ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯ ಸ್ಫೋಟಿಸಲು ಸಂಚು ರೂಪಿಸಿದ್ದಮಂಗಳೂರಿನ ಕುಕ್ಕರ್ ಬಾಂಬರ್‌ಗೆ ೧೦ ವರ್ಷ ಶಿಕ್ಷೆ: ಎನ್‌ಐಎ ಕೋರ್ಟ್ ತೀರ್ಪು

0

ಬೆಳ್ತಂಗಡಿ: ನಾಲ್ಕು ವರ್ಷಗಳ ಹಿಂದೆ ಮಂಗಳೂರಿನ ಕದ್ರಿ ಮತ್ತು ಬೆಳ್ತಂಗಡಿಯ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯ ಸಹಿತ ದಕ್ಷಿಣ ಭಾರತದ ಪ್ರಮುಖ ದೇಗುಲಗಳಲ್ಲಿ ಬಾಂಬ್ ಸ್ಪೋಟಿಸಲು ಸಂಚು ರೂಪಿಸಿದ್ದ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ ಮೊಹಮ್ಮದ್ ಶಾರೀಕ್‌ಗೆ ಎನ್‌ಐಎ ವಿಶೇಷ ನ್ಯಾಯಾಲಯ ೧೦ ವರ್ಷ ಕಠಿನ ಕಾರಾಗೃಹ ಶಿಕ್ಷೆ ಜತೆಗೆ ೯೪ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮೊಹಮ್ಮದ್ ಶಾರೀಕ್ ೨೦೨೫ರ ಡಿಸೆಂಬರ್‌ನಲ್ಲೇ ಎನ್‌ಐಎ ವಿಶೇಷ ನ್ಯಾಯಲಯಕ್ಕೆ ಬಿಎನ್‌ಎನ್‌ಎಸ್ ೨೨೯ ಅಡಿಯಲ್ಲಿ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿದ್ದ. ಅದನ್ನು ಪುರಸ್ಕರಿಸಿದ್ದ ಎನ್‌ಐಎ ವಿಶೇಷ ನ್ಯಾಯಾಲಯ ಕಾಯ್ದಿರಿಸಿದ್ದ ಶಿಕ್ಷೆ ಪ್ರಮಾಣವನ್ನು ಸೋಮವಾರ ಪ್ರಕಟಿಸಿದೆ.

ಈ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ೧೭೦ ಮಂದಿ ಸಾಕ್ಷಿಗಳ ಹೇಳಿಕೆ ಉಲ್ಲೇಖಿಸಿ ಆರೋಪಪಟ್ಟಿ ಸಲ್ಲಿಸಿದ್ದರು. ಈಗಾಗಲೇ ೪೬ಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ. ಈ ಮಧ್ಯೆ ಎನ್‌ಐಎ ಅಧಿಕಾರಿಗಳು ತನ್ನ ವಿರುದ್ಧ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿರುವ ಆರೋಪವನ್ನು ತಾನು ಒಪ್ಪಿಕೊಳ್ಳುತ್ತೇನೆ ಎಂದು ಕಳೆದ ಡಿಸೆಂಬರ್‌ನಲ್ಲಿಯೇ ಶಾರೀಕ್ ಅರ್ಜಿ ಸಲ್ಲಿಸಿದ್ದ. ಆದರೆ ಪ್ರಕರಣದ ವಿಚಾರಣೆ ವೇಳೆ ೨೦೧೪ರಲ್ಲಿ ನೀನು ತಪ್ಪೊಪ್ಪಿಕೊಂಡಿರಲಿಲ್ಲ. ಈಗ ಏಕಾಏಕಿ ಒಪ್ಪಿಕೊಳ್ಳಲು ಕಾರಣವೇನು ಎಂದು ಪ್ರಶ್ನಿಸಿದ್ದ ನ್ಯಾಯಾಲಯ ತಪ್ಪೊಪ್ಪಿಗೆ ಹೇಳಿಕೆ ಮರು ಪರಿಶೀಲಿಸಿಕೊಳ್ಳಲು ಅವಕಾಶ ನೀಡಿತ್ತು. ಅಂತಿಮವಾಗಿ ತಾನು ತಪ್ಪು ಮಾಡಿzನೆ ಎಂದು ಅಪರಾಧಿ ಪುನರುಚ್ಚರಿಸಿರುವುದರಿಂದ ಕೋರ್ಟ್ ಆ ಅರ್ಜಿಯನ್ನು ಪುರಸ್ಕರಿಸಿ ಶಿಕ್ಷೆ ಹಾಗೂ ದಂಡ ವಿಧಿಸಿದೆ. ೨೦೨೨ರ ನವೆಂಬರ್ ೧೯ರಂದು ಮಂಗಳೂರಿನ ಕಂಕನಾಡಿ ಗರಡಿ ಬಳಿ ಪುರುಷೋತ್ತಮ ಪೂಜಾರಿ ಎಂಬವರ ರಿಕ್ಷಾದಲ್ಲಿ ಹೋಗುತ್ತಿದ್ದ ವೇಳೆ ಕುಕ್ಕರ್ ಬಾಂಬ್ ಸ್ಫೋಟಗೊಂಡು ದೇಶ ವಿದೇಶದಾದ್ಯಂತ ದೊಡ್ಡ ಸುದ್ದಿಯಾಗಿತ್ತು.

