ಬೆಳ್ತಂಗಡಿ ತಾಲೂಕಿನ ಜನತೆಯನ್ನು ಬೆಚ್ಚಿ ಬೀಳಿಸಿದ ಪ್ರಕರಣಒಂದೇ ರಾತ್ರಿ ಆರು ವಕೀಲರ ಕಚೇರಿ ಸಹಿತ ೧೧ ಕಡೆ ಕಳ್ಳರ ಕರಾಮತ್ತು

0

ಬೆಳ್ತಂಗಡಿ: ಹೊಟೇಲ್‌ನ ಒಂದು ಹಣದ ಡಬ್ಬಿ ಓಪನ್ ಮಾಡಿ ನೋಟು ಮಾತ್ರ ಕದ್ದಿದ್ದಾರೆ..ಡ್ರಾಯರ್ ಓಪನ್ ಮಾಡಿದ್ದಾರೆ..ಝೆರಾಕ್ಸ್ ಅಂಗಡಿಗೂ ನುಗ್ಗಿದ್ದಾರೆ..ಫೈನಾನ್ಸ್‌ನಲ್ಲಿಯೂ ತಡಕಾಡಿದ್ದಾರೆ..ಆರು ವಕೀಲರ ಕಚೇರಿಯ ಬೀಗವನ್ನೂ ಮುರಿದಿದ್ದಾರೆ..ಒಂದು ಕಡೆ ಬರೋಬ್ಬರಿ ೧.೫ ಲಕ್ಷ ರೂಪಾಯಿಯಷ್ಟು ಎಗರಿಸಿದ್ದಾರೆ..ಇದು ಬೆಳ್ತಂಗಡಿ ಪೇಟೆಯಲ್ಲಿ ಒಂದೇ ದಿನದ ರಾತ್ರಿಯಲ್ಲಿ ಕಳ್ಳರು ಮಾಡಿರುವ ಕರಾಮತ್ತು. ಕಳ್ಳರ ಕೈ ಚಳಕಕ್ಕೆ ಇಡೀ ಬೆಳ್ತಂಗಡಿ ತಾಲೂಕಿನ ಜನತೆ ಬೆಚ್ಚಿ ಬಿದ್ದಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಕಳ್ಳರಿಗಾಗಿ ಶೋಧ ಮುಂದುವರಿಸಿದೆ.

ಬೆಳ್ತಂಗಡಿ ಕೋರ್ಟ್ ರಸ್ತೆಯ ಧರ್ಮಶ್ರೀ ಬಿಲ್ಡಿಂಗ್‌ನ ಮೊದಲ ಮಹಡಿಯಲ್ಲಿ ಕಳ್ಳರ ಶೋಧ: ಬೆಳ್ತಂಗಡಿ ಕೋರ್ಟ್ ರಸ್ತೆಯ ಧರ್ಮಶ್ರೀ ಬಿಲ್ಡಿಂಗ್‌ನಲ್ಲಿ ಚೋರರು ಬರೋಬ್ಬರಿ ಆರು ಅಂಗಡಿ ಕೋಣೆಗಳಲ್ಲಿ ಹುಡುಕಾಡಿದ್ದಾರೆ. ಧರ್ಮಶ್ರೀ ಬಿಲ್ಡಿಂಗ್‌ನ ಮೊದಲ ಮಹಡಿಯಲ್ಲಿರುವ ಎಲ್ಲಾ ಕೋಣೆಗಳ ಬೀಗ ಮುರಿದಿರುವ ಕಳ್ಳರು ಸಿಕ್ಕ ಸಿಕ್ಕ ವಸ್ತುಗಳನ್ನು ಜಾಲಾಡಿದ್ದಾರೆ. ಸಮೃದ್ಧಿ ಎಂಟರ್‌ಪ್ರೈಸಸ್, ವಕೀಲರುಗಳಾದ ವೈ. ರಾಧಾಕೃಷ್ಣ, ಯತೀಶ್ ಶೆಟ್ಟಿ, ಉಷಾ ಎನ್.ಜಿ. ಹಾಗೂ ಉದ್ಯಮಿ ಮಹಮ್ಮದ್ ಹನೀಫ್ ಅವರ ಕಚೇರಿ ಸೇರಿದಂತೆ ಮೊದಲ ಮಹಡಿಯಲ್ಲಿರುವ ಎಲ್ಲಾ ರೂಮ್‌ಗಳಲ್ಲೂ ಕಳ್ಳರು ಕೈಚಳಕ ತೋರಿಸಿದ್ದಾರೆ.
ಸಮೃದ್ಧಿ ಎಂಟರ್‌ಪ್ರೈಸಸ್‌ನಿಂದ ೧.೫ ಲಕ್ಷ ರೂ ಕಳವು: ಧರ್ಮಶ್ರೀ ಬಿಲ್ಡಿಂಗ್‌ನಲ್ಲಿರುವ ಸಮೃದ್ಧಿ ಎಂಟರ್‌ಪ್ರೈಸಸ್‌ನಿಂದ ಸುಮಾರು ೧.೫ ಲಕ್ಷಕ್ಕೂ ಅಧಿಕ ನಗದು ಹಣವನ್ನು ಕಳವು ಮಾಡಿದ್ದಾರೆಂದು ಅದರ ಮಾಲಕ ರಂಜಿತ್ ಸುದ್ದಿಗೆ ತಿಳಿಸಿದ್ದಾರೆ. ಕಳ್ಳತನದ ಸುಳಿವು ಸಿಗಬಾರದೆಂಬ ಉzಶದಿಂದ ಖದೀಮರು ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದ ಮೆಮೊರಿ ಕಾರ್ಡ್ ಕೂಡ ದೋಚಿದ್ದಾರೆ.

ಮೂರು ಮಾರ್ಗದ ಸಮೀಪ ಐದು ಕಡೆ ಕನ್ನ: ಬೆಳ್ತಂಗಡಿ ಪೇಟೆಯ ಮೂರು ಮಾರ್ಗದ ಸಮೀಪವಿರುವ ಮಾತೃಶ್ರೀ ಹೋಟೆಲ್‌ಗೆ ನುಗ್ಗಿರುವ ಕಳ್ಳರು ಡ್ರಾಯರ್‌ನಲ್ಲಿದ್ದ ಎರಡು ಸಾವಿರ ರೂ ಹಾಗೂ ಡಬ್ಬಿಯಲ್ಲಿ ಸಂಗ್ರಹಿಸಿದ್ದ ೫ಸಾವಿರಕ್ಕೂ ಅಧಿಕ ಹಣವನ್ನು ಕದ್ದೊಯ್ದಿದ್ದಾರೆ. ಕಳ್ಳ ಕದಿಯುವ ತುರ್ತಿನಲ್ಲಿ ಚಿಲ್ಲರೆಗಳನ್ನು ಹೊಟೇಲ್‌ನಲ್ಲಿ ಚೆಲ್ಲಾಡಿದ್ದು ಬೆಳಕಿಗೆ ಬಂದಿದೆ. ಮಾತೃಶ್ರೀ ಹೊಟೇಲ್‌ನ ಪಕ್ಕದ ಹಿಮಾಲಯ ಫೈನಾನ್ಸ್, ವಕೀಲರುಗಳಾದ ಜಯರಾಮ ಮಣಿಯಾಣಿ, ಜಿತೇಶ್ ಕೆ., ರಾಮಚಂದ್ರ ಗೌಡ ಮತ್ತು ಶಬರಿ ಎಂಟರ್‌ಪ್ರೈಸಸ್ ಅಂಗಡಿಗೂ ಕನ್ನ ಹಾಕಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಡಾನ್ ಶ್ವಾನದಿಂದ ಶೋಧ: ಈ ಕಳ್ಳತನದ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಎಸ್ ಪಿ ಕಚೇರಿಯಲ್ಲಿದ್ದ ಶ್ವಾನದಳದ ನಾಯಿ ಡಾನ್‌ನನ್ನು ಕರೆಸಿಯೂ ಕಳ್ಳರ ಪತ್ತೆಗಾಗಿ ಪ್ರಯತ್ನ ಪಟ್ಟಿದ್ದಾರೆ.

ಶ್ವಾನ ಡಾನ್ ಓಟ.. ಜನತೆಗೆ ಅಚ್ಚರಿ: ಪೊಲೀಸ್ ಶ್ವಾನದಳದ ಡಾನ್ ಶ್ವಾನವನ್ನು ಧರ್ಮಶ್ರೀ ಬಿಲ್ಡಿಂಗ್‌ನ ಮೊದಲ ಮಹಡಿಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಬೀಗ ಮತ್ತು ಡ್ರಾಯರ್‌ನ ವಾಸನೆಯನ್ನು ತಿಳಿದ ನಾಯಿ ನೇರವಾಗಿ ಓಡಿ ಬಂದು ಮೂರು ಮಾರ್ಗದ ಬಳಿಯಿರುವ ಮಾತೃಶ್ರೀ ಹೊಟೇಲ್‌ನ ಎದುರು ಕಳ್ಳತನವಾದ ಸ್ಥಳದಲ್ಲಿ ಹುಡುಕಾಡಿದೆ. ಡಾನ್ ಶ್ವಾನದ ಓಟವನ್ನು ನೆರೆದ ನೂರಾರು ಸಾರ್ವಜನಿಕರು ಅಚ್ಚರಿಯಿಂದ ನೋಡುತ್ತಿದ್ದರು.

ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಯೋಚಿಸಬೇಕಾಗಿದೆ: ಕಳ್ಳರು ನನ್ನ ಕಚೇರಿಗೂ ಕನ್ನ ಹಾಕಿದ್ದಾರೆ. ಕಚೇರಿಯಲ್ಲಿ ದೊಡ್ಡ ಮೊತ್ತದ ಹಣ ಇಟ್ಟಿರಲಿಲ್ಲ. ಬೆಳ್ತಂಗಡಿಯಲ್ಲಿ ಸುಮಾರು ಕಡೆ ಈ ರೀತಿಯಾಗಿ ದಾಳಿ ಮಾಡಿರುವುದು ದುರದೃಷ್ಟಕರ. ನಮ್ಮ ಕಚೇರಿಯ ೨೦೦ ಮೀ. ರೇಡಿಯಸ್ ಒಳಗಡೆ ಪೊಲೀಸ್ ಠಾಣೆ, ತಾಲೂಕು ಕಚೇರಿ, ತಾಲೂಕು ಪಂಚಾಯತ್ ಇದೆ. ಪೊಲೀಸರು ಸರಿಯಾಗಿ ಗಸ್ತು ತಿರುಗುತ್ತಿದ್ದರೆ ಈ ರೀತಿಯಾಗಿ ಆಗುತ್ತಿರಲಿಲ್ಲ ಅನಿಸುತ್ತದೆ. ಈ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಯಾವ ಮಟ್ಟದಲ್ಲಿ ಇದೆ ಎಂದು ಜನಸಾಮಾನ್ಯರು ಯೋಚಿಸಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಕಳ್ಳರನ್ನು ಶೀಘ್ರವಾಗಿ ಪತ್ತೆ ಹಚ್ಚಿ ಬಂಧಿಸಲು ಪೊಲೀಸರಲ್ಲಿ ಮನವಿ ಮಾಡುತ್ತೇವೆ. -ಯತೀಶ್ ಶೆಟ್ಟಿ ವಕೀಲರು

ಸುಮಾರು ೧.೫೦ ಲಕ್ಷ ರೂ. ಹಣ ಕದ್ದಿದ್ದಾರೆ: ರಾತ್ರಿ ೨ ಗಂಟೆ ತನಕದ ಫೂಟೇಜ್ ನಮ್ಮಲ್ಲಿದೆ. ನಂತರದ ಸಿಸಿಟಿವಿ ರೆಕಾರ್ಡ್‌ನ ಫೂಟೇಜ್ ಇರುವ ಮೆಮೊರಿ ಕಾರ್ಡನ್ನು ಕಳ್ಳರು ದೋಚಿದ್ದಾರೆ. ನಮ್ಮ ಇತರ ದಾಖಲೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಸುಮಾರು ೧.೫೦ ಲಕ್ಷ ರೂ. ಕ್ಯಾಶನ್ನು ಕದ್ದಿದ್ದಾರೆ. ಪೊಲೀಸರು ಸೂಕ್ತ ತನಿಖೆ ಮಾಡಿ ಕಳ್ಳರನ್ನು ಪತ್ತೆ ಹಚ್ಚಲಿ.
-ರಂಜಿತ್, ಸಮೃದ್ಧಿ ಎಂಟರ್‌ಪ್ರೈಸಸ್ ಮಾಲಕ

