






ಬೆಳ್ತಂಗಡಿ: ಕ್ಷೇತ್ರದಲ್ಲಿ 5 ಬಾರಿ ಶಾಸಕರಾಗಿ, ಐದು ದಶಕಗಳಿಂದ ರಾಜಕೀಯ ಜೀವನದಲ್ಲಿ ಜನ ಸೇವೆಯ ಮೂಲಕ ಸಮಗ್ರ ಅಭಿವೃದ್ಧಿಯಲ್ಲಿ ತನ್ನನ್ನು ತೊಡಗಿಸಿ ಕೊಂಡ ಧೀಮಂತ ನಾಯಕ ಕೆ. ವಸಂತ ಬಂಗೇರರ 80ನೇ ಹುಟ್ಟುಹಬ್ಬದ ಅಂಗವಾಗಿ ಬಂಗೇರ ಬ್ರಿಗೇಡ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ಜ. 15ರಂದು ಮದ್ದಡ್ಕ ಬಂಡಿಮಠ ಮೈದಾನದಲ್ಲಿ ಹೊನಲು ಬೆಳಕಿನ 65ಕೆಜಿ ವಿಭಾಗದ ಪುರುಷರ ಅಂತರ್ ಜಿಲ್ಲಾ ಮಟ್ಟದ ಮತ್ತು ಪ್ರೌಢ ಶಾಲಾ ವಿಭಾಗದ ಬಾಲಕ ಬಾಲಕಿಯರ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ ನಡೆಯಲಿದೆ ಎಂದು ಬಂಗೇರ ಬಿಗ್ರೇಡ್ ಇದರ ಅಧ್ಯಕ್ಷರು ಕೆ. ವಸಂತ ಬಂಗೇರರ ಮಗಳು ಬಿನುತಾ ಬಂಗೇರ ಹೇಳಿದರು.
ಅವರು ಜ. 6ರಂದು ಬೆಳ್ತಂಗಡಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ವಿವರ ನೀಡಿದರು. ಇಗಾಗಲೇ ಕಬಡ್ಡಿಯ ಯಶಸ್ವಿಗೆ ಪೂರ್ವ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಕಳೆದ ವರ್ಷ ಜಿಲ್ಲಾ ಮಟ್ಟದ ಪಂದ್ಯಾವಳಿ ಆಯೋಜಿಸಿದ್ದು ಈ ಬಾರಿ ಅಂತರ್ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಕೂಟ ಆಯೋಜಿಸಲಾಗುತ್ತಿದೆ. ಹಾಗೂ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಮಟ್ಟದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟ ಜರಗಲಿದೆ ಎಂದರು.


ಪುರುಷರ ಮುಕ್ತ ವಿಭಾಗ ಹಾಗೂ ಪ್ರೌಢ ಶಾಲಾ ಬಾಲಕ-ಬಾಲಕಿಯರ ವಿಭಾಗದಲ್ಲಿ ವಿಜೇತ ತಂಡಗಳಿಗೆ ನಗದು ಬಹುಮಾನ ಮತ್ತು ಬಂಗೇರ ಬಿಗ್ರೇಡ್ ಟ್ರೋಫಿ 2026 ಸಿಗಲಿದೆ ಅಲ್ಲದೆ ಬೆಸ್ಟ್ ರೈಡರ್, ಬೆಸ್ಟ್ ಕ್ಯಾಚರ್, ಆಲ್ ರೌಂಡರ್ ಹಾಗೂ ಶಿಸ್ತಿನ ತಂಡಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು. ಟೂರ್ನಿಯಲ್ಲಿ ಭಾಗವಹಿಸುವ ಪ್ರತಿಯೊಂದು ಹೈಸ್ಕೂಲಿನ ತಂಡಗಳಿಗೆ ಶಾಶ್ವತ ಫಲಕ ಮತ್ತು ಸೆಮಿಫೈನಲ್ ತಲುಪಿದ ತಂಡಗಳ ಸದಸ್ಯರಿಗೆ ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಬೆಳಿಗ್ಗೆಯಿಂದ ಮರುದಿನ ಬೆಳಿಗ್ಗೆಯವರೆಗೆ ವಿವಿಧ ವಿಭಾಗದಲ್ಲಿ ಕಬಡ್ಡಿ ಪಂದ್ಯಾವಳಿಯು ನಡೆಯಲಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಿ.ಕೆ ವಸಂತ ಬಂಗೇರರವರ ಧರ್ಮಪತ್ನಿ ಸುಜಿತಾ ವಿ. ಬಂಗೇರ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಬೆಳಾಲು ಆರಿಕೋಡಿ ಚಾಮುಂಡೇಶ್ವರಿ ಕ್ಷೆತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ,ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಸಂಸ್ಥೆ ರಾಕೇಶ್ ಮಲ್ಲಿ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಬಂಗೇರ ಬಿಗ್ರೇಡ್ ಉಪಾಧ್ಯಕ್ಷ ಅನೂಪ್ ಎಂ. ಬಂಗೇರ, ಪ್ರಧಾನ ಕಾರ್ಯದರ್ಶಿ ಕೆ. ಸಲೀಂ ಗುರುವಾಯನಕೆರೆ, ಕೋಶಾಧಿಕಾರಿ ರಾಜಶ್ರೀ ರಮಣ್, ಜತೆ ಕಾರ್ಯದರ್ಶಿ ರಾಕೇಶ್ ಮೂಡು ಕೋಡಿ ಉಪಸ್ಥಿತರಿದ್ದರು.









