






ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಜ.೧೪ರಂದು ಮುಂಜಾನೆ ಧನುಪೂಜೆಗೆ ತೆರಳಿದ್ದ ಓಡಿಲ್ನಾಳ ಗ್ರಾಮದ ಸಂಭೋಳ್ಯ ನಿವಾಸಿ ಸುಮಂತ್(15) ಅವರ ಸಂಶಯಾಸ್ಪದ ಸಾವಿನ ಪ್ರಕರಣ ನಿಗೂಢವಾಗಿಯೇ ಮುಂದುವರಿದಿದೆ. ಗೇರುಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಪ್ರತಿಭಾನ್ವಿತ ಬಾಲಕ ಸುಮಂತ್ ಅವರನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಯಿತೇ, ಪ್ರಾಣಿಗಳ ದಾಳಿಗೆ ಆತ ಬಲಿಯಾದನೇ ಅಥವಾ ತಲೆಗೆ ತೆಂಗಿನಕಾಯಿ ಬಿದ್ದು ಆತ ಮೃತಪಟ್ಟನೇ ಎಂಬ ಸಂಶಯದ ಮೇರೆಗೆ ಪೊಲೀಸರ ತನಿಖೆ ಮುಂದುವರಿಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಹಲವು ಊಹಾಪೋಹಗಳು ಕೇಳಿ ಬರುತ್ತಿದ್ದು ಇನ್ನೂ ಕೂಡ ಯಾವುದೇ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಅದೊಂದು ಪೂರ್ವ ನಿರ್ಧರಿತ ಕೃತ್ಯವೇ ಅಥವಾ ಆಕಸ್ಮಿಕವಾಗಿ ಆತನ ಮೇಲಿನ ಹೊಡೆತ ಆಯ ತಪ್ಪಿ ತಲೆಗೆ ಬಿದ್ದು ಗಂಭೀರ ಸ್ಥಿತಿಯಲ್ಲಿ ಆತನನ್ನು ಬಾವಿಗೆ ಎಸೆಯಲಾಯಿತೇ ಅಥವಾ ಪ್ರಾಣಿ ದಾಳಿ ಮಾಡಿದಾಗ ರಕ್ಷಣೆಗಾಗಿ ಆತ ಕೆರೆಯ ಬಳಿ ಹೋದಾಗ ನೀರಿಗೆ ಬಿದ್ದು ಮೃತಪಟ್ಟನೇ ಇಲ್ಲ ತಲೆಗೆ ತೆಂಗಿನಕಾಯಿ ಬಿದ್ದು ಗಾಯಗೊಂಡ ಆತ ಜೀವನ್ಮರಣ ಹೋರಾಟದೊಂದಿಗೆ ಕೆರೆಯ ಬಳಿ ಹೋದಾಗ ಕೊನೆಯುಸಿರೆಳೆದನೇ ಎಂಬ ಚರ್ಚೆ ನಡೆಯುತ್ತಿದೆ.
ಯಾರೋ ಅಡಿಕೆ ಕಳ್ಳರು ಈ ಕೃತ್ಯ ನಡೆಸಿರಬಹುದು ಇಲ್ಲವೇ ಯಾರದ್ದೋ ಅನೈತಿಕ ಚಟುವಟಿಕೆಯನ್ನು ಸುಮಂತ್ ಕಣ್ಣಾರೆ ಕಂಡಿದ್ದರಿಂದ ಈ ಕೃತ್ಯ ಎಸಗಿರಬಹುದು ಅಥವಾ ಈ ಕೃತ್ಯದ ಹಿಂದೆ ಯಾವುದೇ ವೈಷಮ್ಯದ ಕಾರಣ ಇರಬಹುದು ಎಂಬ ಮಾತುಗಳೂ ಕೇಳಿ ಬರುತ್ತಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪಶ್ಚಿಮ ವಲಯ ಐಜಿಪಿ ಅಮಿತ್‌ಸಿಂಗ್, ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್‌ಪಿ ರೋಹಿಣಿ ಸಿ.ಕೆ., ಬೆಳ್ತಂಗಡಿ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಜಿ. ಸುಬ್ಬಾಪುರ ಮಠ್ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿಯುತ್ತಿದ್ದು ಪ್ರಕರಣ ಭೇದಿಸಲು ನಾಲ್ಕು ತನಿಖಾ ತಂಡಗಳು ಅವಿರತ ಶ್ರಮ ವಹಿಸುತ್ತಿದೆ. ಸಂಶಯಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇರಿಸಲಾಗಿದ್ದು ಶೀಘ್ರವೇ ಸತ್ಯಾಂಶ ಬಯಲಾಗುವ ನಿರೀಕ್ಷೆ ಇದೆ.
