ಕಲ್ಮಂಜ: ಮಲ್ಲಿಗೆ-ತರಕಾರಿ ಕೃಷಿಯಲ್ಲಿ ಲಾಭದ ದಾರಿ ತೋರಿದ ಒಂದು ದಿನದ ತರಬೇತಿ

0

ಬೆಳ್ತಂಗಡಿ, ಜೂನ್ 3: ರೈತರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ ಹಾಗೂ ಸ್ಕಂದ ಸಂಜೀವಿನಿ ಒಕ್ಕೂಟ ಕಲ್ಮಂಜ (ರಿ) ಇವುಗಳ ಸಂಯುಕ್ತ ಆಶ್ರಯದಲ್ಲಿ ಜೂ.3 ರಂದು ಕಲ್ಮಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಲ್ಲಿಗೆ ಹಾಗೂ ತರಕಾರಿ ಕೃಷಿ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು.ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಅಧಿಕಾರಿ ಗಣೇಶ್ ಅವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.

ರೈತ ಸಭೆಯ ಅಧ್ಯಕ್ಷೆ ಇಂದಿರಾ ಮಲ್ಲಿಗೆ ಕೃಷಿಯ ಅನುಭವ ಹಂಚಿಕೊಂಡು, “10 ಗುಂಟೆಯಲ್ಲಿ ಶುರು ಮಾಡಿದ ಮಲ್ಲಿಗೆ ಈಗ ನಮ್ಮ ಕುಟುಂಬದ ಮುಖ್ಯ ಆದಾಯ. ದಿನಕ್ಕೆ ₹800 ರಿಂದ ₹1200 ಸಂಪಾದನೆ ಆಗುತ್ತೆ” ಎಂದರು.ಕೃಷಿ ಅಧಿಕಾರಿ ಗಣೇಶ್ ಅವರು ಕೃಷಿ ಇಲಾಖೆಯ ಸವಲತ್ತುಗಳಾದ ಹನಿ ನೀರಾವರಿಗೆ 90% ಸಬ್ಸಿಡಿ, ಉತ್ತಮ ಬೀಜ-ಸಸಿ ವಿತರಣೆ, ಕೃಷಿ ಯಂತ್ರೋಪಕರಣಗಳ ಬಾಡಿಗೆ ಯೋಜನೆ ಬಗ್ಗೆ ವಾಸ್ತವಿಕ ಮಾಹಿತಿ ನೀಡಿದರು.

ಪಿಡಿಒ ಗೀತಾ ಆರ್ ಸಾಲಿಯಾನ್ ಮಾತನಾಡಿ, “ಮಹಿಳೆಯರು ಮಲ್ಲಿಗೆ ಕೃಷಿಯಿಂದ ಸ್ವಾವಲಂಬಿಗಳಾಗಬಹುದು. ಉದ್ಯೋಗ ಖಾತರಿ ಯೋಜನೆಯಡಿ ಕೃಷಿ ಹೊಂಡ, ದನದ ಕೊಟ್ಟಿಗೆ ನಿರ್ಮಾಣಕ್ಕೆ ₹2.5 ಲಕ್ಷದವರೆಗೆ ಸಹಾಯಧನ ಇದೆ” ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿ ಪ್ರಭಾಕರ ಮಯ್ಯ ಅವರು ಪ್ರೊಜೆಕ್ಟರ್ ಮೂಲಕ ಮಲ್ಲಿಗೆ ಬಳ್ಳಿ ನಾಟಿ, ಕಟಿಂಗ್ ವಿಧಾನ, ಸಮಗ್ರ ಪೋಷಕಾಂಶ ನಿರ್ವಹಣೆ, ರೋಗ-ಕೀಟ ಬಾಧೆ ನಿಯಂತ್ರಣ ಹಾಗೂ ತರಕಾರಿ ಮೇಲೇರುವ ಸಸ್ಯಗಳ ಕೃಷಿ ಬಗ್ಗೆ ಪ್ರಾತ್ಯಕ್ಷಿಕೆ ಸಹಿತ ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ 60ಕ್ಕೂ ಹೆಚ್ಚು ರೈತರಿಗೆ ಟೊಮೆಟೊ, ಬದನೆ, ಮೆಣಸಿನಕಾಯಿ ಸಸಿಗಳು ಹಾಗೂ ಬೆಂಡೆ, ಹೀರೆ, ಅಲಸಂದೆ ಬೀಜಗಳನ್ನು ಉಚಿತವಾಗಿ ವಿತರಿಸಿ ನಾಟಿ ಕ್ರಮ ತಿಳಿಸಲಾಯಿತು.ಒಕ್ಕೂಟದ ಕಾರ್ಯದರ್ಶಿ ವಿದ್ಯಾ ಪದಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಕೃಷಿ ಸಖಿ ಪುಷ್ಪಲತಾ ನಿರೂಪಿಸಿ,ವಂದಿಸಿದರು ಸ್ಕಂದ ಸಂಜೀವಿನಿ ಒಕ್ಕೂಟದ ಎಂಬಿಕೆ ಪೂಜಾ ಸ್ವಾಗತಿಸಿ ಜಯಂತಿ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here