ಆರಂಬೋಡಿಯ ಸಂಗೀತಾ ಕೊಲೆ: ಪತಿ ದಿನೇಶ್ ಆತ್ಮಹತ್ಯೆ-ಬೆಳ್ತಂಗಡಿ ಡಿವೈಎಸ್ಪಿ ರೋಹಿಣಿ ಸಿ.ಕೆ ನೇತೃತ್ವದಲ್ಲಿ ಪ್ರಕರಣದ ತನಿಖೆ

0

ಬೆಳ್ತಂಗಡಿ: ಆರಂಬೋಡಿ ಗ್ರಾಮದ ಸೂರಂಟೆ ನಿವಾಸಿಯಾಗಿರುವ ಶೀನಪ್ಪ ಪೂಜಾರಿ ಮತ್ತು ತುಂಗಮ್ಮ ದಂಪತಿಯ ಪುತ್ರಿ ಸಂಗೀತಾ(೩೯)ಅವರನ್ನು ಅವರ ಪತಿ ದಿನೇಶ್ ಪೂಜಾರಿ ಎಂಬವರು ಕೊಲೆ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡಬ ತಾಲೂಕಿನ ಆಲಂಕಾರು ಗ್ರಾಮದ ಕಜೆ ಎಂಬಲ್ಲಿ ನಡೆದಿದೆ. ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ. ಅವರ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.
ಆಲಂಕಾರು ಪೇಟೆಯಲ್ಲಿ ಹೊಟೇಲ್ ನಡೆಸುತ್ತಿದ್ದರು: ದಿನೇಶ್ ಮತ್ತು ಸಂಗೀತಾ ಅವರು ಕಳೆದ ಒಂದು ವರ್ಷದಿಂದ ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದರು. ಆಲಂಕಾರು ಗ್ರಾಮದ ಕಜೆ ಎಂಬಲ್ಲಿ ಜನಾರ್ದನ ಗೌಡ ನಾಡ್ತಿಲ ಎಂಬವರ ಬಾಡಿಗೆ ಮನೆಯಲ್ಲಿ ದಿನೇಶ್ ಮತ್ತು ಸಂಗೀತಾ ಎರಡೂವರೆ ವರ್ಷದ ಪುಟ್ಟ ಮಗು ಧ್ರುವಿಯೊಂದಿಗೆ ವಾಸ್ತವ್ಯವಿದ್ದರು. ಕೌಟುಂಬಿಕ ಕಲಹದಿಂದ ದಿನೇಶ್ ಅವರು ತಾವು ವಾಸಿಸುತ್ತಿದ್ದ ಬಾಡಿಗೆ ಮನೆಯಲ್ಲಿ ಜೂ.೨೦ರಂದು ಬೆಳಿಗ್ಗೆ ಯಾವುದೋ ಆಯುಧದಿಂದ ಪತ್ನಿಯನ್ನು ಹತ್ಯೆಗೈದು ಬಳಿಕ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ಕೊಲೆಯಾಗಿ ತಂದೆ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಹೆಣ್ಣು ಮಗು ಧ್ರುವಿ ಅನಾಥವಾಗಿದೆ.
