






ಬೆಳ್ತಂಗಡಿ: ಸಾಮಾಜಿಕ ದೃಷ್ಟಿಕೋನದಲ್ಲಿ ನಕ್ಸಲರು ಮುಖ್ಯವಾಹಿನಿಗೆ ಬಂದು ಜನವರಿ ೮ಕ್ಕೆ ಒಂದು ವರ್ಷ ಸಂದಿದೆ. ಆದರೆ ವಾಸ್ತವದಲ್ಲಿ ನಕ್ಸಲರು ಮುಖ್ಯವಾಹಿನಿಗೆ ಬಂದರೇ ಎಂಬ ಪ್ರಶ್ನೆ ಮೂಡಿದೆ.
ಭರವಸೆ ನೀಡಲಾಗಿತ್ತು: ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿ ಭೂಗತರಾಗಿದ್ದ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ಲೂರಿನ ಸುಂದರಿ ಸಹಿತ ಆರು ಮಂದಿ ನಕ್ಸಲರು ೨೦೨೫ರ ಜನವರಿ ೮ರಂದು ನಕ್ಸಲ್ ಶಸ್ತ್ರಾಸ್ತ್ರ ತೊರೆದು ಶರಣಾಗಿದ್ದರು.
ನಟೋರಿಯಸ್ ನಕ್ಸಲ್ ನಾಯಕನಾಗಿದ್ದ ವಿಕ್ರಂ ಗೌಡ ಆತನ ಊರಾದ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪೀತಬೈಲಿನಲ್ಲಿ ಎನ್ಕೌಂಟರ್ಗೆ ಬಲಿಯಾದ ಕೆಲವೇ ದಿನಗಳ ನಂತರ ನಕ್ಸಲ್ ತಂಡದಲ್ಲಿದ್ದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, ಕೆ. ವಸಂತ ಮತ್ತು ಜಿಷಾ ಕೇರಳ ಅವರನ್ನು ಚಿಕ್ಕಮಗಳೂರಿನಿಂದ ಬಿಗಿ ಭದ್ರತೆಯೊಂದಿಗೆ ಕರೆದೊಯ್ದು ಬೆಂಗಳೂರಿನಲ್ಲಿ ಶರಣಾಗತಿ ಮಾಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಕ್ಸಲ್ ಚಳವಳಿ ಕೈಬಿಟ್ಟ ಎಲ್ಲರಿಗೂ ಸಂವಿಧಾನದ ಪ್ರತಿ ನೀಡಿದ್ದರು. ಆ ವೇಳೆ ಸಶಸ್ತ್ರ ಹೋರಾಟ ತೊರೆದ ಎಲ್ಲಾ ನಕ್ಸಲರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ವಿಶೇಷ ತ್ವರಿತ ನ್ಯಾಯಾಲಯ ಸ್ಥಾಪಿಸಲಾಗುವುದು. ಪ್ರಕರಣಗಳ ತ್ವರಿತ ಇತ್ಯರ್ಥದ ನಂತರ ಅವರು ಸಮಾಜದ ಮುಖ್ಯವಾಹಿನಿ ಸೇರಲಿದ್ದಾರೆ. ನಕ್ಸಲರ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸುವ ಕುರಿತು ತಮಿಳುನಾಡು ಮತ್ತು ಕೇರಳ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು.


