ಸುಹಾಸ್ ಶೆಟ್ಟಿ ಹತ್ಯೆ: ಮೂವರ ವಿಚಾರಣೆ

0

ಬೆಳ್ತಂಗಡಿ: ಪುಂಜಾಲಕಟ್ಟೆ ಸಮೀಪದ ಕಾರಿಂಜ ಬಳಿಯ ನಿವಾಸಿಯಾಗಿದ್ದು ಹಿಂದೂ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಸುಹಾಸ್ ಶೆಟ್ಟಿ ಅವರನ್ನು ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬಜಪೆ ಸಮೀಪದ ಕಿನ್ನಿಪದವು ಎಂಬಲ್ಲಿ ೨೦೨೫ರ ಮೇ. ೧ರಂದು ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಮತ್ತೆ ಚುರುಕುಗೊಳಿಸಿದ್ದಾರೆ. ಎನ್‌ಐಎಯ ಡಿವೈಎಸ್ಪಿ ರಾಜೀವ್ ಸಿಂಗ್, ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ್ ಸಹಿತ ಐವರು ಅಧಿಕಾರಿಗಳ ತಂಡ ಬಜಪೆ ಪೊಲೀಸ್ ಠಾಣೆಗೆ

ಭೇಟಿ ನೀಡಿ ನಿಷೇಧಿತ ಪಿಎಫ್‌ಐ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಶಂಕೆಯಲ್ಲಿ ಮೂವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದೆ. ಕಳೆದ ಒಂದು ವರ್ಷದಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತನಿಖೆ ನಡೆಸುತ್ತಿದೆ. ೨೦೨೫ರ ಆ. ೨ರಂದು ಮಂಗಳೂರು ಹೊರವಲಯದ ಸುರತ್ಕಲ್ ಮತ್ತು ಬಜಪೆ ಠಾಣೆ ವ್ಯಾಪ್ತಿಯ ೧೪ ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಎನ್‌ಐಎ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಒಯ್ದಿದ್ದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪಿಎಫ್‌ಐ ಕಾರ್ಯಕರ್ತರು ಸೇರಿ ೧೨ ಮಂದಿಯನ್ನು ಬಂಧಿಸಲಾಗಿತ್ತು. ಬಂಧಿತರ ವಿರುದ್ಧ ಎನ್‌ಐಎ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ.
ಆರೋಪಿಗಳಿಗೆ ವಿದೇಶದಿಂದ ಫಂಡಿಂಗ್ ಆಗಿರುವ ಬಗ್ಗೆಯ ಮಾಹಿತಿ ಹಿನ್ನೆಲೆಯಲ್ಲಿ ಎನ್‌ಐಎ ತನಿಖೆಗೆ ವಹಿಸಲಾಗಿತ್ತು. ಪ್ರಕರಣದ ತನಿಖೆ ತೀವ್ರಗೊಳಿಸಿರುವ ಎನ್‌ಐಎ ಅಧಿಕಾರಿಗಳು ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದೆ.

LEAVE A REPLY

Please enter your comment!
Please enter your name here