







ಉಜಿರೆ :ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮ ಕಲಶೋತ್ಸವ ಮತ್ತು ರಾಜಗೋಪುರ ಉದ್ಘಾಟನೆಯ ಶುಭ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಗಮಕ ಕಲಾ ಪರಿಷತ್ ವಿನೂತನವಾದ ಗಮಕ ಕಾರ್ಯಕ್ರಮವನ್ನು ನಡೆಸಿಕೊಟ್ಟಿತು.

ಗಮಕದ ಜೊತೆಗೆ ಯೋಗವನ್ನು ಸಂಯೋಜಿಸಿದ ವೈಶಿಷ್ಟ್ಯ ಪೂರ್ಣವಾದ ಯೋಗ ಗಮಕ ಕಾರ್ಯಕ್ರಮವು ಗಮಕ ಕಲೆಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನಗೊಂಡು ಕಲಾ ರಸಿಕರ ಮನವನ್ನು ರಂಜಿಸಿತು. ಡಾ. ಕಾರ್ತಿಕ್ ತಾಮ್ಹನ್ಕರ್ ವಿವಿಧ ಯೋಗಾಸನಗಳ ಕುರಿತು ಭಾಮಿನಿ ಷಟ್ಪದಿಗಳಲ್ಲಿ ಕಾವ್ಯವನ್ನು ರಚಿಸಿದ್ದರು.


ಯೋಗ ಷಟ್ಪದಿಯ ಈ ಕಾವ್ಯವನ್ನು ತಾಲೂಕು ಗಮಕ ಕಲಾ ಪರಿಷತ್ತಿನ ಕಾರ್ಯದರ್ಶಿ ಗಮಕಿ ಮೇಧಾ ಅಶೋಕ್ ಭಟ್ ಸುಶ್ರಾವ್ಯವಾಗಿ ವಾಚಿಸಿದರೆ, ಅಧ್ಯಕ್ಷ ರಾಮಕೃಷ್ಣ ಭಟ್ ಉಜಿರೆ ನಿರೂಪಣ ವ್ಯಾಖ್ಯಾನವನ್ನು ನೀಡಿದರು. ಜಗದೀಶ್ ಭಟ್ ಪಲ್ಗುಣಿ ಇವರ ನೇತೃತ್ವದಲ್ಲಿ ಸರಕಾರಿ ಪ್ರೌಢಶಾಲೆ ಕಲ್ಮಂಜದ ಯೋಗ ವಿದ್ಯಾರ್ಥಿಗಳು ಯೋಗ ಪ್ರದರ್ಶನವನ್ನು ನೀಡಿದರು.

ತದನಂತರದಲ್ಲಿ ಸಂವಾದ ಗಮಕ ಹಾಗೂ ಚಿತ್ರಗಮಕ ಕಾರ್ಯಕ್ರಮವು ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಶ್ರೀರಾಮ ನಿರೀಕ್ಷಣ ಎಂಬ ಶೀರ್ಷಿಕೆಯಡಿ ತಾಟಕಿ ಸಂಹಾರ ಮತ್ತು ಅಹಲ್ಯೋದ್ದಾರ ಕಥೆಗೆ ಪೂರಕವಾಗಿ ವಿವಿಧ ಕಾವ್ಯಗಳಿಂದ ಆಯ್ದ ಕಾವ್ಯವನ್ನು ಡಾ. ಕಾರ್ತಿಕ್ ತಾಮ್ಹನ್ಕರ್ ಮತ್ತು ಗಮಕಿ ಮಧೂರು ವಿಷ್ಣು ಪ್ರಸಾದ ಕಲ್ಲೂರಾಯ ವಾಚಿಸಿದರೆ ವಿಶ್ವಾಮಿತ್ರನ ಕಾವ್ಯ ಭಾಗವನ್ನು ಉಪನ್ಯಾಸಕ ಡಾ.ಮಹಾವೀರ ಜೈನ್ ಇಚ್ಲಂಪಾಡಿ ಮತ್ತು ಶ್ರೀರಾಮನ ಕಾವ್ಯವನ್ನು ಉಪನ್ಯಾಸಕಿ ವಸಂತಿ ಭಟ್ ಕುಳಮರ್ವ ಸಂವಾದ ರೂಪದಲ್ಲಿ ವ್ಯಾಖ್ಯಾನಿಸಿದರು.
ಇದೇ ಸಂದರ್ಭದಲ್ಲಿ ಚಿತ್ರಕಲಾಕಾರ ಯಾದವ್ ಉಜಿರೆ ಕಥೆಗೆ ಸಂಬಂಧಿಸಿದ ಚಿತ್ರಗಳನ್ನು ರಚಿಸಿ ಜನರ ಕಣ್ಮನ ಸೆಳೆದರು. ಕಾರ್ಯಕ್ರಮದಲ್ಲಿ ಉಜಿರೆಯ ಬ್ರಹ್ಮ ಕಲಶೋತ್ಸವ ಸಮಿತಿಯ ವಿವಿಧ ಸದಸ್ಯರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿನುತಾ ರಜತ್ ಗೌಡ ಕಾರ್ಯಕ್ರಮವನ್ನು ನಿರ್ವಹಿಸಿದರು.









