






ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟು ಇಲ್ಲಿ ಶಾಲಾ ಪ್ರಾರಂಭೋತ್ಸವವನ್ನು ವಿಜೃಂಭಣೆಯಿಂದ ಜೂ.1 ರಂದು ಆಚರಿಸಲಾಯಿತು.
ಶಾಲಾ ಪ್ರಾರಂಭೋತ್ಸವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗಿರೀಶ್ ಕುದ್ರಂತಾಯ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆಯನ್ನು ನೀಡಿದರು, ಈ ಸಂದರ್ಭದಲ್ಲಿ ಸ್ಥಳೀಯರಾದ ಚಿತ್ರರಂಜನ್ ಜೈನ್ ಹಾಗೂ ಶಾಲೆಯ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಶಶಿಧರ್ ಜಿ ಗುಂಪಕಲ್ಲು ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕ ಶೀನಪ್ಪಗೌಡ ವಹಿಸಿಕೊಂಡಿದ್ದರು. ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಗಿರೀಶ್ ಕುದ್ರಂತಾಯ ಬದಲಾದ ಶಿಕ್ಷಣ ವ್ಯವಸ್ಥೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೊಂದಿಕೊಳ್ಳಬೇಕಾಗಿದೆ ಪ್ರಸ್ತುತ ಕಾಲಘಟ್ಟದಲ್ಲಿ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸರ್ಕಾರ ಹಲವು ಯೋಜನೆಗಳನ್ನು ಹಾಕಿಕೊಳ್ಳುತಿದೆ, ವಿದ್ಯಾರ್ಥಿ ಪೋಷಕರು ವಿದ್ಯಾರ್ಥಿಗಳ ಕಡೆ ಮನೆಯಲ್ಲಿ ಹೆಚ್ಚಿನ ಗಮನ ಕೊಡಬೇಕು ಎಂದು ಅಭಿಪ್ರಾಯಪಟ್ಟರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಶೀನಪ್ಪಗೌಡ ಶಾಲೆಯ ಈ ವರ್ಷದ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ತಿಳಿಸಿಕೊಟ್ಟರು. ಶಶಿಧರ್ ಜಿ ಗುಂಪಕಲ್ಲು ಇವರ ಮಾತನಾಡಿ ನಮ್ಮ ಶಾಲೆಯಲ್ಲಿ ಈ ವರ್ಷದ ದಾಖಲಾತಿ ಪ್ರಮಾಣ ಹೆಚ್ಚಾಗಿರುವ ಹಿನ್ನಲೆಯಲ್ಲಿ ಊರವರನ್ನು ಹಾಗೂ ಶಾಲಾ ಶಿಕ್ಷಕ ವೃಂದದವರನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳನ್ನು ಆರತಿ ಬೆಳಗಿ ಶಾಲಾ ಶಿಕ್ಷಕ ವೃಂದದವರು ಬರಮಾಡಿಕೊಂಡರು . ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಪವನ್ ಕುಮಾರ್ ಸ್ವಾಗತಿಸಿ, ತೇಜಾವತಿ ಧನ್ಯವಾದಗೈದ ಕಾರ್ಯಕ್ರಮವನ್ನು ಶಾಲಾ ಶಿಕ್ಷಕರಾದ ನಿಶಾಂತ್ ಕುಮಾರ್ ನಿರೂಪಿಸಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಯ ವತಿಯಿಂದ ಬಿಸ್ಕೆಟ್ ಹಾಗೂ ಗಿರೀಶ್ ಕುದ್ರಂತಾಯ ರವರ ವತಿಯಿಂದ ಎಲ್ಲ ವಿದ್ಯಾರ್ಥಿಗಳಿಗೆ ಹೋಳಿಗೆಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲ ಶಿಕ್ಷಕರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಹಕರಿಸಿದರು.









