






ಬೆಳ್ತಂಗಡಿ: ೨೦೨೨ರ ಡಿ.೧೮ರಂದು ಬೆಳ್ತಂಗಡಿ ತಾಲೂಕಿನ ಶಿಬಾಜೆಯಲ್ಲಿ ನಡೆದ ದಲಿತ ಯುವಕ ಶ್ರೀಧರ ಅವರ ಸಾವಿನ ಪ್ರಕರಣದ ಮರು ತನಿಖೆಗೆ ರಾಜ್ಯ ಸರಕಾರ ರಚಿಸಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿರುವ ಬೆಂಗಳೂರು ಕೇಂದ್ರ ವಲಯದ ಐಜಿಪಿ ಲಾಬೂ ರಾಮ್ ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಬಳಿಕ ಅವರು ಎಸ್ಐಟಿಯಲ್ಲಿರುವ ಉಡುಪಿ ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೆನ್ ಪೊಲೀಸ್ ಠಾಣೆಯ ಡಿವೈಎಸ್ಪಿ ಎಂ.ಆರ್. ಹರೀಶ್ ಅವರೊಂದಿಗೆ ಚರ್ಚಿಸಿ ತನಿಖೆ ಚುರುಕುಗೊಳಿಸಲು ಸೂಚಿಸಿದ್ದಾರೆ.
ಮಾಹಿತಿ ಸಂಗ್ರಹಿಸಿದ್ದ ಅಧಿಕಾರಿಗಳು: ಎಸ್ಐಟಿಯಲ್ಲಿರುವ ಅಧಿಕಾರಿಗಳ ತಂಡ ಮಾ.೨ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು. ಅಲ್ಲದೆ ಪ್ರಕರಣದ ದೂರುದಾರ ಹರೀಶ್ ಬಿ. ಮೊಗೇರ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿಯಾಗಿರುವ ಎಸ್ಐಟಿ ಡಿವೈಎಸ್ಪಿ ಹರೀಶ್.ಎಂ.ಆರ್. ಅವರು ಮಾ.೩ರಂದು ನೊಟೀಸ್ ಜಾರಿ ಮಾಡಿದ್ದರು. ಬಳಿಕ ಹರೀಶ್ ಮೊಗೇರ ಅವರಿಂದ ಮಾಹಿತಿ ಸಂಗ್ರಹಿಸಲಾಗಿದೆ. ಘಟನಾ ಸ್ಥಳದ ಮಹಜರು ನಡೆಸಿರುವ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಐಪಿಎಸ್ ಅಧಿಕಾರಿ ಲಾಬೂರಾಮ್ ಅವರು ಭೇಟಿ ನೀಡಿ ತನಿಖೆ ಚುರುಕುಗೊಳಿಸಿದ್ದಾರೆ.
ಎಸ್ಐಟಿ ತನಿಖೆ ಚುರುಕು: ಬೆಳ್ತಂಗಡಿ ತಾಲೂಕಿನ ಶಿಬಾಜೆಯಲ್ಲಿ ನಡೆದಿದ್ದ ಶ್ರೀಧರ ಎಂಬ ಯುವಕನ ಸಾವಿನ ಪ್ರಕರಣದ ಮರು ತನಿಖೆಗೆ ರಾಜ್ಯ ಸರಕಾರ ವಿಶೇಷ ತನಿಖಾ ತಂಡ ರಚಿಸಿ ಆದೇಶಿಸಿದ್ದ ಹಿನ್ನೆಲೆಯಲ್ಲಿ ಮರು ತನಿಖೆ ಚುರುಕುಗೊಂಡಿದೆ. ೨೦೨೨ರ ಫೆಬ್ರವರಿ ೧೮ರಂದು ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿರುವ ಎ.ಸಿ. ಕುರಿಯನ್ ಎಂಬವರ ಮಾಲಕತ್ವದ ಸಾರಾ ಫಾರ್ಮ್ನಲ್ಲಿ ಕಾರ್ಮಿಕರಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರುಗುಂದ ಸಮೀಪದ ದಿನ್ನಕರೆಯ ದಿ. ಬಾಬು ಎಂಬವರ ಪುತ್ರ ಶ್ರೀಧರ(೩೬) ಎಂಬವರನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಹಲವಾರು ಪ್ರಭಾವಿಗಳು ಭಾಗಿಯಾಗಿದ್ದಾರೆ ಎಂದು ಅಂದು ಆರೋಪ ಕೇಳಿ ಬಂದಿತ್ತು. ಪ್ರಕರಣ ನಿಗೂಢವಾಗುತ್ತಿದ್ದಂತೆಯೇ ಬೆಳ್ತಂಗಡಿ ಮತ್ತು ಸುತ್ತಮುತ್ತಲಿನ ದಲಿತ ಸಂಘಟನೆಯವರು ಹೋರಾಟ ಮಾಡಿ ಸಮರ್ಪಕ ತನಿಖೆಗೆ ಒತ್ತಾಯಿಸಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಸಿಐಡಿಗೆ ಒಪ್ಪಿಸಿತ್ತು. ಸಿಐಡಿ ತನಿಖೆಯಲ್ಲಿಯೂ ನ್ಯಾಯ ದೊರಕಿಲ್ಲ.
