



ಬೆಳ್ತಂಗಡಿ: ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಭೆಯು ಡಿ.13ರಂದು ಪ್ರೌಢಶಾಲಾ ವಿಭಾಗದ ಶಾಲೆಯ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆಯಿತು.
ಶಾಲಾ ಮುಖ್ಯ ಶಿಕ್ಷಕಿ ಪೂರ್ಣಿಮಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬಾಲ್ಯ ಎನ್ನುವುದು ಮರೆಯಲಾಗದ ಜೀವನ ಭಾಗ. ಅಂತಹ ಬಾಲ್ಯದ ಶೈಕಷಣಿಕ ಜೀವನಕ್ಕೆ ಹಿಂತಿರುಗಲು ಸಾಧ್ಯವಾಗದಿದ್ದರೂ ನೆನಪನ್ನು ಮರುಕಳಿಸಲು ಸಭೆಯಲ್ಲಿ ನೆರೆದಿದ್ದೇವೆ. ಇಲ್ಲಿರುವ ಉತ್ತಮ ಶಿಕ್ಷಕ ವೃಂದದಿಂದ ಕಲಿಕೆಯ ಗುಣಮಟ್ಟ ಅಭಿವೃದ್ಧಿ ಹೊಂದಿದೆ. ಶಾಲೆಯ ಅಭಿವೃದ್ಧಿಗಾಗಿ ಹಳೆ ವಿದ್ಯಾರ್ಥಿಗಳ ಸಹಕಾರ ಬೇಕಿದೆ ಎಂದರು.
ಸಭೆಯಲ್ಲಿ ನೂತನ ಹಿರಿಯ ವಿದ್ಯಾರ್ಥಿ ಸಂಘದ ಸಮಿತಿಯನ್ನು ರಚನೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಜಗದೀಶ್ ರಾವ್ ಮುಗುಳಿ, ಅಧ್ಯಕ್ಷರಾಗಿ ವಾಸುದೇವ ಸೋಮಯಾಜಿ, ಉಪಾಧ್ಯಕ್ಷರಾಗಿ ಪ್ರಮೋದ್ ಆರ್. ನಾಯಕ್ ಮತ್ತು ಪೀತಾಂಬರ ಹೇರಾಜೆ, ಕಾರ್ಯದರ್ಶಿಯಾಗಿ ಪೂರ್ಣಿಮಾ, ಜತೆ ಕಾರ್ಯದರ್ಶಿಯಾಗಿ ಅಕ್ಬರ್, ಸುರೇಶ್ ರಾವ್, ವೆಂಕಪ್ಪ ಗೌಡ, ಸಂಘಟನಾ ಕಾರ್ಯದರ್ಶಿ ವಿಶ್ವನಾಥ್ ಶೆಟ್ಟಿ, ಜೇಮ್ಸ್ ಡಿಸೋಜಾ, ವಿನಯ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಉದಯ ಕುಮಾರ್, ಸುರಕ್ಷಾ, ಮಾಧ್ಯಮ ಕಾರ್ಯದರ್ಶಿಯಾಗಿ ಪ್ರಸಾದ್ ಮತ್ತು ನಸ್ರೀನ್ ಅವರನ್ನು ಆಯ್ಕೆ ಮಾಡಲಾಯಿತು.


ಸಭೆಯಲ್ಲಿ ಹಿರಿಯ ವಿದ್ಯಾರ್ಥಿಗಳು ತಮ್ಮ ಪರಿಚಯ ಮಾಡಿಕೊಂಡು ಶಾಲೆಯ ಅಭಿವೃದ್ಧಿಯ ಚಿಂತನೆಯ ಬಗ್ಗೆ, ಭೌತಿಕ ಮಟ್ಟ ಮತ್ತು ವಿದ್ಯಾ ಮಟ್ಟ ಹೆಚ್ಚಿಸಲು ಬೇಕಾದ ಅಗತ್ಯ ಕ್ರಮಗಳ ಬಗ್ಗೆ, ಸ್ಥಳೀಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚಿಸಲಾಯಿತು. ಬಾಲ್ಯದ ಶೈಕ್ಷಣಿಕ ಜೀವನವನ್ನು ಸವಿದ ಬಗ್ಗೆ, ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳು ವಿದ್ಯೆ ಪಡೆಯಲು ಪಡುತ್ತಿದ್ದ ಹರಸಾಹಸದ ಬಗ್ಗೆ, ಕನಸನ್ನು ನನಸಾಗಿಸಲು ವಿದ್ಯಾರ್ಥಿಗಳು ಮಾಡಿದ ತ್ಯಾಗದ ಬಗ್ಗೆ ಹಿರಿಯ ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಶಾಲಾ ಅಭಿವೃದ್ಧಿಗೆ ಪಣತೊಟ್ಟ ಮುಖ್ಯ ಶಿಕ್ಷಕರ ಹಾಗೂ ಶಿಕ್ಷಕ ವರ್ಗದವರ ಶ್ರಮವನ್ನು ಮೆಚ್ಚಿ ಅಭಿನಂದಿಸಲಾಯಿತು.
ಸಭೆಯಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿಗಳನ್ನು ಗುರುತಿಸಿ ಸಮಿತಿ ರಚಿಸುವ ಬಗ್ಗೆ ಚರ್ಚಿಸಲಾಯಿತು. ವಿದ್ಯಾರ್ಥಿಗಳ ಸಾಧನೆಗೆ ಸರಕಾರಿ ಶಾಲೆಯೂ ಹೇಗೆ ಅವಕಾಶ ನೀಡುತ್ತದೆ ಎಂಬುದರ ಬಗ್ಗೆಯೂ ಸಭೆಯಲ್ಲಿ ಅಭಿಪ್ರಾಯ ಹಂಚಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲೆಯ ಗಣಿತ ವಿಭಾಗ ಶಿಕ್ಷಕ ಸುರೇಶ್ ಶೆಟ್ಟಿ ಸ್ವಾಗತಿಸಿದರು. ಆಂಗ್ಲ ಭಾಷಾ ಶಿಕ್ಷಕ ನಾರಾಯಣ ವಂದಿಸಿದರು.









