ಬೆಳ್ತಂಗಡಿ: 25 ವರ್ಷಗಳ ನಂತರ ಮೈದಾನದಲ್ಲಿ ಹಳೆಯ ಗೆಳೆಯರ ಅಪೂರ್ವ ಮಿಲನಕನ್ನಾಜೆ ಲೆಜೆಂಡ್ಸ್ ಪ್ರೀಮಿಯರ್ ಲೀಗ್‌ಗೆ ಭರ್ಜರಿ ಜನಮನ್ನಣೆ

0

ಕನ್ನಾಜೆ : ಕ್ರಿಕೆಟ್ ಕೇವಲ ಆಟವಲ್ಲ, ಅದು ಹಳೆಯ ನೆನಪುಗಳನ್ನು ಬೆಸೆಯುವ ಅದ್ಭುತ ಸೇತುವೆ ಎಂಬುದನ್ನು ‘ಕನ್ನಾಜೆ ಲೆಜೆಂಡ್ಸ್ ಪ್ರೀಮಿಯರ್ ಲೀಗ್’ (KPL) ಸಾಬೀತುಪಡಿಸಿದೆ.

ಸುಮಾರು ಎರಡೂವರೆ ದಶಕಗಳ ಕಾಲ ಜೀವನದ ವಿವಿಧ ಹಾದಿಗಳಲ್ಲಿ ಸಾಗಿದ್ದ ಹಳೆಯ ಸ್ನೇಹಿತರನ್ನು ಮತ್ತೆ ಒಂದೇ ಮೈದಾನದಲ್ಲಿ ಸೇರಿಸುವ ಮೂಲಕ ಕನ್ನಾಜೆ ಫ್ರೆಂಡ್ಸ್ ಯುವಕರು ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.ಸ್ನೇಹದ ಕಂಪು ಪಸರಿಸಿದ ಕ್ರೀಡಾಂಗಣದಿನನಿತ್ಯದ ಕೆಲಸದ ಒತ್ತಡದಲ್ಲಿ ದೂರವಾಗಿದ್ದ ಗೆಳೆಯರು, ಈ ಪಂದ್ಯಾವಳಿಯ ಮೂಲಕ ಮತ್ತೆ ಬ್ಯಾಟ್ ಮತ್ತು ಬಾಲ್ ಹಿಡಿದು ಮೈದಾನಕ್ಕಿಳಿದಾಗ ಅಲ್ಲಿ ಹಳೆಯ ಕಾಲದ ಸಂಭ್ರಮ ಮರುಕಳಿಸಿತ್ತು. ಕನ್ನಾಜೆ ಮೈದಾನವು ಕೇವಲ ರನ್ ಮತ್ತು ವಿಕೆಟ್‌ಗಳಿಗೆ ಸಾಕ್ಷಿಯಾಗದೆ, ಅಪ್ಪುಗೆ, ನಗು ಮತ್ತು ಕಳೆದ ಹೋದ ಸುಂದರ ದಿನಗಳ ಹರಟೆಗೆ ವೇದಿಕೆಯಾಯಿತು.

ಈ ಸಂದರ್ಭದಲ್ಲಿ ಹಿರಿಯರಾದ ಜಯರಾಮ ಶೆಟ್ಟಿ ಪಣೆಜಾಲು ಅವರು ಮಾತನಾಡಿ, “ಕನ್ನಾಜೆ ಯೂತ್ಸ್ ತಂಡದ ಈ ಕಾರ್ಯ ನಿಜಕ್ಕೂ ಶ್ಲಾಘನೀಯ. 25 ವರ್ಷಗಳ ಸುದೀರ್ಘ ಕಾಲದ ನಂತರ ನಮ್ಮೆಲ್ಲಾ ಹಳೆಯ ಸ್ನೇಹಿತರನ್ನು ಒಟ್ಟುಗೂಡಿಸಿ, ನಮ್ಮ ಹಳೆಯ ಸುಂದರ ದಿನಗಳನ್ನು ಮತ್ತೆ ಕಣ್ಣಮುಂದೆ ತಂದಿದ್ದಾರೆ. ಈ ಅಪೂರ್ವ ಸಂಗಮ ನಮ್ಮ ಮನಸ್ಸಿಗೆ ತುಂಬ ಸಂತೋಷ ನೀಡಿದೆ,” ಎಂದು ಹರ್ಷ ವ್ಯಕ್ತಪಡಿಸಿದರು.