ಮಂಗಳೂರಿನಲ್ಲಿ ಸ್ಫೋಟ: ಮಂಗಳೂರಿನ ಕಂಕನಾಡಿ ಬಳಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಶಾರೀಕ್ ಮತ್ತು ಆಟೋ ಚಾಲಕ ಪುರುಷೋತ್ತಮ ಪೂಜಾರಿ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಶಾರೀಕ್‌ನನ್ನು ಸ್ಥಳೀಯ ಪೊಲೀಸರು ಹಾಗೂ ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ಅನಂತರ ಯುಎಪಿಎ ಅಡಿ ಪ್ರಕರಣ ದಾಖಲಿಸಲಾಗಿತ್ತು. ಐಸಿಸ್ ಪರವಾಗಿ ಈತ ತಂಡ ಕಟ್ಟಿಕೊಂಡು ಕೆಲಸ ಮಾಡಿದ್ದ. ೨೦೨೩ರ ಡಿಸೆಂಬರ್‌ನಲ್ಲಿ ಎನ್‌ಐಎ ಅಧಿಕಾರಿಗಳು ಮೊಹಮ್ಮದ್ ಶಾರೀಕ್ ಮತ್ತು ಈತನಿಗೆ ಸ್ಪೋಟಕ ವಸ್ತುಗಳನ್ನು ಪೂರೈಕೆ ಮಾಡಿದ್ದ ಸಹಚರ ಸೈಯದ್ ಯಾಸೀನ್ ವಿರುದ್ಧ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣ ಸಂಬಂಧ ಎನ್‌ಐಎ ಪರ ವಾದ ಮಂಡಿಸಿದ್ದ ಸರಕಾರಿ ಹಿರಿಯ ಅಭಿಯೋಜಕ ಪಿ. ಪ್ರಸನ್ನಕುಮಾರ್ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ಇಲ್ಲವೇ ೨೫-೩೦ ವರ್ಷ ಜೈಲು ಶಿಕ್ಷೆ ವಿಧಿಸಬೇಕು ಎಂದು ಕೋರಿದ್ದರು. ಆದರೆ ನ್ಯಾಯಾಲಯ ಅಪರಾಧಿಗೆ ೧೦ ವರ್ಷ ಶಿಕ್ಷೆ ವಿಧಿಸಿದೆ. ಇದನ್ನು ಪ್ರಶ್ನಿಸಿ ಎನ್‌ಐಎ ಸದ್ಯದಲ್ಲೇ ಮೇಲ್ಮನವಿ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.

