ಮಹಿಳೆಯ ಅತ್ಯಾಚಾರ-ಬೆದರಿಕೆ-೧೬ ಲಕ್ಷ ರೂ ಪಡೆದು ವಂಚನೆ-ದೂರು-ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧ ವೇಣೂರು ಠಾಣೆಯಲ್ಲಿ ಕೇಸ್ ದಾಖಲು-ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರ: ಗೃಹಸಚಿವ ಡಾ. ಜಿ. ಪರಮೇಶ್ವರ್ ಆದೇಶ

0

ಬೆಳ್ತಂಗಡಿ: ಈ ಹಿಂದೆ ಬೆಳ್ತಂಗಡಿಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದು ಪ್ರಸ್ತುತ ಮೂಡುಬಿದಿರೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಆಗಿದ್ದ ಸಂದೇಶ್ ಪಿ.ಜಿ. ಅವರ ವಿರುದ್ಧ ಶಿಕ್ಷಕಿಯೋರ್ವರನ್ನು ಅತ್ಯಾಚಾರ ಮಾಡಿದ ಆರೋಪದಡಿ ವೇಣೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ವೇಳೆ ಸಂದೇಶ್ ಪಿ.ಜಿ. ಅವರು ಬಲವಂತವಾಗಿ ಲೈಂಗಿಕ ಸಂಪರ್ಕ ಮಾಡಿದ್ದಾರೆ. ವಿರೋಧ ವ್ಯಕ್ತಪಡಿಸಿದಾಗ ಬೆದರಿಕೆ ಒಡ್ಡಿದ್ದಾರೆ ಮತ್ತು ಸಂತ್ರಸ್ತ ಮಹಿಳೆಯಿಂದ ಒಟ್ಟು ೧೬.೬೨ ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆ ಎಂದು ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು ಸಂದೇಶ್ ಅವರೊಂದಿಗೆ ಅವರ ಖಾಸಗಿ ಕಾರು ಚಾಲಕ ಅಕ್ಬರ್, ಪರಿಚಯದ ಸ್ಮಿತಾ ಹಾಗೂ ಸುನೀತಾ ಲೋಬೋ ಅವರನ್ನೂ ಆರೋಪಿಗಳು ಎಂದು ಹೆಸರಿಸಲಾಗಿದೆ.

ಸಂದೇಶ್ ಪಿ.ಜಿ. ಅವರು ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಆಗಿದ್ದ ವೇಳೆ ಸಂತ್ರಸ್ತ ಮಹಿಳೆ ಹಾಗೂ ಆಕೆಯ ತಂಗಿಗೆ ಜಾಗದ ವಿಚಾರದಲ್ಲಿ ತರಕಾರು ಇತ್ತು. ಸಂತ್ರಸ್ತ ಮಹಿಳೆ, ಆಕೆಯ ಗಂಡ ಹಾಗೂ ಇತರರ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖಾಧಿಕಾರಿಯಾಗಿದ್ದ ಸಂದೇಶ್ ಅವರು ೨೦೧೮ರಿಂದ ೨೦೨೩ರ ನಡುವೆ ಮಹಿಳೆಯ ಮನೆಗೆ ಬಂದು ಹೋಗುತ್ತಿದ್ದರು. ಆಗ ಮಹಿಳೆಯ ಜತೆ ಆತ್ಮೀಯತೆ ಬೆಳೆಸಿ, ಬೆದರಿಸಿ ಕೆಟ್ಟದಾಗಿ ವರ್ತಿಸಿ ಅತ್ಯಾಚಾರ ಎಸಗಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದ್ದು ಈ ಕುರಿತು ಮಾ.೨೧ರಂದು ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. ೨೨/೨೦೨೬ರಂತೆ ಐಪಿಸಿ ೩೭೬(೨), ೩೭೬(೨)(ಎನ್)೩೮೪, ೫೦೬ ಮತ್ತು ೩೪ರಡಿ ಕೇಸು ದಾಖಲಿಸಲಾಗಿದೆ. ಸಂದೇಶ್ ಅವರ ವಿರುದ್ಧ ಆರೋಪ ಹೊರಿಸಿರುವ ೪೩ ವರ್ಷ ಪ್ರಾಯದ ಮಹಿಳೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಡಗಕಾರಂದೂರು ನಿವಾಸಿಯಾಗಿದ್ದು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದರು ಎಂದು ಮಾಹಿತಿ ಲಭ್ಯವಾಗಿದೆ.