ತನಿಖೆ ತೃಪ್ತಿಕರವಾಗಿಲ್ಲ ಎಂದು ದೂರುದಾರರಾಗಿದ್ದ ಸಾರಾ ಫಾರ್ಮ್ನ ಮೇಲ್ವಿಚಾರಕ ಹರೀಶ್ ಮೊಗೇರ ಅವರು ರಾಜ್ಯ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಈ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸುವಂತೆ ಆದೇಶ ನೀಡಿತ್ತು. ನ್ಯಾಯಾಲಯದ ನಿರ್ದೇಶನದಂತೆ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಡಾ.ಎಂ.ಎ.ಸಲೀಂ ಅವರು ಅಧಿಕೃತವಾಗಿ ಎಸ್ಐಟಿ ರಚಿಸಿ ಆದೇಶ ಹೊರಡಿಸಿದ್ದರು. ಬೆಂಗಳೂರು ಕೇಂದ್ರ ವಲಯದ ಐಜಿಪಿ ಲಾಬೂ ರಾಮ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆಯಾಗಿದ್ದು ತಂಡಕ್ಕೆ ಉಡುಪಿ ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೆನ್ ಪೊಲೀಸ್ ಠಾಣೆಯ ಡಿವೈಎಸ್ಪಿ ಎಂ.ಆರ್. ಹರೀಶ್ ಅವರನ್ನು ಸೇರಿಸಲಾಗಿತ್ತು. ಬಳಿಕ ವಿಶೇಷ ತನಿಖಾ ತಂಡದಲ್ಲಿರುವ ಅಧಿಕಾರಿಗಳು ಧರ್ಮಸ್ಥಳ ಪೊಲೀಸ್ ಠಾಣೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು. ಅದರ ಬೆನ್ನಿಗೇ ಎಸ್ಐಟಿ ಮುಖ್ಯಸ್ಥ ಲಾಬೂರಾಮ್ ಭೇಟಿ ನೀಡಿದ್ದಾರೆ.
ಶೀಘ್ರದಲ್ಲಿ ಹೈಕೋರ್ಟ್ಗೆ ಎಸ್ಐಟಿ ವರದಿ: ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿರುವ ಎ.ಸಿ.ಕುರಿಯನ್ ಎಂಬವರ ಮಾಲಿಕತ್ವದ ಸಾರಾ ಫಾರ್ಮ್ನಲ್ಲಿ ಕೆಲಸಕ್ಕಿದ್ದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರುಗುಂದ ಸಮೀಪದ ದಿನ್ನಕರೆಯ ದಿ. ಬಾಬು ಎಂಬವರ ಪುತ್ರ ಶ್ರೀಧರ (೩೦)ಎಂಬವರು ೨೦೨೨ರ ಫೆ.೧೮ರಂದು ತೋಟದಲ್ಲಿ ಅರೆಬೆತ್ತಲೆಯಾಗಿ ಸಾವನ್ನಪ್ಪಿದ್ದರು. ಈ ಸಂಬಂಧ ಇದೇ ಫಾರ್ಮ್ನಲ್ಲಿ ಮೇಲ್ವಿಚಾರಕರಾಗಿರುವ ಶಿಬಾಜೆ ತೊಂಬತ್ತಾಜೆಯ ಹರೀಶ್ ಮೊಗೇರ(೩೨) ಎಂಬವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಡಿ.೧೭ರಂದು ಸಂಜೆ ೫.೩೦ಕ್ಕೆ ತೋಟದ ಆಫೀಸ್ ಎದುರು ಇರುವ ಸಾರ್ವಜನಿಕ ಡಾಮಾರು ರಸ್ತೆಯ ಬದಿಯಲ್ಲಿ ಜೋರಾಗಿ ಬೊಬ್ಬೆ ಕೇಳಿ ಹೊರಗೆ ಬಂದು ನೋಡಿದಾಗ ಶ್ರೀಧರ ಅವರು ಅಂಗಾತ ಬಿದ್ದುಕೊಂಡಿದ್ದು ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಕೆ.ಕೆ.ಆನಂದ ಗೌಡ ಹಾಗೂ ಮಹೇಶ್ ಎಂಬವರು ಅವರ ಕಿಬ್ಬೊಟ್ಟೆಗೆ ಮತ್ತು ಎದೆಗೆ ಕೈಯಲ್ಲಿ ಹೊಡೆಯುತ್ತಿದ್ದರು. ಅಷ್ಟರಲ್ಲಿ ಅದೇ ತೋಟದಲ್ಲಿ ಕೆಲಸಕ್ಕೆ ಇದ್ದ ಟಿ.ಸಿ.ಅಬ್ರಹಾಂ ಮತ್ತು ಪರಮೇಶ್ವರ ಗೌಡರವರು ಅಲ್ಲಿಗೆ ಬರುವುದನ್ನು ನೋಡಿದ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.
ನಂತರ ಶ್ರೀಧರ ಅವರನ್ನು ಉಪಚರಿಸಿ ತೋಟದ ಮನೆಗೆ ಕರೆದುಕೊಂಡು ಬಂದು ಊಟ ನೀಡಿ ಆತನನ್ನು ರಾತ್ರಿ ಉಳಿದುಕೊಳ್ಳುವ ವಿಶ್ರಾಂತಿ ಕೊಠಡಿಗೆ ಕಳುಹಿಸಿಕೊಟ್ಟಿzವೆ. ಮರುದಿನ ಡಿ.೧೮ರಂದು ಬೆಳಿಗ್ಗೆ ೬.೩೦ಕ್ಕೆ ವಿಶ್ರಾಂತಿಯಲ್ಲಿದ್ದ ಶ್ರೀಧರರನ್ನು ಕೂಗಿ ಕರೆದಾಗ ಯಾವುದೇ ರೀತಿಯ ಪ್ರತಿಕ್ರಿಯೆ ಬರಲಿಲ್ಲ. ಒಳಹೋಗಿ ನೋಡಿದಾಗ ಶ್ರೀಧರರವರು ವಿಶ್ರಾಂತಿ ಕೊಠಡಿಯಲ್ಲಿ ಇರಲಿಲ್ಲ. ಸುತ್ತಮುತ್ತಲೂ ಹುಡುಕಾಡಿದಾಗ ಕೊಠಡಿಯಿಂದ ಸುಮಾರು ೩೦೦ ಮೀಟರ್ ದೂರದ ಅಡಿಕೆ ತೊಟದಲ್ಲಿ ಬೆತ್ತಲೆಯಾಗಿ ಅಂಗಾತನೆ ಬಿದ್ದು ಕೊಂಡಿರುವುದು ಕಂಡು ಬಂದಿತ್ತು. ನಂತರ ತೋಟದ ಮಾಲೀಕರಿಗೆ ದೂರವಾಣಿ ಮೂಲಕ ತಿಳಿಸಿ ತೋಟವನ್ನು ಪರಿಶೀಲಿಸಿದಾಗ ತೋಟಕ್ಕೆ ಅಳವಡಿಸಿದ ತಂತಿ ಬೇಲಿಯನ್ನು ಕತ್ತರಿಸಿರುವುದು ಪತ್ತೆಯಾಗಿದೆ. ಆರೋಪಿಗಳು ವಿಶ್ರಾಂತಿ ಕೊಠಡಿಯ ಬಳಿ ಬಂದು ಶ್ರೀಧರ ಅವರನ್ನು ಕೊಲೆ ಮಾಡಿ ತೋಟದ ಮಧ್ಯೆ ಹಾಕಿ ಆತನ ಬಳಿ ಇದ್ದ ೯೫೦೦ ರೂ ದೋಚಿಕೊಂಡು ಹೋಗಿದ್ದಾರೆ ಎಂದು ಹರೀಶ್ ಮೊಗೇರ ದೂರಿನಲ್ಲಿ ಆಪಾದಿಸಿದ್ದರು.