ರೂ.೭೦೦೦ ಹಣವನ್ನು ಕಳ್ಳರು ದೋಚಿದ್ದಾರೆ: ಬೆಳಿಗ್ಗೆ ಕರೆ ಮಾಡಿ ನಮಗೆ ಇತರರು ವಿಷಯ ತಿಳಿಸಿದರು. ನಂತರ ಸ್ಥಳಕ್ಕೆ ಬಂದು ಪೊಲೀಸರ ಜೊತೆ ಬಂದು ಪರಿಶೀಲಿಸಿದಾಗ ಕ್ಯಾಶ್ ಡ್ರಾವರ್‌ನಲ್ಲಿದ್ದ ರೂ.೨೦೦೦ ಹಾಗೂ ಡಬ್ಬಿಯಲ್ಲಿ ರೂ.೫೦೦೦ ಹಣವನ್ನು ದೋಚಿರುವುದು ಕಂಡುಬಂದಿದೆ. ಪೊಲೀಸರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿ.
-ಪ್ರಮೋದ್ ಪೂಜಾರಿ, ಮಾತೃಶ್ರೀ ಹೋಟೆಲ್ ಮಾಲಕ

ಪಟ್ಟಣದಲ್ಲಿಯೇ ಕೈಚಳಕ ತೋರಿಸಿದ ಕಳ್ಳರನ್ನು ಹೆಡೆಮುರಿ ಕಟ್ಟಲೇಬೇಕು: ನನ್ನ ಕಚೇರಿಯಲ್ಲಿ ಕಾಗದಪತ್ರ ಮತ್ತು ದಾಖಲೆಗಳು ಮಾತ್ರ ಇತ್ತು. ಬೇರೆ ಬೆಲೆ ಬಾಳುವ ವಸ್ತುಗಳು ನನ್ನ ಕಚೇರಿಯಲ್ಲಿ ಇರಲಿಲ್ಲ. ಇಷ್ಟು ಸನಿಹದಲ್ಲಿ ಪೊಲೀಸ್ ಠಾಣೆ ಇದ್ದರೂ ಸರಣಿ ಕಳ್ಳತನ ನಡೆದಿರುವುದು ನಾಚಿಕೆಗೇಡಿನ ವಿಷಯ. ಪಟ್ಟಣದಲ್ಲಿಯೇ ೧೧ ಅಂಗಡಿಗಳಿಗೆ ನುಗ್ಗಿ ಕೈಚಳಕ ತೋರಿಸಿದ ಕಳ್ಳರನ್ನು ಹೆಡೆಮುರಿ ಕಟ್ಟದಿದ್ದರೆ ಗ್ರಾಮೀಣ ಪ್ರದೇಶಕ್ಕೆ ಸುಲಭವಾಗಿ ನುಗ್ಗುತ್ತಾರೆ. ಪೊಲೀಸರು ಶೀಘ್ರ ಕ್ರಮ ಕೈಗೊಳ್ಳಬೇಕು.
-ಮಹಮ್ಮದ್ ಹನೀಫ್, ಉದ್ಯಮಿ

ಟಾಯ್ಲೆಟ್‌ಗೆ ನುಗ್ಗಿದ ಕಳ್ಳರು: ಧರ್ಮಶ್ರೀ ಬಿಲ್ಡಿಂಗ್ ಮೊದಲ ಮಹಡಿಯ ಎಲ್ಲಾ ಕೋಣೆಗಳನ್ನು ಜಾಲಾಡಿದ ಕಳ್ಳರು ಕೊನೆಯ ಕೋಣೆಯ ಬೀಗವನ್ನು ತೆಗೆದು ಒಳನುಗ್ಗಿ ನಾಚಿಕೆಟ್ಟಿದ್ದಾರೆ. ಕೊನೆಯ ರೂಮ್ ಟಾಯ್ಲೆಟ್ ಆಗಿದ್ದರಿಂದ ಅದು ಗೊತ್ತಿಲ್ಲದೆ ಕಳ್ಳರು ನುಗ್ಗಿದ್ದಾರೆ.

ಪೋಲೀಸರ ದೌಡು- ತನಿಖೆ ಚುರುಕು: ಘಟನಾ ಸ್ಥಳಕ್ಕೆ ಅಡಿಷನಲ್ ಎಸ್‌ಪಿ ಅನಿಲ್ ಕುಮಾರ್ ಎಸ್. ಭೂಮರೆಡ್ಡಿ, ಡಿವೈಎಸ್‌ಪಿ ರೋಹಿಣಿ ಸಿ.ಕೆ., ಸರ್ಕಲ್ ಇನ್ಸಪೆಕ್ಟರ್ ರವಿ ಬಿ.ಎಸ್. ನೇತೃತ್ವದ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ. ಬಳಿಕ ತನಿಖೆ ಚುರುಕುಗೊಂಡಿದೆ.