ಘಟನೆ ಬೆಳಕಿಗೆ ಬಂದಿದ್ದು ಹೀಗೆ; ಕೊಲೆಯಾದ ಸಂಗೀತಾ ಅವರ ದೊಡ್ಡಮ್ಮನ ಮಗಳು ಸುಮಲತಾ ಅವರು ಆಲಂಕಾರು ಗ್ರಾಮದ ಪಚ್ಚಾಪು ಎಂಬಲ್ಲಿ ವಾಸ್ತವ್ಯವಿದ್ದಾರೆ. ಜೂ.೨೦ರಂದು ಬೆಳಿಗ್ಗೆ ೧೦ ಗಂಟೆಯಿಂದ ಪದೇ ಪದೇ ಮೂರು ಸಲ ಸಂಗೀತಾ ಅವರ ಪತಿ ದಿನೇಶ್ ಅವರ ಮೊಬೈಲ್‌ಗೆ ಸುಮಲತಾ ಕರೆ ಮಾಡಿದ್ದರೂ ದಿನೇಶ್ ಅವರು ಸ್ವೀಕರಿಸಿರಲಿಲ್ಲ. ಈ ಮಧ್ಯೆ ಸಂಗೀತಾ ಅವರ ತಾಯಿ ತುಂಗಮ್ಮ ಅವರು ಸಹ ಸಂಗೀತಾ ಅವರ ಪತಿ ದಿನೇಶ್ ಅವರ ಮೊಬೈಲ್‌ಗೆ ಕರೆ ಮಾಡಿದ್ದರೂ ಸ್ವೀಕರಿಸುತ್ತಿರಲಿಲ್ಲ. ಆ ಬಳಿಕ ಸುಮಲತಾ ಅವರು ಬಾಡಿಗೆ ಮನೆಯ ಮಾಲಕ ಜನಾರ್ದನ ಗೌಡ ಅವರ ಪತ್ನಿಗೆ ಫೋನ್ ಮಾಡಿ ಸಂಗೀತಾ ಅವರ ಮನೆಯಲ್ಲಿ ಯಾರೂ ಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ. ನೀವು ಒಮ್ಮೆ ಬಾಡಿಗೆ ಮನೆ ಕಡೆಗೆ ಹೋಗಿ ನೋಡಿ ಎಂದು ಕೇಳಿಕೊಂಡಿದ್ದರು. ಅದರಂತೆ ಅವರು ಹೋಗಿ ನೋಡಿದಾಗ ಮನೆಯ ಒಳಗಿನಿಂದ ಚಿಲಕ ಹಾಕಿರುವುದು ಕಂಡು ಬಂದಿದೆ. ಮಧ್ಯಾಹ್ನ ೧೨.೩೦ರ ವೇಳೆಗೆ ಸಂಗೀತಾ ಅವರ ತಾಯಿ ತುಂಗಮ್ಮ ಅವರು ಸಂಗೀತಾ ಮತ್ತು ದಿನೇಶ್‌ರವರು ವಾಸವಿದ್ದ ಬಾಡಿಗೆ ಮನೆಯ ಪಕ್ಕದ ಮನೆಯವರಿಗೆ ಫೋನ್ ಮಾಡಿ ವಿಚಾರಿಸಿದ್ದರು. ಈ ವೇಳೆ ಅವರು ಬಂದು ಮನೆಯ ಬಾಗಿಲು ಬಡಿದು ಕರೆದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಮನೆಯೊಳಗಿಂದ ಮಗು ಅಳುತ್ತಿರುವುದು ಕೇಳಿ ಬರುತ್ತಿತ್ತು. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಸುಮಲತಾ ಅವರು ತನ್ನ ಪತಿ ರಾಮಚಂದ್ರರಿಗೆ ವಿಚಾರ ತಿಳಿಸಿದ್ದರು. ಅವರು ಸಂಗೀತಾ ವಾಸವಿದ್ದ ಮನೆಗೆ ಹೋಗಿ ಕರೆದರೂ ಬಾಗಿಲು ತೆರೆಯಲಿಲ್ಲ. ಈ ವೇಳೆಯೂ ಮಗು ಮನೆಯೊಳಗಿಂದ ಅಳುತ್ತಿರುವುದು ಕೇಳಿ ಬರುತ್ತಿತ್ತು. ಮತ್ತೆ ರಾಮಚಂದ್ರ ಅವರು ಮನೆಗೆ ಬಂದು ಸುಮಲತಾ ಅವರನ್ನು ಕರೆದುಕೊಂಡು ಸಂಗೀತಾ ವಾಸವಿದ್ದ ಮನೆಗೆ ಹೋಗಿದ್ದರು. ಇದೇ ವೇಳೆ ಬಾಡಿಗೆ ಮನೆಯ ಮಾಲಕ ಜನಾರ್ದನ ಗೌಡ ಅವರು ಸಹ ಸ್ಥಳಕ್ಕೆ ಬಂದು ಸ್ಥಳೀಯರ ಸಹಕಾರದಿಂದ ಬಾಗಿಲು ತೆರೆದು ನೋಡಿದಾಗ ದಿನೇಶ್ ಫ್ಯಾನ್‌ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿದ್ದರು. ಸಂಗೀತಾ ರಕ್ತದ ಮಡುವಿನಲ್ಲಿ ನೆಲದಲ್ಲಿ ಬಿದ್ದುಕೊಂಡಿದ್ದರು. ಇದರ ಅರಿವೇ ಇಲ್ಲದ ಎರಡೂವರೆ ವರ್ಷದ ಹೆಣ್ಣು ಮಗು ಧ್ರುವಿ ಆಳುತ್ತಿರುವುದು ಕಂಡು ಬಂದಿತ್ತು. ಬಳಿಕ ಈ ವಿಚಾರವನ್ನು ಕಡಬ ಠಾಣಾ ಪೊಲೀಸರಿಗೆ ತಿಳಿಸಲಾಯಿತು. ಸಂಗೀತಾರಲ್ಲಿ ಮೊಬೈಲ್ ಫೋನ್ ಇರಲಿಲ್ಲ. ಆಕೆಯ ಮನೆಯವರು ಮತ್ತು ಆತ್ಮೀಯರು ಯಾವುದೇ ವಿಚಾರವಿದ್ದರೂ ಸಂಗೀತಾರ ಪತಿ ದಿನೇಶ್‌ರವರ ಮೊಬೈಲ್‌ಗೆ ಕರೆ ಮಾಡುತ್ತಿದ್ದರು. ಅದರಂತೆ ಈ ದಿನವೂ ಮನೆಯವರು ದಿನೇಶ್‌ರವರ ಫೋನ್ ಗೆ ಕರೆ ಮಾಡಿದ್ದರು.
ಕತ್ತಿಯಿಂದ ಕಡಿದು ಕೊಲೆ; ದಿನೇಶ್ ಹಾಗೂ ಸಂಗೀತಾ ನಡುವೆ ಗಲಾಟೆ ನಡೆದಿದ್ದು ಈ ವೇಳೆ ದಿನೇಶ್ ಕತ್ತಿಯಿಂದ ಸಂಗೀತಾಳ ಕುತ್ತಿಗೆ ಭಾಗಕ್ಕೆ ಕಡಿದು ಕೊಲೆ ಮಾಡಿರುವುದಾಗಿ ಶಂಕಿಸಲಾಗಿದೆ. ದಿನೇಶ್‌ಗೆ ಮದ್ಯ ಸೇವನೆ ಚಟವಿದ್ದು ದಂಪತಿ ಮಧ್ಯೆ ಪದೇ ಪದೇ ಜಗಳ ನಡೆಯುತ್ತಿತ್ತು. ಜೂ.೨೦ರಂದು ಬೆಳಿಗ್ಗೆ ದಂಪತಿ ಮಧ್ಯೆ ಜಗಳ ನಡೆದು ಪತ್ನಿ ಸಂಗೀತಾಳನ್ನು ಕತ್ತಿಯಿಂದ ಕಡಿದು ಕೊಲೆ ನಡೆಸಿದ ಬಳಿಕ ದಿನೇಶ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ದಾಖಲಾಗಿದೆ. ಪತಿ ಹಿಂಸೆ ನೀಡಿದರೂ ೧೩ ವರ್ಷದಿಂದ ಸಹಿಸಿಕೊಂಡು ಮಗಳು ಆತನ ಜೊತೆಗೆ ಸಂಸಾರ ನಡೆಸುತ್ತಿದ್ದಳು. ಈಗ ಆತನೇ ಅವಳನ್ನು ಕೊಲೆ ನಡೆಸಿದ್ದಾನೆ ಎಂದು ಸಂಗೀತಾರವತ ತಾಯಿ ತುಂಗಮ್ಮ ಪ್ರತಿಕ್ರಿಯಿಸಿದ್ದಾರೆ.
