ಉಜಿರೆಯಲ್ಲಿ ಶಿರೂರು ಮಠದ ವೇದ ವರ್ಧನ ತೀರ್ಥ ಶ್ರೀಪಾದ ಅವರಿಗೆ ಪೌರ ಸನ್ಮಾನ

0

ಉಜಿರೆ: ಸಂಪತ್ತು ಐಶ್ವರ್ಯ ಜ್ಞಾನದಿಂದ ಕ್ಷಣಿಕ ಸುಖ ಸಿಗುತ್ತದೆ. ಆದರೆ ಮೋಕ್ಷದಿಂದ ಮಾತ್ರ ಶಾಶ್ವತ ಸುಖ ಸಿಗಲು ಸಾಧ್ಯ ಎಂದು ಉಡುಪಿಯಲ್ಲಿ ಸರ್ವಜ್ಞ ಪೀಠಾರೋಹಣ ಮಾಡಲಿರುವ ಶಿರೂರು ಮಠದ
ವೇದವರ್ಧನ ತೀರ್ಥ ಶ್ರೀಪಾದ ಹೇಳಿದರು. ಅವರು ಜ. 2ರಂದು ಉಜಿರೆಯ ಶ್ರೀ ಕೃಷ್ಣಾನುಗ್ರಹ‌ ಸಭಾಭವನದಲ್ಲಿ ಪೌರ ಸನ್ಮಾನ ಸ್ವೀಕರಿಸಿ ಆಶೀರ್ವಚನ ನೀಡಿದರು.

ಸಂಸಾರ ಎಂಬ ಸಾಗರದಲ್ಲಿ ಕಷ್ಟಗಳು ಬರುತ್ತಾ ಇರುತ್ತವೆ. ಕಷ್ಟಗಳು ದೂರವಾಗಲು ಶ್ರೀ ಕೃಷ್ಣನಿಗೆ ಶರಣಾಗತರಾಗಬೇಕು. ಪರ್ಯಾಯ ಕಾರ್ಯಕ್ರಮ ಎಲ್ಲಾ ಭಕ್ತರಿಗೆ ಶ್ರೀ ಕೃಷ್ಣನ ಸೇವೆ ಸಲ್ಲಿಸಲು ಇರುವ ಉತ್ತಮ ಅವಕಾಶ. ಇದರಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು.

ವೈದ್ಯ ಡಾ.ಪ್ರದೀಪ್ ನಾವೂರು ಅಭಿನಂದನಾ ನುಡಿಗಳನ್ನಾಡಿ ಆತ್ಮ ಕಲ್ಯಾಣ, ಲೋಕ ಕಲ್ಯಾಣದ ನಿರ್ಧಾರದ ಜತೆ ಉಡುಪಿ ಕೃಷ್ಣನ ಸೇವೆಯ ಪುಣ್ಯ ಸಿಗುವುದೇ ಶ್ರೇಷ್ಠ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪೌರ ಸನ್ಮಾನ ಸಮಿತಿ ಅಧ್ಯಕ್ಷ, ದೇವಸ್ಥಾನದ ಆನುವಂಶಿಕ ಆಡಳಿತ ಮೋಕ್ತೆಸರ ಶರತ್ ಕೃಷ್ಣ ಪಡುವೆಟ್ನಾಯ ಅಷ್ಟ ಮಠದ ಯತಿಗಳು ಪೀಠಾರೋಹಣಕ್ಕೆ ಮೊದಲು ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ದರ್ಶನ ಪಡೆಯುವುದು ವಾಡಿಕೆ. ಶ್ರೀ ಗಳು ದೇವಸ್ಥಾನದ ವಸಂತ ವೇದ ಪಾಠ ಶಾಲೆಯ ವಿದ್ಯಾರ್ಥಿಯು ಆಗಿದ್ದರು ಎಂದರು.