ನಾಪತ್ತೆ ಪ್ರಕರಣ ಕೊಲೆ ಪ್ರಕರಣವಾಗಿ ಪರಿವರ್ತನೆ-ತನಿಖೆ ತೀವ್ರ: ಕೇರಳದ ಕಾಸರಗೋಡಿನ ಬಾಯಾರಿನಿಂದ ಕಳೆದ ೧೩ ವರ್ಷಗಳ ಹಿಂದೆ ಆಗಮಿಸಿ ಓಡಿಲ್ನಾಳ ಗ್ರಾಮದ ಸಂಭೋಳ್ಯದಲ್ಲಿ ನೆಲೆಸಿ ಕೃಷಿ ಚಟುವಟಿಕೆ ಮಾಡುತ್ತಿರುವ ಸುಬ್ರಹ್ಮಣ್ಯ ನಾಯಕ್ ಮತ್ತು ರತ್ನ ದಂಪತಿಯ ಮೂರು ಮಕ್ಕಳ ಪೈಕಿ ಎರಡನೇಯವರಾಗಿರುವ ಸುಮಂತ್ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಮಕರ ಸಂಕ್ರಮಣದಂದು ಬೆಳಿಗ್ಗೆ ಧನುಪೂಜೆಗೆಂದು ಮನೆಯಿಂದ ಮುಂಜಾನೆ ತೆರಳಿ ನಾಪತ್ತೆಯಾಗಿದ್ದರು. ಗೇರುಕಟ್ಟೆ ಸರಕಾರಿ ಪ್ರೌಢಶಾಲೆಯ ೯ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಸುಮಂತ್‌ಗಾಗಿ ಹುಡುಕಾಟ ನಡೆಸುತ್ತಿದ್ದಂತೆಯೇ ಮನೆ ಸಮೀಪದಲ್ಲಿ ಇರುವ ಶ್ಯಾಮಲಾ ಎಂಬವರಿಗೆ ಸೇರಿದ ಜಮೀನಿನ ಕೆರೆಯಲ್ಲಿ ಆತನ ಶವ ಪತ್ತೆಯಾಗಿತ್ತು. ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಸುಮಂತ್ ಮನೆಯಿಂದ ತೆರಳಿದವರು ವಾಪಸ್ ಮನೆಗೆ ಬಾರದ ಕಾರಣ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಲಾಗಿತ್ತು. ಆತನಿಗಾಗಿ ವ್ಯಾಪಕ ಹುಡುಕಾಟ ನಡೆಸಿ ಮೃತದೇಹ ಸಿಕ್ಕಿದ ಬಳಿಕ ಸಂಶಯಾಸ್ಪದ ಸಾವಿನ ಪ್ರಕರಣ ದಾಖಲಾಗಿತ್ತು. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕೊಲೆ ಪ್ರಕರಣವಾಗಿ ಪರಿವರ್ತಿಸಲಾಗಿತ್ತು.
ಪೊಲೀಸರ 4 ತಂಡ ರಚನೆ: ಸುಮಂತ್ ಶವ ಕೆರೆಯಲ್ಲಿ ಪತ್ತೆಯಾಗುತ್ತಿದ್ದಂತೆಯೇ ಜನರಲ್ಲಿ ಆತಂಕ ಉಂಟಾಗಿತ್ತು. ತಾನಾಯಿತು ತನ್ನ ಪಾಡಾಯಿತು ಎಂಬಂತೆ ಇದ್ದ ಬಹುಮುಖ ಪ್ರತಿಭೆಯ ವಿದ್ಯಾರ್ಥಿ ಸುಮಂತ್ ನಿಗೂಢವಾಗಿ ಸಾವಿಗೀಡಾದ ಪ್ರಕರಣ ಜನರನ್ನು ಬೆಚ್ಚಿ ಬೀಳಿಸಿತ್ತು. ಚಿರತೆ ಅಥವಾ ನಾಯಿ ದಾಳಿ ನಡೆಸಿದ ಪರಿಣಾಮ ಆತ ಮೃತಪಟ್ಟಿರಬೇಕು ಎಂದು ಆರಂಭದಲ್ಲಿ ಶಂಕಿಸಲಾಗಿತ್ತು. ಆತನ ಮೇತದೇಹ ಪತ್ತೆಯಾದ ಕೆಲವು ಮೀಟರ್‌ಗಳ ದೂರದಲ್ಲಿ ರಕ್ತದ ಕಲೆಗಳು ಕಾಣಿಸಿಕೊಂಡಿದ್ದರಿಂದ ಇದು ಕೊಲೆಯಾಗಿರಬೇಕು ಎಂಬ ಸಂಶಯ ದಟ್ಟವಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಐಜಿಪಿ ಅಮಿತ್‌ಸಿಂಗ್ ಅವರು ತನಿಖೆಗಾಗಿ ಡಿವೈಎಸ್‌ಪಿ ಸಿ.ಕೆ. ರೋಹಿಣಿ ನೇತೃತ್ವದಲ್ಲಿ ಪೊಲೀಸರ ನಾಲ್ಕು ತನಿಖಾ ತಂಡ ರಚಿಸಿ ಆದೇಶಿಸಿದ್ದರು. ಈ ತನಿಖಾ ತಂಡಗಳು ಇದೀಗ ವಿವಿಧ ರೀತಿಯಲ್ಲಿ ತನಿಖೆ ನಡೆಸುತ್ತಿದೆ.


