







ಬೆಳ್ತಂಗಡಿ: ತಾಲೂಕಿನ ಗರ್ಡಾಡಿ ಗ್ರಾಮದ ನಂದಿಬೆಟ್ಟದಲ್ಲಿರುವ ಸುಬ್ರಯ್ಯ ಕೋಡಿ ಕುಟುಂಬದ ಸ್ಥಳದಲ್ಲಿ ಇತ್ತೀಚೆಗೆ ಕುಟುಂಬ ಪರಿಶೀಲನಾ ಸಭೆ ಜರುಗಿತು. ಬೆಳ್ತಂಗಡಿ ತಾಲೂಕು ಜಿಲ್ಲಾ ಮಜ್ದೂರ್ ಸಂಘದ ಅಧ್ಯಕ್ಷ ನ್ಯಾಯವಾದಿ ಅನಿಲ್ ಕುಮಾರ್ ಅವರ ಸಮ್ಮುಖದಲ್ಲಿ ಈ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯಲ್ಲಿ ಜಾಗದ ಮೂಲ ವಾರಸುದಾರರು ಹಾಗೂ ಕುಟುಂಬದ ಪ್ರಮುಖ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸುಬ್ರಯ್ಯ ಕೋಡಿ ಕುಟುಂಬದ ಹಿರಿಯ ಸದಸ್ಯೆ ಲೀಲಾ ಭಂಡಾರ್ತಿ ಪೆರಾಡಿ ಅವರು, “ಈ ಜಾಗದಲ್ಲಿ ಅನಾದಿ ಕಾಲದಿಂದಲೂ ನಮ್ಮ ದೈವಗಳ ಸೇವೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ” ಎಂದು ಹಳೆಯ ಧಾರ್ಮಿಕ ಇತಿಹಾಸವನ್ನು ನೆನಪಿಸಿಕೊಂಡರು.



ಸಭೆಯ ನೇತೃತ್ವ ವಹಿಸಿದ್ದ ವಕೀಲ ಅನಿಲ್ ಕುಮಾರ್ ಅವರು ಮಾತನಾಡಿ, “ಜಾಗ ಕೊಡುವವರು ಮತ್ತು ತೆಗೆದುಕೊಳ್ಳುವವರು ಯಾವುದೇ ರೀತಿಯ ವೈಮನಸ್ಸು ಅಥವಾ ಭಿನ್ನಾಭಿಪ್ರಾಯ ಇಟ್ಟುಕೊಳ್ಳಬಾರದು. ಎಲ್ಲರೂ ಒಮ್ಮತದಿಂದ, ಶಾಂತಿಯುತವಾಗಿ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.ನ್ಯಾಯವಾದಿಗಳ ಸಲಹೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮೂಲ ವಾರಸುದಾರರು, ತಲತಲಾಂತರದಿಂದ ನಡೆದುಕೊಂಡು ಬಂದಿರುವ ಕುಟುಂಬ ದೈವದ ಸೇವೆಯನ್ನು ಗೌರವಿಸಿ, ದೈವದ ಹೆಸರಿನಲ್ಲಿ 50 ಸೆಂಟ್ಸ್ ಜಾಗವನ್ನು ನೀಡುವುದಾಗಿ ಸಭೆಯಲ್ಲಿ ವಾಗ್ದಾನ ಮಾಡಿದರು. ಜಾಗದ ಹಸ್ತಾಂತರ ಹಾಗೂ ಮುಂದಿನ ಎಲ್ಲಾ ಪ್ರಕ್ರಿಯೆಗಳು ಯಾವುದೇ ಅಡೆತಡೆ ಇಲ್ಲದೆ ಸುಗಮವಾಗಿ ನೆರವೇರಲಿ ಎಂದು ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ದೈವದ ಮುಂದೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ವೇದಿಕೆಯಲ್ಲಿ ವಕೀಲ ಅನಿಲ್ ಕುಮಾರ್, ಲೀಲಾ ಭಂಡಾರ್ತಿ ಪೆರಾಡಿ, ಪ್ರಸಾದ್ ಭಂಡಾರಿ ಕಾನಾ ಮೂಡಬಿದ್ರೆ ಹಾಗೂ ವಿಶ್ವನಾಥ ಭಂಡಾರಿ ಕಿಲ್ಲೂರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಬ್ರಯ್ಯ ಕೋಡಿ ಕುಟುಂಬದ ಪ್ರಮುಖರು ಹಾಗೂ ದೈವಸ್ಥಾನದ ಹಿತೈಷಿಗಳು ಭಾಗವಹಿಸಿದ್ದರು. ಸತೀಶ್ ಭಂಡಾರಿ ನಾಳ ಅವರು ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿ, ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.









