







ಬೆಳ್ತಂಗಡಿ: ೨೦೧೭ರ ಎಪ್ರಿಲ್ ೮ರಂದು ರಾತ್ರಿ ೧೦.೧೫ರ ವೇಳೆಗೆ ರೆಖ್ಯ ಗ್ರಾಮದ ಎಂಜಿರದಲ್ಲಿ ಲಾರಿಗೆ ಕಾರು ಅಡ್ಡ ಇಟ್ಟು ಚಾಲಕನಿಗೆ ಚೂರಿಯಿಂದ ಗಾಯ ಮಾಡಿ ಹಣ ದರೋಡೆ ಮಾಡಿದ್ದ ಪ್ರಕರಣದ ಆರೋಪಿಯನ್ನು ಧರ್ಮಸ್ಥಳ ಠಾಣಾ ಪೊಲೀಸರು ಬಂಧಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ. ೬೫/೨೦೧೭ರಂತೆ ಕಲಂ ೩೯೭, ೩೯೫ ಜೊತೆಗೆ ೩೪ ಐಪಿಸಿಯಡಿಯ ಕೇಸ್‌ಗೆ ಸಂಬಂಧಿಸಿ ಬೆಂಗಳೂರು ಮಾಗಡಿಯ ನಂಜುಂಡ ಎಂಬಾತ ಕಳೆದ ೫ ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನನ್ನು ಬೆಂಗಳೂರು ಗಿಡ್ಡೆನಹಳ್ಳಿ ಎಂಬಲ್ಲಿ ಪತ್ತೆ ಹಚ್ಚಿದ ಧರ್ಮಸ್ಥಳ ಠಾಣಾ ಪೊಲೀಸರು ಫೆ.೧೩ರಂದು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.


ಘಟನೆಯ ವಿವರ: ೨೦೧೭ರ ಎಪ್ರಿಲ್ ೮ರಂದು ಬೆಳಿಗ್ಗೆ ಚಿಕ್ಕಮಗಳೂರಿನ ಅಂಬಲೆಯ ರಾಘವೇಂದ್ರ ಎಂಬವರು ಲಾರಿ(ಕೆ.ಎ.೪೦-ಎ-೨೦೭೬)ಯಲ್ಲಿ ಗೌರಿಬಿದನೂರಿನ ತೊಂಡೆಬಾವಿ ಎಂಬಲ್ಲಿಂದ ಸಿಮೆಂಟ್ ಲೋಡ್ ಮಾಡಿಕೊಂಡು ಉಡುಪಿ ಕಡೆಗೆ ಹೊರಟು ಅರಸೀಕೆರೆ ಮಾರ್ಗವಾಗಿ ಬರುತ್ತಾ ರಾತ್ರಿ ೧೦.೧೫ರ ವೇಳೆಗೆ ಬೆಳ್ತಂಗಡಿ ತಾಲೂಕಿನ ರೆಖ್ಯ ಗ್ರಾಮದ ಎಂಜಿರ ಎಂಬಲ್ಲಿಗೆ ತಲುಪಿ ರಸ್ತೆ ಬದಿ ಲಾರಿ ನಿಲ್ಲಿಸಿ ಮೂತ್ರಶಂಕೆ ಮಾಡಿ ಲಾರಿಗೆ ಹತ್ತುವ ಸಮಯ ಈ ಲಾರಿಗೆ ಒಂದು ಕಾರನ್ನು ಅಡ್ಡ ಇಟ್ಟು ಕಾರಿನಿಂದ ೫ ಜನರು ಇಳಿದಿದ್ದರು. ಅವರ ಪೈಕಿ ಮೂರು ಮಂದಿ ಲಾರಿಯ ಎಡಬದಿಯ ಬಾಗಿಲು ತೆಗೆದು ನುಗ್ಗಿದ್ದರು. ಇನ್ನಿಬ್ಬರು ಬಲಬದಿಯಿಂದ ಒಳಗೆ ನುಗ್ಗಿದ್ದರು. ಅವರ ಪೈಕಿ ಓರ್ವ ಚೂರಿ ತೋರಿಸಿ ಚಾಲಕ ರಾಘವೇಂದ್ರ ಅವರನ್ನು ಹೆದರಿಸಿ ನಿನ್ನ ಹತ್ತಿರ ಏನೆಲ್ಲಾ ವಸ್ತುಗಳಿಗೆ ಅದನ್ನೆಲ್ಲಾ ಕೊಡು ಎಂದು ಹೇಳಿದ್ದ. ಚಾಲಕ ರಾಘವೇಂದ್ರ ಅವರು ತನ್ನಲ್ಲಿ ಹಣ ಇಲ್ಲ ಎಂದು ತಿಳಿಸಿದಾಗ ಒಬ್ಬನು ಕೈಯಿಂದ ಹೊಡೆದು ಕಾಲಿನಿಂದ ತುಳಿದಿದ್ದಾನೆ.
ಮತ್ತೋರ್ವ ಕೈಯಲ್ಲಿದ್ದ ಚೂರಿಯಿಂದ ರಾಘವೇಂದ್ರ ಅವರ ಎಡಕಾಲಿನ ಮೊಣಗಂಟಿಗೆ, ಎದೆಯ ಎಡಭಾಗಕ್ಕೆ ಹಾಗೂ ಬಲಭುಜಕ್ಕೆ ಹಲ್ಲೆ ಮಾಡಿ ಗಾಯಗೊಳಿಸಿದ್ದಾನೆ. ಅಲ್ಲದೆ ರಾಘವೇಂದ್ರ ಅವರ ಚಡ್ಡಿಯ ಕಿಸೆಯಿಂದ ೧೭ ಸಾವಿರ ರೂ ನಗದು ಹಣ ಮತ್ತು ಕರ್ಣಾಟಕ ಬ್ಯಾಂಕ್‌ನ ಎಟಿಎಂ ಇದ್ದ ಪರ್ಸ್ ಮತ್ತು ೧೨ ಸಾವಿರ ರೂ ಬೆಲೆ ಬಾಳುವ ಮೊಬೈಲ್ ಫೋನ್ ಹಾಗೂ ಲಾರಿಯ ಕೀಯನ್ನು ಎಳೆದುಕೊಂಡು ಮಹೀಂದ್ರ ಕಾರಿನಲ್ಲಿ ಮಂಗಳೂರು ಕಡೆಗೆ ಪರಾರಿಯಾಗಿದ್ದರು. ನಂತರ ರಾಘವೇಂದ್ರ ಅವರು ಲಾರಿಯ ಒಳಗೆ ನೋಡಿದಾಗ ದರೋಡೆಕೋರರಿಗೆ ಸೇರಿದ ನೋಕಿಯಾ ಕಂಪನಿಯ ಮೊಬೈಲ್ ಫೋನ್ ಸಿಕ್ಕಿತ್ತು. ಚಾಲಕ ರಾಘವೇಂದ್ರ ಅವರು ಆ ದಾರಿಯಲ್ಲಿ ಬಂದವರಲ್ಲಿ ಘಟನೆಯ ಕುರಿತು ತಿಳಿಸಿ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ೨೦೧೭ರ ಎ.೯ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ೬೫/೨೦೧೭ರಂತೆ ಐಪಿಸಿ ೩೯೭ರಡಿ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿಗಳನ್ನು ಬಂಧಿಸಲಾಗಿದ್ದು ನಂಜುಂಡ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ.