ನಕ್ಸಲ್ ಚಟುವಟಿಕೆಯಿಂದ ಮುಕ್ತಗೊಂಡು ಶರಣಾದ ಬಳಿಕ ಸಮಾಜದ ಮುಖ್ಯವಾಹಿನಿಗೆ ಬಂದು ಸಂವಿಧಾನದ ಚೌಕಟ್ಟಿನಲ್ಲಿ ಬದುಕು ನಡೆಸಲಿದ್ದಾರೆ ಎಂಬ ಭರವಸೆ ನೀಡಿ ವರ್ಷ ಕಳೆದರೂ ಜೈಲಿನಲ್ಲೇ ಇರುವ ಮಾಜಿ ನಕ್ಸಲೀಯರ ಅರಣ್ಯರೋದನ ಸರಕಾರದ ಕಿವಿಗೆ ಮುಟ್ಟದಾಗಿದೆ ಎಂದು ಇದೀಗ ಆರೋಪ ಕೇಳಿ ಬಂದಿದೆ. ಅಲ್ಲದೆ ನಕ್ಸಲ್ ಚಟುವಟಿಕೆಯಲ್ಲಿದ್ದು ಶರಣಾದವರಿಗೆ ವಿಶೇಷ ಪ್ಯಾಕೇಜ್ ನೀಡುವುದಾಗಿ ನೀಡಿದ್ದ ಭರವಸೆ ಮತ್ತು ಅವರ ಮೇಲಿನ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ತ್ವರಿತ ನ್ಯಾಯಾಲಯ ಸ್ಥಾಪಿಸುವುದಾಗಿ ನೀಡಿದ್ದ ಭರವಸೆಯನ್ನು ಈಡೇರಿಸಬೇಕು ಎಂಬ ಧ್ವನಿ ಮತ್ತೆ ಮೊಳಗತೊಡಗಿದೆ. ಆರು ಮಂದಿ ನಕ್ಸಲರು ಶರಣಾದ ಬಳಿಕ ಅವರಿಂದ ಪ್ರೇರಿತರಾಗಿ ಕೋಟೆಹೊಂಡ ರವೀಂದ್ರ ಮತ್ತು ತೊಂಬಟ್ಟು ಲಕ್ಷ್ಮಿ ಕೂಡ ಶಸ್ತ್ರಾಸ್ತ್ರ ತೊರೆದು ಪೊಲೀಸರಿಗೆ ಶರಣಾಗಿದ್ದರು.
ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಸಭೆಯಲ್ಲಿ ನಕ್ಸಲರ ವಿರುದ್ಧ ದಾಖಲಾಗಿರುವ ಗುರುತರವಲ್ಲದ ಪ್ರಕರಣಗಳನ್ನು ಸರಕಾರದ ವತಿಯಿಂದಲೇ ಹಿಂಪಡೆಯಲಾಗುವುದು. ಕೊಲೆ ಪ್ರಯತ್ನ, ದರೋಡೆ, ಹಲ್ಲೆಗಳಂತಹ ಗುರುತರ ಪ್ರಕರಣಗಳು, ಎನ್ಐಎ, ಯುಎಪಿಎ ಪ್ರಕರಣಗಳು ನ್ಯಾಯಾಲಯದಲ್ಲಿಯೇ ಇತ್ಯರ್ಥವಾಗಬೇಕು. ಆದರೆ ನಕ್ಸಲರು ನಾಗರಿಕ ಜೀವನಕ್ಕೆ ಮರಳಲು ಬೇಕಾದ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ತಿಳಿಸಿದ್ದರು. ಅದರಂತೆ ನ್ಯಾಯಾಲಯ ಪ್ರಕ್ರಿಯೆಗೆ ನೆರವಾಗಬೇಕಿದ್ದ ವಿಶೇಷ ನ್ಯಾಯಾಲಯ ಸ್ಥಾಪನೆಯಾಗಬೇಕಿತ್ತು. ಆದರೆ ಈ ಭರವಸೆ ಆಶ್ವಾಸನೆಯಾಗಿಯೇ ಉಳಿದಿದೆ. ಶಿವಮೊಗ್ಗದಲ್ಲಿ ನಕ್ಸಲರ ವಿಚಾರಣೆಗಾಗಿ ವಿಶೇಷ ತ್ವರಿತ ನ್ಯಾಯಾಲಯ ಆರಂಭಿಸಲಾಗುತ್ತದೆ ಎಂದು ಹೇಳಲಾಗುತ್ತಿತ್ತಾದರೂ ಆ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ.