ಬಳಿಕ ಧರ್ಮಸ್ಥಳ ಠಾಣೆಯಲ್ಲಿ ಅಪರಾಧ ಕ್ರಮಾಂಕ ೯೧/೨೦೨೨ರಂತೆ ಕೊಲೆ ಪ್ರಕರಣ ದಾಖಲಾಗಿತ್ತು. ಈ ಮಧ್ಯೆ ಶ್ರೀಧರ ಕೊಲೆ ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಶಾಖೆ ಬೆಳ್ತಂಗಡಿ ಮತ್ತು ದ.ಕ. ಜಿಲ್ಲೆಯ ಸಮಸ್ತ ದಲಿತ ಸಂಘಟನೆಗಳ ನೇತೃತ್ವದಲ್ಲಿ ೨೦೨೨ರ ಜ.೨೩ರಂದು ಧರ್ಮಸ್ಥಳ ಪೊಲೀಸ್ ಠಾಣೆ ಚಲೋ ಪ್ರತಿಭಟನೆ ನಡೆಸಲಾಗಿತ್ತು. ನೇತ್ರಾವತಿಯಿಂದ ಧರ್ಮಸ್ಥಳ ಪೊಲೀಸ್ ಠಾಣೆಯ ತನಕ ಮೆರವಣಿಗೆ ಸಹ ನಡೆಸಲಾಗಿತ್ತು. ಶ್ರೀಧರ್ ಅವರ ಸಾವಿನ ಪ್ರಕರಣದ ಮರು ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಮಾಡುವಂತೆ ಹೈಕೋರ್ಟ್ ಆದೇಶ ಹೊರಡಿಸಿ ಐದು ತಿಂಗಳು ಕಳೆದರೂ ವಿಶೇಷ ತನಿಖಾ ತಂಡ ರಚಿಸಲಾಗಿಲ್ಲ ಎಂದು ಹರೀಶ್ ಮೊಗೇರ ಅವರು ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ಫೆ.೨೦ರಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತು ವಿವರಣೆ ನೀಡಲು ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ಫೆ.೨೧ರಂದು ಮಧ್ಯಾಹ್ನ ೨.೩೦ಕ್ಕೆ ಖುದ್ದು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ನಿರ್ದೇಶಿಸಿತ್ತು. ಈ ನಡುವೆ ಸರ್ಕಾರ ಎಸ್ಐಟಿ ರಚನೆ ಮಾಡಿ ಆದೇಶಿಸಿತ್ತು. ಬಳಿಕ ನ್ಯಾಯಾಲಯದ ಸೂಚನೆಯಂತೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ವಿ.ಶರತ್ಚಂದ್ರ ಅವರು ಹಾಜರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ೪ ವಾರಗಳಲ್ಲಿ ಕೋರ್ಟ್ಗೆ ಸಲ್ಲಿಸುವಂತೆ ಪ್ರಾಸಿಕ್ಯೂಷನ್ಗೆ ಹೈಕೋರ್ಟ್ ಇದೇ ವೇಳೆ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿರುವ ಎಸ್ಐಟಿ ಅಧಿಕಾರಿಗಳು ಒಂದು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ಹೈಕೋರ್ಟ್ಗೆ ವರದಿ ನೀಡಲು ಸಿದ್ಧತೆ ನಡೆಸಿದ್ದಾರೆ.
ಸಿಐಡಿ ವರದಿ ಪರಿಶೀಲನೆ: ಶ್ರೀಧರ್ ಅವರ ಸಾವಿನ ಕುರಿತು ಹರೀಶ್ ಮೊಗೇರ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾದ ಬಳಿಕ ಬಂಟ್ವಾಳ ಉಪವಿಭಾಗದ ಅಂದಿನ ಡಿವೈಎಸ್ಪಿ ಪ್ರತಾಪ್ಸಿಂಗ್ ಥೋರಟ್ ಅವರು ತನಿಖೆ ನಡೆಸಿದ್ದರು. ಮೃತ ಶ್ರೀಧರ ಅವರು ವಿಶ್ರಾಂತಿ ಪಡೆಯುತ್ತಿದ್ದ ಕೊಠಡಿಯಲ್ಲಿ ಪತ್ತೆಯಾದ ಮದ್ಯದ ಬಾಟಲಿಯಲ್ಲಿ ಕಡು ನೀಲಿ ಬಣ್ಣದ ವಿಷದ ಅಂಶವಿತ್ತು ಮತ್ತು ಅಲ್ಲಿ ವಾಂತಿ ಮಾಡಿದ ಪದಾರ್ಥದ ಅಂಶದಲ್ಲಿ ವಿಷದ ಅಂಶವಿತ್ತು. ಆದ್ದರಿಂದ ಮದ್ಯದೊಂದಿಗೆ ವಿಷ ಕುಡಿದ ಕಾರಣ ಆತನು ಮೇಲಿಂದ ಬಿದ್ದು ಹೊರಳಾಟ ನಡೆಸಿದಾಗ ತಲೆಯ ಭಾಗಕ್ಕೆ ಗಾಯವಾಗಿರುವ ಸಾಧ್ಯತೆ ಇದೆ.