ಶಾಸಕ ಹರೀಶ್ ಪೂಂಜ ಮಾತನಾಡಿ ಹಿಂದೂ ಧರ್ಮದ ವಿಶೇಷ ಶಕ್ತಿ ಉಡುಪಿಯ ಮಠಗಳು, ಬೆಳ್ತಂಗಡಿ ಮತ್ತು ಉಡುಪಿಯ ಬೆಸುಗೆಯನ್ನು ಈ ಬಾರಿಯ ಪರ್ಯಾಯ ಇನ್ನಷ್ಟು ಗಟ್ಟಿಗೊಳಿಸಲಿದೆ. ಇದೊಂದು ಅವಿಸ್ಮರಣೀಯ ಪರ್ಯಾಯವಾಗಲಿದೆ. ಪರ್ಯಾಯ ಸಂದರ್ಭ ತಾಲೂಕಿನಿಂದ ಹೊರೆ ಕಾಣಿಕೆ ಸಮರ್ಪಣೆ ನಡೆಯಲಿದೆ. ಸ್ವಾಮೀಜಿಯವರ ಪೂರ್ವಾಶ್ರಮ ನಮ್ಮ ತಾಲೂಕು ಎಂಬುದು ಅತ್ಯಂತ ಹೆಮ್ಮೆಯ ವಿಚಾರ ಎಂದರು.

ಭವ್ಯ ಮೆರವಣಿಗೆಯಲ್ಲಿ ಬೆಳಾಲು ಕ್ರಾಸ್ ನಿಂದ ಸ್ವಾಗತ, ಬೆಳಾಲು ಕ್ರಾಸ್ ನಿಂದ ಸ್ವಾಮೀಜಿಯವರನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ತನಕ ಮೆರವಣಿಗೆಯಲ್ಲಿ ಕರೆತರಲಾಯಿತು. ವಸಂತ ಮಂಜಿತ್ತಾಯ, ಈಶ್ವರ ಪೆರ್ಲತ್ತಾಯ, ಸುಬ್ರಹ್ಮಣ್ಯ ಕಲ್ಲೂರಾಯ ಮತ್ತು ತಂಡದವರಿಂದ ವೇದ ಘೋಷ ನೆರವೇರಿಸಿದರು. ಶಾಸಕ ಹರೀಶ್ ಪೂಂಜ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ, ವಿಹಿಂಪ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಪೂರನ್ ವರ್ಮ, ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಉಪಾಧ್ಯಕ್ಷ ರವಿ ಬರೆಮೇಲು, ತಾಲೂಕು ಶಿವಳ್ಳಿ ಬ್ರಾಹ್ಮಣ ಸಭಾ ಅಧ್ಯಕ್ಷ ರಾಜಪ್ರಸಾದ್ ಪೋಳ್ನಾಯ, ಉದ್ಯಮಿ ಕೆ.ಮೋಹನ್ ಕುಮಾರ್, ಪ್ರಮುಖರಾದ ಡಾ.ಪ್ರದೀಪ್, ಪ್ರಶಾಂತ್ ಪಾರೆಂಕಿ, ಅರವಿಂದ ಕಾರಂತ, ರವಿ ಚಕ್ಕಿತ್ತಾಯ, ರಾಜೇಶ್ ಪೈ, ರವಿಕುಮಾರ್ ಭಟ್, ವಿದ್ಯಾ ಕುಮಾರ್ ಕಾಂಚೋಡು, ರವೀಂದ್ರ ಶೆಟ್ಟಿ, ಕೆ.ವಿ.ಶ್ರೀಧರ ಮತ್ತಿತರರು ಉಪಸ್ಥಿತರಿದ್ದರು.

ಕೇರಳ ಶೈಲಿಯ ಚಂಡೆ ವಾದನ ವಯೊಲಿನ್ 22ತಂಡಗಳಿಂದ ಭಜನೆ, ಸ್ಯಾಕ್ಸೋಫೋನ್ ವಾದನದೊಂದಿಗೆ ಮೆರವಣಿಗೆ ಸಾಗಿ ಬಂತು. ಉದ್ಯಮಿ, ಪೌರಸನ್ಮಾನ ಸಮಿತಿ ಸಂಚಾಲಕ ಕೆ.ಮೋಹನ್ ಕುಮಾರ್, ಶಿರೂರು ಮಠದ ದಿವಾನ ಉದಯ ಕುಮಾರ್ ಸರಳತ್ತಾಯ, ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ವಿ.ಹಿಂ.ಪ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಉಪಸ್ಥಿತರಿದ್ದರು. ಮುರಳಿ ಕೃಷ್ಣ ಆಚಾರ್ ಮತ್ತು ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿದರು. ಪೌರ ಸನ್ಮಾನ ಸಮಿತಿ ಕಾರ್ಯದರ್ಶಿ ಪೂರನ್ ವರ್ಮ ವಂದಿಸಿದರು.

LEAVE A REPLY

Please enter your comment!
Please enter your name here