






ಗೇರುಕಟ್ಟೆ: ಎರಡು ತಿಂಗಳ ಹಿಂದೆ ಸಂಶಯಾಸ್ಪದವಾಗಿ ಸಾವಿಗೀಡಾಗಿರುವ ಕಳಿಯ ಗ್ರಾಮದ ಸಂಬೋಳ್ಯದ ಬಾಲಕ ಸುಮಂತ್ ಅವರ ಮನೆಗೆ ಕರ್ನಾಕಟ ಸರಕಾರದ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರು ಮಾ. ೧೧ರಂದು ಭೇಟಿ ನೀಡಿ ಪ್ರಕರಣದ ಕುರಿತು ಕುಟುಂಬದ ಸದಸ್ಯರ ಜೊತೆ ವಿಚಾರಿಸಿ ಸಾಂತ್ವನ ಹೇಳಿದರು.
ತನಿಖಾಧಿಕಾರಿಯಾಗಿರುವ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ. ಎಸ್. ಅವರಿಗೆ ಸುಮಂತ್ ಅವರ ಮನೆಯಿಂದ ಕರೆ ಮಾಡಿದ ಪ್ರತಿಭಾ ಅವರು ಪ್ರಕರಣದ ಕುರಿತು ವಿಚಾರಿಸಿದರು. ಬಳಿಕ ಪ್ರತಿಭಾ ಕುಳಾಯಿ ಅವರು ಸುದ್ದಿಯೊಂದಿಗೆ ಮಾತನಾಡಿ ಸುಮಂತ್ ಅವರ ಕುಟುಂಬದವರ ಜೊತೆ ಮಾತನಾಡಿದ್ದೇನೆ. ಘಟನೆ ನಡೆದು ಎರಡು ತಿಂಗಳಾದರೂ ಈ ಕುಟುಂಬಕ್ಕೆ ನ್ಯಾಯ ಸಿಗಲಿಲ್ಲ. ಯಾವ ರೀತಿಯಾಗಿ ಸುಮಂತ್ ಸಾವನ್ನಪ್ಪಿದ್ದಾನೆ ಎಂಬ ಕುರಿತು ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯ ಬಗ್ಗೆ ಕುಟುಂಬದ ಸದಸ್ಯರಿಗೆ ಸರಿಯಾಗಿ ಮಾಹಿತಿ ಲಭ್ಯವಾಗದೆ ಗೊಂದಲದಲ್ಲಿದ್ದಾರೆ. ಕುಟುಂಬದವರಿಗೆ ನೇರವಾಗಿ ಮುಂದಿನ ವಾರ ಎಸ್ಪಿ ಅವರನ್ನು ಭೇಟಿ ಮಾಡಿ ಮುಕ್ತವಾಗಿ ಮಾತನಾಡಲು ಸಮಯ ನಿಗದಿಪಡಿಸುವುದಾಗಿ ಆಶ್ವಾಸನೆ ನೀಡಿದ್ದೇನೆ. ಬಾಲಕನ ಕುಟುಂಬದವರು ಸರಿಯಾಗಿ ತನಿಖೆ ಆಗುತ್ತಿಲ್ಲ ಎಂದು ಹೇಳಿದ್ದಾರೆ. ಈಗಾಗಲೇ ಕುಟುಂಬದವರು ಗೃಹ ಸಚಿವರನ್ನು ಭೇಟಿಯಾದಾಗ ಸಚಿವರು ಪ್ರಕರಣದ ಸರಿಯಾಗಿ ತನಿಖೆ ನಡೆಸುವುದಾಗಿ ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ವಿದ್ಯಾಭ್ಯಾಸಕ್ಕೆ ಕುಳಾಯಿ ಫೌಂಡೇಶನ್ ಟ್ರಸ್ಟ್ ಮೂಲಕ ನೆರವು: ಕಷ್ಟದ ಜೀವನ ಸಾಗಿಸುತ್ತಿರುವ ಸುಮಂತ್ ಅವರ ಕುಟುಂಬದವರಿಗೆ ಸುಮಂತ್ ಆಶಾಕಿರಣ ವಾಗಿದ್ದನು. ತಮ್ಮ ಮಕ್ಕಳಿಗೆ ಸಾಲ ಮಾಡಿ ವಿದ್ಯಾಭ್ಯಾಸ ನೀಡುತ್ತಿದ್ದಾರೆ. ಸುಮಂತ್ ಅವರ ಅಣ್ಣ ಕೂಡ ಕಲಿಕೆಯಲ್ಲಿ ಮುಂಚೂಣಿಯಲ್ಲಿದ್ದು, ಶೈಕ್ಷಣಿಕವಾಗಿ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ಕುಳಾಯಿ ಫೌಂಡೇಶನ್ ಟ್ರಸ್ಟ್ ಮೂಲಕ ಆರ್ಥಿಕ ನೆರವು ನೀಡಲಾಗುವುದು ಎಂದು ಪ್ರತಿಭಾ ಕುಲಾಯಿ ಅವರು ತಿಳಿಸಿದ್ದಾರೆ.