ಮದುವೆ ಆಗಿ ೧೩ ವರ್ಷ: ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಮಹಾಬಲ ಪೂಜಾರಿಯವರ ಪುತ್ರ ದಿನೇಶ್ ಹಾಗೂ ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಸೂರಂಟೆಯ ಶೀನಪ್ಪ ಪೂಜಾರಿ ಮತ್ತು ತುಂಗಮ್ಮ ದಂಪತಿಯ ಪುತ್ರಿ ಸಂಗೀತಾ ಅವರ ಮದುವೆ ೧೩ ವರ್ಷದ ಹಿಂದೆ ನಡೆದಿತ್ತು.
ಮದುವೆಗೆ ಮೊದಲು ಬೆಳಗಾವಿಯಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ದಿನೇಶ್ ಮದುವೆ ಬಳಿಕ ಪತ್ನಿ ಸಂಗೀತಾ ಜೊತೆಗೆ ಬೆಳಗಾವಿಗೆ ತೆರಳಿ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಕೆಲವು ವರ್ಷದ ಬಳಿಕ ಊರಿಗೆ ಬಂದು ಜೋಡುಕಟ್ಟೆ, ಪಡ್ಯಾರಬೆಟ್ಟು ಮತ್ತಿತರರ ಕಡೆಗಳಲ್ಲಿ ಹೋಟೆಲ್ ನಡೆಸುತ್ತಿದ್ದರು. ೧ ವರ್ಷದ ಹಿಂದೆ ಆಲಂಕಾರಿಗೆ ಬಂದು ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದು ಕಜೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಒಂದೂವರೆ ತಿಂಗಳ ಹಿಂದೆ ಹೋಟೆಲ್ ಬಂದ್ ಮಾಡಿ ಪತ್ನಿ ಮತ್ತು ಮಗುವಿನ ಜೊತೆಗೆ ಪತ್ನಿಯ ಮನೆಗೆ ತೆರಳಿದ್ದರು. ಅಲ್ಲಿಂದ ಜೂ.೧೯ರಂದು ಆಲಂಕಾರು ಕಜೆ ಬಾಡಿಗೆ ಮನೆಗೆ ಬಂದಿದ್ದು ಜೂ.೨೦ರಂದು ಈ ದುರ್ಘಟನೆ ನಡೆದಿದೆ. ಪತ್ನಿ ಮನೆಗೆ ಹೋಗಿದ್ದ ವೇಳೆ ದಿನೇಶ್ ಅವರ ಕುಡಿತದ ಚಟ ಬಿಡಿಸಲು ಪತ್ನಿ ಮನೆಯವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ದಿನೇಶ್ ತಂದೆ ಮನೆಯಲ್ಲೂ ಜಗಳ ಮಾಡಿಕೊಂಡಿದ್ದು ಅವರೂ ಆತನನ್ನು ಮನೆಯಿಂದ ಹೊರಗಿಟ್ಟಿದ್ದರು ಎಂದು ಹೇಳಲಾಗಿದೆ. ಮೃತ ಸಂಗೀತ ತಂದೆ, ತಾಯಿ, ಇಬ್ಬರು ಸಹೋದರಿಯರು ಹಾಗೂ ಎರಡೂವರೇ ವರ್ಷದ ಹೆಣ್ಣು ಮಗು ದ್ರುವಿಯನ್ನು ಅಗಲಿದ್ದಾರೆ. ದಿನೇಶ್ ತಂದೆ, ಇಬ್ಬರು ಸಹೋದರರು, ಮೂವರು ಸಹೋದರಿಯರು ಹಾಗೂ ಎರಡೂವರೇ ವರ್ಷದ ಹೆಣ್ಣು ಮಗು ದ್ರುವಿಯನ್ನು ಅಗಲಿದ್ದಾರೆ.
ಕಡಬ ಠಾಣೆಯಲ್ಲಿ ಕೊಲೆ- ಆತ್ಮಹತ್ಯೆ ಕೇಸು ದಾಖಲು; ದಿನೇಶನು ಕೌಟುಂಬಿಕ ಕಲಹದಿಂದ ಪತ್ನಿ ಸಂಗೀತಾರವರನ್ನು ಯಾವುದೋ ಆಯುಧದಿಂದ ಕೊಲೆ ಮಾಡಿರುವುದಾಗಿ ಸುಮಲತಾ ಅವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: ೭೭/೨೦೨೬ ಕಲಂ ೧೦೩(೧) ಬಿಎನ್‌ಎಸ್‌ರಂತೆ ಪ್ರಕರಣ ಹಾಗೂ ದಿನೇಶ್‌ರವರ ಆತ್ಮಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಯು.ಡಿ.ಆರ್ ಸಂಖ್ಯೆ ೨೬/೨೦೨೬ರಂತೆ ಕಲಂ ೧೯೪ ಬಿಎನ್‌ಎಸ್‌ರಂತೆ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಎಸ್. ಬೂಮಾರೆಡ್ಡಿ, ಬೆಳ್ತಂಗಡಿ ಡಿವೈಎಸ್‌ಪಿ ರೋಹಿಣಿ ಸಿ.ಕೆ, ಉಪ್ಪಿನಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಹೆಚ್.ಇ.ನಾಗರಾಜ್, ಕಡಬ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಜಂಬೂರಾಜ್ ಮಹಾಜನ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಸಂಜೆ ವೇಳೆ ಬೆರಳಚ್ಚು ತಜ್ಞರು ಆಗಮಿಸಿ ತಡರಾತ್ರಿ ತನಕವೂ ಮಾಹಿತಿ ಸಂಗ್ರಹಿಸಿದ್ದಾರೆ.

ಅಜ್ಜಿ ಮಡಿಲು ಸೇರಿದ ಮಗು: ದಿನೇಶ್-ಸಂಗೀತಾ ದಂಪತಿ ಮದುವೆ ಆಗಿ ೧೦ ವರ್ಷ ಕಳೆದರೂ ಮಗು ಆಗಿರಲಿಲ್ಲ. ಎರಡೂವರೆ ವರ್ಷದ ಹಿಂದೆ ಸಂಗೀತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ತಂದೆ ತಾಯಿಯನ್ನು ಕಳೆದುಕೊಂಡು ಮಗು ಅನಾಥವಾಗಿದೆ. ತಂದೆ, ತಾಯಿಯ ಸಾವಿನ ಅರಿವೇ ಇಲ್ಲದ ಮಗು ಪಕ್ಕದ ಮನೆಯ ಮಕ್ಕಳ ಜೊತೆ ಆಟವಾಡುತ್ತಿದ್ದು ಸಂಜೆಯಾಗುತ್ತಲೇ ತಾಯಿಯ ಬಳಿ ಹೋಗುವುದಾಗಿ ಅಳುತ್ತಿದ್ದ ದೃಶ್ಯ ನೆರೆದ ಸಾರ್ವಜನಿಕರ ಮನಸ್ಸು ಕರಗುವಂತಿತ್ತು. ಮಗುವನ್ನು ಅಜ್ಜಿಯ ವಶಕ್ಕೆ ಒಪ್ಪಿಸಲಾಗಿದೆ.

ಮಗುವಿನ ಚೈನ್ ಸಾವಿಗೆ ಕಾರಣವಾಯಿತೇ?