ಶಿವಮೊಗ್ಗ ಐಸಿಸ್ ಮಾಡ್ಯೂಲ್ ಬೆಳಕಿಗೆ: ಅಪರಾಧಿ ಶಾರೀಕ್‌ನ ವಿಚಾರಣೆಯಲ್ಲಿ ಕೆಲವು ಸ್ಫೋಟಕ ವಿಷಯಗಳು ಬೆಳಕಿಗೆ ಬಂದಿದ್ದವು. ೨೦೨೦ರಲ್ಲಿ ಮಂಗಳೂರಿನ ಗೋಡೆ ಬರಹ ಪ್ರಕರಣದ ಪ್ರಮುಖ ಅಪರಾಧಿಯಾಗಿದ್ದ ಮೊಹಮ್ಮದ್ ಶಾರೀಕ್‌ನನ್ನು ಬಂಧಿಸಲಾಗಿತ್ತು. ೧೦ ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದ ಬಳಿಕ ಬಿಡುಗಡೆಯಾಗಿ ಬಂದ ಈತ ಸುಮಾರು ೧೨ ಮಂದಿಯ ತಂಡವನ್ನು ಕಟ್ಟಿಕೊಂಡು ೨೦೨೨ರ ಸೆಪ್ಟೆಂಬರ್‌ನಲ್ಲಿ ತುಂಗಾ ನದಿ ತೀರದಲ್ಲಿ ಐಇಡಿ ಪ್ರಾಯೋಗಿಕ ಸ್ಪೋಟ ಮಾಡಿದ್ದ. ಭಯೋತ್ಪಾದನೆ, ಕ್ರಿಮಿನಲ್ ಪಿತೂರಿ, ಕೊಲೆ ಯತ್ನ, ನಕಲಿ ದಾಖಲೆಗಳ ಸೃಷ್ಟಿ ಮಾಡಿದ ಆರೋಪಗಳು ಈತನ ಮೇಲಿತ್ತು. ೨೦೨೦ರಿಂದ ೨೦೨೨ರ ಅವಧಿಯಲ್ಲಿ ಕ್ರಿಪ್ರೋ ಕರೆನ್ಸಿ ವ್ಯವಹಾರ ನಡೆಸಿದ್ದ ಆರೋಪ ಕೂಡ ಈತನ ಮೇಲಿದೆ.

ಈತ ಐಸಿಎಸ್ ಹಾಗೂ ಸಿಮಿ ಉಗ್ರ ಸಂಘಟನೆಗಳಿಂದ ಪ್ರೇರಿತನಾಗಿದ್ದ ಈತ ಶಿವಮೊಗ್ಗ ಐಸಿಸ್ ಮಾಡ್ಯೂಲ್ ಸದಸ್ಯನಾಗಿದ್ದ. ಈತನ ಸಹಚರರೇ ೨೦೨೪ರ ಮಾ. ೧ರಂದು ನಡೆದ ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ರೂವಾರಿಗಳೆಂಬುದು ಎನ್‌ಐಎ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

೯೦ ನಿಮಿಷ ಬದಲಿಗೆ ೯ ನಿಮಿಷಕ್ಕೆ ಸಮಯ ನಿಗದಿ ಮಾಡಿದ್ದ ಶಾರೀಕ್!: ಪ್ರೇಮ್‌ರಾಜ್ ಹುಟಗಿ ಅಲಿಯಾಸ್ ಪ್ರೇಮರಾಜ್, ಗೌಳಿ ಅರುಣ್ ಕುಮಾರ್ ಎಂಬ ಹೆಸರಿನಲ್ಲಿ ಕಾರ್ಯಾಚರಿಸುತ್ತಿದ್ದ ಮೊಹಮ್ಮದ್ ಶಾರೀಕ್ ದಕ್ಷಿಣ ಕನ್ನಡದ ಧರ್ಮಸ್ಥಳ, ಕದ್ರಿ ಸಹಿತ ದಕ್ಷಿಣ ಭಾರತದ ಪ್ರಮುಖ ದೇವಾಲಯಗಳಲ್ಲಿ ಬಾಂಬ್ ಸ್ಫೋಟಗೊಳಿಸುವ ಸಂಚು ರೂಪಿಸಿದ್ದ. ಈ ಸ್ಥಳಗಳಿಗೆ ಭೇಟಿ ಕೂಡ ನೀಡಿದ್ದ. ಅದರ ಭಾಗವಾಗಿ ಕದ್ರಿ ಮಂಜುನಾಥ ಸ್ವಾಮಿ ದೇವಾಲಯ ಸ್ಫೋಟಿಸಲು ಕುಕ್ಕರ್‌ನಲ್ಲಿ ಸುಧಾರಿತ ಸ್ಪೋಟಕ ಸಾಧನ ಟೈಮರ್‌ಫಿಕ್ಸ್ ಮಾಡಿದ್ದ. ೯೦ ನಿಮಿಷಗಳಿಗೆ ಫಿಕ್ಸ್ ಮಾಡುವ ಬದಲು ೯ ನಿಮಿಷಕ್ಕೆ ತಪ್ಪಾಗಿ ನಿಗದಿಪಡಿಸಿದ್ದರಿಂದ ಆಟೋದಲ್ಲಿ ತೆರಳುವಾಗ ಮಾರ್ಗ ಮಧ್ಯೆ ಸ್ಫೋಟಗೊಂಡಿತ್ತು ಎಂದು ಆರೋಪಪಟ್ಟಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿತ್ತು.

LEAVE A REPLY

Please enter your comment!
Please enter your name here