




ಮಂಗಳೂರು: ಎಸ್.ಡಿ.ಎಮ್ ಮಂಗಳಜ್ಯೋತಿ ಸಮಗ್ರ ಶಾಲೆಯು ದಿ.ಮೋಹಿನಿ ಅಪ್ಪಾಜಿ ಎ. ನಾಯ್ಕ್ ರವರ ಕನಸಿನ ಕೂಸು, ವಿಶೇಷ ಸಾಮರ್ಥ್ಯದ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಸದುದ್ದೇಶದಿಂದ ಸಮನ್ವಯ ಶಿಕ್ಷಣದ ಮೂಲ ಕಲ್ಪನೆಯೊಂದಿಗೆ ಏಷ್ಯಾ ಖಂಡದಲ್ಲೇ ಮೊದಲ ಶಾಲೆ 1981ರಲ್ಲಿ ಮಂಗಳೂರಿನ ವಾಮಂಜೂರಿನಲ್ಲಿ ಸ್ಥಾಪನೆ ಮಾಡಲಾಯಿತು. ಈ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಮಹಾದಾಸೆಯಿಂದ, ಸಾಮಾನ್ಯ ಮಕ್ಕಳಂತೆ ಉತ್ತಮ ಜೀವನ ನಡೆಸಬೇಕೆಂಬ ಪರಿಕಲ್ಪನೆಯಿಂದ, ಪ್ರಾರಂಭವಾದ ಈ ಸಂಸ್ಥೆಯು ಪರಿಣಾಮಕಾರಿ ಸಾಧನೆಯನ್ನು ಮಾಡುತ್ತಾ ಬಂದಿದೆ. ಮುಂದೆ ಈ ದೊಡ್ಡ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು 2000 ಇಸವಿಯಲ್ಲಿ ಶ್ರೀ ಕ್ಷೇತ್ರ ಧರ್ಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಯವರ ಅಧ್ಯಕ್ಷತೆಯಲ್ಲಿ ನಡೆಸಲ್ಪಡುವ ಉಜಿರೆ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯ ಅಧೀನಕ್ಕೆ ಹಸ್ತಾಂತರಿಸಲಾಯಿತು.


ಈ ಸಂಸ್ಥೆಯ ಮೇಲೆ ಹೆಗ್ಗಡೆಯವರು ವಿಶೇಷ ಪ್ರೀತಿ ಹಾಗೂ ಕಾಳಜಿಯನ್ನು ಇಟ್ಟುಕೊಂಡು ಮುನ್ನಡೆಸುತ್ತಿದ್ದು, ಅವರ ದೂರದರ್ಶಿತ್ವ ಹಾಗೂ ಮಾರ್ಗದರ್ಶನದಲ್ಲಿ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ. ಸಮನ್ವಯ ಶಿಕ್ಷಣದ ಮೂಲ ಆಶಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಶ್ರವಣದೋಷ, ದೈಹಿಕ ನ್ಯೂನತೆ, ಪಾರ್ಶ್ವ ದೃಷ್ಟಿ ದೋಷ, ಸಾಧಾರಣ ಬುದ್ಧಿಮಾಂದ್ಯತೆ, ಕಲಿಕಾ ನ್ಯೂನತೆ ಹಾಗೂ ಆಟಿಸಂನಿಂದ ಬಳಲುತ್ತಿರುವ ಭಿನ್ನ ಸಾಮರ್ಥ್ಯದ ಮಕ್ಕಳನ್ನು ಸಾಮಾನ್ಯ ವಿದ್ಯಾರ್ಥಿಗಳೊಂದಿಗೆ ಸಮನ್ವಯಗೊಳಿಸಿ, ರಾಜ್ಯ ಪಠ್ಯಕ್ರಮದೊಂದಿಗೆ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸವನ್ನು ನೀಡಲಾಗುತ್ತಿದೆ.
ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರಮಟ್ಟದ ಸಾಧನೆ ಮಾಡಿದ್ದು, ಶಿಕ್ಷಣ ಇಲಾಖೆ ಮತ್ತು ಸಂಸ್ಥೆಯ ವತಿಯಿಂದ ಜಿಲ್ಲಾ, ರಾಜ್ಯಮಟ್ಟದ ಕಾರ್ಯಾಗಾರ ಹಾಗೂ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಪ್ರಸ್ತುತ ೩೫೮ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶದೊಂದಿಗೆ ದಾಖಲೆಯನ್ನು ಮಾಡುತ್ತಾ ಬರುತ್ತಿದ್ದಾರೆ. ವಿದ್ಯಾರ್ಥಿಗಳ ನ್ಯೂನತೆಯನ್ನು ನಿವಾರಿಸುವ ದೃಷ್ಟಿಯಿಂದ ವಾಕ್ ಶ್ರವಣ, ಫಿಸಿಯೋಥೆರಪಿ, ಆಟಿಸಂ, ಚಿತ್ರಕಲೆ ಮತ್ತು ವೃತ್ತಿ ತರಬೇತಿ ತರಗತಿಗಳ ಮೂಲಕ ಆಧುನಿಕ ತಂತ್ರಜ್ಞಾನದೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧೀನಕ್ಕೆ ಒಳಪಟ್ಟು 25 ಸಂವತ್ಸರಗಳನ್ನು ಪೂರೈಸುವ ಈ ಸುಸಂದರ್ಭದಲ್ಲಿ ರಜತ ಮಹೋತ್ಸವವನ್ನು ನವೆಂಬರ್ 28 ಮತ್ತು 29 ರಂದು ಆಚರಿಸಲಾಗುತ್ತಿದೆ.









