ಬೆಳ್ತಂಗಡಿ ನಗರದ ಮುಗುಳಿ ಹಾಗೂ ಕೆಲ್ಲಗುತ್ತು ಎಂಬಲ್ಲಿ ಚಿರತೆ ಚಲನ ವಲನ ಹಿನ್ನೆಲೆ:ಕೆಲ್ಲಗುತ್ತುವಿನಲ್ಲಿ ಬೋನು ಇರಿಸಿದ ಅರಣ್ಯ ಇಲಾಖಾಧಿಕಾರಿಗಳು-ಮುಂಜಾನೆ ಹಾಗೂ ಸಂಜೆ 6 ಗಂಟೆಯ ನಂತರ ನಾಗರಿಕರ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಲು ಸೂಚನೆ

1

ಬೆಳ್ತಂಗಡಿ: ಬೆಳ್ತಂಗಡಿ ನಗರದ ಮುಗುಳಿ ಹಾಗೂ ಕೆಲ್ಲಗುತ್ತು ಎಂಬಲ್ಲಿ ಜ.31ರಂದು ಚಿರತೆ ಕಂಡು ಬಂದ ಹಿನ್ನೆಲೆಯಲ್ಲಿ ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯವರು ಸ್ಥಳ ಪರಿಶೀಲನೆ ಮಾಡಿ ಕೆಲ್ಲಗುತ್ತು ಎಂಬಲ್ಲಿ ಚಿರತೆ ಹಿಡಿಯಲು ಬೋನು ಅಳವಡಿಸಿದ್ದಾರೆ.

ಮುಂಜಾನೆ ಹಾಗೂ ಸಂಜೆ 6 ಗಂಟೆಯ ನಂತರ ನಾಗರಿಕರು ಅನಗತ್ಯ ಓಡಾಟವನ್ನು ನಿಲ್ಲಿಸಿ ಸುರಕ್ಷಿತರಾಗಲು ಅರಣ್ಯ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ.

ಬೋನ್ ಅಳವಡಿಕೆ ಕಾರ್ಯಾಚರಣೆಯ ಸಮಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ ಆರ್.ಎಫ್.ಒ ತ್ಯಾಗರಾಜ್ ಅವರ ಮಾರ್ಗದರ್ಶನದಂತೆ ಅರಣ್ಯ ಅಧಿಕಾರಿಗಳಾದ ಡಿ.ಆರ್.ಎಫ್.ಒ. ಕಿರಣ್ ಪಾಟೀಲ್, ಪರಶಿವ ಮೂರ್ತಿ ಹಾಗೂ ಗಸ್ತು ಅರಣ್ಯ ಪಾಲಕರು ಹಾಜರಿದ್ದರು.

ಘಟನೆಯ ವಿವರ: ನಗರದ ಮುಗುಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಆವಾಸ್ ವಸತಿ ನಿಲಯದ ಮಕ್ಕಳು ಬೆಳಗ್ಗೆ ಬಟ್ಟೆ ತೊಳೆಯಲು ಹೊರಗೆ ಬಂದಾಗ ನಿಲಯಕ್ಕೆ ತಾಗಿಕೊಂಡು ಪಕ್ಕದಲ್ಲಿರುವ ಅಡಿಕೆ ತೋಟದ ಬದಿಯಲ್ಲೇ ಇದ್ದ ಚಿರತೆಯೊಂದನ್ನು ನೋಡಿದ ಶಾಲಾ ಮಕ್ಕಳು ಹೆದರಿ ನಿಲಯದ ಒಳಗೆ ಓಡಿ ಹೋಗಿ ಬಾಗಿಲು ಹಾಕಿ ಅವಿತು ಕೊಂಡು ನಿಲಯ ಸಿಬ್ಬಂದಿಗೆ ಮತ್ತು ಸ್ಥಳೀಯರಿಗೆ ಮಾಹಿತಿಯನ್ನು ನೀಡಿದ್ದರು ಮತ್ತು ಅದೇ ಪರಿಸರದ ಪಕ್ಕದ ಕೆಲ್ಲಗುತ್ತು ಜಂಕ್ಷನ್ ಬಳಿಯಲ್ಲಿ ಮಹಿಳೆಯೊಬ್ಬರು ಬೆಳಿಗ್ಗೆ 7-15 ರ ಸಮಯದಲ್ಲಿ ಫ್ಯಾಕ್ಟರಿ ಕೆಲಸಕ್ಕೆಂದು ಹೋಗುತ್ತಿರುವ ಸಮಯದಲ್ಲಿ ಚಿರತೆಯೊಂದು ರಸ್ತೆ ಬದಿಯಲ್ಲಿ ಜೋರಾಗಿ ಘರ್ಜನೆ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ ಚಿರತೆ ಬರುತ್ತಿರುವ ಸೂಚನೆ ಅರಿತ ಮಹಿಳೆ ಭಯಭೀತರಾಗಿ ಬೆಳ್ತಂಗಡಿ ಪೇಟೆಕಡೆಗೆ ಓಡಿಕೊಂಡು ಹೋಗಿ ಸ್ಥಳೀಯರಿಗೆ ಮಾಹಿತಿಯನ್ನು ನೀಡಿದ್ದರು.

