







ಬೆಳ್ತಂಗಡಿ: ಕಡಬ ತಾಲೂಕಿನ ನೆಲ್ಯಾಡಿ ನಿವಾಸಿಯಾಗಿದ್ದು ಬೆಳ್ತಂಗಡಿಯಲ್ಲಿ ಉದ್ಯಮಿಯಾಗಿದ್ದ ಸುದೀಪ್ ರೈ ಅವರ ಸಾವಿನ ಪ್ರಕರಣದಲ್ಲಿ ತನ್ನ ಯಾವುದೇ ಪಾತ್ರವಿಲ್ಲ. ಪ್ರಕರಣದ ಸಮಗ್ರ ತನಿಖೆ ನಡೆದು ಸತ್ಯಾಂಶ ಹೊರಬರಬೇಕು ಎಂದು ಅವರ ಪತ್ನಿ ಸೌಮ್ಯ ಶೆಟ್ಟಿ ಆಗ್ರಹಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸೌಮ್ಯ ಶೆಟ್ಟಿ ಅವರು ಪ್ರಕರಣದ ಕುರಿತಂತೆ ಸುದೀಪ್ ರೈ ಕುಟುಂಬ ತನ್ನ ಮೇಲೆ ಮಾಡುತ್ತಿರುವ ಆರೋಪಗಳು ನಿರಾಧಾರವಾಗಿದೆ. ಅವುಗಳಲ್ಲಿ ಸತ್ಯಾಂಶಗಳಿಲ್ಲ. ಅಲ್ಲದೆ ಸುದೀಪ್ ಅವರು ನೆಲ್ಯಾಡಿಯಲ್ಲಿರುವ ತನ್ನ ತಂದೆ ಮನೆಗೆ ಹೋದ ಸಂದರ್ಭದಲ್ಲಿಯೇ ಈ ದುರ್ಘಟನೆ ನಡೆದಿದೆ. ಗಂಡನ ಕಳೆದುಕೊಂಡ ದು:ಖದಲ್ಲಿರುವ ನನ್ನ ಮೇಲೆ ಅವರ ಕುಟುಂಬ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಹೀಗಾಗಿ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಸತ್ಯಾಂಶ ಹೊರಬಂದು ನನಗೆ ನ್ಯಾಯ ಸಿಗಬೇಕು. ಈ ಉದ್ದೇಶದಿಂದ ಈಗಾಗಲೇ ಕಾರ್ಕಳ ಪೊಲೀಸರಿಗೆ ದೂರು ನೀಡಿದ್ದೇನೆ. ಅಲ್ಲದೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಸುದೀಪ್ ರೈ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದಾಗ ಅಲ್ಲಿ ಅವರು ವಿಷ ಸೇವಿಸಿದ ವಿಷಯ ಬೆಳಕಿಗೆ ಬಂದಿದೆ. ಅಂತೆಯೇ ಅವರು ಕಾರ್ಕಳ ಪೊಲೀಸರ ಮುಂದೆ ಈ ಬಗ್ಗೆ ಹೇಳಿಕೆಯನ್ನು ಕೂಡಾ ನೀಡಿದ್ದಾರೆ.


ಈ ಸಂದರ್ಭದಲ್ಲಿ ನನಗೆ ತಿಳಿಸದೆ ಸುದೀಪ್ ಮನೆಯವರು ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾನು ಅಲ್ಲಿಗೆ ಹೋದಾಗ ಗಂಡನನ್ನು ನೋಡಲು ಅವರು ಬಿಡಲಿಲ್ಲ. ಮಾ.೨೯ರಂದು ನನ್ನ ಗಂಡ ತೀರಿಕೊಂಡ ಬಳಿಕವೂ ಕೊನೆಯ ಬಾರಿ ಮುಖವನ್ನು ನೋಡಲೂ ಬಿಡಲಿಲ್ಲ ಎಂದು ಸೌಮ್ಯ ಶೆಟ್ಟಿ ಹೇಳಿದರು. ನನ್ನ ಮೇಲೆ ಹನಿಟ್ರ್ಯಾಪ್, ಹಣ ಪಡೆದ ಆರೋಪ ಹೊರಿಸಿದ್ದಾರೆ. ಈ ಬಗ್ಗೆ ದಾಖಲೆ ಅವರಲ್ಲಿದ್ದರೆ ಅದನ್ನು ಬಹಿರಂಗ ಪಡಿಸಲಿ. ನನ್ನ ಗಂಡ ಸುದೀಪ್ ರೈ ಅವರಿಂದ ಯಾವುದೇ ಹಣ ಪಡೆದಿಲ್ಲ. ಬದಲಿಗೆ ನಾನೇ ಅವರಿಗೆ ಸಹಾಯ ಮಾಡಿದ್ದೇನೆ. ಅದಕ್ಕೆ ನನ್ನಲ್ಲಿ ದಾಖಲೆಯಿದೆ. ನಾವು ಒಟ್ಟಿಗೆ ಬಾಳುವ ಕನಸು ಕಂಡವರು. ಈ ದುರ್ಘಟನೆ ನನಗೆ ಅಘಾತ ತಂದಿದೆ. ನನ್ನ ಗಂಡನ ಸಾವಿನ ಬಗ್ಗೆ ನನಗೆ ನ್ಯಾಯ ಬೇಕು ಎಂದು ಅವರು ಹೇಳಿದರು.








