ಮಾನವೀಯ ಹೃದಯದೊಂದಿಗೆ ಸರ್ವರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಪ್ರವಾದಿಯವರ ಆದರ್ಶ ಮೈಗೂಡಿಸಿಕೊಳ್ಳಬೇಕಿದೆ; ಎಂ.ಎ ಗಫೂರ್

0

ಬೆಳ್ತಂಗಡಿ: ಖುರಾನ್, ಭಗವದ್ಗೀತೆ, ಬೈಬಲ್ ಸಹಿತ ಇತರರ ಧರ್ಮ ಗ್ರಂಥಗಳೆಲ್ಲವೂ ಅನುವಾದ ರೂಪದಲ್ಲಿದ್ದು ಅವುಗಳನ್ನು ಓದಿ ಮನವರಿಸಿಕೊಂಡು ಮಾನವೀಯ ಹೃದಯದೊಂದಿಗೆ ಸರ್ವರ ಕಷ್ಟ ಸುಖಗಳಲ್ಲಿ ಭಾಗಿಯಾಗುವ ಪ್ರವಾದಿಯವರ ಆದರ್ಶ ಮೈಗೂಡಿಸಿಕೊಳ್ಳಬೇಕಿದೆ. ಬಡವರಿಗೆ ದುರ್ಬಲರಿಗೆ ಧ್ವನಿ ಇಲ್ಲದವರಿಗೆ ಧ್ವನಿಯಾಗಿ ಸಂವಿಧಾನದ ಅಶಯ ಭದ್ರಪಡಿಸಬೇಕಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ ಗಫೂರ್ ಹೇಳಿದರು.ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್ ಕಣಿಯೂರು ಇದರ ನೂತನ ಮಸ್ಜಿದ್ ಉದ್ಘಾಟನೆಯ ಅಂಗವಾಗಿ ಜ.22 ರಂದು ಹಮ್ಮಿಕೊಂಡಿದ್ದ ಸರ್ವಧರ್ಮ ಸೌಹಾರ್ದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಅಧ್ಯಕ್ಷತೆಯನ್ನು ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ವಹಿಸಿದ್ದರು.ಮುಖ್ಯ ಅತಿಥಿಯಾಗಿದ್ದ ಕೆಪಿಸಿಸಿ‌ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮಾತನಾಡಿ, ಧಾರ್ಮಿಕ ಕೇಂದ್ರಗಳು ಹೇಗಿರಬೇಕೆಂದು ಇಲ್ಲಿ‌ಎಲ್ಲಾ ಧರ್ಮೀಯರನ್ನೂ ಸೇರಿಸಿ‌ತೋರಿಸಿಕೊಟ್ಟಿದ್ದೀರಿ. ನಾವೆಲ್ಲಾ ಇನ್ನೊಂದು ಧರ್ಮವನ್ನು ತಿಳಿಯುವ ಪ್ರಯತ್ನವನ್ನೇ ಮಾಡದಿರುವುದು ದುರಂತ‌. ಎಲ್ಲ ಧರ್ಮದ ಧ್ಯೇಯ ದಯೆ, ಪ್ರೀತಿ, ಸಹಬಾಳ್ವೆಯೇ ಆಗಿದೆ. ಕ್ರೌರ್ಯ ಮತ್ತು ಹಿಂಸೆಯನ್ನೂ ಯಾವ ಧರ್ಮವೂ ಪ್ರತಿಪಾದಿಸಿಲ್ಲ ಎಂದರು.

ದಿಕ್ಸೂಚಿ ಭಾಷಣ ಮಾಡಿದ ಉಸ್ತಾದ್ ಅತಾವುಲ್ಲಾ ಹಿಮಮಿ ಸಖಾಫಿ, ನಮ್ಮೊಳಗಿನ ಆಂತರಿಕ ಕಲಹಗಳು ಹೊರಗಿನವರ ನಡುವೆ ನಮ್ಮ ದೌರ್ಬಲ್ಯವನ್ನು ಎತ್ತಿ ತೋರಿಸಿ ನಾವೇ ದುರ್ಬಲರಾಗುತ್ತೇವೆ. ಇದರಿಂದ ದೇಶೀಯ ಮಟ್ಟದಲ್ಲೂ ಅತಿಕ್ರಮಣಗಳಿಗೆ ಕಾರಣವಾಗುತ್ತದೆ. ನಮ್ಮ ಊರಿನ ಸೌಹಾರ್ದತೆ ಎತ್ತಿ ಹಿಡಿಯುವ ಹೊಣೆಗಾರಿಕೆ ನಮ್ಮದು ಎಂದರು.ಮಾವಿನಕಟ್ಟೆ ಸಂತ ಅನ್ನಾ ಮಾತೆಯರ ದೇವಾಲಯದ ಧರ್ಮಗುರು ಫಾ. ಬರ್ನಾರ್ಡ್ ರೊಡ್ರಿಗಸ್ ಆಶೀರ್ವಚನ‌ ನೀಡಿ, ಈ ಭೂಮಿಯಲ್ಲಿ ನಾವೆಲ್ಲಾ ಯಾತ್ರಿಕರು.

