ಉಜಿರೆ-ಪೆರಿಯಶಾಂತಿ ರಸ್ತೆಗೆ ಸಿಕ್ಕಿದೆ ಹೈಟೆಕ್ ಟಚ್!-ನೇತ್ರಾವತಿ ನದಿಗೆ ಮತ್ತಷ್ಟು ಎತ್ತರದಲ್ಲಿ ಎರಡು ಸೇತುವೆ-ಧರ್ಮಸ್ಥಳದಲ್ಲಿ ಮೆಜೆಸ್ಟಿಕ್ ಮಾದರಿಯ ಅಂಡರ್‌ಪಾಸ್

0

ವಾವ್ ಅಂತ ಹೇಳುವಷ್ಟು ಅಗಲವಾಗುತ್ತಿರುವ ರಸ್ತೆ. ನನ ನಮ ಸುಂಯ್ ಸುಂಯ್ ಪೋವೋಲಿ ಅಂತಿರುವ ಬೈಕ್ ಸವಾರರು. ವಾಹನ ದಟ್ಟಣೆ ಹೆಚ್ಚಿದೆ ಇಷ್ಟು ಅಗಲ ಬೇಕಿತ್ತು ಅಂತ ಹೇಳುವ ಅನುಭವಿ ಸ್ಥಳೀಯರು.ಧರ್ಮಸ್ಥಳದ ಗೇಟ್ ಹತ್ತಿರ ಆ ಪ್ಲಾನ್ ಒಳ್ಳೆಯದು ಅನ್ನುವ ಯಾತ್ರಿಕರು. ಹೀಗೆ ಉಜಿರೆ ಪೆರಿಯಶಾಂತಿ ಸ್ಪರ್ ರಸ್ತೆಯ ಅಗಲೀಕರಣ ನಿಜಕ್ಕೂ ಹೊಸ ಸಂಚಲನಕ್ಕೆ ಕಾರಣವಾಗಿದೆ.
ಉಜಿರೆಯಿಂದ ಪೆರಿಯಶಾಂತಿ ವರೆಗೆ ೨೮.೫ ಕಿಲೋಮೀಟರ್ ರಸ್ತೆ: ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಇಲಾಖೆಯ ಹೆದ್ದಾರಿಗಳ ನಿರ್ವಹಣೆ ಯೋಜನೆಯಡಿಯಲ್ಲಿ ಉಜಿರೆ-ಧರ್ಮಸ್ಥಳ-ಪೆರಿಯಶಾಂತಿ ರಸ್ತೆಯನ್ನು ಅಗಲೀಕರಣಗೊಳಿಸಿ ದ್ವಿಪಥ ರಸ್ತೆಯನ್ನಾಗಿ ಪರಿವರ್ತಿಸಿ ಡಾಮರೀಕರಣ ಕಾಮಗಾರಿ ಆರಂಭಗೊಂಡಿದ್ದು ಕೊಕ್ಕಡ ಭಾಗದಲ್ಲಿ ಕೆಲಸ ಭರದಿಂದ ಸಾಗುತ್ತಿದೆ. ೬೧೪ ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುವ ಕಾಮಗಾರಿಯ ಜವಾಬ್ದಾರಿಯನ್ನು ಮುಗ್ರೋಡಿ ಕನ್ಸ್‌ಸ್ಟ್ರಕ್ಷನ್ ಕಾವೂರು ತಂಡ ವಹಿಸಿಕೊಂಡಿದ್ದು ಈಗಾಗಲೇ ಸಿದ್ಧವನದ ಬಳಿ ಹಾಗೂ ಕೊಕ್ಕಡದಿಂದ ಪೆರಿಯಶಾಂತಿಯ ಪಟ್ಲಡ್ಕ ಸಮೀಪ ರಸ್ತೆ ಕೆಲಸ ಆರಂಭಗೊಂಡಿದೆ.
