ದಯಾ ವಿಶೇಷ ಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ

0

ಬೆಳ್ತಂಗಡಿ: ಸ್ಥಳೀಯ ದಯಾ ವಿಶೇಷ ಶಾಲೆಯಲ್ಲಿ ಭಾರತ ಸಂವಿಧಾನದ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನವನ್ನು ಏ.14 ರಂದು ಆಚರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಸಂವಿಧಾನ ಗ್ರಂಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ವಿದ್ಯಾರ್ಥಿಗಳೇ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಒಗ್ಗೂಡಿ ‘ಸಂವಿಧಾನದ ಪೀಠಿಕೆ’ಯನ್ನು ಪಠಿಸುವ ಮೂಲಕ ದೇಶದ ಆಶಯಗಳನ್ನು ಸ್ಮರಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಕರಕುಶಲ ಶಿಕ್ಷಕಿ ಹೇಮಾವತಿ ಅವರು, “ಅಂಬೇಡ್ಕರ್ ಅವರು ಕೇವಲ ಒಬ್ಬ ನಾಯಕರಲ್ಲ, ಅವರು ಸಮಾನತೆ ಮತ್ತು ನ್ಯಾಯದ ಪ್ರತೀಕ. ಶಿಕ್ಷಣದ ಮೂಲಕ ಹೇಗೆ ಜೀವನದಲ್ಲಿ ಬದಲಾವಣೆ ತರಬಹುದು ಎಂಬುದನ್ನು ಅವರು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಅವರು ನೀಡಿದ ಸಂವಿಧಾನವು ಇಂದು ಪ್ರತಿಯೊಬ್ಬ ನಾಗರಿಕನಿಗೂ ಗೌರವಯುತ ಬದುಕನ್ನು ಖಚಿತಪಡಿಸಿದೆ,” ಎಂದು ಅವರ ಸಾಧನೆಗಳನ್ನು ಸ್ಮರಿಸಿದರು.

ವೇದಿಕೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ದಿವ್ಯ ಟಿ.ವಿ. ಹಾಗೂ ಮಕ್ಕಳ ಪ್ರತಿನಿಧಿಗಳಾದ ಪವನ್ ಮತ್ತು ರೆನ್ಸನ್ ಉಪಸ್ಥಿತರಿದ್ದರು. ಶಾಲೆಯ ವಿಶೇಷ ಶಿಕ್ಷಕಿ ಪ್ರಿಯಾ ಅವರು ಕಾರ್ಯಕ್ರಮವನ್ನು ನಿರೂಪಿಸಿ, ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here