






ಬೆಳ್ತಂಗಡಿ: ಇಡೀ ಬೆಳ್ತಂಗಡಿ ತಾಲೂಕನ್ನೇ ಬೆಚ್ಚಿ ಬೀಳಿಸಿದ್ದ ಗುರುವಾಯನಕೆರೆ ಮಂಡಲ ಪಂಚಾಯತ್ನ ಮಾಜಿ ಪ್ರಧಾನರೂ ಅರಮಲೆಬೆಟ್ಟದ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರರೂ ಆಗಿದ್ದ ಧನ್ಯ ಕುಮಾರ್(೫೨) ಅವರ ಕೊಲೆ ಪ್ರಕರಣ ೨೧ ವರ್ಷಗಳ ಬಳಿಕ ಮತ್ತೆ ಸುದ್ದಿಯಾಗಿದೆ.
೨೦೦೫ರ ಜನವರಿ ೨ರಂದು ಬೆಳಿಗ್ಗೆ ೭ರ ವೇಳೆಗೆ ತಲವಾರಿನಿಂದ ಕಡಿದು ಧನ್ಯ ಕುಮಾರ್ ಅವರನ್ನು ಕೊಲೆಗೈದ ಆರೋಪದಡಿ ಬಂಧಿತರಾಗಿ ಬಳಿಕ ದೋಷಮುಕ್ತರಾಗಿರುವ ಗುರುವಾಯನಕೆರೆ ಅಯ್ಯಪ್ಪ ಗುಡಿ ಬಳಿಯ ನಿವಾಸಿಗಳಾದ ಮುದ್ದು ಯಾನೆ ಅಶೋಕ್ ಮತ್ತು ಗೋಪಾಲಕೃಷ್ಣ ಅವರನ್ನು ಮೆಸ್ಕಾಂನ ಗ್ಯಾಂಗ್ಮೆನ್ ಸೇವೆಯಲ್ಲಿ ಮತ್ತೆ ಮುಂದುವರಿಸುವಂತೆ ಇದೀಗ ಹೈಕೋರ್ಟ್ ಆದೇಶ ನೀಡಿದೆ. ಈ ಮೂಲಕ ಜನಮಾನಸದಲ್ಲಿ ಮರೆತು ಹೋಗುತ್ತಿದ್ದ ಪ್ರಕರಣವೊಂದು ಮತ್ತೆ ನೆನಪಾಗುವಂತಾಗಿದೆ.
ಘಟನೆಯ ವಿವರ: ಗುರುವಾಯನಕೆರೆ ಮಂಡಲ ಪಂಚಾಯತ್ನ ಮಾಜಿ ಪ್ರಧಾನರೂ ಅರಮಲೆಬೆಟ್ಟದ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರರೂ ಆಗಿದ್ದ ಧನ್ಯ ಕುಮಾರ್(೫೨) ಅವರನ್ನು ೨೦೦೫ರ ಜನವರಿ ೨ರಂದು ಬೆಳಿಗ್ಗೆ ೭ರ ವೇಳೆಗೆ ತಲವಾರಿನಿಂದ ಕಡಿದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಕೊಲೆ ಕೃತ್ಯಕ್ಕೆ ಸಂಬಂಧಿಸಿ ಗುರುವಾಯನಕೆರೆ ಅಯ್ಯಪ್ಪ ಗುಡಿ ಬಳಿಯ ನಿವಾಸಿಗಳಾದ ಮುದ್ದು ಯಾನೆ ಅಶೋಕ್, ಗೋಪಾಲಕೃಷ್ಣ, ರಾಜ ಯಾನೆ ರಾಜೇಶ್, ವಿಶ್ವನಾಥ ಯಾನೆ ವಿಸಿಲ್ ವಿಶ್ವ ಮತ್ತಿತರರನ್ನು ಪೊಲೀಸರು ಕೊಲೆ ನಡೆದ ವಾರದೊಳಗೆ ಬಂಧಿಸಿದ್ದರು. ಕೊಲೆಗೆ ಬಳಸಿದ್ದ ಮೂರು ಮಂಡೆ ಕತ್ತಿ, ರಕ್ತಸಿಕ್ಕ ಬಟ್ಟೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಕೊಲೆ ಆರೋಪಿಗಳು ಬಳಸಿದ್ದ ಮಂಗಳೂರು ಕಂಕನಾಡಿ ಮೂಲದ ಬಿಳಿ ಕ್ವಾಲಿಸ್ ಕಾರನ್ನು ವಶಪಡಿಸಿಕೊಂಡಿದ್ದ ಪೊಲೀಸರು ಚಾಲಕ ಪ್ರವೀಣ್ ಎಂಬವರನ್ನು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದರು. ಆರೋಪಿಗಳು ನಾರಾವಿಯ ಕಾಡಿನಲ್ಲಿ ಅಡಗಿಕೊಂಡಿದ್ದರು ಎಂದೂ ಅವರನ್ನು ಅಲ್ಲಿಂದ ಬಂಧಿಸಲಾಯಿತು ಎಂದೂ ಹೇಳಲಾಗಿದ್ದರೂ ಆ ಬಳಿಕ ಆರೋಪಿಗಳೇ ವೇಣೂರು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದರು ಎಂದು ಹೇಳಲಾಗಿತ್ತು. ಕುವೆಟ್ಟು ಗ್ರಾಮದ ಲಲಿತಮ್ಮ ಮತ್ತು ಕೊಲೆಯಾದ ಧನ್ಯ ಕುಮಾರ್ ನಡುವೆ ನಡೆಯುತ್ತಿದ್ದ ಜಾಗದ ವಿವಾದಕ್ಕೆ ಸಂಬಂಧಿಸಿದ ಇದ್ದ ವಿವಾದ ಭುಗಿಲೆದ್ದು ಲಲಿತಮ್ಮರವರ ಪುತ್ರರಾದ ಮುದ್ದು ಅಶೋಕ್ ಮತ್ತು ಗೋಪಾಲಕೃಷ್ಣ ಅವರು ತಮ್ಮ ಸ್ನೇಹಿತರೊಂದಿಗೆ ಸೇರಿಕೊಂಡು ಬೆಳಿಗ್ಗೆ ಅರಮಲೆ ಬೆಟ್ಟಕ್ಕೆ ಬರುತ್ತಿದ್ದ ವೇಳೆ ಕಾದು ಕುಳಿತು ಧನ್ಯ ಕುಮಾರ್ ಅವರನ್ನು ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಆಗಿನ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಬಾಲಚಂದ್ರ ಮತ್ತು ಎಸ್.ಐ. ವಾಸು ಅವರ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು. ಪುತ್ತೂರು ಎಎಸ್ಪಿಯಾಗಿದ್ದ ಡಾ. ಸುಬ್ರಹ್ಮಣ್ಯೇಶ್ವರ ರಾವ್ ನೇತೃತ್ವದಲ್ಲಿ ತನಿಖೆ ನಡೆದಿತ್ತು.
