ಉಜಿರೆ: ಮನೆ ಧ್ವಂಸ-ಜೀವ ಬೆದರಿಕೆಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

0

ಬೆಳ್ತಂಗಡಿ: ಉಜಿರೆಯಲ್ಲಿರುವ ನಮ್ಮ ಮನೆಯನ್ನು ಧ್ವಂಸ ಮಾಡಿ ಬೆದರಿಕೆ ಹಾಕಲಾಗಿದೆ ಎಂದು ಉಜಿರೆ ಕಕ್ಕರೆಬೆಟ್ಟುವಿನ‌ ರಾಜೀವಿ ಎಂಬವರು ಉಜಿರೆ ಓಡಲದ ಶೇಕ್ ರಫೀಕ್ ಎಂಬವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ಫೆ.27ರಂದು ದೂರು ನೀಡಿದ್ದಾರೆ.

ದೂರಿನ ವಿವರ:ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಸ.ನಂಬ್ರ.406/1ರ ಸರಕಾರಿ ಸ್ಥಳದಲ್ಲಿ ನಾನು ಮನೆಯನ್ನು ನಿರ್ಮಿಸಿದ್ದೇನೆ. ಈ‌ ಮನೆಯಲ್ಲಿ ನಾನು ನನ್ನ ಗಂಡ ಹಾಗೂ ಮಗಳೊಂದಿಗೆ ವಾಸವಾಗಿರುತ್ತೇನೆ. ಈ ಸ್ಥಿರಾಸ್ತಿಯಲ್ಲಿ ನಾನು ಅಡಿಕೆ ಮತ್ತು ತೆಂಗು ಕೃಷಿ ಮಾಡಿರುತ್ತೇನೆ.

ಈ ದಿನ ಸುಮಾರು 11.00 ಗಂಟೆಗೆ ನಾನು ಮತ್ತು ನನ್ನ ಗಂಡ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಓಡಲ‌ ಮನೆಯ ಶೇಕ್ ರಫೀಕ್ ಎಂಬವರು ನನ್ನ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಮನಗಂಡು ನನ್ನ ಮನೆಯೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ನನ್ನ ಮನೆಯನ್ನು ಸಂಪೂರ್ಣವಾಗಿ ನಾಶಪಡಿಸಿರುತ್ತಾರೆ. ಅಲ್ಲದೆ ನನ್ನ ಮನೆಯಲ್ಲಿದ್ದ ಟಿ.ವಿ.. ಫ್ರಿಡ್ಜ್, ಗ್ಯಾಸ್ ಸಿಲಿಂಡರ್, ಪೀಠೋಪಕರಣಗಳು, ಬಟ್ಟೆ ಬರೆ, ದಿನಸಿ ಸಾಮಾನು ಇನ್ನಿತ್ಯಾದಿ ಎಲ್ಲಾ ವಸ್ತುಗಳನ್ನು ಮನೆಯಿಂದ ತೆಗೆದು ರಸ್ತೆಯ ಬದಿಯಲ್ಲಿ ಬಿಸಾಡಿದ್ದಾರೆ.

ಈ ಕೃತ್ಯದ ಬಗ್ಗೆ ತಿಳಿದು ನನ್ನ ಅಪ್ರಾಪ್ತ ವಯಸ್ಸಿನ ಮಗಳು ಕೂಡಲೇ ಸ್ಥಳಕ್ಕೆ ಧಾವಿಸಿದ್ದು ಎದುರುದಾರರ ಈ ಅಕ್ರಮ ಕೆಲಸವನ್ನು ವಿಡಿಯೋ ರೆಕಾರ್ಡಿಂಗ್ ಮಾಡಲು ಹೋದಾಗ “ನೀನು ಏನಾದರೂ ದೂರನ್ನು ನೀಡಿದರೆ ನಿನ್ನನ್ನು ಹಾಗೂ ನಿನ್ನ ಮನೆಯವರನ್ನು ಜೀವಸಹಿತ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಒಡ್ಡಿದ್ದಾರೆ. ಬೆದರಿಕೆಯಿಂದ ನನ್ನ ಅಪ್ರಾಪ್ತ ವಯಸ್ಸಿನ ಮಗಳು ಭಯಭೀತಳಾಗಿದ್ದು ಏನು ಮಾಡಬೇಕೆಂದು ತೋಚದೆ ಅಳುತ್ತಿದ್ದ ಸಂದರ್ಭದಲ್ಲಿ ನಮ್ಮ ನೆರೆಕರೆಯವರಾದ ತ್ಯಾಗರಾಜ್ ಮತ್ತು ಜಯ ಅವರು ನನ್ನ ಅಪ್ರಾಪ್ತ ವಯಸ್ಸಿನ ಮಗಳು ಅಳುತ್ತಿರುವುದನ್ನು ಕಂಡು ಸ್ಥಳಕ್ಕೆ ಧಾವಿಸಿ ಈ ಕೃತ್ಯವನ್ನು ಪ್ರಶ್ನಿಸಿದಾಗ ಎದುರುದಾರರು ಸದ್ರಿ ತ್ಯಾಗರಾಜ್ ಮತ್ತು ಜಯ ಇವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ “ತನ್ನ ವಿಷಯಕ್ಕೆ ಬಂದಲ್ಲಿ ನಿಮ್ಮಿಬ್ಬರ ಮನೆಯನ್ನು ಕೂಡಾ ಒಡೆದು ಹಾಕುತ್ತೇನೆ” ಎಂದು ಬೆದರಿಕೆಯನ್ನು ಹಾಕಿರುತ್ತಾರೆ. ಸದ್ರಿ ಎದುರುದಾರರ ಕೃತ್ಯದ ವಿಡಿಯೋ ಮತ್ತು ಫೋಟೋ ಹೊಂದಿರುವ ಪೆನ್‌ಡ್ರೈವ್‌ನ್ನು ಈ ಮೂಲಕ ಹಾಜರುಪಡಿಸಲಾಗಿದೆ. ಎದುರುದಾರರ ಸದ್ರಿ ಕೃತ್ಯದಿಂದಾಗಿ ನಮಗೆ ಸುಮಾರು ರೂ.10,00,000/- ದಷ್ಟು ನಷ್ಟ ಉಂಟಾಗಿದ್ದು, ನಮಗೆ ವಾಸಿಸಲು ಮನೆಯಿಲ್ಲದಂತಾಗಿರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here