ಹರೀಶ್ ಶೆಟ್ಟಿ ಬೆಂಗಳೂರು ಅವರು ಮಾತನಾಡಿ, “ಬೆಂಗಳೂರಿನ ಜೀವನದ ನಡುವೆ ಈ ಕೆಪಿಎಲ್ (KPL) ಪಂದ್ಯಾವಳಿಯು ನಮಗೆ ಹೊಸ ಚೈತನ್ಯ ನೀಡಿದೆ. ನಾವು ಇಷ್ಟೊಂದು ಪ್ರಮಾಣದಲ್ಲಿ ಈ ಆಟವನ್ನು ಎಂಜಾಯ್ ಮಾಡುತ್ತೇವೆ ಎಂದು ಅಂದುಕೊಂಡಿರಲಿಲ್ಲ. ಮೈದಾನದಲ್ಲಿ ನಾವೆಲ್ಲರೂ ಮತ್ತೆ ನಮ್ಮ ಹಳೆಯ ಕಾಲದ ಯುವಕರಾದಂತೆ ಭಾಸವಾಯಿತು,” ಎಂದರು.

ಸುರೇಂದ್ರ ಆಚಾರ್ಯ ಬೆಂಗಳೂರು ಅವರು ಮಾತನಾಡುತ್ತಾ, “ಕಾಲು ಶತಮಾನದ ಬಳಿಕ ನಾವೆಲ್ಲರೂ ಒಂದಾಗಿ ಆಡಿದ ಈ ಪಂದ್ಯಗಳು ಒಂದು ಅವಿಸ್ಮರಣೀಯ ಅನುಭವ. ಕ್ರಿಕೆಟ್ ಮೂಲಕ ನಮ್ಮ ಸ್ನೇಹಕ್ಕೆ ಮರುಜೀವ ನೀಡಿದ ಕನ್ನಾಜೆ ಫ್ರೆಂಡ್ಸ್ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಈ ಸುಂದರ ನೆನಪನ್ನು ನಾವು ಜೀವನಪೂರ್ತಿ ಮೆಲುಕು ಹಾಕುತ್ತೇವೆ,” ಎಂದು ಭಾವುಕರಾದರು.

ರುಕ್ಮಯ ಆಚಾರ್ಯ ಕನ್ನಾಜೆಯವರ ನೆನಪಿನ ಬುತ್ತಿ : ಇದೇ ಸಂದರ್ಭದಲ್ಲಿ ಮಾತನಾಡಿದ ರುಕ್ಮಯ ಆಚಾರಿ ಅವರು, “ಸುಮಾರು 25 ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನಾದ್ಯಂತ ಕ್ರಿಕೆಟ್ ಕ್ಷೇತ್ರದಲ್ಲಿ ಕನ್ನಾಜೆ ತಂಡದ ಹೆಸರು ಕೇಳಿಬರುತ್ತಿತ್ತು. ಅಂದು ತಾಲ್ಲೂಕು ಮಟ್ಟದ ಎಲ್ಲಾ ತಂಡಗಳನ್ನು ಸೇರಿಸಿ ನಾವು ಅದ್ಧೂರಿ ಪಂದ್ಯಾವಳಿಗಳನ್ನು ನಡೆಸುತ್ತಿದ್ದೆವು. ಅಂದು ಯಾರೆಲ್ಲಾ ಸಂಘಟಕರಾಗಿ, ಆಟಗಾರರಾಗಿ ಸಕ್ರಿಯವಾಗಿದ್ದರೋ, ಅವರೆಲ್ಲರೂ ಇಂದು ಕನ್ನಾಜೆ ಫ್ರೆಂಡ್ಸ್ ಯುವಕರ ಪ್ರಯತ್ನದಿಂದಾಗಿ ಮತ್ತೆ ಒಂದೆಡೆ ಸೇರಿದ್ದಾರೆ. ಇದು ಕನ್ನಾಜೆಯು ಕ್ರಿಕೆಟ್ ಇತಿಹಾಸದಲ್ಲಿ ಒಂದು ಸುಂದರ ಅಧ್ಯಾಯ,” ಎಂದು ಹಳೆಯ ವೈಭವವನ್ನು ನೆನಪಿಸಿಕೊಂಡರು.ಈ ವಿಶೇಷ ಕ್ರೀಡಾಕೂಟವು ಕೇವಲ ಗೆಲುವು-ಸೋಲಿಗೆ ಸೀಮಿತವಾಗದೆ, ಮನುಷ್ಯ ಸಂಬಂಧಗಳ ಬೆಸುಗೆಗೆ ಒತ್ತು ನೀಡಿತು. ಹಳೆಯ ತಲೆಮಾರಿನ ಆಟಗಾರರನ್ನು ಗೌರವಿಸಿ, ಅವರನ್ನು ಮತ್ತೆ ಮೈದಾನಕ್ಕಿಳಿಸಿದ ಕನ್ನಾಜೆ ಯುವಕರ ಈ ವಿನೂತನ ಪ್ರಯತ್ನಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಯಿತು. ಸ್ಥಳೀಯರು ಈ ಪಂದ್ಯಾವಳಿಯನ್ನು ನೋಡಿ ಸಂಭ್ರಮಿಸಿದರು.