ದಿನೇಶ್ ಮತ್ತು ಸಂಗೀತಾ ದಂಪತಿಯ ಪುತ್ರಿ ಧ್ರುವಿಯವರಿಗೆ ಸೇರಿದ ಅಂದಾಜು ೯೦ ಸಾವಿರ ರೂ ಮೌಲ್ಯದ ಚಿನ್ನದ ಚೈನ್ ಘಟನೆಗೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ. ಕೆಲವು ದಿನಗಳಿಂದ ಮಗುವಿನ ಚೈನ್ ಕಾಣುತ್ತಿರಲಿಲ್ಲ. ಈ ವಿಚಾರದಲ್ಲಿ ದಂಪತಿ ನಡುವೆ ಜಗಳ ನಡೆಯುತಿತ್ತು. ತಮ್ಮ ಬಾಡಿಗೆ ಮನೆಯಲ್ಲೇ ಈ ಚಿನ್ನದ ಚೈನ್ ಬಾಕಿಯಾಗಿದೆ. ಹುಡುಕಿ ತರುವ ಎಂದು ಜೂ.೧೯ರಂದು ದಂಪತಿ ಆಲಂಕಾರಿನ ತಮ್ಮ ಬಾಡಿಗೆ ಮನೆಗೆ ಬಂದಿದ್ದಾರೆ. ಈ ಚಿನ್ನದ ಚೈನ್ ವಿಚಾರದಲ್ಲೇ ಚರ್ಚೆ ನಡೆದು ವಾಗ್ವಾದ ನಡೆದಿದೆ. ಜಗಳ ತಾರಕಕ್ಕೇರಿ ಸಂಗೀತಾ ಅವರನ್ನು ದಿನೇಶ್ ಕೊಲೆ ಮಾಡಿದ್ದಾರೆ. ಬಳಿಕ ತಾನು ಆತ್ಕಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಈ ಹಿಂದೆಯೂ ಮಗಳ ಕುತ್ತಿಗೆಗೆ ಬಟ್ಟೆ ಸುತ್ತಿ ಈತ ಕೊಲೆಗೆ ಪ್ರಯತ್ನಿಸಿದ್ದ ಎಂದು ಮೃತಳ ತಾಯಿ ತುಂಗಮ್ಮ ಆರೋಪಿಸಿದ್ದಾರೆ.

ಆರಂಬೋಡಿಗೆ ಮೃತದೇಹ ತಂದ ಬಳಿಕ ಪಾಣೆ ಮಂಗಳೂರಿನಲ್ಲಿ ಅಂತ್ಯಕ್ರಿಯೆ: ದಿನೇಶ್ ಮತ್ತು ಸಂಗೀತಾ ಅವರ ಮೃತದೇಹಗಳನ್ನು ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ಕೊಂಡೊಯ್ದು ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟು ಕೊಡಲಾಗಿದೆ. ಮೃತದೇಹವನ್ನು ಸಿದ್ದಕಟ್ಟೆ ಸಮೀಪವಿರುವ ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಸೂರಂಟೆಯಲ್ಲಿರುವ ಸಂಗೀತಾ ಅವರ ತಾಯಿ ಮನೆಗೆ ಕೊಂಡೊಯ್ದು ಅಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಿದ ಬಳಿಕ ಪಾಣೆಮಂಗಳೂರು ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಈ ವೇಳೆ ಎರಡು ಮನೆಯವರೂ ಉಪಸ್ಥಿತರಿದ್ದರು. ಹಿಂದೂ ಧರ್ಮದ ಸಂಸ್ಕಾರದ ಆಧಾರದಲ್ಲಿ ದಂಪತಿಯ ಶವವನ್ನು ಒಟ್ಟಿಗೆ ಒಂದೇ ಕಡೆ ಅಂತ್ಯ ಸಂಸ್ಕಾರ ಮಾಡಬೇಕೆಂದಿರುವ ಕಾರಣ ಮೃತ ಸಂಗೀತಾ ಅವರ ತವರು ಮನೆಯವರ ಬೇಡಿಕೆಯಂತೆ ಎರಡು ಶವಗಳನ್ನು ಸಂಗೀತಾರವರ ತವರು ಮನೆಗೆ ಸಾಗಿಸಿ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಡೆತ್‌ನೋಟ್ ಇತ್ತೇ?: ಪೊಲೀಸ್ ತನಿಖೆ ವೇಳೆ ಮೃತ ದಿನೇಶ್ ಅವರ ಪ್ಯಾಂಟ್‌ನ ಜೇಬಿನಲ್ಲಿ ದಿನೇಶ್ ಬರೆದಿದ್ದ ಡೆತ್‌ನೋಟ್ ಪತ್ತೆಯಾಗಿದೆ ಎಂದು ವರದಿಯಾಗಿದೆ. ಆದರೆ ಇದು ದೃಢಗೊಂಡಿಲ್ಲ. ಡೆತ್‌ನೋಟ್‌ನಲ್ಲಿ ಯಾವ ವಿಚಾರ ಬರೆಯಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿಲ್ಲ.

LEAVE A REPLY

Please enter your comment!
Please enter your name here