







ಬೆಳ್ತಂಗಡಿ: ಅರಣ್ಯ ಇಲಾಖೆ ಇರಿಸಿದ್ದ ಬೋನಿಗೇ ಸವಾಲು ಹಾಕಿರುವ ಹುಲಿಯೊಂದು, ಅದರ ಪಕ್ಕದ ಮನೆಯಲ್ಲೇ ಕಟ್ಟಿ ಹಾಕಿದ್ದ ನಾಯಿಯನ್ನು ಹೊತ್ತೊಯ್ದ ಭೀಕರ ಘಟನೆ ಮೇ.23 ರಂದು ರಾತ್ರಿ ಇಂದಬೆಟ್ಟು ಗ್ರಾಮದಲ್ಲಿ ನಡೆದಿದೆ.
ಇಂದಬೆಟ್ಟು ಗ್ರಾಮದ ನಿವಾಸಿ ನಾರಾಯಣ ನಾಯ್ಕ್ ಎಂಬುವವರ ಮನೆಯ ನಾಯಿಯೇ ಹುಲಿಗೆ ಬಲಿಯಾದ ಪ್ರಾಣಿ. ಕಳೆದ ವಾರವಷ್ಟೇ ಇದೇ ಗ್ರಾಮದ ಕಜೆ ಫಿಲಪ್ಪಾಡಿ ಡೀಕಯ್ಯ ನಾಯ್ಕ್ ಅವರ ಮನೆಯಿಂದ ಟರ್ಕಿ ಕೋಳಿಗಳನ್ನು ಹುಲಿ ಹಿಡಿದುಕೊಂಡು ಹೋಗಿತ್ತು. ಈ ಬಗ್ಗೆ ದೂರು ಪಡೆದಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ, ಅದೇ ದಿನ ಹುಲಿ ಸೆರೆಗಾಗಿ ಗ್ರಾಮದಲ್ಲಿ ಬೋನ್ ಅಳವಡಿಸಿದ್ದರು.


ಬೋನ್ ಇಟ್ಟ ದಿನದಿಂದ ಒಂದು ವಾರದವರೆಗೆ ಆ ಕಡೆ ಸುಳಿಯದ ಹುಲಿ, ಶನಿವಾರ ರಾತ್ರಿ ಹಠಾತ್ತನೆ ಪ್ರತ್ಯಕ್ಷವಾಗಿದೆ. ಬೋನ್ ಇದ್ದ ಜಾಗದ ತೀರಾ ಹತ್ತಿರದ ಮನೆಯಲ್ಲೇ ಕಟ್ಟಿ ಹಾಕಿದ್ದ ನಾಯಿಯನ್ನು ಬೇಟೆಯಾಡಿ ಹೊತ್ತೊಯ್ದಿದೆ. ಅರಣ್ಯ ಇಲಾಖೆಯ ಕಣ್ಣೆದುರೇ ಈ ಘಟನೆ ನಡೆದಿರುವುದು ಇಲಾಖೆಯ ಸನ್ನದ್ಧತೆಗೆ ಸವಾಲೊಡ್ಡಿದಂತಾಗಿದೆ.
ಹುಲಿಯ ಸರಣಿ ದಾಳಿಗಳಿಂದ ಇಂದಬೆಟ್ಟು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ತೀವ್ರ ಭೀತರಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಕಾರ್ಯಾಚರಣೆ ತೀವ್ರಗೊಳಿಸಿ, ಹುಲಿಯನ್ನು ಸೆರೆಹಿಡಿದು ತಮಗೆ ರಕ್ಷಣೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.