ಕಾರ್ಕಳದ ಮಹಿಳೆಯೊಂದಿಗೆ ಮೊಬೈಲ್ ಫೋನ್‌ನಲ್ಲಿ ಮಾತನಾಡುವ ವೇಳೆ ಅಸಭ್ಯ ಪದ ಬಳಸಿದ ಆರೋಪದಡಿ ಈಗಾಗಲೇ ಸಂದೇಶ್ ಪಿ.ಜಿ. ಅವರನ್ನು ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಪ್ರಕರಣ ಸಿಐಡಿ ತನಿಖೆಗೆ ಹಸ್ತಾಂತರ: ಮಹಿಳೆಯರ ಮೇಲೆ ಮೂಡುಬಿದರೆ ಪೊಲೀಸ್ ಇನ್‌ಸ್ಪೆಕ್ಟರ್ ದೌರ್ಜನ್ಯ ಎಸಗಿರುವ ಆರೋಪ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಆದೇಶಿಸಿದ್ದಾರೆ. ಮೂಡುಬಿದರೆ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಹಾಗೂ ಸಂತ್ರಸ್ತೆಯರು ಭೇಟಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳ ಬಗ್ಗೆ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ ಡಿಜಿಪಿ ಅವರಿಗೆ ಸೂಚಿಸಿದ್ದೇನೆ. ಮೂಡುಬಿದರೆ ಪೊಲೀಸ್ ಇನ್‌ಸ್ಪೆಕ್ಟರ್ ಮೇಲೆ ಆರೋಪ ಬಂದ ಬಳಿಕ ಅಮಾನತು ಮಾಡುವ ಮೂಲಕ ತಕ್ಷಣದ ಕ್ರಮಕೈಗೊಳ್ಳಲಾಗಿದೆ. ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಇನ್ನೂ ಅನೇಕ ವಿಚಾರಗಳನ್ನು ಕೇಳಿದ ಮೇಲೆ ಹೆಚ್ಚಿನ ತನಿಖೆ ಮಾಡಬೇಕೆಂದು ಸಿಐಡಿ ತನಿಖೆಗೆ ವಹಿಸಲಾಗಿದೆ. ತನಿಖೆ ಬಳಿಕ ಸತ್ಯಾಂಶ ಹೊರ ಬರುತ್ತದೆ. ಇನ್ನು ಎಷ್ಟು ಜನ ಸಂತ್ರಸ್ತರಿದ್ದಾರೆ ಎಂಬುದು ತನಿಖೆ ವೇಳೆ ಗೊತ್ತಾಗಲಿದೆ. ಇದಕ್ಕಾಗಿಯೇ ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಡಾ. ಪರಮೇಶ್ವರ್ ಹೇಳಿದರು.

ಶುಲ್ಕ ಪಡೆಯದೆ ವಾದ ಮಂಡಿಸುತ್ತೇನೆ: ಮೂಡುಬಿದಿರೆಯ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಅಥವಾ ಯಾವುದೇ ಸರ್ಕಾರಿ ಅಧಿಕಾರಿಯಿಂದ ಅನ್ಯಾಯಕೊಳ್ಳಗಾದ ಅಥವಾ ಕಿರುಕುಳಕ್ಕೊಳಗಾದ ಯಾರೇ ಸಂತ್ರಸ್ತೆಯರು ನನ್ನ ಬಳಿ ದೂರು ಕೊಟ್ಟರೆ ಆರೋಪಿ ಸ್ಥಾನದಲ್ಲಿರುವ ಅಂತಹ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಯಾವುದೇ ಶುಲ್ಕ ಪಡೆಯದೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಸಂತ್ರಸ್ತರ ಪರವಾಗಿ ವಾದ ಮಂಡಿಸುತ್ತೇನೆ. ಈ ಹಿಂದೆ ಇಂತಹ ವ್ಯಕ್ತಿಗಳ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಅಧೀಕ್ಷಕರಿಗೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ಕೊಟ್ಟಿದ್ದರೂ ಆರೋಪಿಗಳ ವಿರುದ್ಧ ಯಾವುದೇ ರೀತಿಯ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಅಂತಹ ಅಧಿಕಾರಿಗಳು ಕೂಡಾ ಕರ್ತವ್ಯ ಲೋಪ ಎಸಗಿದ ಆರೋಪದ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿರುವ ಮಹಿಳೆಗೆ ಕಾನೂನು ನೆರವು ನೀಡುತ್ತಿರುವ ನ್ಯಾಯವಾದಿ ಶಿವಾನಂದ ಎಂ. ವಿಟ್ಲ ಅವರು ತಿಳಿಸಿದ್ದಾರೆ.