ಸ್ಥಳೀಯರಿಂದ ಅರಣ್ಯ ಇಲಾಖೆಗೆ ಮಾಹಿತಿ: ಚಿರತೆಯನ್ನು ನೋಡಿದ ಪ್ರತ್ಯಕ್ಷದರ್ಶಿಗಳಿಂದ, ಸ್ಥಳೀಯರಿಂದ ಹಾಗೂ ವಸತಿ ನಿಲಯದ ಸಿಬ್ಬಂದಿಗಳಿಂದ ಮಾಹಿತಿಯನ್ನು ಪಡಕೊಂಡ ಬಿ.ಕೆ.ವಸಂತ್ ಅರಣ್ಯ ಇಲಾಖೆಯ ಅಧಿಕಾರಿ ಆರ್.ಎಫ್.ಒ ತ್ಯಾಗರಾಜ್ ರವರಿಗೆ ಮಾಹಿತಿಯನ್ನು ನೀಡಿದ್ದು ಅವರ ಮಾರ್ಗದರ್ಶನದಲ್ಲಿ ಅರಣ್ಯ ಅಧಿಕಾರಿಗಳಾದ ಕಿರಣ್ ಪಾಟೀಲ್ ,ಪರಶಿವ ಮೂರ್ತಿ, ಸ್ಥಳೀಯ ಮುಖಂಡರಾದ ಬಿ.ಕೆ ವಸಂತ್, ಸನತ್ ಕುಮಾರ್ ಜೈನ್, ಜಯಕುಮಾರ್, ಹರೀಶ್ ಜೈನ್, ಹರೀಶ್ ಆಟೋ ಕೆಲ್ಲಗುತ್ತು, ಮತ್ತಿತರರು ಮುಗುಳಿ ಕೆಲ್ಲಗುತ್ತು ,ಪ್ರದೇಶದಲ್ಲಿ ಚಿರತೆ ಬಂದಿರುವ ಬಗ್ಗೆ ಅದರ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಿ ಪರಿಶೀಲನೆ ಮಾಡಲು ಅರಣ್ಯ ಇಲಾಖೆಗೆ ಸಹಕರಿಸಿದ್ದರು.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಬೋನು ಇರಿಸಿ ಚಿರತೆಯನ್ನು ಸೆರೆಹಿಡಿಯಲು ಮುಂದಾಗಿದ್ದಾರೆ.

1 COMMENT

  1. ಚಿರತೆ ಸಿಕ್ಕಿದರೆ ಯಾವ ಊರಲ್ಲಿ ಕೊಂಡಗಿ ಬಿಡುತ್ತೀರಿ ಅನ್ನೋದು ಕುತೂಹಲದ…..?

LEAVE A REPLY

Please enter your comment!
Please enter your name here