ನಾವು ಸಾಗುವ ಗುರಿಯೊಂದೇ. ಹಿಂದೂ ಧರ್ಮೀಯರು ಮೋಕ್ಷವೆಂದರೆ ನಾವು ಸ್ವರ್ಗ ಎನ್ನುತ್ತೇವೆ. ಉದ್ದೇಶ ದೇವರ ಸನ್ನಿಧಿಗೆ ಸೇರುವುದೇ ಆಗಿದೆ. ಮತ್ತೇಕೆ ನಮ್ಮೊಳಗೆ ತಾರತಮ್ಯ, ಭೇದ ಭಾವಗಳು ಎಂದರು. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್ ಮಾತನಾಡಿ, ಒಂದೇ ಆಕಾಶ ಭೂಮಿ ನೀರು ಬಳಸುವ ಆಸ್ವಾಧಿಸುವ ನಮಗೆ ದೇವರು ವ್ಯತ್ಯಾಸಗಳನ್ನು ಮಾಡಿಲ್ಲ.‌ನಾವೇಕೆ ಮಾಡಿಕೊಳ್ಳಬೇಕು. ಕಣಿಯೂರಿನ ನಾಗರಿಕರು ಭವ್ಯ ಭಾರತದ ಪರಂಪರೆಯನ್ನು‌ ಈ ವೇದಿಕೆ ಮೂಲಕ ಎತ್ತಿತೋರಿಸಿದ್ದಾರೆ ಎಂದರು.