ಈ ಪಂದ್ಯಕೂಟದಲ್ಲಿ ಶ್ರೀ ಗಣೇಶ್ ತತ್ವಮಸಿ, ರತ್ನಶ್ರೀ ಕನ್ನಾಜೆ, ಶ್ರೀ ದುರ್ಗಾಪರಮೇಶ್ವರಿ ಕನ್ನಾಜೆ, ವೈ ಎಸ್ ಬ್ರದರ್ಸ್, ಮಾಡ ಶ್ರೀ ತಂಡಗಳು ಭಾಗವಹಿಸಿದ್ದವು ಈ ವಿಶೇಷ ಕ್ರೀಡಾಕೂಟದಲ್ಲಿ ಎಲ್ಲರ ಗಮನ ಸೆಳೆದ ಮತ್ತೊಂದು ಪ್ರಮುಖ ಅಂಶವೆಂದರೆ ರಾಮಣ್ಣ ಸಪಲ್ಯ ಅವರು ಪ್ರದರ್ಶಿಸಿದ ಹಳೆಯ ಕ್ರಿಕೆಟ್ ಬಾಲ್. ಸುಮಾರು 25 ವರ್ಷಗಳ ಹಿಂದೆ ತಾವು ಕ್ರಿಕೆಟ್ ಆಡುತ್ತಿದ್ದ ಕಾಲದಲ್ಲಿ ಬಳಸುತ್ತಿದ್ದ ಅದೇ ಚೆಂಡನ್ನು ಅವರು ಇಂದಿನವರೆಗೂ ಅತ್ಯಂತ ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಅದನ್ನು ಪ್ರದರ್ಶಿಸಿದರು.ಈ ಪಂದ್ಯಾವಳಿಯು ಕೇವಲ ಕ್ರೀಡೆಯಾಗಿ ಉಳಿಯದೆ, ಸಮಾಜಕ್ಕೆ ಸ್ನೇಹ ಮತ್ತು ಒಗ್ಗಟ್ಟಿನ ಸಂದೇಶವನ್ನು ನೀಡಿತು.

ಪ್ರಥಮ ಸ್ಥಾನ ಮಾಡ, ದ್ವಿತೀಯ ಸ್ಥಾನ ತತ್ವಮಸಿ ಕನ್ನಾಜೆ, ತೃತೀಯ ಸ್ಥಾನ ರತ್ನಶ್ರೀ ಫ್ರೆಂಡ್ಸ್ ಕನ್ನಾಜೆ ಹಾಗೂ ಚತುರ್ಥ ಸ್ಥಾನ ಶ್ರೀ ಗಣೇಶ್ ತಂಡ ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here