ಬೆಳ್ತಂಗಡಿ ಠಾಣೆಯಲ್ಲಿ ದಾಖಲಾದ ದೂರಿನ ವಿವರ: ಈ ಕಳವು ಕೃತ್ಯದ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಬೆಳ್ತಂಗಡಿ ತಾಲೂಕು ಬೆಳ್ತಂಗಡಿ ಕಸಬಾ ಗ್ರಾಮದ ಕೋರ್ಟ್ ರೋಡ್‌ನಲ್ಲಿರುವ ಧರ್ಮಶ್ರೀ ಕಟ್ಟಡದ ಮೊದಲನೇ ಮಹಡಿಯಲ್ಲಿ ಸಮೃದ್ಧಿ ಎಂಟರ್‌ಪ್ರೈಸಸ್ ಎಂಬ ಕಛೇರಿಯನ್ನು ರಂಜಿತ್ ಎಂಬವರು ನಡೆಸಿಕೊಂಡು ಬರುತ್ತಿದ್ದಾರೆ. ಎಂದಿನಂತೆ ರಂಜಿತ್ ಅವರ ಸಹೋದ್ಯೋಗಿ ಮೇ. ೧೮ರಂದು ಸಂಜೆ ೬ ಗಂಟೆಗೆ ಕಚೇರಿ ಬಂದ್ ಮಾಡಿ ಹೋಗಿದ್ದು ಮೇ.೧೯ರಂದು ಬೆಳಿಗ್ಗೆ, ೮.೦೦ ಗಂಟೆಗೆ ಬಂದು ನೋಡಿದಾಗ ಯಾರೋ ಕಳ್ಳರು ಕಚೇರಿಯ ಬಾಗಿಲನ್ನು ಒಡೆದು ಒಳನುಗ್ಗಿ ಮೇಜಿನ ಲಾಕರ್ ಒಡೆದು ಅದರಲ್ಲಿರುವ ಸುಮಾರು ೧,೪೫,೦೦೦ ಹಣವನ್ನು ಮತ್ತು ಸಿಸಿ ಕ್ಯಾಮೆರಾದ ಮೆಮೊರಿ ಕಾರ್ಡು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಅಕ್ಕಪಕ್ಕದ ಕಚೇರಿಯವರನ್ನು ವಿಚಾರಿಸಿದಾಗ ಹನೀಫ್‌ರವರ ಕಚೇರಿಯ ಬೀಗ ಒಡೆದು ಒಳಹೋಗಿದ್ದು ಯಾವುದೇ ನಗದು ಕಳವಾಗಿಲ್ಲ. ಆ ಬಳಿಕ ರಂಜಿತ್ ರವರ ಕಚೇರಿಯ ಪಕ್ಕದಲ್ಲಿ ಯತೀಶ್ ಶೆಟ್ಟಿಯವರ ವಕೀಲರ ಕಛೇರಿ ಇದ್ದು ಅವರು ಸಂಗ್ರಹಿಸಿಟ್ಟಿದ್ದ ಸುಮಾರು ೩೦೦೦ ಹಣವನ್ನು ಕಳವು ಮಾಡಿಕೊಂಡು ಹೋಗಲಾಗಿದೆ. ಆ ನಂತರ ವೈ.ರಾಧಾಕೃಷ್ಣ ಮತ್ತು ಉಷಾ ಎನ್.ಜಿ. ವಕೀಲರ ಕಚೇರಿಯ ಬಾಗಿಲನ್ನು ಮುರಿದು ಉಷಾ ಎನ್.ಜಿ. ಅವರ ಪರ್ಸ್ ಕಳವು ಮಾಡಿದ್ದು ಅದರಲ್ಲಿ ಸುಮಾರು ೧೦೦೦೦ ಹಣ ಇರುವುದಾಗಿ ತಿಳಿಸಿದ್ದಾರೆ. ಆ ಬಳಿಕ ಇನ್ನೊಂದು ರೂಂ ಹಾಗೂ ಬಾತ್ ರೂಂನ ಬೀಗ ಮುರಿದಿದ್ದು ಯಾವುದೇ ಹಾನಿಯಾಗಿಲ್ಲ ಎಂದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಾತೃಶ್ರೀ ಹೋಟೆಲ್ ಮಾಲಕ ಪ್ರಮೋದ್ ಪೂಜಾರಿ ದೂರು: ಕಳವು ಕೃತ್ಯದ ಕುರಿತು ಮಾತೃಶ್ರೀ ಹೋಟೆಲ್ ಮಾಲಕ ಪ್ರಮೋದ್ ಪೂಜಾರಿ ಅವರು ನೀಡಿದ ದೂರಿನಂತೆ ಮತ್ತೊಂದು ಪ್ರಕರಣ ದಾಖಲಾಗಿದೆ. ಸುಮಾರು ೬ ವರ್ಷಗಳಿಂದ ಬೆಳ್ತಂಗಡಿ ಕಸಬಾ ಗ್ರಾಮದ ಮೂರು ಮಾರ್ಗದ ಬಳಿ ಇರುವ ಶಿವಪ್ರಸಾದ್ ಪಿ. ರಾವ್ ಎಂಬವರ ಕಟ್ಟಡದಲ್ಲಿ ಪ್ರಮೋದ್ ಪೂಜಾರಿ ಅವರು ಮಾತೃಶ್ರೀ ಹೊಟೇಲ್ ನಡೆಸುತ್ತಿದ್ದಾರೆ. ಎಂದಿನಂತೆ ಮೇ.೧೮ರಂದು ಸಂಜೆ ೬.೩೦ ಗಂಟೆಗೆ ಹೊಟೇಲ್ ಬಂದ್ ಮಾಡಿ ಹೋಗಿದ್ದು ಮೇ.೧೯ರಂದು ಬೆಳಿಗ್ಗೆ ೭.೦೦ ಗಂಟೆಗೆ ಬಂದು ನೋಡಿದಾಗ ಹೊಟೇಲ್‌ನ ಬಾಗಿಲು ಮುರಿದು ಯಾರೋ ಕಳ್ಳರು ಒಳನುಗ್ಗಿ ಕ್ಯಾಶ್ ಟೇಬಲ್ ಮೇಲೆ ಇರಿಸಿದ್ದ ಸ್ಟೀಲ್ ಡಬ್ಬಿಯಲ್ಲಿಟ್ಟಿದ್ದ ಅಂದಾಜು ಸುಮಾರು ರೂ.೫೦೦೦ ನಗದು ಹಾಗೂ ಡ್ರಾವರ್‌ನಲ್ಲಿರಿಸಿದ್ದ ರೂ.೨೫೦೦ ಹಣವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಅಕ್ಕಪಕ್ಕದವರನ್ನು ವಿಚಾರಿಸಿದಾಗ ಜಯರಾಮ್ ಮಣಿಯಾಣಿ ಅವರ ವಕೀಲರ ಕಚೇರಿಯ ಬೀಗ ಮುರಿದು ಕಳ್ಳರು ಒಳಹೋಗಿದ್ದು ಯಾವುದೇ ನಗದು ಹೋಗಿಲ್ಲ. ಆ ಬಳಿಕ ಹಿಮಾಲಯ ಫೈನಾನ್ಸ್ ಮತ್ತು ಇನ್ವೆಸ್ಟೆಂಟ್ ಕಚೇರಿಯ ಬೀಗ ಮುರಿದು ಒಳಹೋಗಿದ್ದು ಯಾವುದೇ ನಗದು ಹೋಗಿಲ್ಲ. ಆ ಬಳಿಕ ಜಿತೇಶ್ ಕೆ. ಅವರ ವಕೀಲರ ಕಚೇರಿಯ ಬೀಗ ಮುರಿದು ಒಳಹೋಗಿದ್ದು ಯಾವುದೇ ನಗದು ಹೋಗಿಲ್ಲ. ಆ ನಂತರ ಶಿವಪ್ರಸಾದ್ ಪಿ. ರಾವ್‌ರವರ ಶಬರಿ ಎಂಟರ್‌ಪ್ರೈಸಸ್‌ನ ಶಟರ್ ಬೀಗ ಮುರಿದು ಒಳಹೋಗಿದ್ದು ಯಾವುದೇ ನಗದು ಹೋಗಿಲ್ಲ. ಆ ನಂತರ ಮೊದಲನೇ ಮಹಡಿಯಲ್ಲಿರುವ ಕೆ. ರಾಮಚಂದ್ರ ಗೌಡ ಅವರ ವಕೀಲರ ಕಚೇರಿಯ ಬಾಗಿಲಿನ ಬೀಗ ಮುರಿದು ಒಳಹೋಗಿದ್ದು ಯಾವುದೇ ನಗದು ಹೋಗಿಲ್ಲ. ಎಂದು ಎಫ್‌ಐಆರ್ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here