ಉಜಿರೆಯಿಂದ ಧರ್ಮಸ್ಥಳ ದವರೆಗೆ ನಿರ್ಮಾಣವಾಗಲಿದೆ ಚತುಷ್ಪಥ: ಈಗಾಗಲೇ ಉಜಿರೆ ಪೇಟೆಯಿಂದ ಸಿದ್ಧವನದವರೆಗೆ ಚತುಷ್ಪಥ ರಸ್ತೆ ಮತ್ತು ಡಿವೈಡರ್ ನಿರ್ಮಾಣವಾಗಿದ್ದು ಈಗ ಸಿದ್ಧವನದಿಂದ ಧರ್ಮಸ್ಥಳದವರೆಗೆ ಚತುಷ್ಫಥ ಕಾಮಗಾರಿ ನಡೆಯಲಿದೆ. ಸಿದ್ಧವನದಿಂದ ಒಂದು ಕಿಲೋಮೀಟರ್ ದೂರವರೆಗೆ ಕಾಮಗಾರಿ ನಡೆಯುತ್ತಿದ್ದು ಈ ಮಳೆಗಾಲ ಆರಂಭವಾಗುವ ಮೊದಲು ಅದನ್ನು ಪೂರ್ಣಗೊಳಿಸುವ ಸಿದ್ಧತೆಯಲ್ಲಿದ್ದಾರೆ. ಈ ರಸ್ತೆಯ ಅಗಲ ಎರಡೂ ಬದಿಗಳಲ್ಲಿ ತಲಾ ೯ ಮೀಟರ್ ಅಗಲದ ರಸ್ತೆಗಳು, ಮಧ್ಯ ಭಾಗದಲ್ಲಿ ಡಿವೈಡರ್ ಮತ್ತು ದಾರಿದೀಪಗಳನ್ನು ಅಳವಡಿಸಲಾಗುತ್ತದೆ.
ಧರ್ಮಸ್ಥಳದಿಂದ ಪೆರಿಯಶಾಂತಿ ವರೆಗೆ ದ್ವಿಪಥ ರಸ್ತೆ: ಉಜಿರೆಯಿಂದ ಧರ್ಮಸ್ಥಳದವರೆಗೆ ಚತುಷ್ಪಥ ರಸ್ತೆಯಾದರೆ ಧರ್ಮಸ್ಥಳದಿಂದ ಪೆರಿಯಶಾಂತಿವರೆಗೆ ೧೦ ಮೀಟರ್ ಅಗಲದ ರಸ್ತೆ ಹಾಗೂ ಚರಂಡಿ, ಮೋರಿ ಬರುವಲ್ಲಿ ೧೨ ಮೀಟರ್ ಅಗಲದ ರಸ್ತೆ ನಿರ್ಮಾಣವಾಗಲಿದೆ.
ನೇತ್ರಾವತಿಯಲ್ಲಿ ಈಗಿರುವ ಸೇತುವೆಗಿಂತ ೫ ಮೀ. ಎತ್ತರದಲ್ಲಿ ಮತ್ತೆರಡು ಸೇತುವೆ: ಧರ್ಮಸ್ಥಳದ ನೇತ್ರಾವತಿ ನದಿಗೆ ಈಗಿರುವ ಸೇತುವೆಗಿಂತ ೫ ಮೀಟರ್ ಎತ್ತರದಲ್ಲಿ ಮತ್ತೆರಡು ಸೇತುವೆ ನಿರ್ಮಾಣವಾಗಲಿದೆ. ಕನ್ಯಾಡಿಯ ರಾಮ ಮಂದಿರದ ನಂತರ ಸಿಗುವ ಚಡಾವಿನಿಂದ ನೇರವಾಗಿ ಸಾಗುವ ರಸ್ತೆಗೆ ನೇತ್ರಾವತಿಯ ಹಳೆಯ ಸಣ್ಣ ಸೇತುವೆ ಇರುವ ಜಾಗದಲ್ಲೇ ಹೊಸ ಎರಡು ಸೇತುವೆಗಳು ನಿರ್ಮಾಣವಾಗಲಿದೆ. ಈಗಿರುವ ಸೇತುವೆಗಿಂತ ೫ಮೀಟರ್ ಎತ್ತರ ಸೇತುವೆ ನಿರ್ಮಾಣವಾಗುವುದರಿಂದ ಹೊಳೆಗಂಡಿಯ ಸ್ಥಳ ಸರ್ವಿಸ್ ರಸ್ತೆಗೆ ಸೀಮಿತವಾಗಲಿದೆ.
