ಜೀವ ಬೆದರಿಕೆ-ತಾಯಿಗೆ ನಿಂದನೆ: ತಿಮರೋಡಿ ವಿರುದ್ಧ ಕಲಾವಿದರ ಆಕ್ರೋಶ

0

ಬೆಳ್ತಂಗಡಿ: ಹಾಸ್ಯ ಪ್ರಹಸನವೊಂದನ್ನು ಮುಂದಿಟ್ಟುಕೊಂಡು ಮಹೇಶ್ ಶೆಟ್ಟಿ ತಿಮರೋಡಿ ಅವರು ಕಲಾವಿದರಿಗೆ ಜೀವ ಬೆದರಿಕೆ ಹಾಕಿ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ ಎಂದು ಕಲಾವಿದರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳೂರಿನ ಪತ್ರಿಕಾಭವನದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಲಾವಿದರಾದ ಸುಂದರ ರೈ ಮಂದಾರ ಹಾಗೂ ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಅವರು ಕಲಾವಿದರು ಸಮಾಜದ ವಿಡಂಬನೆ ಮಾಡುವುದು ಸಹಜ. ಆದರೆ, ವೈಯಕ್ತಿಕವಾಗಿ ಗುರಿ ಮಾಡಿ ಕುಟುಂಬದವರನ್ನು ಎಳೆದು ತರುತ್ತಿರುವುದು ಖಂಡನೀಯ ಎಂದು ಹೇಳಿದರು.

ಪ್ರಜ್ವಲ್ ಕುಮಾರ್ ಅವರಿಗೆ ಕರೆ ಮಾಡಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅತ್ಯಂತ ತುಚ್ಛ ಭಾಷೆಯಲ್ಲಿ ನಿಂದಿಸಿದ್ದಾರೆ. ಒಬ್ಬ ಹೆಣ್ಣಿನ ನ್ಯಾಯಕ್ಕಾಗಿ ಹೋರಾಡುತ್ತಿದ್ದೇನೆ ಎಂದು ಹೇಳಿಕೊಳ್ಳುವ ವ್ಯಕ್ತಿ ಇನ್ನೊಬ್ಬ ಕಲಾವಿದನ ತಾಯಿಯ ಬಗ್ಗೆ ಅಶ್ಲೀಲವಾಗಿ ಮಾತನಾಡಿರುವುದು ಅವರ ಸಂಸ್ಕಾರವನ್ನು ತೋರಿಸುತ್ತದೆ ಎಂದು ಸುಂದರ ರೈ ಮಂದಾರ ಆಕ್ರೋಶ ವ್ಯಕ್ತಪಡಿಸಿದರು. ಕಲಾವಿದ ದಿನೇಶ್ ಕೊಡಪದವು ಮಾತನಾಡಿ ಸ್ಥಳೀಯ ವಾಹಿನಿಯಲ್ಲಿ ಬುರುಡೆ ಗ್ಯಾಂಗ್ ಪ್ರಹಸನ ಪ್ರಸಾರವಾಗಿ ಆರು ತಿಂಗಳು ಕಳೆದಿವೆ. ಆ ಪ್ರಹಸನಕ್ಕೂ ಪ್ರಸ್ತುತ ನಡೆಯುತ್ತಿರುವ ಯಾವುದೇ ಸಾಮಾಜಿಕ ಹೋರಾಟಕ್ಕೂ ಸಂಬಂಧವಿಲ್ಲ. ಆದರೂ ತಿಮರೋಡಿ ಅವರು ಅದನ್ನು ತಮಗೆ ಅನ್ವಯಿಸಿಕೊಂಡು ನಮ್ಮನ್ನು ಗುರಿ ಮಾಡುತ್ತಿದ್ದಾರೆ.

ಬುರುಡೆ ಗ್ಯಾಂಗ್ ಎಂಬ ಹೆಸರಿಗೆ ಅವರು ಇಷ್ಟೊಂದು ಉದ್ವೇಗಕ್ಕೆ ಒಳಗಾಗುತ್ತಿದ್ದಾರೆ ಎಂದರೆ ಅವರು ಆ ಗುಂಪಿನ ಸದಸ್ಯರೆಂದು ತಾವೇ ಒಪ್ಪಿಕೊಂಡಂತಾಗುತ್ತದೆ ಎಂದು ಹೇಳಿದರು. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪುತ್ತೂರು ಗ್ರಾಮಾಂತರ ಮತ್ತು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಕರೆ ಮಾಡಿದ ಆಡಿಯೋ ರೆಕಾರ್ಡಿಂಗ್‌ಗಳನ್ನು ಸಾಕ್ಷ್ಯವಾಗಿ ಒಪ್ಪಿಸಲಾಗಿದೆ. ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಇಂತಹ ಕೃತ್ಯಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ನ್ಯಾಯಾಂಗ ವ್ಯವಸ್ಥೆಯ ಮೇಲೆ ತಮಗೆ ನಂಬಿಕೆ ಇದೆ ಎಂದು ಕಲಾವಿದರು ಇದೇ ವೇಳೆ ಹೇಳಿದರು. ಭಾಗವತ ಧೀರಜ್ ರೈ ಸಂಪಾಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here