







ವೇಣೂರು, ಏಪ್ರಿಲ್ 2026: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐಯಲ್ಲಿ 2026ರಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗಾಗಿ ಪ್ರಖ್ಯಾತ ಕಂಪೆನಿಯಾದ ಪೋರ್ವಿಯಾ ಅಟೋಮೊಟಿವ್ಸ್ ಪ್ರೈ. ಲಿ. ವತಿಯಿಂದ ವೆಲ್ಡರ್ ವೃತ್ತಿಯ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನವನ್ನು ಆಯೋಜಿಸಲಾಯಿತು.
ಕಂಪೆನಿಯ ಪ್ರೊಡಕ್ಷನ್ ಮ್ಯಾನೇಜರ್ ಶ್ರೀ ಕಾರ್ತಿಕೇಯನ್ ಹಾಗೂ ಸೂಪರ್ವೈಸರ್ ಶ್ರೀ ಜಯರಾಜ್ ಅವರು ಸಂದರ್ಶನವನ್ನು ನಡೆಸಿದರು. ವೆಲ್ಡರ್ ವೃತ್ತಿಯ ಒಟ್ಟು 34 ವಿದ್ಯಾರ್ಥಿಗಳಿಗೆ ಆಯ್ಕೆ ಸಂದರ್ಶನ ನಡೆಯಿತು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕಾರ್ತಿಕೇಯನ್ ಅವರು, ವೇಣೂರಿನ ಸಂಸ್ಥೆಯಲ್ಲಿ ಲಭ್ಯವಿರುವ ಸೌಲಭ್ಯಗಳು ಅತ್ಯಾಧುನಿಕವಾಗಿದ್ದು, ವ್ಯವಸ್ಥಿತ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.


ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಜಗತ್ತಿನ ಯಾವುದೇ ಭಾಗದಲ್ಲೂ ಆತ್ಮವಿಶ್ವಾಸದಿಂದ ಕೆಲಸ ಮಾಡುವ ಸಾಮರ್ಥ್ಯ ಬೆಳೆಯುತ್ತದೆ ಎಂದರು. ಸಹಜ ಮತ್ತು ಸುಂದರವಾದ ಪರಿಸರದಲ್ಲಿ ಶಿಸ್ತಿನೊಂದಿಗೆ ನೀಡಲಾಗುವ ತರಬೇತಿ ಇಂದಿನ ಕೈಗಾರಿಕಾ ಕ್ಷೇತ್ರದ ಅಗತ್ಯಗಳಿಗೆ ಹೊಂದಿಕೊಳ್ಳುತ್ತದೆ ಎಂಬುದಾಗಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ವಿಶ್ವೇಶ್ವರ ಪ್ರಸಾದ್ ಕೆ. ಆರ್. ಉಪಸ್ಥಿತರಿದ್ದರು. ಸಂಸ್ಥೆಯ ನೇಮಕಾತಿ ಅಧಿಕಾರಿ ಶ್ರೇಯಸ್ ಜೈನ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕಿರಿಯ ತರಬೇತಿ ಅಧಿಕಾರಿಗಳಾದ ದಯಾನಂದ ಭಂಡಾರಿ ಹಾಗೂ ವಿನಯ ಅವರು ಸಂದರ್ಶನ ಪ್ರಕ್ರಿಯೆಯಲ್ಲಿ ಸಹಕರಿಸಿದರು.