ಬೆಳಾಲು- ದೊಂಡೋಲೆ ಹೋಗುವವರಿಗೆ ಅಂಡರ್‌ಪಾಸ್: ನೇತ್ರಾವತಿಯಲ್ಲಿ ಮತ್ತೆರಡು ಸೇತುವೆ ಈಗಿರುವ ಸೇತುವೆಗಿಂತ ೫ ಮೀಟರ್ ಎತ್ತರದಲ್ಲಿ ನಿರ್ಮಾಣವಾಗುವುದರಿಂದ ಬೆಳಾಲು, ದೊಂಡೋಲೆ ಮುಂತಾದೆಡೆಗೆ ಹೋಗುವ ಪ್ರಯಾಣಿಕರಿಗಾಗಿ ಅಂಡರ್‌ಪಾಸ್ ನಿರ್ಮಿಸಲಿದ್ದಾರೆ. ಅಲ್ಲದೆ ದೊಂಡೋಲೆ ಮುಂತಾದೆಡೆಯಿಂದ ಉಜಿರೆಗೆ ಹೋಗುವ ಪ್ರಯಾಣಿಕರಿಗೂ ಸರ್ವಿಸ್ ರಸ್ತೆಯ ಮೂಲಕ ಹೈವೆಗೆ ಸಂಪರ್ಕಿಸುವ ರಸ್ತೆ ನಿರ್ಮಾಣವಾಗಲಿದೆ.
ಧರ್ಮಸ್ಥಳದಲ್ಲಿ ನಿರ್ಮಾಣ ವಾಗಲಿದೆ ಬೃಹತ್ ಮೆಜೆಸ್ಟಿಕ್ ಮಾದರಿಯ ಅಂಡರ್‌ಪಾಸ್: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಲಕ್ಷಾಂತರ ಯಾತ್ರಾರ್ಥಿಗಳು ಬರುವ ಹಿನ್ನಲೆಯಲ್ಲಿ ಧರ್ಮಸ್ಥಳದ ದ್ವಾರದ ಬಳಿ ವಿಸ್ತಾರವಾದ ವಿಶೇಷ ಪಾದಚಾರಿ ಅಂಡರ್‌ಪಾಸ್ ನಿರ್ಮಾಣವಾಗಲಿದೆ. ಸುಬ್ರಹ್ಮಣ್ಯ, ಬೆಂಗಳೂರು ಕಡೆಯಿಂದ ಬರುವ ಯಾತ್ರಿಕರು, ಮಂಗಳೂರು ಕಡೆಯಿಂದ ಬರುವ ಯಾತ್ರಿಕರು ದ್ವಾರದ ಬಳಿ ಇಳಿದು ಪಾದಚಾರಿ ಅಂಡರ್ ಪಾಸ್‌ನಲ್ಲಿ ಇಳಿದು ದೇವಸ್ಥಾನದ ಕಡೆಗೆ, ಕಲ್ಲೇರಿ ಕಡೆಗೆ, ನೇತ್ರಾವತಿ ಕಡೆಗೆ ಸಾಗಬಹುದಾಗಿದೆ. ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿರುವ ಪಾದಚಾರಿ ಅಂಡರ್‌ಪಾಸ್ ಮಾದರಿಯಲ್ಲೇ ಧರ್ಮಸ್ಥಳದಲ್ಲೂ ಅಂಡರ್ ಪಾಸ್ ಕಾಮಗಾರಿ ನಡೆಯಲಿದೆ. ಅಲ್ಲದೆ ಈಗಾಗಲೇ ಗೊಮ್ಮಟಬೆಟ್ಟದ ಗುಡ್ಡಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗಿದೆ.
