ಶೌರ್ಯ ವಿಪತ್ತು ನಿರ್ವಹಣಾ ತಂಡಕ್ಕೆ ಸುರಕ್ಷತಾ ಸಾಮಾಗ್ರಿ ದೇಣಿಗೆ

0

ಬೆಳ್ತಂಗಡಿ: ಮೇ 19ರಂದು ಕಲ್ಮಂಜದ ಪಜಿರಡ್ಕದ ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ನೀರುಪಾಲಾಗಿದ್ದ ಘಟನೆ ವೇಳೆ ಮೃತದೇಹವನ್ನು ಮೇಲಕ್ಕೆತ್ತುವ ಕಾರ್ಯದಲ್ಲಿ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸಹಕರಿಸಿದ್ದರು.ಈ ಘಟನೆಗೆ ಸಂಬಂಧಿಸಿದಂತೆ ತಂಡದ ಸದಸ್ಯ ಸಚಿನ್ ಭಿಡೆಯವರ ಸಾಮಾಜಿಕ ಜಾಲತಾಣದ ಸ್ಟೇಟಸ್ ಗಮನಿಸಿದ ಬೆಂಗಳೂರಿನ ಆನಂದ ಸುಬ್ರಹ್ಮಣ್ಯ ಭಟ್ ಅವರು ಕರೆ ಮಾಡಿ ಸಂತಾಪ ಸೂಚಿಸಿ, ತಂಡಕ್ಕೆ ಅಗತ್ಯವಿರುವ ಸಹಾಯ ಕುರಿತು ವಿಚಾರಿಸಿದ್ದಾರೆ.

ಈ ವೇಳೆ ಲೈಫ್ ಜಾಕೆಟ್ ಹಾಗೂ ಸೇಫ್ಟಿ ಹೆಲ್ಮೆಟ್ ಅಗತ್ಯವಿದೆ ಎಂದು ತಿಳಿದ ತಕ್ಷಣವೇ 5 ಸೆಟ್ ಸೇಫ್ಟಿ ಹೆಲ್ಮೆಟ್ ಮತ್ತು ಲೈಫ್ ಜಾಕೆಟ್‌ಗಳನ್ನು ಕೋರಿಯರ್ ಮೂಲಕ ಕಳುಹಿಸಿಕೊಟ್ಟಿದ್ದಾರೆ.ಆನಂದ ಸುಬ್ರಹ್ಮಣ್ಯ ಭಟ್ ಅವರು ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ವೇಣೂರಿನ ಹಳೆ ವಿದ್ಯಾರ್ಥಿಯಾಗಿದ್ದಾರೆ. “ನಾನು ಊರಿನಲ್ಲಿ ಇದ್ದಿದ್ದರೆ ಇಂತಹ ಆಪತ್ಕಾಲದ ಕಾರ್ಯಗಳಲ್ಲಿ ನಿಮ್ಮೊಂದಿಗೆ ಭಾಗವಹಿಸುತ್ತಿದ್ದೆ” ಎಂದು ಅವರು ತಿಳಿಸಿದ್ದಾರೆ.ಇದಲ್ಲದೆ, ಅವರು ಇದುವರೆಗೆ 40ಕ್ಕೂ ಅಧಿಕ ಬಾರಿ ರಕ್ತದಾನ ಮಾಡುವ ಮೂಲಕ ಅನೇಕರಿಗೆ ನೆರವಾಗಿದ್ದು, ಸಾಮಾಜಿಕ ಕಳಕಳಿ ಮತ್ತು ಬದ್ಧತೆಯ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಸಾಮಾಜಿಕ ಸೇವಾ ಮನೋಭಾವ ತೋರಿದ ಆನಂದ ಸುಬ್ರಹ್ಮಣ್ಯ ಭಟ್ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here