ಮರು ಉದ್ಘಾಟನೆಗೊಂಡ ಅಂಡಿಂಜೆ ಜಾಗೃತಿ ಮಹಿಳಾ ಮಂಡಲ

0

ಅಂಡಿಂಜೆ: ಶ್ರೀ ವಿನಾಯಕ ಭಜನಾ ಮಂದಿರದಲ್ಲಿ ಜಾಗೃತಿ ಮಹಿಳಾ ಮಂಡಲದ ಮರು ಉದ್ಘಾಟನೆ ಜ. 17ರಂದು ಮಾಡಲಾಯಿತು. ಮಹಿಳಾ ಸಬಲೀಕರಣವು ಮಹಿಳಾ ಮಂಡಲದ ಮೂಲ ಉದ್ದೇಶ ಯಾವುದೇ ತಂತ್ರಜ್ಞಾನದ ಬೆಳವಣಿಗೆಯೆ ಇಲ್ಲದೆ ಇದ್ದ ಕಾಲದಲ್ಲಿ ಊರಿನ ಮಹಿಳೆಯರೆಲ್ಲ ಒಂದು ಕಡೆ ಒಟ್ಟು ಸೇರಿ ಮಂಡಲದ ಸಭೆ ನಡೆಸುತ್ತಿದ್ದರು.

ಮಂಡಲದಲ್ಲಿ ಪ್ರತಿಯೊಬ್ಬ ಪದಾಧಿಕಾರಿ ಸದಸ್ಯರು ಬಹಳ ಪ್ರತಿಭೆಯನ್ನು ಉಳ್ಳವರಾಗಿದ್ದರು 1984-1985ರಲ್ಲಿ ಪ್ರಾರಂಭವಾದ ಮಹಿಳಾ ಮಂಡಲವು ಕಾರಣಾಂತರಗಳಿಂದಾಗಿ ತನ್ನ ಚಟುವಟಿಕೆಯನ್ನು ಸ್ಥಗಿತಗೊಳಿಸುವಂತಾಯಿತು. ಆದರೆ ಯುವ ಉತ್ಸಾಹವುಳ್ಳ ಮಹಿಳಾ ಬಂಧುಗಳು ಮಂಡಲಕ್ಕೆ ಮರು ಜೀವ ನೀಡಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಮುಂದಾಗಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ ಎಂದು ಜಾಗೃತಿ ಮಹಿಳಾ ಮಂಡಲ ರಿಜಿಸ್ಟರ್ಡ್ ಮಾಜಿ ಅಧ್ಯಕ್ಷೆ ಹಾಗೂ ಕಾರ್ಯಕ್ರಮದ ಉದ್ಘಾಟಕರಾದ ಸರೋಜ ಜಿ. ಜೈನ್ ಶ್ಲಾಘಿಸಿದರು.

ಅಂಡಿಂಜೆಯ ಶ್ರೀ ವಿನಾಯಕ ಶ್ರೀರಾಮ ಭಜನಾ ಮಂಡಳಿಯ ಸಭಾಂಗಣದಲ್ಲಿ ಜಾಗೃತಿ ಮಹಿಳಾ ಮಂಡಲ ರಿಜಿಸ್ಟರ್ಡ್ ನ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಜರಗಿತು. ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಕಾತ್ಯಾಯಿನಿ ಮಾತನಾಡಿ, ಯಾವ ಗ್ರಾಮದ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿ ಉತ್ತಮವಾಗಿರುತ್ತದೆಯೋ ಅಲ್ಲಿ ಇತರ ಎಲ್ಲಾ ಕ್ಷೇತ್ರದ ಬೆಳವಣಿಗೆಗಳು ಯಶಸ್ವಿಯಾಗಿ ನಡೆಯುತ್ತಿರುತ್ತದೆ ಎಂದು ನೂತನವಾಗಿ ಮರು ಉದ್ಘಾಟನೆಗೊಂಡ ಮಹಿಳಾ ಮಂಡಲಕ್ಕೆ ಶುಭ ಹಾರೈಸಿದರು.

ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶಾರದ, ಮಾಜಿ ಸದಸ್ಯರಾದ ಶ್ಯಾಮಲ, ಜಯಶ್ರೀ, ವಿಮಲ, ನಳಿನಿ, ಶಾಲಿನಿ ಹಾಗೂ ಮಾಜಿ ಕಾರ್ಯದರ್ಶಿ ಕುಸುಮಾವತಿ ಅವರು ತಮ್ಮ ಅನುಭವದ ಮಂಡಲದ ನೆನಪುಗಳನ್ನು ಮೆಲುಕು ಹಾಕಿದರು. ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷೆ ಶ್ವೇತಾ ಪರಮೇಶ್ವರ್ ಮಂಡಲದ ಮುಂದಾಲೋಚನೆಯ ಯೋಜನೆಗಳ ಬಗ್ಗೆ ತಿಳಿಸಿದರು.

ಅಂಡಿಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮೋಹನ್ ಅಂಡಿಂಜೆ ಮಂಡಲಕ್ಕೆ ಶುಭ ಹಾರೈಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಿಡಬ್ಲ್ಯೂಡಿ ಕಂಟ್ರಾಕ್ಟರ್ ರಾಜಶೇಖರ್, ಅಂಡಿಂಜೆ‌ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ದರ್ಖಾಸ್, ಯುವಕ ಮಂಡಲ ರಿಜಿಸ್ಟರ್ಡ್ ಅಧ್ಯಕ್ಷ ಆನಂದ ದಂಬೆದಡ್ಡ, ಸದಸ್ಯರಾದ ಪರಮೇಶ್ವರ, ಯಶೋಧರ ಕಜೆ, ಬಿ.ಆರ್.ಜಿ ರೆಸ್ಟೋರೆಂಟ್ ನ ಮಾಲಕ ರಾಜೇಶ್ ಮುಂಡೆವು, ಅಂಡಿಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮೋಹನ್ ಅಂಡಿಂಜೆ, ಅಂಡಿಂಜೆ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಕೀರ್ತಿ ಉಪಸ್ಥಿತರಿದ್ದರು.

ಜಾಗೃತಿ ಮಹಿಳಾ ಮಂಡಲ ರಿಜಿಸ್ಟರ್ಡ್ ನ ನೂತನ ಉಪಾಧ್ಯಕ್ಷರಾಗಿ ಸುರೇಖ, ನವಜ್ಯೋತಿ, ಕಾರ್ಯದರ್ಶಿಯಾಗಿ ಮಲ್ಲಿಕಾ ಕಂಚ, ಜೊತೆ ಕಾರ್ಯದರ್ಶಿಯಾಗಿ ಯಶೋಧ, ಕೋಶಾಧಿಕಾರಿಯಾಗಿ ಲಾವಂತಿ, ಗೌರವ ಸಲಹೆಗಾರರಾಗಿ ಸರೋಜ ಜಿ. ಜೈನ್, ಶಾರದಾ ಜೈನ್, ಸುಹಾಸಿನಿ ಗಾಂಧಿನಗರ, ಗೀತಾ ಮನ್ನಡ್ಕ ಆಯ್ಕೆಯಾದರು. ಯಶಸ್ವಿನಿ ಪ್ರಾರ್ಥನೆಯನ್ನು ನೆರವೇರಿಸಿ, ಯಶೋಧ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸೌಮ್ಯ ಪ್ರಶಾಂತ್ ನಿರೂಪಿಸಿದರು. ಸುಹಾಸಿನಿ ಬೊಟ್ಟು ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here