ರೈತಬಂಧು ಆಹಾರೋದ್ಯಮ ಸಂಸ್ಥೆಯ ಮುಖ್ಯಸ್ಥ ಶಿವಶಂಕರ ನಾಯಕ್ ಮಾತನಾಡಿ, ಐಖ್ಯತೆ ನಮ್ಮ ಮಂತ್ರವಾಗಲಿ. ನಮ್ಮ ಆಚರಣೆಯ ಧರ್ಮ ಯಾವುದೇ ಇರಲಿ ಸಮಾಜದಲ್ಲಿ ಕರ್ತವ್ಯವನ್ನು ಸತ್ಯ ನಿಷ್ಢೆಯಿಂದ ಪಾಲಿಸಬೇಕು. ಮಾನವೀಯ ಧರ್ಮ ಅನುಷ್ಠಾನಿಸಬೇಕು ಎಂದರು. ಕಣಿಯೂರು ಮಸ್ಜಿದ್ ಧರ್ಮಗುರು ಕೆ.ಪಿ ಮುಹಮ್ಮದ್ ಶರೀಫ್ ಸಖಾಫಿ ಸಮಾರಂಭ ಉದ್ಘಾಟಿಸಿದರು.ಕಣಿಯೂರು ಗುತ್ತು ಸುದರ್ಶನ ಹೆಗ್ಡೆ, ಸಹಕಾರಿ ಧುರೀಣ ನಾರಾಯಣ ಗೌಡ, ಗ್ರಾ.ಪಂ ಸದಸ್ಯ ನರಸಿಂಹ ಶೆಟ್ಟಿ, ಜಿಲ್ಲಾಸ್ಪತ್ರೆಯ‌ ಆರೋಗ್ಯರಕ್ಷ ಸಮಿತಿ ಸರಕಾರಿ ನಾಮ ನಿರ್ದೇಶನ ಸದಸ್ಯ ಅಬ್ದುಲ್ ಕರೀಂ ಗೇರುಕಟ್ಟೆ, ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರಾಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಬಹುಜನ ವಾಲೆಂಟೈರ್ ಪೋರ್ಸ್ ಜಿಲ್ಲಾ ಸಂಯೋಜಕ ಲೋಕೇಶ್ ನೀರಾಡಿ ಮೊದಲಾದವರು ಸಂದರ್ಭೋಚಿತ ವಾಗಿ ಮಾತನಾಡಿದರು.ಸಮಾರಂಭದಲ್ಲಿ ಕಾರ್ಮಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್, ಕಣಿಯೂರು ಗ್ರಾ.ಪಂ ಅಧ್ಯಕ್ಷ ಸೀತಾರಾಮ ಮಡಿವಾಳ, ವಿದೇಶಿ ಉದ್ಯಮಿ ಡಾ. ಅಬ್ದುಲ್ ಶಕೀಲ್ ದೇರಳಕಟ್ಟೆ, ಪದ್ಮುಂಜ ಸೊಸೈಟಿ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ, ಪಿಡಿಒ ಇಂಮ್ತಿಯಾಝ್ ಕೆ, ಪದ್ಮನಾಭ ಶಿಲ್ಪಿ, ಉಮರ್ ಜಿ.ಕೆ, ಖ್ಯಾತ ನಾಟಿ ವೈದ್ಯ ಬಿ.ಹೆಚ್ ಆದಂ ಶಾಫಿ, ಯಶೋಧರ ಶೆಟ್ಟಿ, ಪ್ರವೀಣ್ ಗೌಡ, ಸೇಸಪ್ಪ ಮೂಲ್ಯ, ಬಾಬು ನಾಯ್ಕ್ ಮೈಪಾಜೆ, ತಿಲಕ್ ನಾಯ್ಕ್, ಧನಂಜಯ ಗೌಡ, ಪುರಂದರ ಶೆಟ್ಟಿ, ಸುಭಾಶ್ಚಂದ್ರ ಅಡ್ಯಂತಾಯ, ಬಾಲಕೃಷ್ಣ ಗೌಡ, ಇಸ್ಮಾಯಿಲ್ ಮಾವಿನಕಟ್ಟೆ, ಜಯಸೇನ ಜಾಜಿಬೆಟ್ಟು, ಚಂದ್ರಶೇಖರ ಶೆಟ್ಟಿ, ಸೀತಾರಾಮ ನಾಯ್ಕ್, ನವೀನ್ ಗೌಡ, ಕೆ.ಎಮ್ ಅಬೂಬಕ್ಕರ್ ಕಜೆಮಾರ್, ಆದಂ ಅಲ್‌ಮದೀನ, ಅಬ್ದುಲ್ ಲೆತೀಫ್ ಪರಿಮ, ಕಾಸಿಂ ನೆಕ್ಕಿಲ್, ರಫೀಕ್ ಅಂತರ, ಹೈದರ್ ಎಲ್ತ್ರಡ್ಡ, ಜಿ‌ ಹಾರಿಸ್ ಸುಮಾರಿ, ಅಬ್ಬಾಸ್ ಬರಂಬು, ಅಬೂಬಕ್ಕರ್ ಟಿಂಬರ್, ರಫೀಕ್‌ ಕೋಡಿಯೇಲು, ಕಾಸಿಂ ಕಣಿಯೂರು, ಅಬ್ದುಲ್ ರಝಾಕ್ ದೇವಸ, ಲತೀಫ್ ಕೋಡಿಯೇಲು, ಮುಹಮ್ಮದ್ ಅಂಗಡಿ, ರಫೀಕ್‌ ಬರಂಬು, ಇಸ್ಮಾಯಿಲ್ ಬರಂಬು, ಸವಾದ್ ಬೋರ್‌ಕಟ್ಟೆ, ಅಬ್ದುಲ್ ರಹಿಮಾನ್ ಕರಾಯ, ನವೀನ್ ಸನಿಲ್, ರಘು ಕುಂಡಗುರಿ, ಶೇಖರ ಪೂಜಾರಿ ಕಣಿಯೂರು, ಸುಕೇಶ್ ಶೆಟ್ಟಿ ಅತ್ತಿಲ, ಝಕರಿಯಾ ಸಖಾಫಿ ಕಣಿಯೂರು ಮೊದಲಾದವರು ಅತಿಥಿಗಳಾಗಿ‌ ಪಾಲ್ಗೊಂಡಿದ್ದರು. ಮಸ್ಜಿದ್ ನಿರ್ಮಾಣ ಸಮಿತಿ ಅಧ್ಯಕ್ಷ ಝಾಕಿರ್ ಹುಸೈನ್ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರಫೀಕ್ ಕೋಡಿಯೇಲು ವಂದಿಸಿದರು.

LEAVE A REPLY

Please enter your comment!
Please enter your name here