ಧನಪೂಜೆಗೆ ಹೋದ ಸುಮಂತ್ ವಾಪಸ್ ಬರಲೇ ಇಲ್ಲ: ತನ್ನ ಸ್ನೇಹಿತರಾದ ಪಕ್ಕದ ಮನೆಯ ಮನ್ವಿತ್, ತನುಷ್, ಕಾರ್ತಿಕ್ ಮತ್ತು ಇತರರೊಂದಿಗೆ ಸೇರಿಕೊಂಡು ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಧನುಪೂಜೆಗೆ ತೆರಳುತ್ತಿದ್ದ ಸುಮಂತ್ ತನ್ನ ಮನೆಯಿಂದ ಕಾಲು ದಾರಿಯ ಮೂಲಕ ಕೆಲ ದೂರ ಸಾಗಿ ನಂತರ ತನ್ನ ಸ್ನೇಹಿತನ ಮನೆಯ ಪಕ್ಕ ನಿಲ್ಲಿಸಿದ್ದ ಸೈಕಲ್‌ನಲ್ಲಿ ತೆರಳುತ್ತಿದ್ದರು. ಜ.14ರ ಮಕರ ಸಂಕ್ರಾಂತಿಯಂದು ಕೂಡ ಬೆಳಗ್ಗೆ ಸುಮಂತ್ ಬರುತ್ತಾನೆಂದು ಕಾಯುತ್ತಿದ್ದ ಸ್ನೇಹಿತರು ಕಾದು ಕಾದು ನಂತರ ಅವರು ದೇವಸ್ಥಾನಕ್ಕೆ ತೆರಳಿದ್ದರು. ಧನುಪೂಜೆ ನಂತರ ಮನೆಗೆ ವಾಪಾಸಾದ ಸುಮಂತ್ ಸ್ನೇಹಿತರು ಸುಮಂತ್ ಮನೆಯವರಿಗೆ ಕರೆ ಮಾಡಿದಾಗ ಆತ ಧನುಪೂಜೆಗೂ ಹೋಗದೆ ಮನೆಗೂ ವಾಪಾಸಾಗದೇ ಇರುವುದು ಗೊತ್ತಾಗಿದೆ. ಸುಮಂತ್ ಎಲ್ಲಿ ಹೋದ ಎಂದು ಆತಂಕಗೊಂಡ ಮನೆಯವರು ಮತ್ತು ಸ್ಥಳೀಯರು ಆತ ಹೋದ ದಾರಿಯಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ ಅವರು ಕಾಲುದಾರಿಯಲ್ಲಿ ಸಾಗುವಾಗ ಸಿಗುವ ಶ್ಯಾಮಲಾ ಎಂಬವರ ಜಮೀನಿನಲ್ಲಿ ರಕ್ತದ ಕಲೆ ಪತ್ತೆಯಾಗಿದೆ. ಅದರಲ್ಲೂ ಜಮೀನಿನಲ್ಲಿದ್ದ ಕೆರೆಯ ಪಕ್ಕದಲ್ಲೇ ರಕ್ತದ ಕಲೆ ಪತ್ತೆಯಾಗಿದ್ದು ತೀವ್ರ ಆತಂಕಕ್ಕೆ ಕಾರಣವಾಗಿತ್ತು.