು. ಜತೆಗೆ ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಅವರಿಗೆ ದೂರವಾಣಿ ಕರೆ ಮಾತನಾಡುವ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಅವರು ಕಲಾವಿದನಾದ ನನ್ನ ಮಗ ದಿನೇಶ್ ಕೋಡಪದವು ಮತ್ತು ನನ್ನನ್ನು ಉzಶಿಸಿ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ದಿನೇಶ್ ಕೋಡಪದವು ಅವರ ತಾಯಿ ಲೀಲಾವತಿ ಅವರು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು.

ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ವಿದ್ಯಾರ್ಥಿನಿ ಸೌಜನ್ಯ ಪರ ಹೋರಾಟಗಾರರೂ ಆಗಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಜೂ.೨೨ರಂದು ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠದಲ್ಲಿ ನಡೆಯಿತು. ಈ ವೇಳೆ ಅರ್ಜಿದಾರ ಮಹೇಶ್ ಶೆಟ್ಟಿ ತಿಮರೋಡಿ ಪರ ವಾದ ಮಂಡಿಸಿದ ವಕೀಲೆ ಅಕ್ಷತಾ ಶೆಟ್ಟಿ ಮಂಗಳೂರು ಅವರು ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅವರ ಬಾಲ್ಯ ಸ್ನೇಹಿತನ ಜೊತೆ ಫೋನ್‌ನಲ್ಲಿ ಸಂಭಾಷಣೆ ನಡೆದಿದೆ. ತಿಮರೋಡಿ ಅವರ ಸ್ನೇಹಿತ ಯಕ್ಷಗಾನ ಕಾರ್ಯಕ್ರಮದಲ್ಲಿ ಅಭಿನಯಿಸಿದ್ದು ಅದು ಮಂಗಳೂರಿನ ನಮ್ಮ ಕುಡ್ಲ ಚಾನೆಲ್‌ನಲ್ಲಿ ಪ್ರಸಾರವಾಗಿದೆ. ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ತನಿಖೆಗೆ ವಿಶೇಷ ತನಿಖಾ ದಳ ರಚನೆಯಾದಾಗಿನಿಂದ ಈ ವಿಚಾರವನ್ನು ಯಕ್ಷಗಾನ ಕಾರ್ಯಕ್ರಮದಲ್ಲಿ ಹಾಸ್ಯವಾಗಿ ಬಳಕೆ ಮಾಡುತ್ತಿದ್ದಾರೆ.

ಹಾಸ್ಯ ನಟರು ತಲೆ ಬುರುಡೆ ಹಿಡಿದು ಮಾಸ್ಕ್ ಹಾಕಿಕೊಂಡು ಬಂದು ಅಪಹಾಸ್ಯ ಮಾಡುತ್ತಿದ್ದಾರೆ. ಬುರುಡೆ ಗ್ಯಾಂಗ್ ಎಂದು ಹೇಳುತ್ತಾರೆ. ಆದ್ದರಿಂದ ಯಕ್ಷಗಾನವನ್ನು ಈ ರೀತಿ ಬಳಕೆ ಮಾಡಬಾರದು ಎಂದು ತಿಮರೋಡಿ ಹೇಳಿದ್ದಾರೆ ಎಂದು ಹೇಳಿದರು. ಆಗ ನ್ಯಾಯಮೂರ್ತಿಯವರು ತಿಮರೋಡಿಗೆ ಸುಮ್ಮನೆ ಇರಲು ಆಗುವುದಿಲ್ಲವೇ ? ಎಂದು ಪ್ರಶ್ನಿಸಿದರು. ಈ ವೇಳೆ ವಕೀಲೆ ಅಕ್ಷತಾ ಶೆಟ್ಟಿ ಅವರು ವೈಯಕ್ತಿಕ ಸಂಭಾಷಣೆಯನ್ನು ವ್ಯಾಪಕವಾಗಿ ಹಂಚಲಾಗಿದೆ ಎಂದು ನ್ಯಾಯಪೀಠದ ಗಮನ ಸೆಳೆದರು. ಅದನ್ನು ಹಂಚಿದವರು ಯಾರು ಎಂದು ವಿಶೇಷ ಸರಕಾರಿ ಅಭಿಯೋಜಕ ಬಿ. ಎನ್. ಜಗದೀಶ್ ಅವರನ್ನು ನ್ಯಾಯಪೀಠ ಪ್ರಶ್ನಿಸಿತು.

ಅದಕ್ಕೆ ಅವರು ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಉತ್ತರಿಸಿದರು. ಇದಕ್ಕೆ ನ್ಯಾಯಪೀಠ ನೀವು ತನಿಖೆ ಮಾಡಿ. ಯಾರು ಹಂಚಿಕೆ ಮಾಡಿದ್ದಾರೆ ಅವರನ್ನು ಆರೋಪಿಯನ್ನಾಗಿ ಮಾಡೋಣ ಎಂದು ಸರಕಾರಿ ಅಭಿಯೋಜಕರಿಗೆ ಸೂಚಿಸಿತು. ಅಲ್ಲದೆ ಮಹೇಶ್ ಶೆಟ್ಟಿ ತಿಮರೋಡಿ ತನಿಖೆಗೆ ಸಹಕರಿಸಬೇಕು ಎಂದು ಸೂಚಿಸಿದ ನ್ಯಾಯಪೀಠ ತಿಮರೋಡಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಪೊಲೀಸ್ ಇಲಾಖೆಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

LEAVE A REPLY

Please enter your comment!
Please enter your name here