ವಿಸಿಲ್ ವಿಶ್ವನೂ ಮರ್ಡರ್ ಆಗಿದ್ದ: ೨೦೦೫ರ ಜನವರಿ ೨ರಂದು ಬೆಳಿಗ್ಗೆ ೭ ಗಂಟೆಗೆ ಧನ್ಯ ಕುಮಾರ್ ಅವರು ತಮ್ಮ ಬೈಕ್ನಲ್ಲಿ ಶ್ರೀ ಕೊಡಮಣಿತ್ತಾಯ ದೈವಸ್ಥಾನಕ್ಕೆ ಬರುತ್ತಿದ್ದರು. ಗುರುವಾಯನಕೆರೆ ವಿದ್ಯುತ್ ಸಬ್ಸ್ಟೇಶನ್ ಬಳಿ ಅವರು ಆಗಮಿಸುತ್ತಿದ್ದಂತೆಯೇ ಅಲ್ಲಿಯೇ ತಿರುವಿನಲ್ಲಿ ಬಿಳಿ ಕ್ವಾಲಿಸ್ ಕಾರೊಂದರಲ್ಲಿ ಬಂದು ಕಾದು ಕುಳಿತಿದ್ದ ದುಷ್ಕರ್ಮಿಗಳು ಅವರನ್ನು ತಡೆದು ಕೈ ಮತ್ತು ತಲೆಗೆ ತಲವಾರಿನಿಂದ ಕಡಿದು ಬರ್ಬರವಾಗಿ ಕೊಲೆಗೈದು ಕಾರಿನಲ್ಲಿ ಕುಳಿತು ಕ್ಷಣಾರ್ಧದಲ್ಲಿ ಅಲ್ಲಿಂದ ಪರಾರಿಯಾಗಿದ್ದರು. ತಲೆಗೆ ತಲವಾರಿನ ಬಲವಾದ ಪೆಟ್ಟು ಬಿದ್ದ ಪರಿಣಾಮ ಧನ್ಯ ಕುಮಾರ್ ಅವರು ಬೈಕ್ ಸಮೇತ ಚರಂಡಿಗೆ ಬಿದ್ದು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದರು. ಸ್ಥಳೀಯ ನಿವಾಸಿ ಶೇಖರ್ ಎಂಬವರು ಗುರುವಾಯನಕೆರೆ ಪೇಟೆಗೆ ಅದೇ ದಾರಿಯಲ್ಲಿ ಬರುತ್ತಿರುವ ಸಮಯದಲ್ಲಿ ರಸ್ತೆ ಮಧ್ಯೆ ಬಿಳಿ ಕ್ವಾಲಿಸ್ ಕಾರೊಂದು ಬೋನೆಟ್ ತೆರೆದು ನಿಂತಿತ್ತು. ಮೂರು ಮಂದಿ ಇವರನ್ನು ಕಂಡು ಕಾರು ರಿಪೇರಿ ಮಾಡುವಂತೆ ನಟಿಸಿದ್ದರು. ಶೇಖರ್ ಅವರು ಮುಖ್ಯ ರಸ್ತೆಗೆ ಬರುತ್ತಿದ್ದ ವೇಳೆ ಧನ್ಯ ಕುಮಾರ್ ಬೈಕ್ನಲ್ಲಿ ಬರುತ್ತಿದ್ದರು. ಧನ್ಯಕುಮಾರ್ ಕೈಯಿಂದ ಶೇಖರ್ಗೆ ವಿಶ್ ಮಾಡಿದ್ದರು. ಪೇಟೆಗೆ ಬಂದು ಪುನಃ ಅದೇ ದಾರಿಯಲ್ಲಿ ಶೇಖರ್ ಅವರು ಮನೆಗೆ ಹೋಗುತ್ತಿರುವ ವೇಳೆ ತಿರುವಿನಲ್ಲಿ ಬೈಕ್ ಬಿದ್ದಿರುವುದು ಕಂಡು ಬಂದಿತ್ತು. ಗಾಬರಿಗೊಂಡ ಶೇಖರ್ ಹತ್ತಿರ ಹೋಗಿ ನೋಡಿದಾಗ ಧನ್ಯ ಕುಮಾರ್ ಕೊಲೆಯಾಗಿರುವುದು ಬೆಳಕಿಗೆ ಬಂದಿತ್ತು. ಕೂಡಲೇ ಅವರು ಮನೆಯವರಿಗೆ ಸುದ್ದಿ ತಲುಪಿಸಿದ್ದರು. ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ತಕ್ಷಣ ಸರ್ಕಲ್ ಇನ್ಸ್ಪೆಕ್ಟರ್ ಬಾಲಚಂದ್ರ ಮತ್ತು ಎಸ್.ಐ. ವಾಸು ಸ್ಥಳಕ್ಕೆ ಆಗಮಿಸಿದ್ದರು.