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬೆಳ್ತಂಗಡಿ ಠಾಣೆಯ ಪೊಲೀಸ್ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು ಆಗಮಿಸಿದ್ದರು. ಅಲ್ಲದೇ ಸ್ಥಳದಲ್ಲಿದ್ದ ರಕ್ತದ ಕಲೆಗಳನ್ನು ವಿಧಿವಿಜ್ಞಾನ ಇಲಾಖೆಯ ಅಧಿಕಾರಿಗಳು ಸಂಗ್ರಹಿಸಿದ್ದರು. ನಂತರ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಹುಡುಕಾಟ ಆರಂಭವಾಯಿತು. ಬಾಲಕ ಕೆರೆಗೆ ಏನಾದರೂ ಬಿದ್ದಿದ್ದಾನಾ ಎಂಬ ಅನುಮಾನದಲ್ಲಿ ಪೊಲೀಸರು ಮತ್ತು ಅಗ್ನಿಶಾಮಕದಳದವರು ಗರುಡ ಪಾತಾಳ ಉಪಯೋಗಿಸಿ ಪತ್ತೆ ಕಾರ್ಯಕ್ಕೆ ಮುಂದಾಗಿದ್ದರು. ಸತತವಾಗಿ ಪ್ರಯತ್ನಿಸಿದರೂ ಕೂಡ ಹುಲ್ಲು ಕಡ್ಡಿಗಳು ಹೊರತುಪಡಿಸಿ ಬೇರೆನೂ ಪತ್ತೆಯಾಗಿರಲಿಲ್ಲ. ೯ನೇ ಪ್ರಯತ್ನದಲ್ಲಿ ಗರುಡ ಪಾತಾಳ ಉಪಯೋಗಿಸಿದಾಗ ಶವ ಪತ್ತೆಯಾಗಿದೆ. ಕಪ್ಪು ಪ್ಯಾಂಟ್ ಮತ್ತು ಕೆಂಪು ಟೀ ಶರ್ಟ್ ಧರಿಸಿದ್ದ ಸುಮಂತ್ ಅವರ ಶವ ಪತ್ತೆಯಾದಾಗ ಕಾಲಿನಲ್ಲಿ ಚಪ್ಪಲಿ ಹಾಗೂ ಕೈಯಲ್ಲಿ ಕಡೆ ಕ್ಷಣದಲ್ಲಿ ಹಿಡಿದಿರಬಹುದಾದ ಹುಲ್ಲುಕಡ್ಡಿ ಪತ್ತೆಯಾಗಿತ್ತು. ಘಟನಾ ಸ್ಥಳಕ್ಕೆ ಶ್ವಾನದಳವೂ ಆಗಮಿಸಿದ್ದು, ತನಿಖೆ ಚುರುಕುಗೊಳಿಸಲಾಗಿತ್ತು. ತಂದೆ ಸುಬ್ರಹ್ಮಣ್ಯ ನಾಯಕ್, ತಾಯಿ ರತ್ನ, ಇಂಜಿನಿಯರಿಂಗ್ ಓದುತ್ತಿರುವ ಅಣ್ಣ ಸುದರ್ಶನ್ ಮತ್ತು ೩ನೇ ತರಗತಿ ಕಲಿಯುತ್ತಿರುವ ತಂಗಿ ಸ್ವರ್ಣಗೌರಿ ಅವರೊಂದಿಗೆ ಸದಾ ನಗುನಗುತ್ತಾ ಇರುತ್ತಿದ್ದ ಸುಮಂತ್ ಧನುಪೂಜೆಗೆ ತೆರಳಿದವರು ವಾಪಸ್ ಬಂದಿಲ್ಲ. ಹೀಗೆ ನಿಗೂಢವಾಗಿ ಕಣ್ಮರೆಯಾಗಿ ಇಹಲೋಕ ತ್ಯಜಿಸಿದ ಸುಮಂತ್‌ಗೆ ನ್ಯಾಯ ಸಿಗಲಿ ಎಂದು ಪ್ರತಿಯೊಬ್ಬರೂ ಪ್ರಾರ್ಥಿಸುತ್ತಿದ್ದಾರೆ.
