







ಉಜಿರೆ :ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸದ ಸಾಂಸ್ಕೃತಿಕ ಸಂಭ್ರಮದ ಅಂಗವಾಗಿಆಳ್ವಾಸ್ ನುಡಿಸಿರಿ ವಿರಾಸತ್ ಬೆಳ್ತಂಗಡಿ ಘಟಕದ ವತಿಯಿಂದ ಉಜಿರೆಯಲ್ಲಿ ಮಾ.22ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ ಜರಗಲಿದೆ ಎಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೆ. ಪ್ರತಾಪ ಸಿಂಹ ನಾಯಕ್ ಹೇಳಿದರು .
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ರಾಮಕೃಷ್ಣ ಸಭಾಭವನದಲ್ಲಿ ಮಾ. 20ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಉಜಿರೆಯ ಅಭಿವೃದ್ಧಿ ಹಾಗೂ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ವಿಜಯರಾಘವ ಪಡುವೆಟ್ನಾಯ,ಪ್ರೊ. ಎಸ್.ಪ್ರಭಾಕರ್, ಡಾ.ಯಶೋವರ್ಮ ಇವರ ನೆನಪಿನಲ್ಲಿ ನಡೆಯುವ ಈ ಕಾರ್ಯಕ್ರಮ ಉಜಿರೆ ದೇವಸ್ಥಾನದ ರಥಬೀದಿಯಲ್ಲಿ ಸಂಜೆ ಗಂಟೆ 6.15 ರಿಂದ ನಡೆಯಲಿದೆ. ಕ್ಲಪ್ತ ಸಮಯಕ್ಕೆ ಆರಂಭವಾಗಲಿರುವ ಈ ಕಾರ್ಯಕ್ರಮವನ್ನು ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಉದ್ಘಾಟಿಸುವರು.


ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಉಪಸ್ಥಿತರಿರಲಿದ್ದು,ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸುವರು. ಬೆಳ್ತಂಗಡಿ ಘಟಕದ ಗೌರವಾಧ್ಯಕ್ಷ ಮೋಹನ್ ಕುಮಾರ್,ಗೌರವ ಸಲಹೆಗಾರ ಶಶಿಧರ್ ಶೆಟ್ಟಿ ಬರೋಡ ಹಾಗೂ ಸಮಾಜದ ಎಲ್ಲಾ ಸ್ತರಗಳ ಪ್ರಮುಖರು ಭಾಗವಹಿಸಲಿದ್ದಾರೆ.
ಸಂಜೆ 7ಗಂಟೆಯಿಂದಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 500ಕ್ಕೂ ಅಧಿಕ ವಿದ್ಯಾರ್ಥಿ ಕಲಾವಿದರಿಂದ ಭಾರತೀಯ ಕಲಾ ಪ್ರಕಾರಗಳಾದ ಯೋಗ ದೀಪಿಕಾ,ಶಾಸ್ತ್ರೀಯ ನೃತ್ಯ- ಅಷ್ಟಲಕ್ಷ್ಮಿ ಬಡಗು ತಿಟ್ಟು ಯಕ್ಷಗಾನ, ಗುಜರಾತಿನ ದಾಂಡಿಯಾ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಮಲ್ಲಕಂಬ ಕಸರತ್ತು, ಸೃಜನಾತ್ಮಕ ನೃತ್ಯ,ಡೊಳ್ಳು ಕುಣಿತ,ತೆಂಕುತಿಟ್ಟು ಯಕ್ಷಗಾನ,ಬೊಂಬೆ ವಿನೋದಾವಳಿ ಮೊದಲಾದ ಕಾರ್ಯಕ್ರಮಗಳು ಜರಗಲಿವೆ. ಸುಮಾರು 8 ಸಾವಿರಕ್ಕೂ ಅಧಿಕ ಆಸನದ ವ್ಯವಸ್ಥೆ ಮಾಡಲಾಗಿದ್ದು ಉಚಿತ ಪ್ರವೇಶ ಇರಲಿದೆ ಎಂದರು.ಬೆಳ್ತಂಗಡಿ ಘಟಕದ ಪ್ರಮುಖರಾದ ವಸಂತ್ ಶೆಟ್ಟಿ ಶ್ರದ್ಧಾ,ರವೀಂದ್ರ ಶೆಟ್ಟಿ,ವೆಂಕಟರಮಣ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಅಂಬರೀಶ್ ಚಿಪ್ಲೂಣ್ಕರ್,ಆಳ್ವಾಸ್ ನ ಉಪನ್ಯಾಸಕರಾದ ಶಾಲೆಟ್ ಮೋನಿಸ್, ಮಂಜಿತ್ ಶೆಟ್ಟಿ,ಕೀರ್ತನ್ ಪೂಂಜ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾರಾಯಣ ಉಪಸ್ಥಿತರಿದ್ದರು.