ಭ್ರಷ್ಟಾಚಾರ ನಿಯಂತ್ರಣ ತಡೆ ಕಾಯ್ದೆ ಸೇರಿಸಲು ಅರ್ಜಿ: ಸಂದೇಶ್ ಅವರ ವಿರುದ್ಧ ಐಪಿಸಿಯಡಿ ಮಾತ್ರ ಕೇಸು ದಾಖಲು ಮಾಡಲಾಗಿದೆ. ಅವರು ಸಂತ್ರಸ್ತ ಮಹಿಳೆಯಿಂದ ಹಣ ಪಡೆದುಕೊಂಡಿರುವುದಕ್ಕೆ ದಾಖಲೆಗಳಿದೆ. ಹಾಗಾಗಿ ಸಂದೇಶ್ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ತಡೆ ಕಾಯ್ದೆಯಡಿಯೂ ಕೇಸು ದಾಖಲಿಸಬೇಕು ಎಂದು ನ್ಯಾಯಾಲಯಕ್ಕೆ ಪಿಟಿಷನ್ ಹಾಕಲಾಗುವುದು ಎಂದು ನ್ಯಾಯವಾದಿ ಶಿವಾನಂದ ವಿಟ್ಲ ತಿಳಿಸಿದ್ದಾರೆ.

ಮಹಿಳೆ ದಾಖಲಿಸಿದ ದೂರಿನ ವಿವರ : ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಮಹಿಳೆ ಹಲವು ಆರೋಪ ಹೊರಿಸಿದ್ದಾರೆ. ೨೦೧೮ನೇ ಸಾಲಿನಲ್ಲಿ ನನ್ನ ಮತ್ತು ತಂಗಿ ನಡುವೆ ಕೌಟುಂಬಿಕ ವಿಚಾರದಲ್ಲಿ ತಕರಾರು ಉಂಟಾಗಿತ್ತು. ನನ್ನ ವಿರುದ್ಧ, ನನ್ನ ಗಂಡನ ವಿರುದ್ಧ ಹಾಗೂ ಇತರರ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ವೃತ್ತ ನಿರೀಕ್ಷಕ ಸಂದೇಶ ಪಿ.ಜಿ. ಅವರು ತನಿಖಾ ಹಂತದಲ್ಲಿ ಕುಟುಂಬಸ್ಥರು ಇರುವ ಸಮಯ ಆಗಾಗ ನನ್ನ ಮನೆಗೆ ಬರುತ್ತಿದ್ದರು. ನನ್ನೊಂದಿಗೆ ಆತ್ಮೀಯತೆ ಹೊಂದಿ ಆಗಾಗ ಫೋನ್ ಕರೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದರು. ಬಳಿಕ ನಾನು ಒಬ್ಬಳೇ ಇರುವ ಸಮಯ ೨೦೨೦ರ ನವೆಂಬರ್ ತಿಂಗಳಿನಿಂದ ೨೦೨೩ರ ಜೂನ್ ತಿಂಗಳ ತನಕ ನನ್ನೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ್ದರು. ವಿರೋಧ ವ್ಯಕ್ತಪಡಿಸಿದ ಸಮಯ ನಿನ್ನ ಗಂಡನ ಹಾಗೂ ಮನೆಯವರ ವಿರುದ್ಧ ಕೇಸ್ ರಿ ಓಪನ್ ಮಾಡುವುದಾಗಿ ಬೆದರಿಸಿದ್ದಾರೆ. ಅಲ್ಲದೆ ನನ್ನಿಂದ ೧೩ ಲಕ್ಷ ಹಣದಲ್ಲಿ ನಗದು ಮತ್ತು ಸುಮಾರು ೩,೬೨,೦೦೦ ಹಣವನ್ನು ಹಂತ ಹಂತವಾಗಿ ಸಂದೇಶ್ ಅವರ ಬ್ಯಾಂಕ್ ಖಾತೆಗೆ ಬೆದರಿಸಿ ವರ್ಗಾವಣೆ ಮಾಡಿದ್ದಾರೆ.