ಪ್ರಭಾವಿಯಾಗಿದ್ದ ಧನ್ಯ ಕುಮಾರ್ ಅವರ ಕೊಲೆಯ ಸುದ್ದಿ ಹರಡುತ್ತಿದ್ದಂತೆಯೇ ತಾಲೂಕಿನಾದ್ಯಂತ ಜನ ತಂಡೋಪತಂಡವಾಗಿ ಘಟನಾ ಸ್ಥಳಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದಿದ್ದರು. ಘಟನಾ ಸ್ಥಳಕ್ಕೆ ಪುತ್ತೂರು ಎ.ಎಸ್.ಪಿ.ಯಾಗಿದ್ದ ಡಾ. ಸುಬ್ರಹ್ಮಣೇಶ್ವರ ರಾವ್ ಆಗಮಿಸಿ ತನಿಖೆ ನಡೆಸಿದ್ದರು. ಆರೋಪಿಗಳ ಪತ್ತೆಗಾಗಿ ಶ್ವಾನದಳವನ್ನು ತರಿಸಿದಾಗ ಅದು ಕೊಲೆ ನಡೆದ ಸ್ಥಳದಿಂದ ಧನ್ಯ ಕುಮಾರ್ ಅವರ ಕಚೇರಿ ಮುಂಭಾಗದ ಮಣ್ಣಿನ ರಸ್ತೆಯ ಮೂಲಕ ಮುಖ್ಯರಸ್ತೆಯವರೆಗೆ ಬಂದು ನಿಂತಿತ್ತು. ಇದು ತನಿಖೆಗೆ ಹೆಚ್ಚಿನ ಪ್ರಯೋಜನವಾಗಿರಲಿಲ್ಲ. ಧನ್ಯ ಕುಮಾರ್ ಅವರ ಮೃತದೇಹವನ್ನು ನೋಡಿದವರು ಇದೊಂದು ಸುಪಾರಿ ಕೊಲೆ. ಸ್ಥಳೀಯ ವ್ಯಕ್ತಿಗಳಿಂದ ಈ ರೀತಿಯಲ್ಲಿ ಕೊಲೆ ಮಾಡಲು ಸಾಧ್ಯವಿಲ್ಲ ಎಂದು ಸಂಶಯ ವ್ಯಕ್ತಪಡಿಸಿದ್ದರು. ಧನ್ಯ ಕುಮಾರ್ ಅವರು ಮನೆಯಿಂದ ೭ ಗಂಟೆಗೆ ಹೊರಟಿದ್ದು ಅವರ ಕೊಲೆಯ ಸುದ್ದಿ ೭-೨೦ಕ್ಕೆ ಮನೆಗೆ ತಲುಪಿತ್ತು. ಕ್ಷಣಾರ್ಧದಲ್ಲಿ ನಡೆದ ಈ ಕೊಲೆ ಪರಿಣಿತ ಕೊಲೆಗಾರರ ಕೃತ್ಯ ಎಂಬ ಸಂಶಯ ವ್ಯಕ್ತವಾಗಿತ್ತು. ಕೊಲೆ ನಡೆಯುವ ದಿನಕ್ಕಿಂತ ಮೊದಲು ಮೂರು ದಿನಗಳಿಂದ ಬಿಳಿ ಕ್ವಾಲಿಸ್ ಕಾರೊಂದು ಗುರುವಾಯನಕೆರೆ ಪರಿಸರದಲ್ಲಿ ಓಡಾಡುತ್ತಿದ್ದು ಇವರ ಚಲನ ವಲನಗಳನ್ನು ಗಮನಿಸಿದ ಕೊಲೆಗಡುಕರು ಪೂರ್ವಯೋಜಿತವಾಗಿ ಬೆಳಗ್ಗಿನ ಜಾವ ದೈವಸ್ಥಾನಕ್ಕೆ ಬರುವ ದಾರಿಯಲ್ಲಿ ಈ ಕೃತ್ಯವನ್ನು ಎಸಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಪೊಲೀಸರು ತನಿಖೆ ತೀವ್ರಗೊಳಿಸಿದಾಗ ಇದು ಸುಪಾರಿ ಕಿಲ್ಲರ್ಗಳ ಕೃತ್ಯವಲ್ಲ.


ಸ್ಥಳೀಯರ ಕೃತ್ಯ ಎಂಬುದು ಗೊತ್ತಾಗಿತ್ತು. ಧನ್ಯಕುಮಾರ್ ಮತ್ತು ಲಲಿತಮ್ಮ ಅವರ ನಡುವಿನ ಜಾಗದ ವಿವಾದಕ್ಕೆ ಸಂಬಂಧಿಸಿ ಕೋಪಗೊಂಡು ಲಲಿತಮ್ಮ ಅವರ ಪುತ್ರರಾದ ಅಶೋಕ್ ಮತ್ತು ಗೋಪಾಲಕೃಷ್ಣ ಅವರು ತಮ್ಮ ಸ್ನೇಹಿತರೊಂದಿಗೆ ಧನ್ಯಕುಮಾರ್ ಅವರನ್ನು ಕೊಲೆ ಮಾಡಿದ್ದಾರೆ ಎಂದು ಸಾಕ್ಷಿ ಸಂಗ್ರಹಿಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು. ಕೊಲೆ ಆರೋಪಿಗಳ ಪೈಕಿ ಗುರುವಾಯನಕೆರೆಯ ವಿಶ್ವನಾಥ ಯಾನೆ ವಿಸಿಲ್ ವಿಶ್ವ ಎಂಬವರು ಜೈಲಿನಿಂದ ಹೊರ ಬಂದು ಕೆಲವು ಸಮಯಗಳಾದ ಬಳಿಕ ಅವರು ಬೆಳ್ತಂಗಡಿ ಮೂರು ಮಾರ್ಗ ಬಳಿಯ ಹೊಟೇಲೊಂದರಲ್ಲಿ ಟೀ ಕುಡಿಯುತ್ತಿದ್ದ ವೇಳೆ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಕೊಲೆಯಾಗಿದ್ದ ಧನ್ಯಕುಮಾರ್ ಅವರ ಮಗ ಸುನೀಶ್ ಮತ್ತಿತರರು ವಿಸಿಲ್ ವಿಶ್ವನನ್ನು ಕೊಲೆ ಮಾಡಿದ್ದರು ಎಂದು ಪ್ರಕರಣ ದಾಖಲಾಗಿತ್ತು.