ಪೊಲೀಸರು ಉತ್ತರಿಸಬೇಕಿದೆ: ಸಂಬೋಳ್ಯದ ಬಾಲಕ ಸುಮಂತ್ ಅವರ ಸಾವಿನ ಸುತ್ತ ಹಲವಾರು ಊಹಾಪೋಹಗಳು ಈಗಾಗಲೇ ಕಂಡುಬಂದು ತನಿಖೆಗಳು ನಡೆಯುತ್ತಿದ್ದು ಇಡೀ ಜಿಲ್ಲೆಯೇ ಪ್ರಕರಣದ ಅಸಲಿ ಕಾರಣಗಳನ್ನು ತಿಳಿಯಲು ಕಾಯುತ್ತಿದೆ. ಪೊಲೀಸರ ತನಿಖೆ ಮೇಲೆಯೇ ಎಲ್ಲರೂ ಅವಲಂಬಿತರಾಗಿದ್ದಾರೆ. ನಿಜವಾಗಿಯೂ ಕೊಲೆಯೋ ಅಥವಾ ಸಹಜವಾದ ಸಾವೋ ಎಂಬುದನ್ನು ಪೊಲೀಸ್ ಇಲಾಖೆ ಸ್ಪಷ್ಟಪಡಿಸಬೇಕಾಗಿದೆ. ಹಳ್ಳಿ ಪ್ರದೇಶದಲ್ಲಿ ನಡೆದಿರುವ ಪ್ರಕರಣವನ್ನು ಪತ್ತೆಹಚ್ಚಲು ಪೊಲೀಸರು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿರುವುದು ಬೇಸರ ತಂದಿದೆ.
ಬೋಳಂಗಡಿಯಂತ ಹಪತ್ರಕರ್ತನನ್ನು ತನಿಖೆ ಮಾಡಲಿ: ಕೆಲವೊಂದು ಸಾಮಾಜಿಕ ಜಾಲತಾಣಗಳಲ್ಲಿ ಯೂಟ್ಯೂಬರ್ ಗಳು ಜನರಿಗೆ ಈ ಪ್ರಕರಣದ ಕುರಿತು ತಪ್ಪು ಸಂದೇಶ ನೀಡುತ್ತಿದ್ದಾರೆ. ಅದಕ್ಕೆ ಯಾರೂ ಕಿವಿಗೊಡಬಾರದು. ಕಣ್ಣ ಮುಂದೆಯೇ ಕೃತ್ಯ ನಡೆದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸುತ್ತಿರುವುದು ವಿಷಾದನೀಯ. ಜಾಲತಾಣಗಳಲ್ಲಿ ಪ್ರಕರಣದ ಕುರಿತು ತಪ್ಪು ತಪ್ಪಾಗಿ ಅಸಂಬದ್ಧ ಕಾರಣಗಳನ್ನು ನೀಡುತ್ತಾ ಜನರ ಹಾಗೂ ಇಲಾಖೆಗಳ ಕಣ್ಣು ತಪ್ಪಿಸುತ್ತಿರುವ ಬೋಳಂಗಡಿ ಯಂತಹ ಪತ್ರಕರ್ತನನ್ನು ತನಿಖೆಗೆ ಒಳಪಡಿಸಬೇಕು. ಈಗಾಗಲೇ ಬೇಸರದಲ್ಲಿರುವ ಕುಟುಂಬದವರಿಗೆ ಸಾಂತ್ವನ ನೀಡುವ ಬದಲು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ತಪ್ಪಾಗಿ ಬಂಬಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ರಾಜ್ಯ ಮಹಿಳಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ನಮಿತಾ ಕೆ ಪೂಜಾರಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಉಪಾಧ್ಯಕ್ಷೆ ಉಷಾ ಶರತ್, ಮಾಲಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುನೀತ್ ಕುಮಾರ್, ದ.ಕ.ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಅಬ್ದುಲ್ ಕರೀಂ ಗೇರುಕಟ್ಟೆ, ಬೆಳ್ತಂಗಡಿ ತಾಲೂಕು ಗ್ಯಾರಂಟಿ ಸಮಿತಿ ಸದಸ್ಯೆ ಮರೀಟಾ ಪಿಂಟೋ, ಬೆಳ್ತಂಗಡಿ ತಾಲೂಕು ಗ್ಯಾರಂಟಿ ಸಮಿತಿ ಸದಸ್ಯೆ ಸೌಮ್ಯ ಲಾಯಿಲ, ಕರ್ನಾಟಕ ಯಕ್ಷಗಾನ ಸಾಹಿತ್ಯ ಅಕಾಡೆಮಿಯ ಸದಸ್ಯ ರಾಘವ ಎಚ್ ಗೇರುಕಟ್ಟೆ, ಕಳಿಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಲಿತೀಫ್ ಪರಿಮ, ಕಳಿಯ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಶ್ವೇತಾ, ಉದ್ಯಮಿಗಳಾದ ರಶೀದ್ ಪರಿಮ, ರಫೀಕ್ ಮುಸ್ಲಿಯಾರ್ ಜಾರಿಗೆಬೈಲು, ಸಮದ್ ಗೇರುಕಟ್ಟೆ, ಲಕ್ಷ್ಮಣ ನಾಯ್ಕ ಗೇರುಕಟ್ಟೆ ಹಾಗೂ ಕೇಶವತಿ ಉಪಸ್ಥಿತರಿದ್ದರು.









