






ಕೊಯ್ಯೂರು: “ಗ್ರಾಮೀಣ ಜನತೆ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ -ಬೆಳೆಸುವಲ್ಲಿ ತಮ್ಮ ಕೈ ಜೋಡಿಸಬೇಕು. ವಿದ್ಯಾರ್ಥಿಗಳು ಸಮಾಜ ಮುಖಿ ಚಿಂತನೆಗಳ ಮೂಲಕ ಬದುಕು ರೂಪಿಸಿಕೊಳ್ಳುವ ಪ್ರಯತ್ನ ಮಾಡಬೇಕು ” ಎಂದು ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಕೆ.ಮೋಹನ್ ಕುಮಾರ್ ಅಭಿಪ್ರಾಯ ಪಟ್ಟರು. ಅವರು ಕೊಯ್ಯೂರು ಕಸಬ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮುಂದಿನ ದಿನಗಳಲ್ಲಿ ಸಂಸ್ಥೆಯ ಪ್ರಗತಿಗೆ ಸಹಕರಿಸುವ ಬಗ್ಗೆ ಭರವಸೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕೊಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ದಯಾಮಣಿ ಸಂಸ್ಥೆಗೆ ವಿವಿಧ ಕೊಡುಗೆಗಳನ್ನು ನೀಡಿ ಸಹಕರಿಸಿದ ದಾನಿಗಳನ್ನು ಕೊಂಡಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಬೆಳ್ತಂಗಡಿ ತಾಲೂಕು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಕನ್ನಡ ಮಾಧ್ಯಮ ಶಾಲೆಗಳಿಗೆ ಸರ್ಕಾರದಿಂದ ಕೊಡಲ್ಪಡುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಗ್ರಾಮದ ಜನರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವ ಮೂಲಕ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಬಗ್ಗೆ ಕರೆನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಳ್ತಂಗಡಿಯ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್ ಮಾತನಾಡಿ ಮುಂದಿನ ದಿನಗಳಲ್ಲಿ ಸಂಸ್ಥೆಯ ಅಭಿವೃದ್ಧಿಗೆ ಅನುದಾನ ದೊರಕಿಸಿಕೊಡುವ ಬಗ್ಗೆ ಪ್ರಯತ್ನಿಸುವುದಾಗಿ ತಿಳಿಸಿದರು.



ಬೆಂಗಳೂರಿನ ಉದ್ಯಮಿ, ಧಾರ್ಮಿಕ ನೇತಾರ ಕಿರಣ್ ಚಂದ್ರ ಡಿ. ಪುಷ್ಪಗಿರಿ, ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ಕರ್ನೋಡಿ ಲಾಯಿಲ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಗನ್ನಾಥ್ ಮಾತನಾಡುತ್ತಾ ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಸಂಧರ್ಭದಲ್ಲಿ ಜನರ ಸಹಕಾರದ ಬಗ್ಗೆ ಸ್ಮರಿಸುತ್ತಾ, ಸಂಸ್ಥೆಯ ಅಭಿವೃದ್ಧಿಗೆ ರೂ. ಹತ್ತುಸಾವಿರದ ಚೆಕ್ಕ್ ಹಸ್ತಾಂತರಿಸಿದರು. ಸಂಸ್ಥೆಯಿಂದ ಬಳಂಜ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆ ಗೊಂಡ ಮುಖ್ಯ ಶಿಕ್ಷಕ ರಂಗಸ್ವಾಮಿ ಸಿ. ಆರ್. ದಂಪತಿಗಳನ್ನು ಸನ್ಮಾನಿಸಲಾಯಿತು. ಅಂತೆಯೇ ಶಾಲೆಗೆ ವಿವಿಧ ಕೊಡುಗೆಗಳನ್ನು ನೀಡಿದ ದಾನಿಗಳನ್ನು ಗುರುತಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರೀಶ್ ಬಜಿಲ,ಎಸ್. ಡಿ.ಎಂ. ಸಿ.ಅಧ್ಯಕ್ಷ ಗ್ರಾಮ ಪಂಚಾಯತ್ ಸದಸ್ಯ ಜಗನ್ನಾಥ, ಗ್ರಾಮ ಪಂಚಾಯತ್ ಸದಸ್ಯರಾದ ಗಿರೀಶ್ ಮರಿಯ, ದಿವ್ಯ ಗಾಂಜಾಲು,ಸಮೂಹ ಸಂಪನ್ಮೂಲ ವ್ಯಕ್ತಿ ವಾರಿಜ, ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷ ರವೀಂದ್ರನಾಥ್ ಗೌಡ, ಎಸ್ ಕೆ ಡಿ ಆರ್ ಡಿ ಪಿ ಮಲ್ವಿಚಾರಕ ಸುಶಾಂತ್, ಪ್ರವೀಣ್ ಪೂಜಾರಿ ಪೊಸಲಾಯಿ, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷ ವಿಶ್ವನಾಥ ಪೂಜಾರಿ ಗಾಳಿತೋಟ, ಹಳೆವಿದ್ಯಾರ್ಥಿಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಆಲನೆ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಜಯಲಕ್ಷ್ಮಿ, ಶಾಲಾ ವಿದ್ಯಾರ್ಥಿನಾಯಕ ಲತೀಶ್ ಕುಮಾರ್ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿಯರಾದ ಪ್ರಾರ್ಥನ, ನಿಶ್ಚಿತ, ವರ್ಷ, ವಿನ್ಸಿತ ಇವರುಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸಂಸ್ಥೆಯ ಮುಖ್ಯ ಶಿಕ್ಷಕಿ ವಸಂತಿ ಕೆ. ಎನ್. ಸ್ವಾಗತಿಸಿ, ವರದಿ ವಾಚನಗೈದರು. ಅಂಗನವಾಡಿ ಕಾರ್ಯಕರ್ತೆ ಸುಮಂಗಲ ಅಂಗನವಾಡಿ ವಿದ್ಯಾರ್ಥಿಗಳ ಬಹುಮಾನ ಪಟ್ಟಿ ವಾಚಿಸಿದರು. ಅತಿಥಿ ಶಿಕ್ಷಕಿ ವಿಜಯಶ್ರೀ ಶಾಲಾ ವಿದ್ಯಾರ್ಥಿಗಳ ಬಹುಮಾನ ಪಟ್ಟಿ ವಾಚಿಸಿದರು. ಜ್ಞಾನದೀಪ ಶಿಕ್ಷಕಿ ವೇದಾವತಿ ಸನ್ಮಾನಿತರ ಅಭಿನಂದನಾ ಪತ್ರ ವಾಚಿಸಿದರು. ಅಪರಾಹ್ನ ಅಂಗನವಾಡಿ ವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳು ಮತ್ತು ಹಳೆವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಜಿ.ಪಿ.ಟಿ. ಸಹಶಿಕ್ಷಕಿಯರಾದ ಡಿ. ದೇವಿಬಾಯಿ ಮತ್ತು ಸುಶ್ಮಿತಾ ರಾವ್ ಕಾರ್ಯಕ್ರಮ ನಿರ್ವಹಣೆಗೈದರು.