೮ ಮಂದಿಯ ವಿರುದ್ಧ ದೂರು ನೀಡಲಾಗಿತ್ತು: ಕೆಲವು ವರ್ಷಗಳಿಂದ ಧನ್ಯ ಕುಮಾರ್ ಹಾಗೂ ಸ್ಥಳೀಯ ನಿವಾಸಿ ಲಲಿತಮ್ಮ ಅವರ ನಡುವೆ ನಡೆಯುತ್ತಿದ್ದ ಜಾಗದ ವಿವಾದವೇ ಧನ್ಯಕುಮಾರ್ ಅವರ ಕೊಲೆಗೆ ಕಾರಣವಾಗಿತ್ತು. ಧನ್ಯ ಕುಮಾರ್ ಅವರ ಪುತ್ರ ಸುರೇಶ್ ಕುಮಾರ್ ಅವರು ಸ್ಥಳೀಯರಾದ ಲಲಿತಮ್ಮ ಅವರ ಪುತ್ರರಾದ ಚಿದಾನಂದ, ಗೋಪಾಲ, ಅಶೋಕ ಯಾನೆ ಮುದ್ದು, ದಯಾನಂದ ಹಾಗೂ ಸ್ಥಳೀಯರಾದ ವಿಶ್ವನಾಥ, ಮೋಹನ್ ಮತ್ತು ಸುರೇಶ ಎಂಬವರ ಮೇಲೆ ಸಂಶಯ ವ್ಯಕ್ತಪಡಿಸಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಬೆಳ್ತಂಗಡಿ ಪೊಲೀಸರು ಕೇಸು ದಾಖಲಿಸಿಕೊಂಡು ಹಲವು ಮಂದಿಯನ್ನು ವಿಚಾರಣೆ ನಡೆಸಿದ್ದರು. ಕುವೆಟ್ಟು ಗ್ರಾಮದ ಪುಟ್ಟಣ್ಣ ರಾಯ ಎಂಬವರು ಹೊಂದಿದ್ದ ೨೪ ಎಕ್ರೆ ಜಾಗದಲ್ಲಿ ಅವರ ಪುತ್ರರಾದ ರಾಮರಾಯ, ರುದ್ರೋಜಿರಾಯ ಹಾಗೂ ನರಸಿಂಹರಾಯ ಅವರಿಗೆ ಸೇರಿದ ಜಾಗದಲ್ಲಿ ಸುಮಾರು ೧೦.೩೧ ಎಕ್ರೆ ಜಾಗವನ್ನು ಧನ್ಯ ಕುಮಾರ್ ಅವರು ಖರೀದಿಸಿದ್ದರು. ಇದಕ್ಕೆ ದಾಖಲೆ ಪತ್ರವನ್ನು ಹೊಂದಿದ್ದರು. ಖರೀದಿಯ ಸಂದರ್ಭದಲ್ಲಿ ಪುಟ್ಟಣ್ಣರಾಯರ ಕೊನೆಯ ಪುತ್ರ ಗಣೇಶ್ ರಾಯ ಅವರು ಇದಕ್ಕೆ ಆಕ್ಷೇಪ ಸೂಚಿಸಿದ್ದರಿಂದ ನಾಲ್ಕು ಮಂದಿ ಪುತ್ರರಿಗೆ ತಲಾ ಆರು ಎಕ್ರೆ ಯಂತೆ ಪಾಲು ಮಾಡಿ ಈ ಮಾರಾಟದ ಕರಾರು ಪತ್ರವನ್ನು ಆ ಸಂದರ್ಭ ಮಾಡಲಾಗಿತ್ತು.