ಈ ಪ್ರಕರಣದಲ್ಲಿ ಹೆಸರಿಸಲಾಗಿರುವ ನಾಲ್ಕು ಜನ ಆರೋಪಿಗಳು ಶ್ರೀಧರನನ್ನು ಕೊಲೆ ಮಾಡಿ ಹಣ ದೋಚಿದ್ದಾರೆ ಎಂದು ಸಾಬೀತು ಪಡಿಸುವ ಸಾಕ್ಷಾಧಾರ ಇಲ್ಲದ ಕಾರಣ ಸದ್ರಿ ಪ್ರಕರಣ ದಾಖಲಾದ ಸಮಯ ಹಾಕಿದ ಕಲಂ: ೩೦೨, ೩೯೨, ಬಾ.ದಂ.ಸ. ಮತ್ತು ಕಲಂ ೩(೨)(ವಿ).ಎಸ್.ಸಿ/ಎಸ್ಟಿ ಕಾಯ್ದೆ ೨೦೧೫ ಕೈ ಬಿಟ್ಟು ಕಲಂ ೩೨೩ ಜೊತೆಗೆ ೩೪ ಐಪಿಸಿ ಮತ್ತು ಕಲಂ ೩(೨) (ವಿಎ), ಎಸ್ಸಿ/ಎಸ್ಟಿ ಕಾಯ್ದೆ ೨೦೧೫ರಂತೆ ಪ್ರಕರಣದ ತನಿಖೆ ಮುಂದುವರಿಸುತ್ತಿರುವುದಾಗಿ ೨೦೨೩ರ ಜ.೧೯ರಂದು ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ಅವರು ನ್ಯಾಯಾಲಯಕ್ಕೆ ವರದಿ ನೀಡಿದ್ದರು.
ಈ ವರದಿಗಳನ್ನು ಎಸ್ಐಟಿ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಪೊಲೀಸ್ ತಂಡದ ತನಿಖೆ ಬಳಿಕ ಸಿಐಡಿ ಅಧಿಕಾರಿಗಳು ನಡೆಸಿರುವ ತನಿಖೆಯ ಕುರಿತೂ ಎಸ್ಐಟಿ ಅಧಿಕಾರಿಗಳು ವರದಿ ಸಂಗ್ರಹಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಅಂದು ಕೊಲೆ ಕೇಸು ದಾಖಲಾದ ಬಳಿಕದ ದಿನಗಳಲ್ಲಿ ಬಂಧಿಸಲ್ಪಟ್ಟು ಕೆಲವು ತಿಮಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿಗಳಾದ ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಆನಂದ ಗೌಡ ಕೆ. ಮತ್ತು ಮಹೇಶ್ ಪೂಜಾರಿ ಎಂಬವರಿಂದಲೂ ಮಾಹಿತಿ ಸಂಗ್ರಹಿಸಲು ಎಸ್ಐಟಿ ಮುಂದಾಗಿದೆ ಎಂದು ತಿಳಿದು ಬಂದಿದೆ.
ಯುವತಿಯಿಂದಲೂ ಮಾಹಿತಿ ಸಂಗ್ರಹ: ತನಿಖೆ ಚುರುಕುಗೊಳಿಸಿರುವ ಎಸ್.ಐ.ಟಿ. ಅಧಿಕಾರಿಗಳು ಯುವತಿ ಸಹಿತ ಹಲವರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ದೂರುದಾರ ಹರೀಶ್ ಮೊಗೇರ, ಸಾಕ್ಷಿದಾರರಾದ ಡಿ.ಸಿ.ಅಬ್ರಹಾಂ, ಪರಮೇಶ್ವರ ಗೌಡ, ಸಂಶಯಾಸ್ಪದವಾಗಿ ಸಾವಿಗೀಡಾದ ಶ್ರೀಧರ್ ಅವರ ಭಾವ ಪ್ರವೀಣ್, ಅಕ್ಕ ಸುಮಿತ್ರಾ, ಎ.ಸಿ.ಕುರಿಯನ್ ಅವರ ಬಾರ್ ಹಾಗೂ ರೆಸ್ಟೋರೆಂಟಿನ ಮ್ಯಾನೇಜರ್ ಅಚ್ಚುತ್ತ ಗೌಡ ಮತ್ತು ಶ್ರೀಧರ್ ಅವರು ಮದುವೆಯಾಗಲು ನಿರ್ಧರಿಸಿದ್ದ ಶಿಬಾಜೆಯ ರತ್ನಾವತಿ ಅವರಿಂದ ಎಸ್.ಐ.ಟಿ.ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ.