ಕುದ್ರಾಯದಲ್ಲಿ ಬದಲಾಗಲಿದೆ ಸಂಚಾರ-ನಿರ್ಮಾಣವಾಗ್ತಿದೆ ಸೇತುವೆ: ನಿಡ್ಲೆಯ ಕುದ್ರಾಯದ ನದಿಗೂ ಕೂಡ ಹೊಸ ಸೇತುವೆ ನಿರ್ಮಾಣವಾಗಲಿದೆ. ಈಗಿರುವ ಸೇತುವೆಯ ಪಕ್ಕದಲ್ಲೇ ನೂತನ ಸೇತುವೆ ನಿರ್ಮಾಣವಾಗಲಿದ್ದು ಹಳೆಯ ಸೇತುವೆಗಿಂತ ಸ್ವಲ್ಪ ಎತ್ತರವಾಗಿ ನಿರ್ಮಾಣವಾಗಲಿದೆ. ಜೊತೆಗೆ ಬೂಡುಜಾಲು ಮುಂತಾದೆಡೆ ಅಗಲೀಕರಣದ ಕಾರ್ಯ ಭರದಿಂದ ಸಾಗುತ್ತಿದೆ.
ಪಾರ್ಪಿಕಲ್ಲಿನಲ್ಲೂ ಹೊಸ ಸೇತುವೆ ನಿರ್ಮಾಣ ಕಾರ್ಯ- ಬದಲಾಗಲಿದೆ ರಸ್ತೆ: ಈಗಿರುವ ಪಾರ್ಪಿಕಲ್ ಸೇತುವೆಗೂ ಸಿಗಲಿದೆ ವಿದಾಯ. ಅಲ್ಲದೆ ಇಲ್ಲಿ ರಸ್ತೆಯೂ ಸಂಪೂರ್ಣವಾಗಿ ಪಥ ಬದಲಿಸಿಕೊಂಡು ಹೊಸ ಸೇತುವೆ ನಿರ್ಮಾಣವಾಗಲಿದೆ. ಈಗಾಗಲೇ ಪಾರ್ಪಿಕಲ್‌ನಲ್ಲಿ ೧೮೦ ಮೀಟರ್ ಉದ್ದದ ನೂತನ ಸೇತುವೆ, ಐದು ಪಿಲ್ಲರ್ ಬರಲಿದೆ. ಓಪನ್ ಟೈಪ್ ಆಫ್ ಪೌಂಡೇಶನ್‌ನಲ್ಲಿ ಮಾಡಿರುವ ಸೇತುವೆಯಾಗಿದೆ. ಪ್ರತಿ ಪಿಲ್ಲರ್‌ನಲ್ಲಿ ೩೬ ಗರ್ಡರ್ ಬರಲಿದೆ. ೨೦೨೭ರ ಮಳೆಗಾಲದ ಮುಕ್ತಾಯದ ನಂತರ ಇದನ್ನು ಬಿಟ್ಟು ಕೊಡುವ ಸಾಧ್ಯತೆಯಿದೆ. ಹಿಂದಿನ ಸೇತುವೆಗಿಂತ ಎರಡು ಮೀಟರ್ ಎತ್ತರದಲ್ಲಿ ಈ ಸೇತುವೆ ನಿರ್ಮಾಣವಾಗುತ್ತಿದೆ.
