






ಬೆಳ್ತಂಗಡಿ: ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ ಬೆಂಗಳೂರು, ತಾಲೂಕು ಘಟಕ ಬೆಳ್ತಂಗಡಿ ಇದರ ವಾರ್ಷಿಕ ಮಹಾಸಭೆ ಜ. 4ರಂದು ಜರುಗಿತು. ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಯೋಗೇಶ್ ಹೆಚ್. ಆರ್. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘದ ಅಧ್ಯಕ್ಷ ದಿಲೀಪ್ ಕುಮಾರ್ ಉದ್ಘಾಟಿಸಿ ಮಾತನಾಡಿ ಜಿಪಿಟಿ ಶಿಕ್ಷಕರ ನ್ಯಾಯುತ ಬೇಡಿಕೆಗಾಗಿ ಕಾನೂನಾತ್ಮಕ ಹೋರಾಟದಲ್ಲಿ ದ.ಕ ಜಿಲ್ಲೆಯ ನೇತೃತ್ವವನ್ನು ಸ್ಮರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿ.ಎಸ್ ಶಶಿಧರ್ ದ.ಕ ಉಪನಿರ್ದೇಶಕರು(ಆಡಳಿತ) ಅವರು ಮಾತನಾಡಿ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದಿರುವ ಏಳು ಸಂಘಗಳ ಪೈಕಿ ಸ್ಥಾಪನೆಯಾದ ಅಲ್ಪಾವಧಿಯಲ್ಲಿ ಮಾನ್ಯತೆ ಪಡೆದು, ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತಿರುವುದನ್ನು ಸ್ಮರಿಸಿ, ಜಿಲ್ಲೆಯ ಎಲ್ಲಾ ಶಿಕ್ಷಕರ ಸಂಘಟನೆಗಳೊಂದಿಗೆ ಚರ್ಚಿಸಿ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಪೇಪರ್ ಲೆಸ್ ಆಡಳಿತದೊಂದಿಗೆ, ಕ್ರಾಂತಿಕಾರಕ ರೀತಿಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಿವ ಜವಾಬ್ದಾರಿ ತನ್ನದೆಂದು ಘೋಷಿಸಿದರು.
ಅಂತೆಯೇ ಶಿಕ್ಷಕರ ಶಾಲೆಗಳಲ್ಲಿ ಸೃಜನಶೀಲತೆಯಿಂದ, ಹೊಸಹೊಸ ವಿಧಾನಗಳ ಅಳವಡಿಕೆಯೊಂದಿಗೆ ವಿದ್ಯಾರ್ಥಿಗಳ ಕನಸುಗಳಿಗೆ ಬಣ್ಣ ಹಚ್ಚಿ ಅವರ ಬದುಕನ್ನು ಬೆಳಗುವ ಕಾರ್ಯ ಮಾಡಬೇಕೆಂದು ಮಾರ್ಗದರ್ಶನ ಮಾಡಿದರು. ಜೊತೆಗೆ NMMS ಪರೀಕ್ಷೆಗೆ ಇ-ಶಾಲೆ ಬೆಳ್ತಂಗಡಿ ಆನ್ಲೈನ್ ವೇದಿಕೆ ನೀಡುತ್ತಿರುವ ತರಬೇತಿಯನ್ನು ಶ್ಲಾಘಿಸಿದರು. ತಾಲೂಕು ಘಟಕ -ಬೆಳ್ತಂಗಡಿ ವತಿಯಿಂದ ಮಾನ್ಯರನ್ನು ಗೌರವಿಸಲಾಯಿತು.
ಬೆಳ್ತಂಗಡಿ ತಾಲೂಕು ಘಟಕದ ಸಂಸ್ಥಾಪಕ ಪದಾಧಿಕಾರಿಗಳಿಗಿದ್ದ ಶಿಕ್ಷಕ ಪ್ರಭಾಕರ್ ಜಿ. ಶಾಲೆತಡ್ಕ, ಕವನ್ ಕುಮಾರ್ ಅಂಡಿಂಜೆ, ಸುರೇಶ್ ಗುರಿಪಳ್ಳ, ಷಣ್ಮುಖ ಪುಂಜಾಲಕಟ್ಟೆ, ಕಾಂತರಾಜು ಕಣಿಯೂರು ಕಸಬ ಹಾಗೂ ರಜಿನಿ ನಿಟ್ಟಡೆ ಅವರಿಗೆ ಗೌರವ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಈ ವರ್ಷದಿಂದ ತಾಲೂಕಿನ ಜಿಪಿಟಿ ಶಿಕ್ಷಕರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆರಂಭಿಸಿ ಬದನಾಜೆ ಶಾಲೆಯ ಶಿಕ್ಷಕಿ ಭಾರತಿ ಅವರ ಪುತ್ರ ಚಿರಾಗ್ ಸಿ.ಎಂ (PUC 92.67 %)ಹಾಗೂ ಒಡಿಲ್ನಾಳ ಶಾಲೆಯ ಶಿಕ್ಷಕಿ ಅಕ್ಷತಾ ಅವರ ಪುತ್ರಿ ಮಾನ್ಯ (SSLC 99.2%) ಅವರನ್ನು ಸನ್ಮಾನಿಸಲಾಯಿತು.



ಕಾರ್ಯಕ್ರಮದ ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತಾರಾಕೇಸರಿ ಮಾತನಾಡಿ ತಾಲೂಕಿನಲ್ಲಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಜಿಪಿಟಿ ಶಿಕ್ಷಕರ ಪಾತ್ರವನ್ನು ಪ್ರಶಂಸಿಸಿದರು. ವೇದಿಕೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಬಸವಲಿಂಗಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಪ್ರ.ಕಾರ್ಯದರ್ಶಿ ವಿಕಾಸ್ ಕುಮಾರ್, ದ.ಕ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ದೊರೆಸ್ವಾಮಿ ಕೆ.ಎನ್ ಶುಭ ಹಾರೈಸಿ, ತಾಲೂಕು ಘಟಕದ ವಿನೂತನ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯ ಸಂಘದ ಸಂಸ್ಥಾಪಕ ವಕ್ತಾರರು, ಜಿಲ್ಲಾ ಖಜಾಂಚಿ ಹಾಗೂ ತಾ.ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ್ ಬಿ.ಆರ್. ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಯೋಗೇಶ ಹೆಚ್. ಆರ್. ಮಾತನಾಡಿ ಶಿಕ್ಷಕರ ಸಮಸ್ಯೆಗಳಿಗೆ ಸಂಘ ಸ್ಪಂದಿಸಿರುವ ಜೊತೆಗೆ ಜಿಲ್ಲಾ ಉಪನಿರ್ದೇಶಕರು ಸ್ಪಂದಿಸುವ ರೀತಿ ಹಾಗೂ ಶಿಕ್ಷಕ ಸ್ನೇಹಿ ಆಡಳಿತಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮ ನಾರಾವಿ ಶಾಲೆಯ ಜಿಪಿಟಿ ಶಿಕ್ಷಕಿ ಶಾರದಾ ತುಳುನಾಡ್ ಅವರ ಕಂಠಸಿರಿಯ ನಿರೂಪಣೆಯೊಂದಿಗೆ ಪ್ರಾರಂಭವಾಗಿ, ನಾರಾವಿ ಶಾಲೆಯ GPT ಶಿಕ್ಷಕಿ ಅಂಕಿತಾ ಅವರ ಪ್ರಾರ್ಥನೆಯೊಂದಿಗೆ ಪ್ರತಿಫಲಿಸಿ, ಉಪಾಧ್ಯಕ್ಷೆ ಶುಭಾ ವಿಕಾಸ್ ಡಿಡಿಪಿಐ ವ್ಯಕ್ತಿತ್ವದ ಬಗ್ಗೆ ಮಾತನಾಡಿ ಸನ್ಮಾನ ಪತ್ರ ವಾಚಿಸಿದರು. ಮಹಾಸಭೆ ಯಶಸ್ವಿಯಾಗಿ ನಡೆಯಲು ತಾಲೂಕು ಘಟಕದ ಪದಾಧಿಕಾರಿಗಳಾದ ಅಭಿಷೇಕ್ ಆರ್.ಎನ್., ರವಿಕುಮಾರ್ ಜೆ., ಉಷಾ ಹಾಗೂ ಮಧು ಕೆ.ಎಸ್. ಹಾಗೂ ಇತರ ಶಿಕ್ಷಕರು ಸಹಕರಿಸಿದರು. ಸಂಘಟನಾ ಕಾರ್ಯದರ್ಶಿ ಸತೀಶ್ ಆಚಾರ್ ವಂದಿಸಿದರು.









