ಪರಿಹಾರ ಪಡೆದಿದ್ದರೂ ಭೂಮಿ ಬಿಟ್ಟು ಕೊಡದ ವಿವಾದಗುರುವಾಯನಕೆರೆಯಲ್ಲಿ ಅಧಿಕಾರಿಗಳಿಂದ ಸರ್ವೆ ಕಾರ್ಯ

0

ಬೆಳ್ತಂಗಡಿ: ಇಲಾಖೆಯಿಂದ ಪರಿಹಾರ ಪಡೆದರೂ ಭೂಮಿ ಬಿಟ್ಟು ಕೊಡದೆ ಅದೇ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸರ್ವೆ ನಡೆಸಿದ ಘಟನೆ ಗುರುವಾಯನಕೆರೆಯಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ: ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗುತ್ತಿರುವ ಹಿನ್ನೆಲೆಯಲ್ಲಿ ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುವಾಯನಕೆರೆಯಲ್ಲಿ ೪೪ ಲಕ್ಷ ರೂ ಪರಿಹಾರ ಪಡೆದರೂ ೧ ಸೆಂಟ್ಸ್ ಭೂಮಿಯನ್ನೂ ಬಿಟ್ಟು ಕೊಡದೆ ಅಲ್ಲೇ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಏ.೨೧ರಂದು ನಡೆದ ದ.ಕ. ದಿಶಾ ಸಭೆಯಲ್ಲಿ ಶಾಸಕ ಹರೀಶ್ ಪೂಂಜ ಆರೋಪಿಸಿದ್ದರು. ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಸಂಸದ ಬ್ರಿಜೇಶ್ ಚೌಟ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಗುರುವಾಯನಕೆರೆಯ ಅಹ್ಮದ್ ಎಂಬವರ ಕಟ್ಟಡದ ಸರ್ವೆ ಕಾರ್ಯ ನಡೆಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು, ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯ ಸರ್ವೆಯರ್‌ಗಳು, ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿ ಭವಾನಿ ಶಂಕರ್, ಕುವೆಟ್ಟು ಗ್ರಾ.ಪಂ.ಪಿಡಿಓ ಇಮ್ತಿಯಾರh ಮುಂತಾದವರ ನೇತೃತ್ವದಲ್ಲಿ ಸರ್ವೆ ಕಾರ್ಯ ನಡೆದಿದೆ. ಹೆದ್ದಾರಿ ನಿರ್ಮಾಣದ ವೇಳೆ ಕಟ್ಟಡಕ್ಕೆ ಡ್ಯಾಮೇಜ್ ಆಗುವ ಹಿನ್ನಲೆಯಲ್ಲಿ ಎದುರು ಭಾಗವನ್ನು ತೆರವುಗೊಳಿಸಿ ಪೂರ್ಣ ಕಟ್ಟಡಕ್ಕೆ ಪರಿಹಾರ ನೀಡಲಾಗಿತ್ತು. ಆದರೆ ಇಲಾಖೆಯಿಂದ ಈ ಪರಿಹಾರ ಪಡೆದ ನಂತರ ರಸ್ತೆಯ ಜಾಗವನ್ನು ಹೊರತುಪಡಿಸಿ ಪರಿಹಾರ ಪಡೆದ ಜಾಗದಲ್ಲೇ ಉಳಿದ ಕಟ್ಟಡವನ್ನು ನವೀಕರಣಗೊಳಿಸಲಾಗಿದೆ. ಇದರ ಬಗ್ಗೆ ಸರ್ವೆ ಕಾರ್ಯ ನಡೆದಿದೆ.
ಭೂ ಸ್ವಾಧೀನಾಧಿಕಾರಿಗೆ ಮಾಹಿತಿ: ವಿವಾದಿತ ಮೂರು ಕಟ್ಟಡಗಳ ಬಗ್ಗೆಯೂ ಸರ್ವೆ ಕಾರ್ಯ ನಡೆದಿದೆ. ಸರ್ವೆ ಕಾರ್ಯದ ನಂತರ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ವಿಶೇಷ ಭೂ ಸ್ವಾಧೀನ ಅಧಿಕಾರಿಯವರಿಗೆ ಇಲ್ಲಿನ ಕಟ್ಟಡದ ವಿವರ, ಪರಿಹಾರ ನೀಡಿರುವ ವಿವರ ಹಾಗೂ ಹೊಸ ಕಟ್ಟಡ ರಸ್ತೆಯಿಂದ ಎಷ್ಟು ಅಂತರದಲ್ಲಿದೆ ಎಂಬುದರ ಕುರಿತು ಅಧಿಕಾರಿಗಳು ವಿವರ ನೀಡಿದ್ದಾರೆ. ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ಗ್ರಾಮ ಪಂಚಾಯತ್ ಪಿಡಿಓರವರ ಜೊತೆಗೂಡಿಯೇ ಸರ್ವೆ ಕಾರ್ಯ ನಡೆದಿದ್ದು ಮುಂದೆ ಆ ಕಟ್ಟಡವನ್ನು ತೆರವುಗೊಳಿಸಬೇಕೋ ಬೇಡವೋ ಎಂಬುದರ ಕುರಿತು ನಿರ್ಧಾರವಾಗಲಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here