ಅಂಬೇಡ್ಕರ್ ಚಿಂತನೆಗಳ ಅಳವಡಿಕೆಯಿಂದ ಜೀವನ ಪರಿಪೂರ್ಣ: ಡಿವೈಎಸ್ಪಿ ರೋಹಿಣಿ ಸಿ.ಕೆ. ಅಭಿಮತ

0

ಉಜಿರೆ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಉನ್ನತ ಚಿಂತನೆಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಬದುಕು ಪರಿಪೂರ್ಣಗೊಳ್ಳಲು ಸಾಧ್ಯ ಎಂದು ಬೆಳ್ತಂಗಡಿ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕಿ (ಡಿವೈಎಸ್ಪಿ) ರೋಹಿಣಿ ಸಿ.ಕೆ. ಅವರು ಹೇಳಿದರು.

ಉಜಿರೆ ಗ್ರಾಮದ ಗಾಂಧಿನಗರದಲ್ಲಿ ಆಯೋಜಿಸಲಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಅಡಿಯಲ್ಲಿ ಇಂದು ನಾವೆಲ್ಲರೂ ಸಹಬಾಳ್ವೆಯ ಜೀವನ ನಡೆಸುತ್ತಿದ್ದೇವೆ. ಅವರು ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ, ಬದಲಾಗಿ ವಿಶ್ವಮಾನವರಾಗಿದ್ದಾರೆ.

ಸಂವಿಧಾನ ನಮಗೆ ನೀಡಿರುವ ಹಕ್ಕುಗಳನ್ನು ಸರಿಯಾಗಿ ಅರಿತು ಗೌರವಯುತವಾಗಿ ಬದುಕಬೇಕು ಎಂದು ಅವರು ಕರೆ ನೀಡಿದರು.ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಸಂಘಟಿತ ಹೋರಾಟ ಅಗತ್ಯ:ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ ಮಾತನಾಡಿ, “ಜಗತ್ತಿನಾದ್ಯಂತ ಜನ್ಮದಿನಾಚರಣೆ ಆಚರಿಸಿಕೊಳ್ಳುವ ಅಪರೂಪದ ಮಹಾನ್ ಚೇತನ ಅಂಬೇಡ್ಕರ್. ಅವರನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳಿಸದೆ, ದಿನನಿತ್ಯ ಅವರ ತತ್ವಗಳನ್ನು ಅನುಸರಿಸಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಮಂತ್ರವನ್ನು ಕೇವಲ ಘೋಷಣೆಯಾಗಿ ನೋಡದೆ ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.

ಸಂವಿಧಾನದ ಪೀಠಿಕೆಯ ಆಶಯದಂತೆ ಸರ್ವಧರ್ಮ ಸಮನ್ವಯತೆಯೊಂದಿಗೆ ಸಾಮರಸ್ಯದ ಸಮಾಜ ಕಟ್ಟಲು ನಾವೆಲ್ಲರೂ ಬದ್ಧರಾಗೋಣ” ಎಂದರು.ಇದೇ ಸಂದರ್ಭದಲ್ಲಿ ಉಜಿರೆ ಗ್ರಾ.ಪಂ. ಮಾಜಿ ಅಧ್ಯಕ್ಷ ಶ್ರೀನಿವಾಸ್ ಕೆ. ಮಾತನಾಡಿ, ದಲಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಅಂಬೇಡ್ಕರ್ ನೀಡಿದ ಅಪಾರ ಕೊಡುಗೆಗಳನ್ನು ಸ್ಮರಿಸಿದರು.ವೇದಿಕೆಯಲ್ಲಿ ಯುವ ಉದ್ಯಮಿ ಇರ್ಫಾನ್ ಗಾಂಧಿನಗರ, ಗಾಂಧಿನಗರ ಖಲೀಫಾ ಜುಮ್ಮಾ ಮಸೀದಿ ಅಧ್ಯಕ್ಷ ಅಕ್ಬರ್ ಉಪಸ್ಥಿತರಿದ್ದರು. ವಿನಯ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here