



ಬೆಳ್ತಂಗಡಿ : ಬೆಳ್ತಂಗಡಿಯ ಶ್ರೀರಾಮ ಪತ್ತಿನ ಸಹಕಾರ ಸಂಘದಲ್ಲಿ ಕೋಟಿಗಟ್ಟಲೆ ಹಣಕಾಸು ಅವ್ಯವಹಾರ ನಡೆದಿರುವುದು ದೃಢವಾಗಿದೆ ಎಂದು ರಾಜ್ಯ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಲೆಕ್ಕ ಪರಿಶೋಧನಾ ನಿರ್ದೇಶಕರಿಗೆ ವರದಿ ಸಲ್ಲಿಸಲಾಗಿದೆ. ಒಟ್ಟು ಅವ್ಯವಹಾರದ ಮೊತ್ತ ರೂ. ೩೦,೪೫,೨೪,೨೭೮ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಸಿಎ ತುಕಾರಾಮ ಅಂಡ್ ಕಂಪನಿಯ ಲೆಕ್ಕಪರಿಶೋಧಕರು ಈ ವರದಿಯನ್ನು ಸಲ್ಲಿಸಿದ್ದು, ಅವ್ಯವಹಾರದಲ್ಲಿ ಭಾಗಿಯಾದವರು ಕಾನೂನಾತ್ಮಕ ಸಂಕಷ್ಟಗಳಿಗೆ ತುತ್ತಾಗುವ ಅಪಾಯ ಮತ್ತಷ್ಟು ಹೆಚ್ಚಿದೆ. ಅವ್ಯವಹಾರಕ್ಕೆ ಸಂಬಂಧಿಸಿ, ಸಹಕಾರ ಸಂಘದ ೨೦೨೩-೨೪ನೇ ಸಾಲಿನ ಲೆಕ್ಕಪರಿಶೋಧನೆಯನ್ನು ಮುಂದಿನ ಕ್ರಮಗಳಿಗಾಗಿ ಸಲ್ಲಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.


ನಾವು ೨೦೨೩-೨೪ ನೇ ಸಾಲಿನ ಅಂತಿಮ ಲೆಕ್ಕ ಪರಿಶೋಧನಾ ವರದಿಯಲ್ಲಿ ಸಾಕ್ಷ್ಯ ಸಮೇತ ಒಟ್ಟು ಹಣ ದುರುಪಯೋಗದ ಮೊತ್ತವು ರೂ. ೩೦,೪೫,೨೪,೨೭೮.೦೦ ಎಂದು ಸಾಬೀತುಪಡಿಸಿರುತ್ತೇವೆ. ಈ ಮೊತ್ತವು ೨೦೨೩-೨೪ ನೇ ಸಾಲಿನ ಅಂತ್ಯದಲ್ಲಿ ಆಸ್ತಿ ಜವಾಬ್ದಾರಿ ತಃಖ್ಯೆಯ ಮೊತ್ತವಾಗಿದ್ದು ಹಿಂದಿನ ಹಲವಾರು ವರ್ಷಗಳಿಂದ ಕೂಡಿಕೊಂಡಿರುತ್ತವೆ. ೨೦೧೭-೧೮ರಿಂದ ೨೦೨೩-೨೪ನೇ ಸಾಲುಗಳ ಲೆಕ್ಕ ಪರಿಶೋಧನಾ ವರದಿಗಳ ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿರುತ್ತೇವೆ. ಇದರಿಂದ ಹಿಂದಿನ ವರದಿಗಳು ನಮ್ಮ ತಪಾಸಣೆಗೆ ಲಭ್ಯವಿರುವುದಿಲ್ಲ. ಇದಲ್ಲದೆ ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ – ೨೦೨೩-೨೪ ನೇ ಸಾಲಿನ ಲೆಕ್ಕ ಪರಿಶೋಧನೆಯ ಸಂದರ್ಭದಲ್ಲಿ ಸಾಲಗಾರರಿಂದ ಲಿಖಿತ ರೂಪದಲ್ಲಿ ಮಾಹಿತಿ ಪಡೆದುಕೊಂಡಂತೆ ನಕಲಿ ಸಾಲಗಳೆಂದು ರುಜವಾತಿಗಿರುವ ಸಾಲಗಾರರ ಖಾತೆಗಳು ಹಾಗೂ ಠೇವಣಿಗಳೇ ಇಲ್ಲದೆ ನಕಲಿ ಸಾಲ ನೀಡಿರುವ ಸಾಲಗಾರರ ಖಾತೆಗಳು ೨೦೧೭-೧೮ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ಗಮನಕ್ಕೆ ಬಂದಿದೆ.
ಆದ್ದರಿಂದ ನಕಲಿ ಸಾಲ ನೀಡಿ ಸಂಘದ ಹಣವನ್ನು ದುರುಪಯೋಗ ಮಾಡಿರುವ ಕುರುಹುಗಳು ಮತ್ತು ಸಾಧ್ಯತೆಗಳು ಸಂಘದ ಆರಂಭದಿಂದಲೇ ಇದ್ದಂತಿದೆ. ಮೇಲಾಗಿ ಸಂಘದ ಹಿಂದಿನ ಸಾಲುಗಳ ಲೆಕ್ಕ ಪರಿಶೋಧನಾ ವರದಿಗಳಲ್ಲಿ ಸೂಚಿಸಿರುವ ನ್ಯೂನ್ಯತೆಗಳನ್ನು ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ನಿರ್ಲಕ್ಷಿಸಿದ್ದು ಸಂಘದ ಆರ್ಥಿಕ ಲೆಕ್ಕಗಳ ಮೇಲಿನ ಇಂಟರ್ನಲ್ ಆಡಿಟ್ ನಡೆಸದಿರುವುದು ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರ ಅಪರಾಧಿ ಮಾನಸಿಕ ಸ್ಥಿತಿಗೆ ಹಿಡಿದ ಕನ್ನಡಿ ಎಂದು ವರದಿಯಲ್ಲಿ ಆರೋಪಿಸಲಾಗಿದೆ. ಸಂಘ ಕಾರ್ಯಾರಂಭಗೊಂಡ ೧೯೯೮ರ ವರ್ಷದಿಂದ ೨೦೨೩-೨೪ನೇ ಸಾಲುಗಳ ಸಂಘದ ಲೆಕ್ಕ ಪುಸ್ತಕಗಳನ್ನು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ೧೯೫೯ರ ಕಲಂ ೬೩(೧೩)ರ ಅಡಿಯಲ್ಲಿ ಮರು ಲೆಕ್ಕ ಪರಿಶೋಧನೆಗೆ ಆದೇಶಿಸಬೇಕೆಂದು ರಾಜ್ಯ ಲೆಕ್ಕ ಪರಿಶೋಧನಾ ನಿರ್ದೇಶಕರಿಗೆ ವರದಿಯಲ್ಲಿ ಕೋರಲಾಗಿದೆ.