ಕಾಪಿನಬಾಗಿಲು ತಿರುವಿಗೆ ಸಿಗಲಿದೆ ಮುಕ್ತಿ: ಧರ್ಮಸ್ಥಳದಿಂದ ಕೊಕ್ಕಡ ಮಾರ್ಗದಲ್ಲಿ ಸಾಗುವಾಗ ಸಿಗುವ ಬೃಹತ್ ತಿರುವು ಕಾಪಿನಬಾಗಿಲು ತಿರುವು ಹೊಸ ರಸ್ತೆಯಲ್ಲಿ ಬಂದಾಗ ಸಂಪೂರ್ಣ ಮಿಸ್ ಆಗಲಿದೆ. ಕೊಕ್ಕಡದಿಂದ ನೇರವಾಗಿ ಕಾಪಿನಬಾಗಿಲು ಸಮೀಪದ ಮುಖ್ಯರಸ್ತೆಗೆ ದಾರಿ ಕನೆಕ್ಟ್ ಆಗಲಿದ್ದು ಸಂಪೂರ್ಣ ನೇರವಾಗಲಿದೆ.
ಕೊಕ್ಕಡದಲ್ಲಿ ಮೇಜರ್ ಜಂಕ್ಷನ್ ನಿರ್ಮಾಣ: ಕೊಕ್ಕಡದಲ್ಲಿ ಮೇಜರ್ ಜಂಕ್ಷನ್ ನಿರ್ಮಾಣವಾಗಲಿದೆ. ಈಗಿರುವ ಸರ್ಕಲ್‌ನಂತೆ ಕೊಕ್ಕಡದಲ್ಲೂ ಜಂಕ್ಷನ್ ನಿರ್ಮಾಣವಾಗಲಿದೆ. ಈಗ ಇರುವಷ್ಟು ತಿರುವು ಇರದೆ ಕಡಿಮೆಗೊಳಿಸಿ ಅಗಲೀಕರವಾಗಲಿದೆ. ಅಲ್ಲದೆ ಎರಡೂ ಕಡೆಯ ವಾಹನ ಬರುತ್ತಿರುವ ದೃಶ್ಯ ಕಾಣುವಂತೆ ಜಂಕ್ಷನ್ ನಿರ್ಮಾಣವಾಗಲಿದೆ.
೧೧ ಕಿಲೋಮೀಟರ್ ರಕ್ಷಿತಾರಣ್ಯ-ಅನುಮತಿಗಾಗಿ ಕಾಯುತ್ತಿರುವ ಇಲಾಖೆ: ಉಜಿರೆಯಿಂದ ಪೆರಿಯಶಾಂತಿವರೆಗೆ ೧೧ ಕಿಲೋಮೀಟರ್ ರಕ್ಷಿತಾರಣ್ಯ ಇರುವುದರಿಂದ ಅರಣ್ಯ ಇಲಾಖೆಯ ಅನುಮತಿ ಸಿಗದೆ ಅಲ್ಲೇಲ್ಲ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಮುಗ್ರೋಡಿ ಕನ್ಸಸ್ಟ್ರಕ್ಷನ್‌ನವರು ಕೊಕ್ಕಡದಿಂದ ಪೆರಿಯಶಾಂತಿಗೆ ಸಾಗುವ ಬರೆಮೇಲು, ಪುತ್ತಿಗೆ, ಬೋಳದಬೈಲು, ಪಟ್ಲಡ್ಕ ಮುಂತಾದಕಡೆ ಕೆಲಸ ಭರದಿಂದ ಸಾಗುತ್ತಿದೆ. ಕೆಲವೆಡೆ ಈಗಿರುವ ರಸ್ತೆಗಿಂತ ಹೊಸ ರಸ್ತೆ ಕೆಳಭಾಗದಲ್ಲಿ ಸಾಗಿದರೆ ಮತ್ತೆ ಕೆಲವೆಡೆ ಈಗಿರುವ ರಸ್ತೆಗಿಂತ ಎತ್ತರದಲ್ಲಿ ರಸ್ತೆ ಸಾಗಲಿದೆ. ಇದರ ಕಾಮಗಾರಿ ನಡೆಯಲಿದೆ.
