






ಬೆಳ್ತಂಗಡಿ: ಮೇ 26 ರಂದು ತಾಲ್ಲೂಕು ಹಿಂದುಳಿದ ವರ್ಗಗಳ ಮೋರ್ಚಾದ ಪೂರ್ಣ ಪ್ರಮಾಣದ ಸಭೆಯು ಜರುಗಿತು. ತಾಲ್ಲೂಕು ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ರತ್ನಾಕರ ಬುಣ್ಣನ್ ಅವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಅಧ್ಯಕ್ಷ ಮಹೇಶ್ ಜೋಗಿ ಅವರು, ಮೋರ್ಚಾದ ಕಾರ್ಯಚಟುವಟಿಕೆಗಳು ಹಾಗೂ ಸಂಘಟನೆಯನ್ನು ತಳಮಟ್ಟದಿಂದ ಗಟ್ಟಿಗೊಳಿಸುವ ಕುರಿತು ಪದಾಧಿಕಾರಿಗಳಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ತಾಲ್ಲೂಕು ಮೋರ್ಚಾದ ಪ್ರಭಾರಿಗಳಾದ ಚಂದ್ರಶೇಖರ್ ಪೆನ್ನ ಅವರು ಮಾತನಾಡಿ, ಶಕ್ತಿಕೇಂದ್ರ ಹಾಗೂ ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವ ದೃಷ್ಟಿಯಿಂದ ತಲಾ ಐದು ಜನರ ತಂಡವನ್ನು ಕಟ್ಟಿ ಮೋರ್ಚಾವನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಬೇಕು ಎಂದು ಕರೆ ನೀಡಿದರು. ಇದೇ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ ಕಲ್ಮಂಜ ಅವರು ಸಂಘಟನೆ ಬಲಗೊಳ್ಳಲು ಕೈಗೊಳ್ಳಬೇಕಾದ ಕಾರ್ಯರೂಪದ ಯೋಜನೆಗಳ ಬಗ್ಗೆ ಬೆಳಕು ಚೆಲ್ಲಿದರು.


ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಭಾರಿಗಳಾದ ಶ್ರೀ ಸೀತಾರಾಮ್ ಬೇಲಾಲ್ ಅವರು ಎಸ್ಐಆರ್ (SIR) ಮತ್ತು ಪ್ರಧಾನಮಂತ್ರಿಯವರ ‘ಮನ್ ಕಿ ಬಾತ್’ ಕಾರ್ಯಕ್ರಮದ ಕುರಿತು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ರತ್ನಾಕರ್ ಬುಣ್ಣನ್ ಅವರು ಮಾತನಾಡಿ, ತಾಲ್ಲೂಕಿನ ಎಲ್ಲಾ ಬೂತ್ಗಳನ್ನು ಒಳಗೊಂಡಂತೆ ಶಕ್ತಿಕೇಂದ್ರದ ಮಟ್ಟದಲ್ಲಿ ಸಂಘಟನೆಯನ್ನು ವ್ಯಾಪಕವಾಗಿ ವೃದ್ಧಿಸುವಂತೆ ಕಾರ್ಯಕರ್ತರಿಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಸಭೆಯಲ್ಲಿದ್ದ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಅಧ್ಯಕ್ಷರು ಶಾಲು ಹೊದಿಸಿ ಗೌರವಿಸಿದರು.
ವೇದಿಕೆಯಲ್ಲಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್ ಭಂಡಾರಿ ಹಾಗೂ ವಿಠಲ ಆಚಾರ್ಯ ಉಪಸ್ಥಿತರಿದ್ದರು. ಸುಧೀರ್ ಭಂಡಾರಿ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರೆ, ರಾಜೇಶ್ ಮೂಡಿಕೋಡಿ ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.









