ದ್ವೇಷ ಭಾಷಣ ತಡೆ ಕಾಯಿದೆ ಮತ್ತು ಬಾಂಗ್ಲಾದೇಶದ ಹಿಂದೂ ಹತ್ಯಾಕಾಂಡದ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ಆಕ್ರೋಶ-ರಾಜ್ಯಪಾಲರು, ಕೇಂದ್ರ ಸರಕಾರ ಮಧ್ಯಪ್ರವೇಶಿಸಲು ಒತ್ತಾಯ-ಸರ್ಕಾರ ವಿಫಲವಾದರೆ ಬೀದಿಗೆ ಇಳಿದು ಹೋರಾಡುವ ಎಚ್ಚರಿಕೆ

0

ಬೆಳ್ತಂಗಡಿ: ದ್ವೇಷ ಭಾಷಣ ತಡೆ ಕಾಯಿದೆ ಮತ್ತು ಬಾಂಗ್ಲಾದೇಶದ ಹಿಂದೂ ಹತ್ಯಾಕಾಂಡದ ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ರಾಜ್ಯಪಾಲರಿಗೆ ಮತ್ತು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಒಂದು ಕಡೆ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಕಾನೂನಿನ ಹೆಸರಿನಲ್ಲಿ ಹಿಂದೂಗಳ ಧ್ವನಿಯನ್ನು ಹತ್ತಿಕ್ಕಲು ಸಂಚು ರೂಪಿಸುತ್ತಿದೆ. ಇನ್ನೊಂದೆಡೆ ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧ ನಡೆಯುತ್ತಿದೆ. ಈ ಎರಡೂ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಮನವಿಯಲ್ಲಿ ಒತ್ತಾಯಿಸಿದೆ. ಅಲ್ಲದೆ ಹಿಂದೂ ಸಮಾಜದ ರಕ್ಷಣೆಗಾಗಿ ರಾಜ್ಯದ ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಸಮಿತಿ ಆಗ್ರಹಿಸಿದೆ.