ಕೆರೆಯಲ್ಲಿ ನೀರು ಖಾಲಿ ಮಾಡಿದಾಗ ಕತ್ತಿ, ಟಾರ್ಚ್‌ಲೈಟ್ ಪತ್ತೆ: ಸುಮಂತ್ ಅವರ ಮೃತದೇಹ ಪತ್ತೆಯಾದ ತೋಟದ ಬಾವಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಜ.೧೫ರಂದು ಉನ್ನತ ಮಟ್ಟದ ಪೊಲೀಸ್ ತಂಡ ತೀವ್ರವಾಗಿ ತನಿಖೆ ನಡೆಸಿದೆ. ಪೊಲೀಸರ ಜತೆ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡಗಳು, ಸೊಕೊ ತಂಡ, ಶ್ವಾನದಳ, ಬೆರಳಚ್ಚು ತಜ್ಞರು ದಿನವಿಡೀ ಬೀಡು ಬಿಟ್ಟು ಕಾರ್ಯಾಚರಣೆ ನಡೆಸಿದ್ದಾರೆ. ಜ.೧೪ರ ರಾತ್ರಿಯಿಡೀ ತನಿಖೆ ನಡೆಸಿದ್ದ ತನಿಖಾ ತಂಡ ಗುರುವಾರ ಮುಂಜಾನೆಯಿಂದಲೇ ಕೆರೆ, ತೋಟದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸುಳಿವು ಪತ್ತೆಯ ನಿಟ್ಟಿನಲ್ಲಿ ತನಿಖೆ ನಡೆಸಿದೆ. ಸುಮಂತ್‌ನ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಂಗಳೂರಿನಲ್ಲಿ ನಡೆಸಲಾಗಿದ್ದು ವಿಧಿ ವಿಜ್ಞಾನ ವಿಭಾಗದ ತಜ್ಞರ ತಂಡ ಪರೀಕ್ಷೆ ನಡೆಸಿದೆ. ಆತ ಬಾವಿಯಲ್ಲಿ ಮುಳುಗುವ ಸಂದರ್ಭದಲ್ಲಿ ಜೀವಂತವಾಗಿದ್ದ. ಹೀಗಾಗಿ ಆತ ಮುಳುಗಿ ಸಾವನ್ನಪ್ಪಿದ್ದಾನೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಕಂಡು ಬಂದಿದೆ.
ಆದರೆ ಆತ ಬಾವಿಯಲ್ಲಿ ಮುಳುಗುವುದಕ್ಕೆ ಕಾರಣ ಹಾಗೂ ತಲೆಯ ಗಾಯ ಯಾವ ರೀತಿ ಆಗಿದೆ ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ. ಗಾಯಕ್ಕೆ ಸಂಬಂಧಿಸಿ ಪೊಲೀಸರು ಮಾಹಿತಿ ನೀಡಿದ್ದು ಯಾವುದೋ ಚೂಪಾದ ಆಯುಧಗಳಿಂದ ಹೊಡೆದ ಗಾಯಗಳಲ್ಲಿ ಗಂಭೀರ ಹೊಡೆತದ ಗಾಯವೂ ಅಲ್ಲ. ಮಂದ ಬಲದ ಗಾಯ ಎಂಬುದು ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ಭಾಗವಾಗಿ ಬಾಲಕನ ಮೃತದೇಹ ಪತ್ತೆಯಾಗಿರುವ ಬಾವಿಯ ನೀರನ್ನು ಖಾಲಿ ಮಾಡಲಾಗಿದ್ದು ಆ ಸಂದರ್ಭದಲ್ಲಿ ಒಂದು ಟಾರ್ಚ್ ಲೈಟ್ ಮತ್ತು ಒಂದು ಕತ್ತಿ ಪತ್ತೆಯಾಗಿದೆ. ಮುಂಜಾನೆ ಬೆಳಕು ಇಲ್ಲದೇ ಇರುವುದರಿಂದ ಸುಮಂತ್ ಮನೆಯಿಂದ ಟಾರ್ಚ್ ಹಿಡಿದುಕೊಂಡು ಬಂದಿದ್ದರು ಮತ್ತು ಕೆರೆಯಲ್ಲಿ ಪತ್ತೆಯಾದ ಕತ್ತಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಕೈಯಿಂದ ಬಹಳ ಸಮಯಗಳ ಹಿಂದೆಯೇ ಬಿದ್ದಿದ್ದಾಗಿದೆ ಎಂದೂ ಹೇಳಲಾಗುತ್ತಿದೆ. ಹೀಗಾಗಿ ಬಾಲಕನ ಸಾವಿಗೂ ಟಾರ್ಚ್‌ಲೈಟ್‌ಗೂ ಕತ್ತಿಗೂ ಸಂಬಂಧವಿರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಆದರೂ ಈ ಎಲ್ಲಾ ಬೆಳವಣಿಗೆಗಳನ್ನು ತಾಳೆ ಹಾಕಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.