ಪೆರಿಯಶಾಂತಿಯಲ್ಲಿ ವೈ ಜಂಕ್ಷನ್: ಪೆರಿಯಶಾಂತಿಯಲ್ಲಿ ವೈ ಜಂಕ್ಷನ್ ಬರಲಿದ್ದು ಆ ಕಾಮಗಾರಿಯನ್ನು ಎನ್‌ಹೆಚ್‌ಎಐಯವರು ಅಂದ್ರೆ ಕೆಎನ್‌ಆರ್ ಗುತ್ತಿಗೆದಾರರು ಮಾಡಲಿದ್ದಾರೆ.

ರಸ್ತೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ: ಉಜಿರೆ ಟು ಪೆರಿಯಶಾಂತಿಯ ಕಾಮಗಾರಿ ಈಗಾಗಲೇ ಆರಂಭವಾಗಿದ್ದು ನಾವು ಸಿದ್ಧವನದ ಸಮೀಪ ೧ ಕಿಲೋಮೀಟರ್ ದೂರದ ಚತುಷ್ಫಥ ರಸ್ತೆ ಕಾಮಗಾರಿ ನಡೆಸುತ್ತಿzವೆ. ಇದರಲ್ಲಿ ಉಜಿರೆಯಿಂದ ಧರ್ಮಸ್ಥಳದವರೆಗೆ ಚುತುಷ್ಫಥ ರಸ್ತೆ, ಜೊತೆಗೆ ಪುಟ್ಪಾತ್, ಮಧ್ಯದಲ್ಲಿ ಡಿವೈಡರ್‌ನಲ್ಲಿ ಸ್ಟ್ರೀಟ್‌ಲೈಟ್ ಅಳವಡಿಸಲಾಗುತ್ತದೆ. ಧರ್ಮಸ್ಥಳ, ಕೊಕ್ಕಡದಲ್ಲಿ ಮೇಜರ್ ಜಂಕ್ಷನ್, ನೇತ್ರಾವತಿ, ಕುದ್ರಾಯ, ಪಾರ್ಪಿಕಲ್‌ನಲ್ಲಿ ನೂತನ ಸೇತುವೆಗಳು ನಿರ್ಮಾಣವಾಗಲಿವೆ. ಕಾಮಗಾರಿ ಆರಂಭವಾಗಿದ್ದು ನೂರಾರು ಕೆಲಸಗಾರರು ಕೆಲಸ ನಿರತರಾಗಿದ್ದಾರೆ.
-ದಾಮೋದರ್ ಇಂಜಿನಿಯರ್ ಎಂಸಿಕೆ

ನಿಡ್ಲೆಯಲ್ಲಿ ಮುಗ್ರೋಡಿ ಪ್ರಯೋಗಾಲಯ: ನಿಡ್ಲೆಯಲ್ಲಿ ಮುಗ್ರೋಡಿ ಕನ್ಸಸ್ಟ್ರಕ್ಷನ್ ಪ್ರಯೋಗಾಲಯವಿದ್ದು ಇಲ್ಲಿ ಡಾಮರ್ ಗುಣಮಟ್ಟ, ಜಲ್ಲಿಯ ಗುಣಮಟ್ಟ, ಪಿಲ್ಲರ್‌ನ ಗುಣಮಟ್ಟ, ಕಾಂಕ್ರೀಟ್‌ನ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತದೆ. ಇದಕ್ಕೆ ಬೇಕಾದ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಈ ಪ್ರಯೋಗಾಲಯ ಹೊಂದಿದ್ದು ಗುಣಮಟ್ಟ ಕಾಮಗಾರಿಯ ಸ್ಥಳದಲ್ಲಿ ಮತ್ತು ಪ್ರಯೋಗಾಲಯದಲ್ಲಿಯೂ ಕೂಡ ಪರೀಕ್ಷಿಸಲಾಗುತ್ತದೆ.

LEAVE A REPLY

Please enter your comment!
Please enter your name here