ತಹಶೀಲ್ದಾರ್ ಮೂಲಕ ಮನವಿ: ಹಿಂದೂ ಸಂಘಟನೆಗಳನ್ನು ದಮನಿಸಲು ಸರ್ಕಾರದ ಕುತಂತ್ರವಾಗಿದೆ. ರಾಜ್ಯಪಾಲರು ಈ ಮಸೂದೆಗೆ ಅಂಕಿತ ಹಾಕಬಾರದು. ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದೂಗಳ ಧ್ವನಿಯನ್ನು ಹತ್ತಿಕ್ಕಲು ತರಾತುರಿಯಲ್ಲಿ ಅಂಗೀಕರಿಸಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಕಾಯಿದೆ-೨೦೨೫ ಕೇವಲ ಹಿಂದೂ ಸಂಘಟನೆಗಳನ್ನು ದಮನಿಸುವ ಷಡ್ಯಂತ್ರವಾಗಿದೆ. ಈ ಕಾಯಿದೆಯಲ್ಲಿ ಸತ್ಯ ಸಂಗತಿಗಳನ್ನು ಹೇಳುವುದು ರಕ್ಷಣೆಯಲ್ಲ. ಲವ್ ಜಿಹಾದ್, ಮತಾಂತರದಂತಹ ಸತ್ಯಗಳನ್ನು ಬಿಚ್ಚಿಟ್ಟರೆ ಭಾವನೆಗೆ ಧಕ್ಕೆ ಎಂಬ ನೆಪದಲ್ಲಿ ಹಿಂದೂಗಳನ್ನು ಜೈಲಿಗಟ್ಟುವ ಸಂಚು ಇದರಲ್ಲಿದೆ. ಅಸ್ಪಷ್ಟ ವ್ಯಾಖ್ಯಾನಗಳ ಮೂಲಕ ಹಿಂದೂ ನಾಯಕರು, ಸಂತರು ಮತ್ತು ಸಾಮಾಜಿಕ ಜಾಲತಾಣದ ಕಾರ್ಯಕರ್ತರನ್ನು ಗುರಿಯಾಗಿಸಿ ಜಾಮೀನು ರಹಿತ ಬಂಧನ ಮಾಡುವ ಪಿತೂರಿ ಇದಾಗಿದೆ. ಗೋಹತ್ಯೆ ತಡೆ ಅಥವಾ ಧರ್ಮ ಜಾಗೃತಿಯ ಸಂದೇಶಗಳನ್ನೂ ದ್ವೇಷ ಎಂದು ಬಿಂಬಿಸಿ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತಿದೆ. ಈ ಕರಾಳ ಕಾಯಿದೆಗೆ ರಾಜ್ಯಪಾಲರು ಅಂಕಿತ ಹಾಕಬಾರದು ಎಂದು ಸಮಿತಿ ಮನವಿಯಲ್ಲಿ ಒತ್ತಾಯಿಸಿದೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯಾಕಾಂಡದ ವಿರುದ್ಧ ತೀವ್ರ ಖಂಡನೆ ವ್ಯಕ್ತಪಡಿಸಿದರುವ ಸಮಿತಿ ಬಾಂಗ್ಲಾದೇಶದ ಮೇಲೆ ಆರ್ಥಿಕ ನಿಬಂಧ ವಿಧಿಸಿ ಮತೀಯ ಗೂಂಡಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರವನ್ನು ಒತ್ತಾಯಿಸಿದೆ. ಬಾಂಗ್ಲಾದೇಶದ ಮೈಮನ್‌ಸಿಂಗ್‌ನಲ್ಲಿ ಹಿಂದೂ ಯುವಕ ದೀಪು ಚಂದ್ರ ದಾಸ್ ಅವರನ್ನು ಜೀವಂತವಾಗಿ ಸುಟ್ಟು ಹಾಕಿರುವ ಘಟನೆಯನ್ನು ಸಮಿತಿ ಖಂಡಿಸುತ್ತದೆ. 1941ರಲ್ಲಿ 28% ಇದ್ದ ಹಿಂದೂ ಜನಸಂಖ್ಯೆ ಇಂದು 7.8%ಕ್ಕೆ ಕುಸಿದಿರುವುದು ವ್ಯವಸ್ಥಿತ ಹಿಂದೂ ನಿರ್ಮೂಲನೆಯ ಸಂಕೇತವಾಗಿದೆ. ಭಾರತ ಸರ್ಕಾರ ಬಾಂಗ್ಲಾದೇಶದ ಮೇಲೆ ತಕ್ಷಣವೇ ಆರ್ಥಿಕ, ವ್ಯಾಪಾರಿಕ ಮತ್ತು ರಾಜಕೀಯ ನಿರ್ಬಂಧಗಳನ್ನು ಹೇರಬೇಕು.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆ, ದೇವಸ್ಥಾನಗಳ ಮೇಲೆ ದಾಳಿ ಮಾಡುತ್ತಿರುವ ಮತೀಯ ಉಗ್ರ ಗುಂಪುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಬೇಕು. ವಿಶ್ವಸಂಸ್ಥೆ ಮತ್ತು ಮಾನವ ಹಕ್ಕುಗಳ ಆಯೋಗದ ಮೂಲಕ ಫ್ಯಾಕ್ಟ್-ಫೈಂಡಿಂಗ್ ಮಿಷನ್ ನಡೆಸಿ ಅಲ್ಲಿನ ಹಿಂದೂಗಳಿಗೆ ಪುನರ್ವಸತಿ ಮತ್ತು ಭದ್ರತೆ ಒದಗಿಸಬೇಕು ಎಂದು ಮನವಿಯಲ್ಲಿ ಸಮಿತಿ ಒತ್ತಾಯಿಸಿದೆ. ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರ ಮೂಲಕ ರಾಜ್ಯಪಾಲರಿಗೆ ಮತ್ತು ಪ್ರಧಾನಿಯವರಿಗೆ ಮನವಿ ನೀಡಲಾಗಿದ್ದು ಹಿಂದೂ ಸಮಾಜದ ಅಸ್ತಿತ್ವಕ್ಕೆ ಧಕ್ಕೆ ತರುತ್ತಿರುವ ಈ ಎರಡು ಗಂಭೀರ ವಿಚಾರಗಳಲ್ಲಿ ಸರ್ಕಾರಗಳು ವಿಫಲವಾದರೆ ಹಿಂದೂ ಸಮಾಜ ಬೀದಿಗೆ ಇಳಿದು ಹೋರಾಟ ಮಾಡಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಎಚ್ಚರಿಸಿದೆ. ಪ್ರಮುಖರಾದ ಯಶವಂತ ಗೌಡ ಕೊಯ್ಯೂರು, ಉಮಾ ರಾವ್ ಬೆಳ್ತಂಗಡಿ, ಕೇಶವ ಅಚ್ಚಿನಡ್ಕ, ರಾಜೇಂದ್ರ ಕಾನರ್ಪ, ಮೋಹನ್ ಬೈರ ಪುತ್ರಬೈಲು, ವಸಂತ ಕಲ್ಲಾಜೆ, ಶಾಂತ ಉಜಿರೆ, ಸಂತೋಷ್ ಪಣೆಜಾಲು, ವಿನೋದ ಉಜಿರೆ, ವಸಂತ ಗುರುವಾಯನಕೆರೆ, ಶಾರದಾ ಭಂಡಾರ್‌ಕರ್, ಯೋಗೀಶ್ ಕೆಂಬರ್ಜೆ, ಯಂ. ಹರೀಶ್ ಜಿ. ಮುದ್ದಿನಡ್ಕ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here