ಅಲ್ಲದೆ ಅವರು ಹೊಸ ಮನೆ ಕಟ್ಟುವ ಸಮಯ ಸುಮಾರು ೨ ಲಕ್ಷದ ಐವತ್ತು ಸಾವಿರ ಬೆಳೆಬಾಳುವ ಸಾಗುವಾಣಿ ಮರವನ್ನು ನಮ್ಮ ತೋಟದಿಂದ ಬೆದರಿಸಿ ಕಡಿದುಕೊಂಡು ಹೋಗಿದ್ದಾರೆ. ಅಲ್ಲದೆ ೨೦೨೫ರ ಅಕ್ಟೋಬರ್ ತಿಂಗಳಲ್ಲಿ ಕರೆ ಮಾಡಿ ಇಲ್ಲಿಯ ತನಕ ಆದ ವಿಚಾರವನ್ನು ಬಹಿರಂಗ ಪಡಿಸಿದರೆ ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲ ಎಂದು ಪ್ರಾಣ ಬೆದರಿಕೆ ನೀಡಿದ್ದಾರೆ. ಚಿನ್ನವನ್ನು ತೆಗೆದುಕೊಂಡು ಹೋಗಿ ತನ್ನ ಖಾಸಗಿ ವಾಹನದ ಚಾಲಕನಾದ ಅಕ್ಬರ್ ಎಂಬವರ ಹೆಸರಿನಲ್ಲಿ ಸುಮಾರು ನಾಲ್ಕು ಲಕ್ಷ ರೂಗಳಿಗೆ ಮೂಡುಬಿದ್ರೆಯ ಫೆಡರಲ್ ಬ್ಯಾಂಕಿನಲ್ಲಿ ಅಡವಿರಿಸಿ ಹಣ ಪಡೆದು ದೋಚಿದ್ದಾರೆ. ದಿನಾಂಕ ೧೯.೦೩.೨೦೨೬ರಂದು ಸಂದೇಶ್ ಅವರ ಪರಿಚಯದ ಸ್ಮಿತಾ ಮತ್ತು ಸುನೀತ ಲೋಬೊ ಎಂಬವರನ್ನು ಮನೆಗೆ ಕಳುಹಿಸಿ ಇಲ್ಲಿಯವರೆಗೆ ನಡೆದ ವಿಚಾರಗಳನ್ನು ಹೊರಗಡೆ ಬಾಯಿಬಿಟ್ಟರೆ, ಸಂದೇಶ್ ವಿರುದ್ಧ ದೂರು ನೀಡಿದರೆ ನಿನ್ನ ಮೇಲೆ ಕೇಸು ದಾಖಲಾಗುತ್ತದೆ ಹಾಗೂ ನಿಮ್ಮನ್ನು ಜೀವಂತವಾಗಿ ಬಿಡುವುದಿಲ್ಲ ಎಂದು ಇವರೆಲ್ಲರೂ ಸೇರಿ ಬೆದರಿಕೆ ಹಾಕಿದ್ದಾರೆ. ನನ್ನ ತಂದೆಯ ಮೊಬೈಲ್‌ಗೆ ಕರೆ ಮಾಡಿ ಈ ಹಿಂದೆ ನಡೆದ ಘಟನೆಯನ್ನು ಹೊರಗಡೆ ಬಹಿರಂಗಪಡಿಸಿದರೆ ನಿಮ್ಮನ್ನು ಜೀವ ಸಹಿತ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನನ್ನ ಹಿತೈಷಿಗಳೊಂದಿಗೆ ಹಾಗೂ ಕುಟುಂಬಸ್ಥರೊಂದಿಗೆ ಚರ್ಚಿಸಿ ತಡವಾಗಿ ದೂರು ನೀಡಲಾಗಿದೆ ಎಂದೂ ಉಲ್ಲೇಖಿಸಲಾಗಿದೆ. ವೇಣೂರು ಠಾಣಾ ಎಸ್.ಐ. ಅಕ್ಷಯ್ ಡವಗಿ ಅವರು ಪ್ರಕರಣ ದಾಖಲಿಸಿದ್ದಾರೆ.


LEAVE A REPLY

Please enter your comment!
Please enter your name here