ಇದಾದ ನಂತರ ಗಣೇಶ್ ರಾಯರ ಪತ್ನಿ ಲಲಿತಮ್ಮ ಮತ್ತು ಮಕ್ಕಳು ಹಾಗೂ ಧನ್ನ ಕುಮಾರ್ ಅವರ ನಡುವೆ ಜಾಗ ವಿವಾದ ಹುಟ್ಟಿ ನ್ಯಾಯಾಲಯದ ಕಟಕಟೆಗೇರಿತ್ತು. ೨೦೦೪ರ ನವಂಬರ್ ತಿಂಗಳಲ್ಲಿ ಲಲಿತಮ್ಮ ಮತ್ತು ಪುಟ್ಟಣ್ಣರಾಯರ ಮಕ್ಕಳ ನಡುವೆ ಮತ್ತೊಂದು ಆಸ್ತಿಪಾಲು ಪಟ್ಟಿ ನಡೆಯಿತೆನ್ನಲಾಗಿದ್ದು ಈ ವಿಷಯವನ್ನು ಅರಿತ ಧನ್ಯ ಕುಮಾರ್ ಇದರ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡಲು ತಯಾರಿ ನಡೆಸಿದ್ದರು. ಈ ಎರಡು ಕುಟುಂಬಗಳ ನಡುವೆ ಮತ್ತೆ ಪೈರು ಕಟಾವು ವಿವಾದ ನಡೆದಿತ್ತು. ತಾನು ಖರೀದಿಸಿದ್ದ ಜಾಗವೆಂದು ಧನ್ಯ ಕುಮಾರ್ ಅವರು ಪೈರನ್ನು ಕಟಾವು ಮಾಡಿ ಮನೆಗೆ ತಂದು ಹಾಕಿದ್ದರೆ ಪಾಲುಪಟ್ಟಿ ಪ್ರಕಾರ ಈ ಜಾಗ ತಮಗೆ ಸೇರಿದ್ದೆಂದು ಲಲಿತಮ್ಮ ಮತ್ತು ಮಕ್ಕಳು ವಾದಿಸಿ ಪೈರು ಕಟಾವು ಮಾಡಿದ್ದರು. ಇದನ್ನು ಧನ್ಯ ಕುಮಾರ್ ವಶಪಡಿಸಿಕೊಂಡಿದ್ದರು. ಈ ಸಮಯ ಎರಡು ಕಡೆಯವರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು ದ್ವೇಷ ಹುಟ್ಟಿಕೊಂಡಿತ್ತು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು ಎಂದು ತಿಳಿದು ಬಂದಿದೆ.
ಮೆಸ್ಕಾಂ ಗ್ಯಾಂಗ್ಮೆನ್ ಆಗಿ ಪರಿಗಣಿಸಲು ಹೈಕೋರ್ಟ್ ಆದೇಶ: ಧನ್ಯಕುಮಾರ್ ಅವರನ್ನು ಕೊಲೆ ಮಾಡಿದ ಆರೋಪದಲ್ಲಿ ವಿಚಾರಣಾಧೀನ ಕೈದಿಗಳಾಗಿ ನ್ಯಾಯಾಂಗ ಬಂಧನದಲ್ಲಿದ್ದು ಕೆಲಸಕ್ಕೆ ಸುದೀರ್ಘ ಅವಧಿಯಲ್ಲಿ ಗೈರು ಹಾಜರಾಗಿದ್ದ ಅಶೋಕ್ ಮತ್ತು ಗೋಪಾಲಕೃಷ್ಣ ಅವರನ್ನು ಮತ್ತೆ ಮಸ್ಕಾಂ ಗ್ಯಾಂಗ್ಮೆನ್ಗಳು ಎಂದು ಪರಿಗಣಿಸಲು ಇದೀಗ ಹೈಕೋರ್ಟ್ ಆದೇಶ ಮಾಡಿದೆ. ಮೆಸ್ಕಾಂನ ಗ್ಯಾಂಗ್ಮೆನ್ಗಳಾಗಿದ್ದ ಅಶೋಕ್ ಮತ್ತು ಗೋಪಾಲಕೃಷ್ಣ ಅವರನ್ನು ಅಧಿಕೃತ ವಿಚಾರಣೆ ನಡೆಸದೆ ಸೇವೆಯಿಂದ ವಜಾಗೊಳಿಸಿದ್ದ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಆದೇಶ ರದ್ದುಗೊಳಿಸಿರುವ ಹೈಕೋರ್ಟ್ ಗ್ಯಾಂಗ್ಮೆನ್ಗಳಾಗಿ ಅಶೋಕ್ ಹಾಗೂ ಗೋಪಾಲಕೃಷ್ಣ ಅವರನ್ನು ಮತ್ತೆ ಸೇವೆಗೆ ಪರಿಗಣಿಸಬೇಕೆಂದು ಆದೇಶದಲ್ಲಿ ತಿಳಿಸಿದೆ. ಮೆಸ್ಕಾಂ ಅಧಿಕಾರಿಗಳು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನು ಸಿವರಾಮನ್ ಮತ್ತು ಟಿ.ಎಂ.ನದಾಫ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಕಾರ್ಮಿಕರನ್ನು ಸೇವೆಯಿಂದ ವಜಾಗೊಳಿಸಬೇಕಾದಲ್ಲಿ ಪ್ರೊಬೇಷನರಿ ಮಜ್ದೂರ್ ನಿಯಮಗಳು ೧೯೯೭ರ ಪ್ರಕಾರ ಕಡ್ಡಾಯವಾಗಿ ಮೌಖಿಕ ವಿಚಾರಣೆ ನಡೆಸಬೇಕು. ಆದರೆ ಈ ಪ್ರಕರಣದಲ್ಲಿ ವಿಚಾರಣೆ ನಡೆಸಿಲ್ಲ.
ಇಬ್ಬರೂ ಗ್ಯಾಂಗ್ಮೆನ್ಗಳು ನ್ಯಾಯಾಂಗ ಬಂಧನದಲ್ಲಿದ್ದ ಕಾರಣ ಕೆಲಸಕ್ಕೆ ಗೈರು ಹಾಜರಾಗಿದ್ದರು. ಇದು ಅವರ ನಿಯಂತ್ರಣ ಮೀರಿದ ಅನಿವಾರ್ಯ ಪರಿಸ್ಥಿತಿಯಾಗಿದ್ದರಿಂದ ಅದನ್ನು ಸ್ವಯಂಪ್ರೇರಿತವಾಗಿ ಕೆಲಸ ಬಿಟ್ಟು ಹೋದ ಪ್ರಕರಣವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ. ಗೈರು ಹಾಜರಿಯು ಉzಶಪೂರ್ವಕವಾಗಿದೆಯೇ ಅಥವಾ ಅನಿವಾರ್ಯ ಕಾರಣಗಳಿಂದಾಗಿದೆಯೇ ಎಂಬುದನ್ನು ಇಲಾಖಾ ತನಿಖೆಯ ಮೂಲಕ ಸಾಬೀತುಪಡಿಸದೆ ನೇರ ವಜಾ ಮಾಡುವುದು ಸರಿಯಾದ ಕ್ರಮವಲ್ಲ ಎಂದು ತಿಳಿಸಿರುವ ನ್ಯಾಯಪೀಠ ಇಬ್ಬರೂ ನೌಕರರು ಜಾಮೀನಿನ ಮೇಲೆ ಬಿಡುಗಡೆಯಾದ ದಿನಾಂಕದಿಂದ ಮರು ನೇಮಕವಾಗುವವರೆಗಿನ ಅವಧಿಗೆ ಶೇ.೫೦ರಷ್ಟು ಹಿಂಬಾಕಿ ವೇತನ ಮತ್ತು ಸೇವಾ ಮುಂದುವರಿಕೆ ನೀಡಬೇಕು ಎಂದು ಮೆಸ್ಕಾಂಗೆ ನಿರ್ದೇಶನ ನೀಡಿದೆ. ಅರ್ಜಿದಾರರು ೨೦೦೫ರಲ್ಲಿ ಸೇವೆಯಿಂದ ವಜಾಗೊಂಡಿದ್ದರೂ ೨೦೧೩ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದ್ದರಿಂದ ಅವರ ಮನವಿ ಪರಿಗಣಿಸಬಾರದೆಂಬ ಮೆಸ್ಕಾಂ ಪರ ವಕೀಲರ ವಾದವನ್ನು ತಿರಸ್ಕರಿಸಿರುವ ನ್ಯಾಯಪೀಠ ಇಬ್ಬರೂ ಕಾರ್ಮಿಕರು ಕ್ರಿಮಿನಲ್ ಪ್ರಕರಣದಿಂದ ಖುಲಾಸೆಗೊಳ್ಳುವವರೆಗೆ ಕಾಯಬೇಕಾಗಿತ್ತು ಮತ್ತು ಖುಲಾಸೆಗೊಂಡ ಕೂಡಲೇ ಮನವಿ ಸಲ್ಲಿಸಿದ್ದಾರೆ. ಆದ್ದರಿಂದ ವಿಳಂಬದ ವಾದವನ್ನು ಒಪ್ಪಲಾಗದು ಎಂದು ಪೀಠ ತಿಳಿಸಿದೆ. ಬೆಳ್ತಂಗಡಿ ಉಪ ವಿಭಾಗದ ಮೆಸ್ಕಾಂನಲ್ಲಿ ೧೯೯೮ರಿಂದ ತಾತ್ಕಾಲಿಕ ಗ್ಯಾಂಗ್ಮೆನ್ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ಗೋಪಾಲಕೃಷ್ಣ ಮತ್ತು ಕೆ.ಅಶೋಕ್ ಕುಮಾರ್ ಎಂಬವರು
೨೦೦೫ರ ಜನವರಿ ೨ರಂದು ನಡೆದ ಧನ್ಯಕುಮಾರ್ ಅವರ ಕೊಲೆ ಪ್ರಕರಣದಲ್ಲಿ ಪೊಲೀಸರಿಂದ ಬಂಧಿತರಾಗಿ ಜೈಲು ಸೇರಿದ್ದರು. ಈ ಪೈಕಿ ಗೋಪಾಲಕೃಷ್ಣ ಅವರು ನಾಲ್ಕು ತಿಂಗಳ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದು ಅಶೋಕ್ ಕುಮಾರ್ ಸುಮಾರು ಒಂದೂವರೆ ವರ್ಷ ನ್ಯಾಯಾಂಗ ಬಂಧನದಲ್ಲಿದ್ದು ಬಳಿಕ ಬಿಡುಗಡೆಯಾಗಿದ್ದರು. ಸತತ ಗೈರು ಹಾಜರಿ ಸಂಬಂಧ ಹಲವು ಬಾರಿ ನೋಟಿಸ್ ನೀಡಿದ್ದ ಮೆಸ್ಕಾಂ ಆಡಳಿತ ಮಂಡಳಿ ಅನಧಿಕೃತ ಗೈರು ಹಾಜರಿ ಎಂದು ಪರಿಗಣಿಸಿ ೨೦೦೫ರಲ್ಲಿ ಇವರಿಬ್ಬರನ್ನೂ ಸೇವೆಯಿಂದ ವಜಾಗೊಳಿಸಿತ್ತು. ಈ ನಡುವೆ ಇಬ್ಬರು ಕಾರ್ಮಿಕರು ಕ್ರಿಮಿನಲ್ ಪ್ರಕರಣದಿಂದ ಖುಲಾಸೆಗೊಂಡ ನಂತರ ತಮ್ಮನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಮೆಸ್ಕಾಂಗೆ ಮನವಿ ಸಲ್ಲಿಸಿದ್ದರು. ಆದರೆ ಮೆಸ್ಕಾಂ ಈ ಮನವಿ ತಿರಸ್ಕರಿಸಿದ ಕಾರಣ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಇಬ್ಬರೂ ಗ್ಯಾಂಗ್ಮೆನ್ಗಳನ್ನು ಸೇವೆಗೆ ಮರು ಸೇರ್ಪಡೆ ಮಾಡಿ ಜಾಮೀನು ಪಡೆದ ದಿನದಿಂದ ಬಾಕಿ ವೇತನದ ಶೇ.೫೦ರಷ್ಟು ಬಿಡುಗಡೆ ಮಾಡಬೇಕು ಎಂದು ಸೂಚನೆ ನೀಡಿತ್ತು. ಅದನ್ನು ಪ್ರಶ್ನಿಸಿ ಮೆಸ್ಕಾಂ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಈ ಆದೇಶ ನೀಡಿದೆ.









